ತುಳು ಸಿನಿಮಾರಂಗದ ಖ್ಯಾತ ನಟ, ಕಾಂತಾರ ಸಿನಿಮಾದ ವಕೀಲ ನವೀನ್ ಡಿ ಪಡೀಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾದ ಚಿತ್ರೀಕರಣ ವೇಳೆ ಬಿದ್ದು ಏಟು ಮಾಡಿಕೊಂಡ ಪರಿಣಾಮ ನವೀನ್ ತೊಡೆಯ ಮೂಳೆ ಮುರಿದು ಹೋಗಿದೆ ಎನ್ನಲಾಗಿದೆ. ಸದ್ಯ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮಾಹಿತಿ ಪ್ರಕಾರ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 3 ತಿಂಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸದ್ಯ ನವೀನ್ ಡಿ ಪಡೀಲ್ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ತುಳುವಿನಲ್ಲಿ ಅನೇಕ ಸಿನಿಮಾಗಳನ್ನು ಮಾಡಿರುವ ನಟ ನವೀನ್ ಡಿ ಪಡೀಲ್ ಕನ್ನಡದಲ್ಲಿ ಮಜಾ ಟಾಕೀಸ್ ಗುಂಡು ಮಾವ ಎಂದೇ ಫೇಮಸ್ ಆಗಿದ್ದರು. ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ನವೀನ್ ಡಿ ಪಡೀಲ್ ಬಳಿಕ ತುಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.

ತುಳುವಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ತುಳು ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ರಂಗಭೂಮಿ ಕಲಾವಿದರೂ ಆಗಿದ್ದ ನವೀನ್ ಸಿಕ್ಕಾಪಟ್ಟೆ ಬೇಡಿಕೆಯ ನಟ. ಸ್ಯಾಂಡಲ್ ವುಡ್ ನಲ್ಲಿ ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ. ಇತ್ತೀಚೆಗೆ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಕಾಂತಾರ ಸಿನಿಮಾದಲ್ಲಿ ನಟಿಸಿದ್ದರು. ಕಾಂತಾರ ಸಿನಿಮಾದಲ್ಲಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬೆಳ್ತಂಗಡಿಯ ಮಡಂತ್ಯಾರುನಲ್ಲಿ ನಡೆಯುತ್ತಿದ್ದ ಶೂಟಿಂಗ್ ನಲ್ಲಿ ನವೀನ್ ಪಾಲ್ಗೊಂಡಿದ್ದರು. ಆಗ ಈ ಘಟನೆ ಸಂಭವಿಸಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ನಟ ನವೀನ್ ತುಳು ಮತ್ತು ಕನ್ನಡ ಸಿನಿಮಾಗಳ ಜೊತೆಗೆ ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ. ಇನ್ನೂ ಕನ್ನಡ ಕಿರುತೆರೆಯಲ್ಲೂ ನವೀನ್ ಪ್ರಸಿದ್ಧರಾಗಿದ್ದರು. ಸದ್ಯ ನವೀನ್ ಚೇತರಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ವಿಶ್ರಾಂತಿ ಪಡೆದು ಗುಣಮುಖರಾದ ಬಳಿಕವೇ ಕೆಲಸಕ್ಕೆ ಮರಳಿದ್ದಾರೆ ಎನ್ನಲಾಗಿದೆ. ನವೀನ್ ಡಿ ಪಾಡೀಲ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಸ್ನೇಹಿತರು ಹಾರೈಸುತ್ತಿದ್ದಾರೆ.