ರಾಕಿಂಗ್ ಸ್ಟಾರ್ ಯಶ್ ಅವರು ಎಷ್ಟು ಬ್ಯುಸಿ ಇರುವ ಹೀರೋ ಎಂದು ನಮಗೆಲ್ಲಾ ಗೊತ್ತೇ ಇದೆ. ಒಂದು ದಿನ ಬೆಂಗಳೂರಲ್ಲಿ ಇದ್ದರೆ, ಇನ್ನೊಂದು ದಿನ ಮುಂಬೈನಲ್ಲಿ ಕಾಣಿಸಿಕೊಳ್ಳುತ್ತಾರೆ. ಟಾಕ್ಸಿಕ್ ಸಿನಿಮಾ ಕೆಲಸಗಳಿಗೆ ಹೆಚ್ಚಾಗಿ ಸಮಯ ಕೊಡುತ್ತಿರುವ ಯಶ್ ಅವರು ಮುಂದಿನ ವರ್ಷ ಟಾಕ್ಸಿಕ್ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. 2026ರ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದ್ದು, ಅಭಿಮಾನಿಗಳು ಈಗಾಗಲೇ ದಿನಗಳನ್ನ ಲೆಕ್ಕ ಹಾಕೋದಕ್ಕೆ ಶುರು ಮಾಡಿದ್ದಾರೆ. ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ಯಶ್ ಅವರು ಬಿಡುವು ಮಾಡಿಕೊಂಡು, ಮನದ ಕಡಲು ಸಿನಿಮಾ ಟ್ರೇಲರ್ ಲಾಂಚ್ ಗೆ ಬಂದಿದ್ದರು. ಕನ್ನಡ ಸಿನಿಮಾಗಳ ಬಗ್ಗೆ, ಹಾಗೂ ತಮ್ಮ ಜರ್ನಿಯ ಬಗ್ಗೆ ಹಲವು ವಿಚಾರಗಳನ್ನು ಯಶ್ ಅವರು ಶೇರ್ ಮಾಡಿಕೊಂಡಿದ್ದಾರೆ.

ಮನದ ಕಡಲು ಸ್ಯಾಂಡಲ್ ವುಡ್ ನಲ್ಲಿ ತಯಾರಾಗಿರುವ ಹೊಚ್ಚ ಹೊಸ ಸಿನಿಮಾ. ಯೋಗರಾಜ್ ಭಟ್ ಅವರು ನಿರ್ದೇಶಿಸಿ, ಮುಂಗಾರು ಮಳೆ ಅಂಥ ಸೂಪರ್ ಹಿಟ್ ಸಿನಿಮಾ ನೀಡಿದ್ದ ಇ. ಕೃಷ್ಣಪ್ಪ ಅವರು ನಿರ್ಮಾಣ ಮಾಡಿರುವ ಸಿನಿಮಾ. ಈ ಸಿನಿಮಾದ ಹೊಸ ನಾಯಯ ಸುಮುಖ ಹೀರೋ ಆಗಿದ್ದು, ಎಲ್ಲರೂ ಹೊಸ ಪ್ರತಿಭೆಗಳೇ ಆಗಿದ್ದಾರೆ. ಈ ಸಿನಿಮಾಗೆ ಸಾಥ್ ನೀಡೋಕೆ ರಾಕಿಂಗ್ ಸ್ಟಾರ್ ಯಶ್ ಅವರು ಬಂದಿರುವುದು ಒಳ್ಳೆಯ ವಿಚಾರ ಆಗಿದೆ. ಯಶ್ ಅವರಿಗೆ ಈ ತಂಡದ ಜೊತೆಗೆ ಬಹಳ ಹಿಂದಿನ ನಂಟಿದೆ. ನಿರ್ಮಾಪಕರಾದ ಇ. ಕೃಷ್ಣಪ್ಪ ಅವರು ನಿರ್ಮಾಣ ಮಾಡಿ, ಶಶಾಂಕ್ ಅವರು ನಿರ್ದೇಶನ ಮಾಡಿದ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಯಶ್ ಅವರು ಮೊದಲ ಸಾರಿ ನಾಯಕನಾಗಿ ನಟಿಸಿದ್ದು, ಹಾಗಾಗಿ ಕೃಷ್ಣಪ್ಪ ಅವರ ಮೇಲೆ ಯಶ್ ಅವರಿಗೆ ಬಹಳ ಗೌರವ ಇದೆ.
ಇನ್ನು ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗಿ ನಟಿಸಿದ ಡ್ರಾಮ ಸಿನಿಮಾ ಇವತ್ತಿಗೂ ಎಲ್ಲರ ಫೇವರೆಟ್. ಹೀಗೆ ತಂಡದ ಜೊತೆಗೆ ಒಳ್ಳೆಯ ಬಾಂಧವ್ಯ ಇರುವ ಕಾರಣ ಯಶ್ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಮನದ ಕಡಲು ಟ್ರೇಲರ್ ಲಾಂಚ್ ಮಾಡಿದ ಯಶ್ ಅವರು ಕನ್ನಡ ಚಿತ್ರರಂಗದ ಬಗ್ಗೆ ಕೆಲವು ಮಾತುಗಳನ್ನಾಡಿ, ಎಲ್ಲರಿಗೂ ಒಂದು ಕರೆ ನೀಡಿದ್ದಾರೆ. ‘ನಾವೆಲ್ಲರೂ ಒಳ್ಳೆಯ ಕಥೆಯ ಸಿನಿಮಾಗಳನ್ನು ಮಾಡೋಣ, ಅಪ್ಗ್ರೇಡ್ ಆಗೋಣ, ಚೆನ್ನಾಗಿ ಕೆಲಸ ಮಾಡೋಣ. ಎಲ್ಲಾರು ಕೈಜೋಡಿಸೋಣ..’ ಎಂದು ಹೇಳಿದ್ದಾರೆ. ಯಶ್ ಅವರು ತಾವು ಯೋಚಿಸುತ್ತಿದ್ದ ರೀತಿಯನ್ನು ಸಹ ಈ ವೇಳೆ ಹಂಚಿಕೊಂಡಿದ್ದಾರೆ. ಮೊದಲಿಗೆ ಯಶ್ ಅವರು ಕನ್ನಡ ಸಿನಿಪ್ರಿಯರು ಕನ್ನಡ ಸಿನಿಮಾಗಳನ್ನ ಬಿಟ್ಟು ಬೇರೆ ಭಾಷೆಯ ಸಿನಿಮಾಗಳನ್ನೇ ಜಾಸ್ತಿ ನೋಡುತ್ತಾರೆ ಎಂದುಕೊಂಡಿದ್ದರಂತೆ.

ಆದರೆ ಅವರೇ ಕುಳಿತು ಯೋಚಿಸಿ ನೋಡಿದಾಗ, ಕನ್ನಡಿಗರು ಒಳ್ಳೆಯ ಕಥೆ ಇರುವ ಸಿನಿಮಾಗಳ ಕೈಬಿಡುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಖಂಡಿತವಾಗಿಯೂ ನೋಡಿ, ಬೆಂಬಲಿಸುತ್ತಾರೆ ಎಂದು ಅರ್ಥವಾಯಿತಂತೆ. ಹಾಗಾಗಿ ಚಂದನವನದ ಎಲ್ಲರಿಗೂ ಯಶ್ ಅವರು ಕರೆಕೊಟ್ಟಿದ್ದು, ನಾವು ಇನ್ನು ಚೆನ್ನಾಗಿ ಕೆಲಸ ಕಲಿತು ಒಳ್ಳೆಯ ಸಿನಿಮಾಗಳನ್ನು ಮಾಡೋಣ, ಯಾರ ಹತ್ತಿರ ಕೈ ಚಾಚೋದು ಬೇಡ, ನಾವು ಸಿನಿಮಾಗಳನ್ನು ಮಾಡಿ ಎಲ್ಲರು ನಮ್ಮ ಕಡೆ ತಿರುಗಿ ನೋಡುವ ಹಾಗೆ ಮಾಡೋಣ. ನಾವೆಲ್ಲರು ಜವಾಬ್ದಾರಿ ತೆಗೆದುಕೊಳ್ಳಬೇಕು. ಹೊಸ ರೀತಿಯಲ್ಲಿ ಕೆಲಸ ಮಾಡೋದನ್ನೇ, ಕಥೆ ಹೇಳೋದನ್ನ ಕಲೀಬೇಕು. ಸಿನಿಮಾಗಳು ಚೆನ್ನಾಗಿ ಮೂಡಿಬಂದರೆ ಆ ಸಿನಿಮಾಗೆ ಸರಿಯಾದ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಯಶ್ ಅವರು ತಿಳಿಸಿದ್ದಾರೆ.
ಇನ್ನು ತಮ್ಮ ಹಳೆಯ ದಿನಗಳ ಬಗ್ಗೆ ಸಹ ಯಶ್ ಅವರು ಮಾತನಾಡಿದ್ದು, ಧಾರಾವಾಹಿಗಳಲ್ಲಿ ನಟಿಸುವಾಗ ಯಶ್ ಅವರಿಗೆ ಸಿನಿಮಾ ಆಫರ್ ಗಳು ತುಂಬಾ ಬರುತ್ತಿತ್ತಂತೆ, ಆದರೆ ಕಥೆ ಏನು ಎಂದು ಕೇಳಿದರೆ ಇವನಿಗೆ ತುಂಬಾ ಅಹಂಕಾರ ಅನ್ನುತ್ತಿದ್ದರಂತೆ.
ಒಂದು ಸಾರಿ ಒಂದು ಸಿನಿಮಾಗೆ ಒಬ್ಬ ನಿರ್ದೇಶಕರನ್ನು ನಿರ್ಮಾಪಕರನ್ನು ಭೇಟಿ ಮಾಡುವ ಸಮಯ ಬಂದಿತ್ತಂತೆ. ಯಶ್ ಅವರು ಹೋಗೋದು ಸ್ವಲ್ಪ ತಡ ಆಗಿದ್ದಕ್ಕೆ ಅಲ್ಲಿದ್ದವರು, ನಿರ್ದೇಶಕರು ನಿರ್ಮಾಪಕರು ನಿನಗೋಸ್ಕರ ಕಾಯುತ್ತಿದ್ದಾರೆ ಬೇಗ ಹೋಗು ಎಂದು ಹೇಳಿದರಂತೆ. ಯಶ್ ಅವರು ಅಲ್ಲಿಗೆ ಹೋಗಿ ನೋಡಿದರೆ, ಆ ನಿರ್ದೇಶಕರು ಯಾರು ನೀನು ಏನಾಗಬೇಕಿತ್ತು ಎಂದರಂತೆ, ಯಶ್ ಅವರನ್ನು ಕಾಯುತ್ತಿದ್ದ ನಿರ್ದೇಶಕರಿಗೆ ಅವರು ಯಾರು ಅನ್ನೋದೇ ಗೊತ್ತಿರಲಿಲ್ಲ. ಬಳಿಕ ಕಥೆ ಕೇಳಿದಾಗ ಕಥೆ ಹೇಳಲಿಲ್ಲವಂತೆ.

ಕಥೆಯನ್ನೇ ಕೇಳದೆ ಸಿನಿಮಾ ಮಾಡೋದಿಲ್ಲ ಎನ್ನುವುದ ಯಶ್ ಅವರ ನಿರ್ಧಾರ ಆಗಿತ್ತು. ಅಂದು ಆ ರೀತಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಕ್ಕೆ, ಬುದ್ಧಿವಂತಿಕೆ ಇಂದ ಹೆಜ್ಜೆ ಇಟ್ಟಿದ್ದಕ್ಕೆ ಇಂದು ಯಶ್ ಅವರು ರಾಕಿಂಗ್ ಸ್ಟಾರ್ ಆಗಿ, ರಾಕಿ ಭಾಯ್ ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ಮುಂದೆ ಟಾಕ್ಸಿಕ್ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರ್ಯಕ್ರಮದಲ್ಲಿ ಯುವ ನಾಯಕರ ಬಗ್ಗೆ ಸಹ ಯಶ್ ಅವರು ಮಾತನಾಡಿ, ಯುವನಟರು ಚಿತ್ರರಂಗಕ್ಕೆ ಬರಬೇಕು, ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಅವರುಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ. ಬಹಳಷ್ಟು ಜನ ಯುವ ಪ್ರತಿಭೆಗಳು ಯಶ್ ಅವರನ್ನು ಭೇಟಿ ಮಾಡಿ, ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿ ಎಂದು ಕೇಳಿಕೊಳ್ಳುತ್ತಾರಂತೆ.
ಆಗ ಯಶ್ ಅವರು ನಾನು ಟ್ರೇಲರ್ ಬಿಡುಗಡೆ ಮಾಡಿದರೆ ಸಿನಿಮಾ ಓಡುವುದಿಲ್ಲ, ಕಂಟೆಂಟ್ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಓಡುತ್ತದೆ ಎಂದು ಹೇಳಿದರಂತೆ. ಈ ರೀತಿಯಾಗಿ ಯೋಚನೆ ಮಾಡುತ್ತಿರುವ ಯಶ್ ಅವರು ಕನ್ನಡ ಚಿತ್ರರಂಗ ಇನ್ನು ಅಪ್ಗ್ರೇಡ್ ಆಗಿಲ್ಲ ಎನ್ನುವುದು ಬೇಸರದ ವಿಚಾರ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಟಾಕ್ಸಿಕ್ ಬಗ್ಗೆ ಕೂಡ ಮಾತನಾಡಿ, ಟಾಕ್ಸಿಕ್ ಅಪ್ಡೇಟ್ ಅನ್ನು ಇನ್ನೊಂದು ಸಾರಿ ಕೊಡ್ತೀನಿ, ಸ್ವಲ್ಪ ಸಮಯ ಕಾಯಿರಿ, ದೊಡ್ಡದಾಗಿ ಏನೋ ಮಾಡ್ತಿದ್ದೀವಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಯಶ್ ಅವರ ಈ ಮಾತುಗಳನ್ನ ಕೇಳಿ, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಯಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡವನ್ನ, ಕನ್ನಡ ಅಭಿಮಾನಿಗಳನ್ನ ಬಿಟ್ಟುಕೊಡೋದಿಲ್ಲ ಅನ್ನೋದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು.