ಹುಟ್ಟಿನಿಂದ ಸಾಯುವರೆಗೂ ಜೀವನದಲ್ಲಿ ಎಷ್ಟೋ ಸಂಬಂಧಗಳು ನಮ್ಮ ಜೊತೆ ಇರುತ್ತವೆ. ಕೆಲವು ಶಾಶ್ವತವಾಗಿ ಜೊತೆ ಉಳಿದರೆ, ಕೆಲವು ಸಂಬಂಧಗಳು ಅರ್ಧದಲ್ಲೇ ದೂರಾಗುತ್ತವೆ. ಕೆಲವೊಂದು ಸಂಬಂಧಗಳನ್ನು ನಾವು ಉಳಿಸಿಕೊಳ್ಳಬೇಕು ಎಂದು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಇನ್ನು ಕುಟುಂಬ ಸದಸ್ಯರು, ಆತ್ಮೀಯರು ಹಾಗೂ ನಮ್ಮ ನಡುವೆ ಸಣ್ಣ ಪುಟ್ಟ ವಿಚಾರಗಳಿಗೂ ಮನಸ್ತಾಪ ಉಂಟಾಗುತ್ತದೆ. ಈ ಮನಸ್ತಾಪ ಸ್ವಲ್ಪ ದಿನಗಳ ನಂತರ ಸರಿ ಆದರೆ ಖುಷಿ, ಆದರೆ ಅದೇ ದೊಡ್ಡದಾಗಿ ಸಂಬಂಧಗಳ ನಡುವೆ ಬಿರುಕು ಉಂಟಾಗಿರುವ ಎಷ್ಟೋ ಉದಾಹರಣೆಗಳಿವೆ. ಹೀಗೆ ನಮ್ಮ ಮನೆಯಲ್ಲಿ, ಪ್ರೀತಿ ಪಾತ್ರರೊಂದಿಗೆ ಆಗ್ಗಾಗ್ಗೆ ಜಗಳ ಉಂಟಾಗುವುದಕ್ಕೆ ವಾಸ್ತು ಕೂಡಾ ಕಾರಣ ಅಂದ್ರೆ ನೀವು ನಂಬ್ತೀರಾ?
ನಮ್ಮ ಜೀವನ ನಮ್ಮ ಕೈಯ್ಯಲಿದೆ ಎಂಬ ಮಾತನ್ನು ಕೇಳಿರುತ್ತೇವೆ. ಅದರೆ ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಅದೃಷ್ಟದ ಬೆಂಬಲ ಕೂಡಾ ಬೇಕು. ನಿಮ್ಮ ಮನೆಯಲ್ಲಿ ವಾಸ್ತು ಸರಿ ಇಲ್ಲದಿದ್ದರೆ ಖಂಡಿತ ನಿಮಗೆ ಒಲಿಯಬೇಕಿದ್ದ ಅದೃಷ್ಟ ದೂರಾಗುವ ಸಾಧ್ಯತೆಗಳಿವೆ. ಜಗಳ ಬಂದಾಗ ಎಷ್ಟೇ ಶಾಂತ ರೀತಿಯಿಂದ ವರ್ತಿಸಿದರೂ ಮುಂದಿನ ದಿನಗಳಲ್ಲಿ ಅದ ಪರಿಣಾಮ ದೊಡ್ಡದಾಗಿರಬಹುದು. ಮನೆಯಲ್ಲಿ ವಾಸ್ತು ಸರಿ ಇಲ್ಲದಿದ್ದರೆ ನಕಾರಾತ್ಮಕ ಶಕ್ತಿಗಳು ಮನೆಯೆಲ್ಲಾ ಆವರಿಸುತ್ತದೆ. ಇದರಿಂದ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಯಾರಾದರೊಬ್ಬರು ನಿಮ್ಮ ಮನಸಿನ ಶಾಂತಿಗೆ ಭಂಗ ತರಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿ ಕುಟುಂಬ ಸದಸ್ಯರು ಅಥವಾ ಹೊರಗೆ ನಿಮ್ಮ ಆತ್ಮೀಯರ ಜೊತೆ ಸಂಬಂಧ ಚೆನ್ನಾಗಿರಬೇಕೆಂದರೆ ಈ ವಾಸ್ತು ಸಲಹೆಗಳನ್ನು ನೀವು ಪಾಲಿಸಬೇಕು.
ಈಶಾನ್ಯ ಮೂಲೆ
ವಾಸ್ತು ಪ್ರಕಾರ ಮನೆಯ ಈಶಾನ್ಯ ದಿಕ್ಕಿಗೆ ಬಹಳ ಪ್ರಾಮುಖ್ಯತೆ ಇದೆ. ಮನೆ ಸದಾ ಶುದ್ಧವಾಗಿರಬೇಕು, ಅದರಲ್ಲೂ ಈಶಾನ್ಯ ಮೂಲೆಯನ್ನಂತೂ ಇನ್ನಷ್ಟು ಶುಚಿಯಾಗಿಟ್ಟುಕೊಂಡರೆ ಒಳ್ಳೆಯದು. ಅದೇ ರೀತಿ ಈ ಮೂಲೆಯಲ್ಲಿ ಎಂದಿಗೂ ಕತ್ತಲೆ ಇರಬಾರದು. ಸದಾ ಬೆಳಕು ಇರಬೇಕು. ಈಶಾನ್ಯ ಮೂಲೆ ಶುದ್ಧವಾಗಿದ್ದು, ಬೆಳಕು ಇದ್ದರೆ ಅಲ್ಲಿಂದ ಬರುವ ಪಾಸಿಟಿವ್ ಎನರ್ಜಿ ಮನೆಯ ತುಂಬೆಲ್ಲಾ ಹರಡುತ್ತದೆ. ಇದು ಮನೆಯಲ್ಲಿ ಶಾಂತಿ, ಸಂತೋಷ, ಶ್ರೇಯಸ್ಸನ್ನು ಹೆಚ್ಚಿಸುತ್ತದೆ. ಮನೆಯ ಸದಸ್ಯರ ನಡುವೆ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ.
ಬುದ್ಧನ ವಿಗ್ರಹ
ಮನೆಯಲ್ಲಿ ಜಗಳ, ಮನಸ್ತಾಪವನ್ನು ತಡೆಯಲು ಯಾವಾಗಲೂ ಬುದ್ಧನ ವಿಗ್ರಹವನ್ನು ಇಡುವುದನ್ನು ಮರೆಯದಿರಿ. ವಾಸ್ತುಶಾಸ್ತ್ರದಲ್ಲಿ ಬುದ್ಧನ ವಿಗ್ರಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಲಿವಿಂಗ್ ಏರಿಯಾ ಅಥವಾ ಬಾಲ್ಕನಿಯಲ್ಲಿ ಬುದ್ಧನ ವಿಗ್ರಹವನ್ನು ಇಡಬಹುದು. ಇದು ಮನೆಯಲ್ಲಿ ಜಗಳ, ನೆಗೆಟಿವ್ ಎನರ್ಜಿಯನ್ನು ಕಡಿಮೆ ಮಾಡಿ ಪ್ರಶಾಂತ ವಾತಾವರಣವನ್ನು ನಿರ್ಮಿಸುತ್ತದೆ.
ಕಲ್ಲು ಉಪ್ಪು
ಕಲ್ಲು ಉಪ್ಪನ್ನು ಬಳಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ವಾಸ್ತುಶಾಸ್ತ್ರದ ಪ್ರಕಾರ, ಕಲ್ಲು ಉಪ್ಪು ನಕಾರಾತ್ಮಕ ಶಕ್ತಿಗಳ ವಿರುದ್ಧ ಹೋರಾಡುತ್ತದೆ. ಆದ್ದರಿಂದ ನಿಮ್ಮ ಮನೆ ಅಥವಾ ರೂಮ್ಗಳ ಎಲ್ಲಾ ಮೂಲೆಗಳಲ್ಲಿ ಕಲ್ಲು ಉಪ್ಪನ್ನು ಒಂದು ಪ್ಲಾಸ್ಟಿಕ್ ಅಥವಾ ಪೇಪರ್ ಕಪ್ನಲ್ಲಿ ತುಂಬಿಡಿ. ತಿಂಗಳಿಗೆ ಒಂದು ಬಾರಿ ಉಪ್ಪನ್ನು ಬದಲಾಯಿಸಿ ಮತ್ತು ಮನೆಯನ್ನು ಸ್ವಚ್ಛಗೊಳಿಸಿ. ಆ ಉಪ್ಪನ್ನು ಟಾಯ್ಲೆಟ್ನಲ್ಲಿ ಸುರಿಯಿರಿ. ಉಪ್ಪು ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮ ಮನೆಯಲ್ಲಿ ಜಗಳಗಳು ಕಡಿಮೆಯಾಗಿ ಶಾಂತಿ ಮತ್ತು ಸಮೃದ್ಧಿ ಇರುತ್ತದೆ. ನರದಿಷ್ಟಿಯಂತಹ ಋಣಾತ್ಮಕ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸುವಲ್ಲಿ ಕೂಡಾ ಕಲ್ಲು ಉಪ್ಪು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ವಾಸ್ತುತಜ್ಞರನ್ನು ಸಂಪರ್ಕಿಸಿ
ವಾಸ್ತು ದೋಷದಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಜಗಳ ಮತ್ತು ಕಿರಿಕಿರಿ, ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಹಾಗಾಗಿ ಮನೆ ನಿರ್ಮಾಣದ ಸಂದರ್ಭದಲ್ಲಿಯೇ ಒಂದಿಷ್ಟು ಮುಂಜಾಗ್ರತೆ ವಹಿಸಿದರೆ ಬಹಳ ಅನುಕೂಲ. ಮನೆಯ ಈಶಾನ್ಯ ಮೂಲೆಯಲ್ಲಿ ಎಂದಿಗೂ ಶೌಚಾಲಯವನ್ನು ನಿರ್ಮಿಸಬೇಡಿ. ಆಗ್ನೇಯ ದಿಕ್ಕಿನಲ್ಲಿ ಅಡುಗೆ ಕೋಣೆ ಇದ್ದರೆ ಅದು ಉತ್ತಮ. ಒಂದು ವೇಳೆ ನೀವು ಈಗಾಗಲೇ ಮನೆ ಕಟ್ಟಿದ್ದು ಅದರಲ್ಲಿ ವಾಸಿಸುತ್ತಿದ್ದರೆ, ಅಥವಾ ಬಾಡಿಗೆ ಮನೆಯಲ್ಲಿದ್ದರೆ ಒಮ್ಮೆ ಸೂಕ್ತ ವಾಸ್ತುತಜ್ಞರನ್ನು ಸಂಪರ್ಕಿಸಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರ, ಪುರಾಣ ಕಥೆಗಳನ್ನು ಆಧರಿಸಿದ್ದು, ನಿಮ್ಮ ನಂಬಿಕೆ, ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ…