ಕನ್ನಡ ಚಿತ್ರರಂಗದ ಕನಸಿನ ರಾಣಿ ನಟಿ ಮಾಲಾಶ್ರೀ ಹಾಗೂ ನಿರ್ಮಾಪಕ ದಿ.ಕೋಟಿ ರಾಮು ಪುತ್ರಿ ರಾಧನಾ ಅವರು ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಈಗಾಗಲೇ ತರುಣ್ ಕಿಶೋರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಇದೇ ಹೊತ್ತಿಗೆ ತಮ್ಮ ಹೆಸರನ್ನು ಆರಾಧನಾ ಎಂದು ಬದಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟಿ ಮಾಲಾಶ್ರೀ, ‘ಪುತ್ರಿಗೆ ಹೊಸ ಹೆಸರಿಡುವ ವಿಚಾರವಾಗಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರೊಂದಿಗೆ ಚರ್ಚಿಸಿ ಆರಾಧನಾ ಎಂಬ ಹೆಸರನ್ನು ಇಡಲಾಗಿದೆ. ಇನ್ನು ಮುಂದೆ ಎಲ್ಲರೂ ಕೂಡ ತಮ್ಮ ಪುತ್ರಿಯನ್ನು ಆರಾಧನಾ ಎಂದೇ ಕರೆಯುವಂತೆ’ ಮಾಲಾಶ್ರೀ ವಿನಂತಿಸಿಕೊಂಡಿದ್ದಾರೆ.
ಇನ್ನು ಮಾಲಾಶ್ರೀ ಪತಿ ದಿ.ರಾಮು ಅವರು ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ಕೋಟಿ ವೆಚ್ಚ ಮಾಡಿ ಸಿನಿಮಾ ನಿರ್ಮಿಸಿ ಕೋಟಿ ರಾಮು ಎಂದೇ ಖ್ಯಾತರಾಗಿದ್ದರು. ಜೊತೆಗೆ ನಟಿ ಮಾಲಾಶ್ರೀ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ದಶಕಗಳ ಹಿಂದೆ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದರು. ಸದ್ಯ, ಅವರ ಪುತ್ರಿಯ ಹೆಸರನ್ನು ಆರಾಧನಾ ಎಂದು ಬದಲಿಸಲಾಗಿದ್ದು, ಈ ಹೊಸ ಹೆಸರು ಅವರಿಗೆ ಯಾವ ರೀತಿ ಯಶಸ್ಸು ತಂದು ಕೊಡಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.