ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಏಪ್ರಿಲ್ 8ರ ಎಪಿಸೋಡ್ ಕಥೆ ಇಲ್ಲಿದೆ. ಜಾಹ್ನವಿ ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಜಯಂತ್ ಹಾಗೂ ಜಾನು ಮನೆಯವರು ಕಣ್ಣೀರಿಡುತ್ತಿದ್ದಾರೆ. ಅವಳ ಫೋಟೋ ಮುಂದೆ ಕುಳಿತು ದುಃಖಿಸುತ್ತಿದ್ದಾರೆ. 2 ದಿನಗಳಿಂದ ಮಾವನ ಮನೆಯಲ್ಲೇ ಉಳಿದುಕೊಂಡಿದ್ದ ಜಯಂತ್ ಮನೆಗೆ ವಾಪಸ್ ಹೊರಡಲು ಸಿದ್ಧನಾಗುತ್ತಾನೆ. ನೀವು ಅಲ್ಲಿ ಹೋದರೆ ಜಾನು ನೆನಪುಗಳು ಕಾಡುತ್ತದೆ. ಸ್ವಲ್ಪ ದಿನ ಇಲ್ಲೇ ಇದ್ದು ನಂತರ ಹೋಗಿ ಎಂದು ಮನೆಯವರು ಮನವಿ ಮಾಡುತ್ತಾರೆ.
ಜಾಹ್ನವಿಯವರ ಬಗ್ಗೆ ಏನಾದರೂ ಸುಳಿವು ಸಿಕ್ಕಿದೆಯಾ ಎಂದು ಪೊಲೀಸರ ಬಳಿ ವಿಚಾರಿಸಿಕೊಂಡು ಬರುತ್ತೇನೆ ಎಂದು ಜಯಂತ್ ಹೇಳುತ್ತಾನೆ. ಜಾನು ಇಲ್ಲೇ ಇದ್ದಿದ್ದರೆ ಅವಳು ಬದುಕಿ ಉಳಿಯುತ್ತಿದ್ದಳೋ ಏನೋ, ಅವಳನ್ನು ಕರೆದುಕೊಂಡು ಹೋಗಿ ನಾನೇ ಅವಳ ಸಾವಿಗೆ ಕಾರಣನಾಗಿಬಿಟ್ಟೆ ಎಂಬ ಅಪರಾಧಿ ಮನೋಭಾವ ನನ್ನನ್ನು ಕಾಡುತ್ತಿದೆ ಎಂದು ಜಯಂತ್ ಬೇಸರ ವ್ಯಕ್ತಪಡಿಸುತ್ತಾನೆ, ಯಾವುದೂ ನಮ್ಮ ಕೈಯಲ್ಲಿ ಇಲ್ಲ, ಜಾನುವನ್ನು ನೀವು ಎಷ್ಟು ಪ್ರೀತಿ ಮಾಡುತ್ತೀರಿ ಅನ್ನೋದು ನಮಗೂ ಗೊತ್ತಿದೆ, ನಿಮ್ಮ ಮನಸ್ಸಿನಲ್ಲಿ ಆ ರೀತಿ ಯೋಚನೆ ಮಾಡಬೇಡಿ, ಸುಮ್ಮನೆ ನಿಮ್ಮನ್ನು ನೀವು ಏಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಕೊಳ್ಳುತ್ತೀರಿ ಎಂದು ಶ್ರೀನಿವಾಸ್ ಹಾಗೂ ಲಕ್ಷ್ಮೀ ಇಬ್ಬರೂ ಅಳಿಯನಿಗೆ ಸಮಾಧಾನ ಹೇಳುತ್ತಾರೆ.
ಜಯಂತ್, ಮನೆಗೆ ವಾಪಸ್ ಬರುತ್ತಾನೆ. ಜಾನು ಹಾಡಿರುವ ಹಾಡುಗಳನ್ನು ಕೇಳಿ ಕಣ್ಣೀರಿಡುತ್ತಾನೆ. ಏನೇ ಕೆಲಸ ಮಾಡಿದರೂ ಹೆಂಡತಿಯ ನೆನಪೇ ಜಯಂತನಿಗೆ ಕಾಡುತ್ತಿದೆ. ಅವಳ ಜೊತೆ ಕಳೆದ ಕ್ಷಣಗಳನ್ನು ಜಯಂತ್ ನೆನಪಿಸಿಕೊಂಡು ಕಣ್ಣೀರಿಡುತ್ತಾನೆ. ಸಮುದ್ರಕ್ಕೆ ಬಿದ್ದಿದ್ದು, ಹುಟ್ಟುಹಬ್ಬದ ದಿನ ತನಗೆ ವಿಶ್ ಮಾಡಿದ್ದು, ತನ್ನನ್ನು ಪ್ರೀತಿಯಿಂದ ಕೇರ್ ಮಾಡುತ್ತಿದ್ದು, ಮದುವೆ ಆಗಿ ಬಂದ ದಿನವನ್ನು ಜಯಂತ್ ನೆನಪಿಸಿಕೊಳ್ಳುತ್ತಾನೆ. ಇತ್ತ ಭಾವನಾ ಕೂಡಾ ತಂಗಿಯನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಾಳೆ. ಮರೀಗೌಡ ಬಂದು ಭಾವನಾಗೆ ಸಮಾಧಾನ ಮಾಡುತ್ತಾನೆ. ಭಾವನಾ ಅತ್ತ ಹೋಗುತ್ತಿದ್ದಂತೆ ಸಿದ್ದೇಗೌಡ ಬಂದು ನನ್ನ ಬದಲಿಗೆ ಜೈಲಿಗೆ ಹೋಗಿರುವುದು ಯಾರು ಎಂದು ಮರೀಗೌಡನನ್ನು ಕೇಳುತ್ತಾನೆ.
ನೀನು ಆ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ನಾವು ಎಲ್ಲವನ್ನೂ ಸರಿ ಮಾಡುತ್ತಿದ್ದೇವೆ ಎಂದು ಧೈರ್ಯ ಹೇಳುತ್ತಾನೆ. ಆದರೆ ಸಿದ್ದುವಿಗೆ ಅಣ್ಣನ ಮಾತು ಸಮಧಾನ ಎನಿಸುವುದಿಲ್ಲ. ತಪ್ಪು ಮಾಡಿದ ನಾನು ಹೊರಗೆ ಇದ್ದೇನೆ, ಏನೂ ತಪ್ಪು ಮಾಡದ ಆ ವ್ಯಕ್ತಿ ಒಳಗೆ ಇದ್ದಾನೆ, ಅವನು ಸುಮ್ಮನೆ ಆರೋಪ ಹೊತ್ತುಕೊಂಡಿದ್ದು ಏಕೆ ? ಅವನಿಗೆ ದುಡ್ಡು ಕೊಟ್ಟಿದ್ದೀರ? ಅವನು ಯಾರು ಎಂದು ಗೊತ್ತಾದರೆ ಅವನನ್ನು ಭೇಟಿ ಮಾಡಿ ಒಂದಿಷ್ಟು ದುಡ್ಡು ಕೊಟ್ಟು ಅವನಿಗೆ ಧೈರ್ಯ ಹೇಳಿ, ಮನೆಯವರಿಗೆ ಸಹಾಯ ಮಾಡಬಹುದು ಅದಕ್ಕೆ ನಾನು ಪೊಲೀಸ್ ಸ್ಟೇಷನ್ಗೆ ಹೋಗಿಬರುತ್ತೇನೆ ಎಂದು ಸಿದ್ದು ಹೇಳುತ್ತಾನೆ. ಆದರೆ ಮರೀಗೌಡ ಸಿದ್ದುವಿಗೆ ಹೊರಗೆ ಹೋಗಲು ಅವಕಾಶ ಮಾಡಿಕೊಡುವುದಿಲ್ಲ.
ಇತ್ತ ವೆಂಕಿ ಕಾಣದೆ ಚೆಲ್ವಿ ಕಂಗಾಲಾಗಿದ್ದಾಳೆ. ಅವನು ನನಗೆ ಹೇಳದೆ ಎಲ್ಲೂ ಹೋಗುತ್ತಿರಲಿಲ್ಲ, ಎಲ್ಲಿ ಹೋದ, ಏನು ಮಾಡುತ್ತಿದ್ದಾನೆ ಎಂದು ವೆಂಕಿ ಬಗ್ಗೆ ತಿಳಿದಿರುವವರ ಬಳಿ ವಿಚಾರಿಸುತ್ತಾಳೆ. ಪ್ರಕಾಶ ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ. ಪ್ರಕಾಶಣ್ಣ ಬರುವವರೆಗೂ ಮನೆ ಬಳಿಯೇ ಇರುತ್ತೇನೆ ಎಂದು ಅವನ ಮನೆ ಮುಂದೆಯೇ ಕುಳಿತುಕೊಳ್ಳುತ್ತಾಳೆ. ಸ್ವಲ್ಪ ಸಮಯದ ನಂತರ ಅಲ್ಲಿಂದ ಹೋಗುತ್ತಾಳೆ. ಚೆಲ್ವಿ ಇಲ್ಲದ ಸಮಯ ನೋಡಿಕೊಂಡು ಪ್ರಕಾಶ ಮನೆ ಒಳಗೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಅಷ್ಟರಲ್ಲಿ ಚೆಲ್ವಿ ಮತ್ತೆ ಅಲ್ಲಿಗೆ ಬರುತ್ತಾಳೆ. ವೆಂಕಿಯನ್ನು ಹುಡುಕಲು ನನಗೆ ಸಹಾಯ ಮಾಡು ಪ್ರಕಾಶಣ್ಣ, ಸ್ವಂತ ನಿನ್ನ ತಂಗಿಗೆ ಹೀಗೆ ಅಗಿದ್ದರೆ ನೀನು ಸಹಾಯ ಮಾಡುತ್ತಿರಲಿಲ್ಲವೇ ಎಂದು ಕೇಳುತ್ತಾಳೆ.
ಒಲ್ಲದ ಮನಸ್ಸಿನಿಂದ ಪ್ರಕಾಶ, ಚೆಲ್ವಿಯನ್ನು ಪೊಲೀಸ್ ಸ್ಟೇಷನ್ಗೆ ಕರೆದೊಯ್ಯುತ್ತಾನೆ, ನೀನು ಇಲ್ಲೇ ಇರು ನಾನು ಒಳಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ ಎಂದು ಪ್ರಕಾಶ ಒಳಗೆ ಹೋಗುತ್ತಾನೆ. ವೆಂಕಿಯನ್ನು ಭೇಟಿ ಮಾಡುವ ಅವನು, ಚೆಲ್ವಿ ಪೊಲೀಸರಿಗೆ ದೂರು ನೀಡಲು ಬಂದಿದ್ದಾಳೆ. ಅವಳು ಈಗ ನಿನ್ನನ್ನು ನೋಡಿದರೆ ಕೆಲಸ ಹಾಳಾಗುತ್ತದೆ, ಇನ್ನು ಸ್ವಲ್ಪ ದಿನಗಳು ಇಲ್ಲಿದ್ದರೆ ದುಡ್ಡು ಸಿಗುತ್ತದೆ, ಆಗ ನಿನ್ನ ಅತ್ತೆ ಆಪರೇಷನ್ ಮಾಡಿಸಬಹುದು, ಸದ್ಯಕ್ಕೆ ನೀನು ಚೆಲ್ವಿ ಕಣ್ಣಿಗೆ ಕಾಣಿಸಿಕೊಳ್ಳಬೇಡ ಎನ್ನುತ್ತಾನೆ, ಅವನ ಮಾತನ್ನು ನಂಬುವ ವೆಂಕಿ ಚೆಲ್ವಿಗೆ ಕಾಣದಂತೆ ಮರೆಯಾಗುತ್ತಾನೆ, ನಂತರ ಪ್ರಕಾಶ ಚೆಲ್ವಿಯನ್ನು ಕರೆತಂದು ತಾನೇ ಕಂಪ್ಲೇಂಟ್ ಬರೆದು ಬೇಗ ಹುಡುಕಿಕೊಡಿ ಎಂದು ಇನ್ಸ್ಪೆಕ್ಟರ್ ಮುಂದೆ ನಾಟಕ ಮಾಡುತ್ತಾನೆ.
ವೆಂಕಿ ಜೈಲಿನಲ್ಲಿರುವುದು ಚೆಲ್ವಿಗೆ ಗೊತ್ತಾಗುವುದಾ? ಜಾಹ್ನವಿ ಕಳೆದುಕೊಂಡ ನೋವಿನಿಂದ ಜಯಂತ್ ಹೊರಗೆ ಬರುತ್ತಾನಾ? ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.