ಬಿಜೆಪಿ ಒಳ ಬೇಗುದಿ ಬೀದಿಗೆ ಬಿದ್ದಾಗಿದೆ. ಒಡೆದ ಮನೆಯಾಗಿರೋ ಬಿಜೆಪಿ ಒಂದು ಗೂಡೋದಿಕ್ಕೆ ಸಾಧ್ಯವೇ ಇಲ್ಲ ಅನ್ನೋ ರೀತಿ ಆಗಿದೆ. ಹೈ ಕಮಾಂಡ್ ಸೂಚನೆ ನೀಡಿ ನೋಟೀಸ್ ಕೊಟ್ಟರೂ ಈ ಬೇಗುದಿಗೆ ಮುಕ್ತಿ ಸಿಗುತ್ತಿಲ್ಲ. ಏನಾದರೂ ಆಗಲಿ ವಿಜಯೇಂದ್ರ ಕೆಳಗೆ ಇಳಿಯಲೇಬೇಕು ಅನ್ನೋದು ಯತ್ನಾಳ್ ಅಂಡ್ ಟೀಂ ನ ನಿರ್ಧಾರ. ಇದೀಗ ಯತ್ನಾಳ್ ಅಂಡ್ ಟೀಂ ಮಣಿಸಲು ರೇಣುಕಾಚಾರ್ಯ ಟೀಂ ತಂತ್ರ ಮಾಡಿದ್ದರೆ, ಇದೀಗ ಯತ್ನಾಳ್ ಅಂಡ್ ಟೀಂ ಹೊಸ ತಂತ್ರ ರೂಪಿಸಿದೆ
ಹೌದು, ನಾನಾ ನೀನಾ ಎಂಬ ಹೋರಾಟಕ್ಕೆ ಮತ್ತೆ ವೇದಿಕೆ ಸಿದ್ದಮಾಡುತ್ತಿದೆ ರೆಬೆಲ್ಸ್ ಟೀಂ. ಲಿಂಗಾಯತ ಸಮುದಾಯದ ವಿಚಾರ ಇಟ್ಟುಕೊಂಡು ಯತ್ನಾಳ್ ಕಟ್ಟಿ ಹಾಕೋಕೆ ಮುಂದಾಗಿದ್ದ ರೇಣುಕಾಚಾರ್ಯ ಅಂಡ್ ಟೀಂ ರೆಡಿಯಾಗಿದೆ. ಬಿಜೆಪಿ ಭಿನ್ನಮತಕ್ಕೆ ಈಗ ಲಿಂಗಾಯತ ಸಮುದಾಯ ದಾಳವಾಗಿ ಬದಲಾಗುತ್ತಿದೆ. ರೇಣುಕಾಚಾರ್ಯ ಟೀಂ ನಮ್ಮದೇ ಲಿಂಗಾಯತ ಬಣ ಎನ್ನುತ್ತಿರುವಾಗ, ನಿಮ್ಮ ಜೊತೆ ಯಾರಿಲ್ಲ ಎನ್ನುತ್ತ ಯತ್ನಾಳ್ ತಂಡ ಈಗ ಬೃಹತ್ ಸಮಾವೇಶಕ್ಕೆ ಮುಂದಾಗಿದೆ. ತಿಂಗಳಾಂತ್ಯದೊಳಗೆ ವಿಜಯೇಂದ್ರಗೆ ಸೆಡ್ಡು ಹೊಡೆಯಲು ಭರದ ಸಿದ್ದತೆ ನಡೆದಿದೆ.

ಬಿಜೆಪಿ ಭಿನ್ನಮತಕ್ಕೆ ಈಗ ಲಿಂಗಾಯತ ಸಮುದಾಯವೇ ಅಸ್ತ್ರವಾಗಿದೆ. ಸಮುದಾಯ ಯಾರ ಜೊತೆ ಇದೆ ಎನ್ನುವುದೇ ಸದ್ಯದ ಪ್ರಶ್ನೆ. ಸಮುದಾಯ ಯಾರ ಜೊತೆ ನಿಲ್ಲುತ್ತೆ ಅನ್ನೋದರ ಮೇಲೆ ಈಗ ನಾಯಕತ್ವಕ್ಕೆ ವೇದಿಕೆ ಆಗುತ್ತಿದೆ. ರೇಣುಕಾಚಾರ್ಯ ಪದೇ ಪದೆ ಯತ್ನಾಳ್ ವಿರುದ್ಧ ಗುಡುಗುತ್ತ, ಇಡಿ ಸಮುದಾಯ ಯಡಿಯೂರಪ್ಪ ಅವರ ಜೊತೆ ಇದೆ. ಈಗ ಅವರೆಲ್ಲರೂ ವಿಜಯೇಂದ್ರ ಅವರನ್ನ ಬೆಂಬಲಿಸುತ್ತಿದ್ದಾರೆ. ಯತ್ನಾಳ್ ಅವರ ಜೊತೆ ಯಾರೂ ಇಲ್ಲ. ಅವರೊಬ್ಬ ಅರೆ ಹುಚ್ಚ ಎಂದೆಲ್ಲ ಹೊನ್ನಾಳಿ ಗೂಳಿ ಗುಮ್ಮತ್ತಲೇ ಇರುತ್ತದೆ ಅಂತ ಹೇಳುತ್ತಲೇ ವಿಜಯೇಂದ್ರ ಪರವಾಗಿ ಸಮುದಾಯದ ಸ್ವಾಮಿಗಳನ್ನೆಲ್ಲ ಸೇರಿಸಿ ಸಮಾವೇಶ ಮಾಡಲು ಮುಂದಾಗಿದ್ರು. ಆದ್ರೆ ಇದು ಹೈಕಮಾಂಡ್ ಗೆ ತಪ್ಪು ಸಂದೇಶ ರವಾನೆ ಆಗುತ್ತದೆ ಎಂಬ ಕಾರಣಕ್ಕೆ ಜೊತೆಗೆ ರಾಜ್ಯಾಧ್ಯಕ್ಷನಾಗಿ ಬಣ ಬಡಿದಾಟಕ್ಕೆ ಸೊಪ್ಪು ಹಾಕಿದಂತಾಗುತ್ತದೆ. ಹೀಗಾಗಿ ಈ ರೀತಿಯ ಸಮಾವೇಶ ನಡೆಸುವುದು ಸರಿಯಲ್ಲ ಎಂದು ರೇಣುಕಾಚಾರ್ಯ ತಂಡಕ್ಕೆ ವಿಜಯೇಂದ್ರ ನೇರವಾಗಿ ಹೇಳಿದ್ದಾರೆ. ಹೀಗಾಗಿ ಸಮಾವೇಶ, ಸಭೆಗಳೆಲ್ಲ ರದ್ದಾಗಿತ್ತು. ಆದ್ರೆ ಯತ್ನಾಳ್ ಟೀಂ ಮಾತ್ರ, ವೀರಶೈವ ಲಿಂಗಾಯತ ಸಮಾವೇಶ ನಡೆಸಿ, ತೊಡೆ ತಟ್ಟಲು ಸಿದ್ದವಾಗಿದೆ.
ಪದೇ ಪದೇ ಸಭೆ ಸೇರುತ್ತಿರೋ ಯತ್ನಾಳ್ ಮತ್ತವರ ತಂಡ ಮತ್ತೆ ಸಭೆ ನಡೆಸಿದೆ. ನಿನ್ನೆ ಕುಮಾರಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ನಡೆಸಿರೋ ಈ ತಂಡ ಸುದೀರ್ಘ ಚರ್ಚೆ ಮಾಡಿದೆ. ಅವರು ರದ್ದು ಮಾಡಿರೋ ಲಿಂಗಾಯತ ಸಮಾವೇಶವನ್ನ ನಾವು ನಡೆಸಬೇಕು ಎಂದು ತೀರ್ಮಾನಿಸಿದೆ. ಈಗಾಗಲೆ ದೆಹಲಿಯಲ್ಲಿ ಸೋಮಣ್ಣ ಜೊತೆ ಲಿಂಗಾಯತರ ನಾಯಕರ ಸಭೆ ನಡೆಸಿ ಹೈಕಮಾಂಡ್ ಗೆ ಮಾಹಿತಿ ತಲುಪಿಸಿ ಆಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಲಿಂಗಾಯತರನ್ನ ಜಾಗೃತ ಮಾಡಿ, ನಾವೆಲ್ಲ ಯಡಿಯೂರಪ್ಪ ಅವರ ಕುಟುಂಬಕ್ಕೆ ಅಂಟಿಕೊಂಡಿಲ್ಲ ಎಂಬ ಸಂದೇಶವನ್ನ ದೆಹಲಿಗೆ ತಲುಪಿಸಬೇಕು ಎಂದು ಪ್ಲಾನ್ ರೂಪಿಸಿದ್ದಾರೆ.
ದಾವಣಗೆರೆ ಅಥವಾ ಬೆಂಗಳೂರಿನಲ್ಲಿ ಸಮಾವೇಶಕ್ಕೆ ಯೋಚಿಸಲಾಗಿದೆ ಎನ್ನಲಾಗುತ್ತಿದೆ.

ಸಮುದಾಯದ ಎಲ್ಲ ನಾಯಕರನ್ನ ಕರೆಯಬೇಕು. ಹೆಚ್ಚಿ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರನ್ನ ಸೇರಿಸಬೇಕು. ಯಡಿಯೂರಪ್ಪ ಅವರನ್ನ ನಾವೆಲ್ಲ ಸಮುದಾಯದ ನಾಯಕ ಎಂದು ಒಪ್ಪಿಕೊಂಡಿದ್ದೆವು. ಆದರೆ ವಿಜಯೇಂದ್ರ ಅವರನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಾರಣ ಅವರ ಭ್ರಷ್ಟಾಚಾರ ಹಾಗೂ ಪಕ್ಷಪಾತಿ ತನ ಎಂದು ಸಮುದಾಯಕ್ಕೆ ತಲುಪಿಸುವ ಕೆಲಸ ಮಾಡಲಿದ್ದಾರೆ. ವಿಜಯೇಂದ್ರ ಅವರೇ ಅಧ್ಯಕ್ಷರಾದರೆ ನಾವೆಲ್ಲ ಪಕ್ಷದಲ್ಲಿ ತಟಸ್ತರಾಗುತ್ತೇವೆ. ಇದು ಸಮುದಾಯವನ್ನೇ ಕಡೆಗಣಿಸಿದಂತಾಗಲಿದೆ. ಚುನಾವಣೆಯಲ್ಲಿ ದೊಡ್ಡ ಪರಿಣಾಮ ಬೀರಲಿದೆ ಎಂದು ದೆಹಲಿ ನಾಯಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಸಮಾವೇಶದಲ್ಲಿ ಆಗಲಿದೆ ಎನ್ನಲಾಗಿದೆ.
ಈ ಮೂಲಕ ಸಮುದಾಯದ ಬೆಂಬಲದ ಜೊತೆಗೆ ಬಿಎಸ್ ವೈ ಅವರ ಬೆಂಬಲವನ್ನೂ ಪಡೆಯುವ ಮೂಲಕ ವಿಜಯೇಂದ್ರಗೆ ತಿರುಗೇಟು ಕೊಡಬೇಕು, ಜೊತೆಗೆ ಲಿಂಗಾಯತ ಸಮುದಾಯಕ್ಕೆ ಇವರ ಕೊಡುಗೆ ಏನೂ ಇಲ್ಲ ಅಂತ ತೋರಿಸಲು ಪ್ಲ್ಯಾನ್ ಮಾಡಲಾಗಿದೆ.
ಸಮಾವೇಶದಿಂದ ಏನು ಪರಿಣಾಮ ಆಗತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ವಿಜಯೇಂದ್ರ ಅವರ ವಿರುದ್ದ ಸಮರಕ್ಕೆ ಎಷ್ಟು ಪ್ರಮಾಣದಲ್ಲಿ ಲಿಂಗಾಯತ ನಾಯಕರು, ಸಮುದಾಯದ ಜನರು ಸಮಾವೇಶಕ್ಕೆ ಬರಲಿದ್ದಾರೆ ಎನ್ನುವುದು ಕುತೂಹಲಕರ ಸಂಗತಿ. ಈ ಮೂಲಕ ಒಂದು ವಿಚಾರವನ್ನು ಸ್ಪಷ್ಟ ಆಗಲಿದೆ. ಯಾರ್ಯಾರಿಗೆ ಸಮುದಾಯ ಎಷ್ಟು ಸಪೋರ್ಟ್ ಮಾಡುತ್ತದೆ ಎಂಬುದಂತೂ ತಿಳಿಯುತ್ತದೆ.