ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಏಪ್ರಿಲ್ 10ರ ಎಪಿಸೋಡ್ ಕಥೆ ಇಲ್ಲಿದೆ. ಹೆಂಡತಿಯನ್ನು ಕಳೆದುಕೊಂಡು ಒಂಟಿಯಾಗಿರುವ ನನಗೆ ಯಾರಾದರೂ ಆಸರೆ ಆದರೆ ಒಳ್ಳೆಯದು ಎಂದುಕೊಂಡು ಜಯಂತ್, ತನ್ನನ್ನು ಬಾಲ್ಯದಿಂದ ನೋಡಿಕೊಳ್ಳುತ್ತಿದ್ದ ಶಾಂತಮ್ಮನನ್ನು ಕರೆತರುತ್ತಾನೆ. ಶಾಂತಮ್ಮನಿಗೆ ಜಯಂತನ ಬಗ್ಗೆ ಗೊತ್ತಿದ್ದು ಅವನ ಜೊತೆ ಹೋಗಲು ಇಷ್ಟವಿಲ್ಲದಿದ್ದರೂ ಗಂಡನ ಬಲವಂತದಿಂದ ಜಯಂತನೊಂದಿಗೆ ಬರುತ್ತಾಳೆ.
ಜಯಂತ್ ಪ್ರೀತಿ ಮಾಡಿದ್ದು, ಮದುವೆ ಆಗಿದ್ದು, ಹೆಂಡತಿ ಸತ್ತಿದ್ದು ಎಲ್ಲವನ್ನೂ ಶಾಂತಮ್ಮನ ಬಳಿ ಹೇಳುತ್ತಾನೆ. ಜಯಂತನ ಅತಿಯಾದ ಪ್ರೀತಿ ಅವಳಿಗೆ ಉಸಿರುಗಟ್ಟಿಸಿ ಅವಳೇ ಸಮುದ್ರಕ್ಕೆ ಹಾರಿ ಪ್ರಾಣ ಕಳೆದುಕೊಂಡಿರುತ್ತಾಳೆ ಎಂದು ಶಾಂತಮ್ಮನಿಗೆ ಸ್ಪಷ್ಟವಾಗುತ್ತದೆ. ಆದರೂ ಹೆಂಡತಿಯನ್ನು ಕಳೆದುಕೊಂಡು ದು:ಖದಲ್ಲಿರುವ ಜಯಂತನಿಗೆ ಶಾಂತಮ್ಮ ಸಮಾಧಾನ ಹೇಳುತ್ತಾಳೆ. ಅವಳ ಆತ್ಮಕ್ಕೆ ಶಾಂತಿ ಕೋರಿ ಫೋಟೋಗೆ ಹಾರ ಹಾಕುವಾಗ ಜಯಂತ್ ಅಲ್ಲಿಗೆ ಬರುತ್ತಾನೆ, ಯಾವುದೇ ಕಾರಣಕ್ಕೂ ಜಾಹ್ನವಿ ಫೋಟೋಗೆ ಹಾರ ಹಾಕಬೇಡಿ ಅವಳು ನನ್ನ ಪಾಲಿಗೆ ಸತ್ತಿಲ್ಲ, ಇಲ್ಲೇ ಎಲ್ಲೋ ಓಡಾಡಿಕೊಂಡು ಇರುವಂತೆ ನನಗೆ ಭಾಸವಾಗುತ್ತಿದೆ ಎನ್ನುತ್ತಾನೆ, ಸರಿ ನಾನು ಹಾರ ಹಾಕುವುದಿಲ್ಲ ಎಂದು ಶಾಂತಮ್ಮ ಹೇಳುತ್ತಾರೆ.
ವೆಂಕಿ ಕಾಣೆಯಾಗಿರುವ ವಿಚಾರವನ್ನು ಚೆಲ್ವಿ, ಶ್ರೀನಿವಾಸನಿಗೆ ಹೇಳಿದಾಗ ಅವನು ಗಾಬರಿಯಾಗುತ್ತಾನೆ. ಅವಳ ಜೊತೆ ಮಗಳು ಭಾವನಾ ಮನೆಗೆ ಹೋಗುತ್ತಾನೆ. ಭಾವನಾ ಹಾಗೂ ಸಿದ್ದೇಗೌಡನ ಬಳಿ ಎಲ್ಲಾ ವಿಚಾರವನ್ನು ತಿಳಿಸುತ್ತಾನೆ, ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ, ನಿಮ್ಮ ತಂದೆಗೆ ಹೇಳಿ ಏನಾದರೂ ಮಾಡಿ, ನಮ್ಮ ವೆಂಕಿಯನ್ನು ಹುಡುಕಿಕೊಡಿ ಎಂದು ಶ್ರೀನಿವಾಸ್ ಮನವಿ ಮಾಡುತ್ತಾನೆ, ಅಪ್ಪ ಮನೆಯಲ್ಲಿ ಇಲ್ಲ, ಅಣ್ಣ ಇದ್ದಾನೆ ಅವನಿಗೆ ವಿಚಾರ ತಿಳಿಸುತ್ತೇನೆ ಎಂದು ಸಿದ್ದು ತನ್ನ ಅಣ್ಣ ಮರೀಗೌಡನನ್ನು ಶ್ರೀನಿವಾಸ್ ಬಳಿ ಕರೆತರುತ್ತಾನೆ. ವಿಚಾರ ತಿಳಿದು ಮರೀಗೌಡ, ತನಗೆ ಗೊತ್ತಿರುವ ಇನ್ಸ್ಪೆಕ್ಟರ್ಗೆ ಫೋನ್ ಮಾಡಿ ಮಹಿಳೆಯೊಬ್ಬರು ಕಂಪ್ಲೇಂಟ್ ಕೊಡಲು ಬಂದಾಗ ಏಕೆ ತೆಗೆದುಕೊಳ್ಳಲಿಲ್ಲ. ನಾನು ಫೋಟೋ ಕಳಿಸುತ್ತೇನೆ, ಆದಷ್ಟು ಬೇಗ ಅವನನ್ನು ಹುಡುಕಿಕೊಡಿ ಎಂದು ತಾಕೀತು ಮಾಡುತ್ತಾನೆ. ಆಗ ಇನ್ಸ್ಪೆಕ್ಟರ್ಗೆ ಆಕ್ಸಿಡೆಂಟ್ ವಿಚಾರದಲ್ಲಿ ಸರಂಡರ್ ಆಗಿರುವುದು ವೆಂಕಿ ಎಂಬ ಸತ್ಯ ಗೊತ್ತಾಗುತ್ತದೆ.
ಇತ್ತ ಜಾಹ್ನವಿ ತವರು ಮನೆಯಲ್ಲಿ ಅವಳ ಹಾಲು ತುಪ್ಪ ಕಾರ್ಯಕ್ಕೆ ಶ್ರೀನಿವಾಸ್ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಾನೆ. ಪುರೋಹಿತರನ್ನು ಕರೆಸಿ ಜಾಹ್ನವಿ ಶರೀರ ನಮಗೆ ದೊರೆತಿಲ್ಲ, ಈ ಪರಿಸ್ಥಿತಿಯಲ್ಲಿ ನಾವು ಹೇಗೆ ಈ ಕಾರ್ಯ ಮಾಡಬಹುದು ಎಂದು ಕೇಳುತ್ತಾರೆ, ಅದಕ್ಕೆ ಪುರೋಹಿತರು ಪರಿಹಾರ ಹೇಳುತ್ತಾರೆ. ಕಾರ್ಯಕ್ಕೆ ಬೇಕಾದ ಸಾಮಗ್ರಿಗಳ ಪಟ್ಟಿಯನ್ನು ಪುರೋಹಿತರು ಕೊಡುತ್ತಾರೆ, ಗಂಡು ಮಕ್ಕಳನ್ನು ಕರೆಯುವ ಶ್ರೀನಿವಾಸ್, ನಿಮ್ಮ ನಡುವೆ ಏನೇ ಮನಸ್ತಾಪ ಇರಲಿ, ಇದೊಂದು ಕಾರ್ಯವನ್ನು ನೀವು ಒಟ್ಟಿಗೆ ನಿಂತು ನಡೆಸಿಕೊಡಿ , ದುಡ್ಡು ಖರ್ಚಾಗುತ್ತದೆ ಎಂದು ಚಿಂತಿಸಬೇಡಿ, ನನ್ನ ಮಗಳ ಕಾರ್ಯದ ಎಲ್ಲಾ ದುಡ್ಡುನ್ನು ನಾನೇ ನಿಭಾಯಿಸುತ್ತೇನೆ ಎನ್ನುತ್ತಾನೆ. ಜಯಂತ್, ಭಾವನಾ-ಸಿದ್ದೇಗೌಡನಿಗೆ ಕರೆ ಮಾಡಿ ನಾಳೆ ಹಾಲು-ತುಪ್ಪ ಕಾರ್ಯಕ್ಕೆ ಬರುವಂತೆ ತಿಳಿಸುತ್ತಾನೆ.
ಮತ್ತೊಂದೆಡೆ ಲಲಿತಾ ಹಾಗೂ ನರಸಿಂಹಯ್ಯ ಇಬ್ಬರೂ ಜಾಹ್ನವಿ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಆ ಹುಡುಗಿ ನೋಡಿದರೆ ನನಗೆ ಬಹಳ ಬೇಸರವಾಗುತ್ತಿದೆ ಎಂದು ನರಸಿಂಹಯ್ಯ ಹೇಳುತ್ತಾನೆ. ಅವಳಿಗೆ ಊಟ ಕೊಡಲು ಲಲಿತಾ ಹೋಗುತ್ತಾಳೆ. ಅವಳಿಗೆ ನಿನ್ನ ಪರಿಚಯವಿಲ್ಲ, ನಾನೇ ಊಟ ಕೊಟ್ಟು ಬರುತ್ತೇನೆ ಎಂದು ನರಸಿಂಹಯ್ಯ ಹೋಗುತ್ತಾನೆ, ಜಾನು ಪರಿಸ್ಥಿತಿ ಕಂಡು ನರಸಿಂಹಯ್ಯ ಮರುಕ ಪಡುತ್ತಾನೆ, ವಿಶ್ವನಿಗೆ ವಿಚಾರ ಹೇಳಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದ ಲಲಿತಾ ನಂತರ ಅವನಿಗೆ ಎಲ್ಲಾ ವಿಚಾರವನ್ನೂ ತಿಳಿಸುತ್ತಾಳೆ.
ತನ್ನ ಮನೆಯಲ್ಲಿರುವುದು ತಾನು ಇಷ್ಟ ಪಟ್ಟ ಜಾಹ್ನವಿ ಎಂದು ವಿಶ್ವನಿಗೆ ಗೊತ್ತಾಗುವುದಾ? ಜಾಹ್ನವಿ ಹಾಲು-ತುಪ್ಪ ಕಾರ್ಯ ನೆರವೇರುವುದಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.