ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 20ರ ಎಪಿಸೋಡ್ ಕಥೆ ಇಲ್ಲಿದೆ. ಜಾಹ್ನವಿಗೆ ನಿದ್ರೆ ಮಾತ್ರೆ ಕೊಟ್ಟು ಅವಳು ಮಲಗಿದ ನಂತರ ಮಾವನ ಮನೆಗೆ ಹೋಗುವ ಜಯಂತನ ಪ್ಲಾನ್ ಹಾಳಾಗುತ್ತದೆ. ಭಾವನಾ ಹಾಗೂ ಸಿದ್ದೇಗೌಡ ಜಾಹ್ನವಿಯನ್ನು ನೋಡಲು ಬರುತ್ತಾರೆ. ಒಲ್ಲದ ಮನಸಿನಿಂದ ಜಯಂತ್, ಅವರಿಬ್ಬರನ್ನೂ ವೆಲ್ಕಮ್ ಮಾಡುತ್ತಾನೆ. ಮಲಗಿರುವ ತಂಗಿಯನ್ನು ಎಬ್ಬಿಸುವುದು ಬೇಡ ಎಂದು ಭಾವನಾ ಅವಳ ಪಕ್ಕದಲ್ಲೆ ರಾತ್ರಿಯಿಡೀ ಮಲಗುತ್ತಾಳೆ.
ಅಕ್ಕ ಮನೆಗೆ ಬಂದಿರುವುದನ್ನು ತಿಳಿದ ಜಾನು ಖುಷಿಯಾಗುತ್ತಾಳೆ. ಎಲ್ಲಾ ವಿಚಾರವನ್ನು ಅವಳ ಬಳಿ ಹೇಳಿಕೊಳ್ಳೋಣ ಎಂದೆನಿಸಿದರೂ ಜಾನು ಮನಸ್ಸು ಬದಲಿಸಿ ಸುಮ್ಮನಾಗುತ್ತಾಳೆ. ಸಿದ್ದೇಗೌಡನ ಜೊತೆ ಸೇರಿ ಅಜ್ಜಿಯನ್ನು ನೋಡಲು ಜಯಂತ್ ಮತ್ತೆ ಪ್ರಯತ್ನಿಸುತ್ತಾನೆ. ಅದರೆ ಜಾನು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಭಾವನಾ-ಸಿದ್ದು ಮನೆಗೆ ವಾಪಸ್ ಹೊರಡುತ್ತಾರೆ. ಅವರು ಹೋಗಿದ್ದಕ್ಕೆ ಜಯಂತ್ ಸಮಾಧಾನವಾಗುತ್ತಾನೆ. ಅವರಿಬ್ಬರೂ ಜಾನುವಿಗಾಗಿ ತಂದ ಗೊಂಬೆಯನ್ನು ಜಯಂತ್ ಮುಚ್ಚಿಡುತ್ತಾನೆ. ಹೇಗಾದರೂ ಮಾಡಿ ಇವರ ಕಣ್ತಪ್ಪಿಸಿ ಹೋಗಿ ಅಜ್ಜಿಯನ್ನು ನೋಡಿ ಬರಲೇಬೇಕು ಎಂದು ನಿರ್ಧರಿಸುತ್ತಾನೆ.
ರಾತ್ರಿ ಇಡೀ ಜಯಂತ ನಿದ್ರೆ ಬಾರದೆ ಜಾಹ್ನವಿ ಎದುರಿಗೇ ಕೂರುತ್ತಾನೆ. ಬೆಳಗ್ಗೆ ಕಣ್ಣು ಬಿಟ್ಟ ಕೂಡಲೇ ಎದುರಿಗೆ ಜಯಂತನನ್ನು ನೋಡಿ ಜಾಹ್ನವಿ ಗಾಬರಿಯಾಗುತ್ತಾಳೆ. ಏಕೆ ಗಾಬರಿಯಾಗುತ್ತೀರಿ, ಮಲಗಿ ರೆಸ್ಟ್ ಮಾಡಿ ಎಂದು ಜಯಂತ್ ಹೇಳುತ್ತಾನೆ. ಹೀಗೆ ನೀವು ಎದುರಿಗೆ ಕೂತರೆ ಹೇಗೆ ರೆಸ್ಟ್ ಮಾಡುವುದು, ನನಗೆ ಭಯ ಆಗುತ್ತೆ ಎಂದು ಜಾನು ಹೇಳುತ್ತಾಳೆ. ನನಗೆ ನಿಮ್ಮನ್ನು ನೋಡಲಾಗುತ್ತಿಲ್ಲ, ನೀವು ಇಷ್ಟಪಟ್ಟ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಂದು ಡಾಕ್ಟರ್ ಹೇಳಿದ್ದಾರೆ, ಹೇಳಿ ನಿಮಗೆ ಎಲ್ಲಿ ಹೋಗಲು ಇಷ್ಟ ಎಂದು ಕೇಳುತ್ತಾನೆ. ಜಯಂತನ ಮಾತಿಗೆ ಕೋಪಗೊಳ್ಳುವ ಜಾಹ್ನವಿ ಹೀಗೆಲ್ಲಾ ಮಾತನಾಡಲು ನಿಮಗೆ ಹೇಗೆ ಮನಸ್ಸಾಗುತ್ತದೆ? ನಾನು ಖುಷಿಯಾಗಿರಬೇಕು ಎಂದು ನಿಮಗೆ ಅನಿಸಿದರೆ ನನ್ನ ಮಗುವನ್ನು ವಾಪಸ್ ಕೊಡಿ ಎಂದು ಕೇಳುತ್ತಾಳೆ. ಜಾನು ಮಾತು ಕೇಳಿ ಜಯಂತ್ ಮೌನವಾಗುತ್ತಾನೆ.
ಇತ್ತ ಆಕ್ಸಿಡೆಂಟ್ ಕೇಸ್ ಮುಚ್ಚಿ ಹಾಕಲು ಜವರೇಗೌಡ-ಮರೀಗೌಡ ಸೇರಿ ಸಿದ್ದು ಹಾಗೂ ಭಾವನಾಳನ್ನು ಹನಿಮೂನ್ಗೆ ಕಳಿಸಲು ನಿರ್ಧರಿಸುತ್ತಾರೆ. ಇಬ್ಬರಿಗೂ ಹೇಳದೆ ಮರೀಗೌಡ ವಿದೇಶಕ್ಕೆ ಟಿಕೆಟ್ ಬುಕ್ ಮಾಡುತ್ತಾನೆ. ಈ ವಿಚಾರ ಕೇಳಿ ಭಾವನಾ ಬೇಸರಗೊಳ್ಳುತ್ತಾಳೆ. ಸಿದ್ದು ಇದಕ್ಕೆಲ್ಲಾ ಹೇಗೆ ಒಪ್ಪಿದರು. ಒಂದು ಮಾತು ನನ್ನನ್ನು ಕೇಳಬೇಕಿತ್ತು ತಾನೆ ಎಂದುಕೊಳ್ಳುತ್ತಾಳೆ. ಸಿದ್ದು, ರೂಮ್ಗೆ ಬಂದು ಭಾವನಾಳನ್ನು ಮಾತನಾಡಿಸುತ್ತಾನೆ. ಆದರೆ ಭಾವನಾ ಸಿದ್ದು ಮಾತುಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಸ್ವಲ್ಪ ಸಲುಗೆಯಿಂದ ಮಾತನಾಡಿದರೆ ಕೆಲವರು ಏನೇನೋ ಅರ್ಥ ಕಲ್ಪಿಸಿಕೊಳ್ಳುತ್ತಾರೆ ಎನ್ನುತ್ತಾಳೆ. ಆದರೆ ಸಿದ್ದುವಿಗೆ ಅವಳ ಮಾತು ಒಗಟಾಗಿ ಎನಿಸುತ್ತದೆ. ಅಷ್ಟರಲ್ಲಿ ಮರೀಗೌಡ ಬಂದು ಅಪ್ಪ ಕರೆಯುತ್ತಿದ್ಧಾರೆ ಬಾ ಎಂದು ಸಿದ್ದುವನ್ನು ಕರೆದುಕೊಂಡು ಹೋಗುತ್ತಾನೆ.
ವಿಚಾರ ಏನು ಎಂದು ಸಿದ್ದು ತಂದೆ ಬಳಿ ಕೇಳುತ್ತಾನೆ. ನೀವಿಬ್ಬರೂ ಮದುವೆ ಆಗಿ ತುಂಬಾ ದಿನ ಆಯ್ತು, ಆದರೆ ಇನ್ನೂ ನೀವು ಸಂಸಾರ ಶುರು ಮಾಡಿಲ್ಲ. ಅದಕ್ಕೆ ನೀವು ಸ್ವಲ್ಪ ದಿನ ಆರಾಮವಾಗಿ ಹನಿಮೂನ್ ಹೋಗಿಬನ್ನಿ, ಅಷ್ಟರಲ್ಲಿ ನಾವು ಆಕ್ಸಿಡೆಂಟ್ ವಿಚಾರವನ್ನು ಕ್ಲೋಸ್ ಮಾಡುತ್ತೇವೆ. ನಾನೇ ಆಕ್ಸಿಡೆಂಟ್ ಮಾಡಿದ್ದು ಎಂದು ಒಪ್ಪಿಕೊಳ್ಳುವಂತೆ ಒಬ್ಬನನ್ನು ರೆಡಿ ಮಾಡಿದ್ದೇವೆ ಎಂದು ಮರೀಗೌಡ ಹಾಗೂ ಜವರೇಗೌಡ ಹೇಳುತ್ತಾರೆ. ವಿಚಾರ ಕೇಳಿ ಸಿದ್ದು ಶಾಕ್ ಆಗುತ್ತಾನೆ, ನಾನು ಮಾಡಿದ ತಪ್ಪಿಗೆ ಬೇರೆಯವರಿಗೆ ಏಕೆ ಶಿಕ್ಷೆ ಕೊಡುತ್ತೀರಿ, ಇದಕ್ಕೆ ನನ್ನ ಒಪ್ಪಿಗೆ ಇಲ್ಲ ಎನ್ನುತ್ತಾನೆ. ನಿನ್ನ ಒಪ್ಪಿಗೆ ನಾವು ಕೇಳಿಲ್ಲ, ಅಷ್ಟಕ್ಕೂ ಆ ವ್ಯಕ್ತಿ ಶಾಶ್ವತವಾಗಿ ಜೈಲಿನಲ್ಲಿ ಇರುವುದಿಲ್ಲ. ಕೆಲವು ದಿನಗಳ ನಂತರ ನಾವು ಅವನನ್ನು ಹೊರಗೆ ಕರೆತರುತ್ತೇವೆ ಎಂದು ಮರೀಗೌಡ ಧೈರ್ಯದಿಂದ ಹೇಳುತ್ತಾನೆ.
ಜವರೇಗೌಡ, ಭಾವನಾಳನ್ನು ಕರೆದು ನಾನು ನಿನ್ನ ತಂದೆ ಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ, ಸಿದ್ದು ಜೊತೆ ಹೋಗಿ ಬಾ, ನಿಮಗೆ ಒಂದು ಮಗು ಆದರೆ ಮನೆಯಲ್ಲಿ ಎಲ್ಲವೂ ಸರಿ ಅಗುತ್ತದೆ, ನಮ್ಮ ಮನೆ ಹೆಂಗಸರೂ ನಿನ್ನನ್ನು ಒಪ್ಪಿಕೊಳ್ಳುತ್ತಾರೆ ಎನ್ನುತ್ತಾಳೆ. ಭಾವನಾ ತಂದೆ ತಾಯಿಗೂ ಮರೀಗೌಡ ವಿಚಾರ ತಿಳಿಸಿ ಭಾವನಾಳನ್ನು ಒಪ್ಪಿಸುವಂತೆ ಮನವಿ ಮಾಡುತ್ತಾನೆ. ಅದರಂತೆ ದೇವಸ್ಥಾನದಲ್ಲಿ ಭಾವನಾಳನ್ನು ಭೇಟಿ ಆಗುವ ಲಕ್ಷ್ಮೀ, ಮಗಳಿಗೆ ತಿಳಿ ಹೇಳುತ್ತಾಳೆ. ನನಗಾಗಿ ಅಲ್ಲದಿದ್ದರೂ ನಿಮ್ಮೆಲ್ಲರಿಗಾಗಿ ನಾನು ಸಿದ್ದು ಜೊತೆ ಹೋಗಿ ಬರುತ್ತೇನೆ ಎಂದು ಭಾವನಾ ಒಪ್ಪಿಕೊಳ್ಳುತ್ತಾಳೆ.
ಭಾವನಾ-ಸಿದ್ದೇಗೌಡ ಇಬ್ಬರನ್ನೂ ಗಂಡನ ಮನೆಯವರು ವಿದೇಶಕ್ಕೆ ಕಳಿಸಿರುವ ವಿಚಾರವನ್ನು ಶ್ರೀನಿವಾಸ್, ಮನೆಯವರ ಬಳಿ ಹೇಳುತ್ತಾನೆ. ಹರೀಶ, ವೀಣಾ ಖುಷಿಯಾಗುತ್ತಾರೆ. ಸಂತೋಷ್ ಏನೂ ಪ್ರತಿಕ್ರಿಯಿಸುವುದಿಲ್ಲ. ಆದರೆ ಸಿಂಚನಾ ಕೋಪಗೊಳ್ಳುತ್ತಾಳೆ. ನನ್ನ ಮನೆಯವರಿಗೆ ನನ್ನ ಬಗ್ಗೆಯಂತೂ ಚಿಂತೆ ಇಲ್ಲ. ಇವಳು ಏನು ಮೋಡಿ ಮಾಡಿದ್ದಾಳೋ ಎಂದು ಗೊಣಗುತ್ತಾಳೆ. ಸಿಂಚನಾ ಮಾತಿಗೆ ಲಕ್ಷ್ಮೀ-ಶ್ರೀನಿವಾಸ್ ಬೇಸರಗೊಳ್ಳುತ್ತಾರೆ.