ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಇದು ಅವರ ದಾಖಲೆಯ 16ನೇ ಬಜೆಟ್ ಆಗಿರುವುದು ಮತ್ತೊಂದು ವಿಶೇಷ. ಹಲವು ವಲಯಗಳಿಗೆ ಅನುದಾನ ಘೋಷಣೆ ಮಾಡಿರುವ ಸಿಎಂ, ಕೃಷಿ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಗುರಿಯಾಗಿಸಿಕೊಂಡು 51,339 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಯಾವ್ಯಾವ ಯೋಜನೆಗೆ ಎಷ್ಟೆಷ್ಟು ಅನುದಾನ ಬಿಡುಗಡೆಯಾಗಿದೆ? ಏನೆಲ್ಲಾ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ……
ತೊಗರಿ ಉತ್ಪಾದನೆಗೆ ಆದ್ಯತೆ:
ಹೊಸ ತಂತ್ರಜ್ಞಾನ ಅಳವಡಿಕೆ, ಪ್ರದೇಶ ವಿಸ್ತರಣೆ ಮತ್ತು ಅಂತರ್ ಬೆಳೆ ಪ್ರಚಾರದ ಮೂಲಕ ಕರ್ನಾಟಕವನ್ನು ತೊಗರಿ ಬೇಳೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರಿಸುವ ನಿಟ್ಟಿನಲ್ಲಿ 88 ಕೋಟಿ ರೂಪಾಯಿಯನ್ನು ಸರ್ಕಾರ ನಿಗದಿಪಡಿಸಿದೆ.

ರೈತ ಸಮೃದ್ಧಿ ಯೋಜನೆ:
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿಯನ್ನು ಹೆಚ್ಚು ಸುಸ್ಥಿರ ಮತ್ತು ಲಾಭದಾಯಕವಾಗಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸಮಗ್ರ ಕೃಷಿ ಪದ್ಧತಿಯನ್ನು ಉತ್ತೇಜಿಸಲು 10 ಕೃಷಿ-ಹವಾಮಾನ ವಲಯಗಳಲ್ಲಿ ಮಾದರಿ ಸಾಕಣೆ ಕೇಂದ್ರಗಳ ಅಭಿವೃದ್ಧಿಗೆ ಚಿಂತನೆ.
ಕೃಷಿ ಯಾಂತ್ರೀಕರಣಕ್ಕೆ 428 ಕೋಟಿ:
ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ರಾಜ್ಯವು 50 ಸಾವಿರ ರೈತರಿಗೆ ಆರ್ಥಿಕ ನೆರವು ನೀಡಲು ಯೋಜಿಸಿದ್ದು, 425 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿರಿಸಿದೆ.
ಹನಿ-ತುಂತುರು ನಿರಾವರಿಗೆ 440 ಕೋಟಿ:
ಮಳೆಯಾಶ್ರಿತ ಪ್ರದೇಶಗಳಲ್ಲಿ ಜಲ ಬಳಕೆಯನ್ನು ಉತ್ತಮವಾಗಿಸಲು ಹಾಗೂ ಕೃಷಿ ಉತ್ಪಾದಿಕೆಯನ್ನು ಹೆಚ್ಚಿಸಲು 1.81 ಲಕ್ಷ ರೈತರಿಗೆ ಹನಿ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 440 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಚಿಂತನೆ:
ಪ್ರಸ್ತುತ ಅಸ್ತಿತ್ವದಲ್ಲಿರುವ 6 ಸಾವಿರ ಘಟಕಗಳು ಹಾಗೂ 14 ಇನ್ಕ್ಯೂಬೇಷನ್ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 5 ಸಾವಿರ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ರೈತರ ಹಿತಕ್ಕೆ ಡಿಜಿಟಲ್ ಕೃಷಿ ಸೇವಾ ಕೇಂದ್ರ:
ಕೃಷಿಯಲ್ಲಿಯೂ ಡಿಜಿಟಲ್, ಕೃತಕ ಬುದ್ಧಿಮತ್ತೆ ಹಾಗೂ ಭೂ-ಪ್ರಾದೇಶಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಹೊಸ ಕೇಂದ್ರ ಸ್ಥಾಪಿಸಲು ಸರ್ಕಾರ ಸಜ್ಜಾಗಿದೆ. ಈ ಮೂಲಕ ರೈತರಿಗೆ ಹಾಗೂ ಕೃಷಿ ವಲಯಕ್ಕೆ ಸಂಬಂಧಿತ ನಿಯಮಗಳನ್ನು ರೂಪಿಸಲು ಮುಂದಾಗುವವರಿಗೆ ಈ ಡಿಜಿಟಲ್ ವೇದಿಕೆ ಸಹಾಯಕವಾಗಲಿದೆ.
ಹವಾಮಾನ ಮೌಲ್ಯಮಾಪನಕ್ಕೆ ತಜ್ಞರ ಸಮಿತಿ:
ಇತ್ತೀಚೆಗೆ ಬದಲಾಗುತ್ತಿರುವ ಹವಾಮಾನ ವ್ಯಪರಿತ್ಯವನ್ನು ಹಾಗೂ ಕೃಷಿ ಹವಾಮಾನ ವಲಯಗಳನ್ನು ಮರು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವುದಾಗಿ ಸರ್ಕಾರ ಘೋಷಿಸಿದೆ.
ಸಮಗ್ರ ಮಳೆಯಾಶ್ರಿತ ಕೃಷಿ ನೀತಿ:
ರಾಜ್ಯದಲ್ಲಿ ಶೇ.64ರಷ್ಟು ಭಾಗವು ಮಳೆಯಾಶ್ರಿತ ಕೃಷಿ ಭೂಮಿಯಾಗಿದ್ದು, ಕೃಷಿ ಉತ್ಪಾದನೆಯಲ್ಲಿ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಹಾಗೂ ರೈತರ ಜೀವನೋಪಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಕೃಷಿ ನೀತಿಯನ್ನು ಜಾರಿಗೆ ತರುವುದಾಗಿ ಸರ್ಕಾರ ಘೋಷಿಸಿದೆ.
ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಆಧುನೀಕರಣ:
ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳನ್ನು ಒದಗಿಸುವ ಸಲುವಾಗಿ ೫೮ ಪ್ರಯೋಗಾಲಯಗಳನ್ನು ಆಧುನೀಕರಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.

ಸಾವಯವ ಕೃಷಿಗೆ ಉತ್ತೇಜನ:
ಉತ್ತರ ಕನ್ನಡದ ಜೊಯ್ಡಾ ತಾಲೂಕನ್ನು ಕರ್ನಾಟಕದ ಮೊದಲ ಸಾವಯವ ಕೃಷಿ ತಾಲೂಕು ಎಂದು ಘೋಷಿಸಲಾಗುವುದು. ಹಾಗೆಯೇ, ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸಲು ಪ್ರಮಾಣೀಕರಣ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಕಬ್ಬು ಬೆಳೆಗೆ ಬೆಂಬಲ:
ಮಂಡ್ಯ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಕಲಬುರುಗಿಯಲ್ಲಿನ ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ 3 ಸಾವಿರ ಹೆಕ್ಟೇರ್ಗಳಲ್ಲಿ ಮಣ್ಣು ಮತ್ತು ಜಲ ನಿರ್ವಹಣಾ ಕ್ರಮ ಜಾರಿಗೆ ತರಲು ಸರ್ಕಾರ ಯೋಜಿಸಿದೆ.
ಜೈವಿಕ ಕೃಷಿ ಪರಿಕರಗಳಿಗೆ ಉತ್ತೇಜನ:
ರೈತ ಸೇವಾ ಕೇಂದ್ರಗಳ ಮೂಲಕ ಕೃಷಿ ನವೋದ್ಯಮಗಳು ಉತ್ಪಾದಿಸುವ ಜೈವಿಕ ಕೃಷಿ ಪರಿಕರಗಳಿಗೆ ಉತ್ತೇಜನೆ.
ಭೂ ಸಮೀಕ್ಷೆ:
ರೈತರು ಸೂಕ್ತ ಬೆಳೆ ಹಾಗೂ ಸಂಬಂಧಿತ ಸಲಕರಣೆ, ಗೊಬ್ಬರ ಇತ್ಯಾದಿ ಅಂಶಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಭೂ ಸಮೀಕ್ಷೆಯನ್ನು ಹೆಚ್ಚುವರಿಯಾಗಿ 11 ಲಕ್ಷ ಹೆಕ್ಟೇರ್ಗಳಿಗೆ ವಿಸ್ತರಿಸುವುದಾಗಿ ಘೋಷಣೆ.
ಮಂಡ್ಯದಲ್ಲಿ ಕೃಷಿ ವಿವಿ:
25 ಕೋಟಿ ರೂಪಾಯಿ ಆರಂಭಿಕ ಅನುದಾನದಲ್ಲಿ ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ, ಈ ವರ್ಷದಿಂದಲೇ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸುವುದಾಗಿ ಸರ್ಕಾರ ಹೇಳಿದೆ.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಫಿನೋಟೈಪಿಂಗ್:
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬರ ಹಾಗೂ ರೋಗ ನಿರೋಧಕ ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಫಿನೋಟೈಪಿಂಗ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.
20 ಕೋಟಿ ಅನುದಾನದಲ್ಲಿ ಸಾವಯವ-ರಾಗಿ ಕೇಂದ್ರ:
ಸಾವಯವ ಉತ್ಪನ್ನಗಳು ಮತ್ತು ರಾಗಿಗಳಿಗಾಗಿಯೇ ಮೀಸಲಿರುವಂತೆ ಕೇಂದ್ರವೊಂದನ್ನು ಸ್ಥಾಪಿಸಿ, ರೈತರ ಮಾರುಕಟ್ಟೆ ಪ್ರವೇಶ ಹೆಚ್ಚಿಸಲು 20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ:
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲುಕಿನಲ್ಲಿ ನೂತನ ಕೃಷಿ ಸಂಶೋಧನ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಅಥಣಿಯಲ್ಲಿ ಕೃಷಿ ಕಾಲೇಜು:
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪಿಸುವ ಕುರಿತು ಅಧ್ಯಯನ ನಡೆಸಲು ಸರ್ಕಾರ ಚಿಂತಿಸುವುದಾಗಿ ರಾಜ್ಯ ಬಜೆಟ್ನಲ್ಲಿ ಹೇಳಲಾಗಿದೆ.