ವಿಶ್ವದ ಪ್ರಸಿದ್ಧ ಹಾಗೂ ಅತಿ ದೊಡ್ಡ ಸಂಸ್ಥೆಯೆಂದು ಗುರುತಿಸಿಕೊಂಡಿರುವ ಗೂಗಲ್, ರಾಜಧಾನಿ ಬೆಂಗಳೂರಿನಲ್ಲಿ ತನ್ನ ಸಂಸ್ಥೆಯನ್ನು ಸ್ಥಾಪಿಸಿದೆ. ಪ್ರಪಂಚದಲ್ಲಿಯೇ ಅತಿ ದೊಡ್ಡ ಇನೋವೇಟಿವ್ ಕ್ಯಾಂಪಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಆವರಣವು ಅನಂತ ಎಂಬ ಹೆಸರಿನಿಂದ ಕಂಗೊಳಿಸುತ್ತಿದೆ. ಕಲರ್ಫುಲ್ ಗೂಗಲ್ ಸಂಸ್ಥೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ ಓದಿ….
ಅನಂತದಲ್ಲಿನ ವಿಶೇಷತೆಗಳೇನು…?
ಬೆಂಗಳೂರಿನಲ್ಲಿ ಗೂಗಲ್ 4ನೇ ಅತಿ ದೊಡ್ಡ ಕ್ಯಾಂಪಸನ್ನು ಇದೇ ತಿಂಗಳ 19ರಂದು ಲೋಕಾರ್ಪಣೆ ಮಾಡಿದ್ದು, ಇಸ್ರೋ ಅಧ್ಯಕ್ಷರಾದ ವಿ.ನಾರಾಯಣನ್ ಈ ಕ್ಯಾಂಪಸನ್ನು ಉದ್ಘಾಟಿಸಿದರು. ಕಟ್ಟಡಕ್ಕೆ ಅನಂತ ಎಂದು ನಾಮಕರಣ ಮಾಡಲಾಗಿದ್ದು, ಸಂಸ್ಕೃತದಲ್ಲಿ ಅಂತ್ಯವಿಲ್ಲದ್ದು ಎಂಬ ಅರ್ಥವನ್ನು ಹೊಂದಿದೆ. ಇತರ ಗೂಗಲ್ ಕಚೇರಿಗಳಂತೆಯೇ, ಅನಂತ ಕ್ಯಾಂಪಸ್ ಪರಿಸರ ಸ್ನೇಹಿಯಾಗಿದ್ದು, ಅಲ್ಲಿ ಉತ್ಪತ್ತಿಯಾಗುವ ಎಲ್ಲಾ ತ್ಯಾಜ್ಯ ನೀರನ್ನು ಶೇ.1೦೦ ರಷ್ಟು ಮರುಬಳಕೆ ಮಾಡುವುದು ಇದರ ವಿಶೇಷವಾಗಿದೆ. ಮಳೆ ನೀರು ಕೊಯ್ಲಿನ ಸೌಲಭ್ಯವನ್ನು ಹೊಂದಿದ್ದು, ಮಿತ ವಿದ್ಯುತ್ ಬಳಕೆಗಾಗಿ ಕಟ್ಟಡದ ಮೇಲ್ಭಾಗದಲ್ಲಿ ದೊಡ್ಡ-ದೊಡ್ಡ ಸ್ಮಾರ್ಟ್ ಎಲೆಕ್ಟ್ರೋ-ಕ್ರೋಮಿಕ್ ಗ್ಲಾಸ್ಗಳನ್ನು ಅಳವಡಿಸಲಾಗಿದೆ.
ಹಾಗೆಯೇ, ಒಳಾಂಗಣವನ್ನು ಇಲ್ಲಿ ಲಭ್ಯವಿರುವ ಸಾಮಾಗ್ರಿಗಳನ್ನು ಬಳಸಿಕೊಂಡು ಕಟ್ಟಲಾಗಿದೆ. ದೃಷ್ಠಿಹೀನರ ಓಡಾಟಕ್ಕೆ ಸುಲಭವಾಗುವಂತೆ ಸ್ಪರ್ಶಕ್ಕೆ ಸಹಕಾರಿಯಾಗುವಂತಹ ನೆಲಹಾಸುಗಳನ್ನು ಹಾಕಿಸಲಾಗಿದ್ದು, ಬ್ರೈಲ್ ವಿವರಗಳನ್ನು ಕಾಣಬಹುದಾಗಿದೆ. ಕಟ್ಟಡದ ಹೊರಗೆ ಮಾತ್ರವಲ್ಲ ಒಳಾಂಗಣದಲ್ಲಿಯೂ ಸಹ ಹಸಿರು ವಾತಾವರಣವನ್ನು ಕಾಣಬಹುದಾಗಿದು. ಉದ್ಯೋಗಿಗಳ ಅನುಕೂಲಕ್ಕಾಗಿ ಜಾಗಿಂಗ್ ವಾಕಿಂಗ್, ಸೈಕ್ಲಿಂಗ್, ಜಿಮ್ ಹಾಗೂ ಇನ್ನಿತರ ಸ್ಪೋರ್ಟ್ಸ್ ವ್ಯವಸ್ಥೆಯೂ ಇದ್ದು, ಮಹಿಳಾ ಉದ್ಯೋಗಿಗಳಿಗಾಗಿ ಮಕ್ಕಳ ಡೇ ಕೇರೆ ಸೆಂಟರ್ಗಳು ಸಹ ಕ್ಯಾಂಪಸ್ನಲ್ಲಿ ಜಾಗಪಡೆದಿದೆ.

ಹೊರಾಂಗಣದಲ್ಲಿ ಕೃತಕ ಅರಣ್ಯ ನಿರ್ಮಾಣ
ಕ್ರಿಯೇಟಿವಿಟಿಗೆ ಹೆಚ್ಚು ಆದ್ಯತೆ ನೀಡುವ ಗೂಗಲ್ ತನ್ನ ಕಟ್ಟಡ ನಿರ್ಮಾಣದಲ್ಲಿಯೂ ಇದನ್ನು ಪಾಲಿಸಿದೆ. ಕಟ್ಟಡ ಮುಂಭಾಗದಲ್ಲಿ ಎರಡು ಸಾವಿರ ಗಿಡಗಳನ್ನು ನೆಡುವ ಮೂಲಕ ಸಣ್ಣದಾದ ಕೃತಕ ಅರಣ್ಯವನ್ನು ನಿರ್ಮಿಸಿದೆ. 4 ಗೋಡೆಗಳ ಮಧ್ಯೆ ಕುಳಿತು ಕೆಲಸ ಮಾಡಲು ಬೋರೆನಿಸುವವರಿಗಾಗಿ ಹಸಿರಿನ ಮಧ್ಯ ಕುಳಿತು ಕೆಲಸ ಮಾಡಲು ಪುಟ್ಟ ಪುಟ್ಟ ಶೆಡ್ಗಳ ವ್ಯವಸ್ಥೆ ಮಾಡಲಾಗಿದೆ. 11 ಅಂತಸ್ಥಿನ ಕಟ್ಟಡದಲ್ಲಿ 2 ಮಹಡಿಯನ್ನು ಪಾರ್ಕಿಂಗ್ಗೆ ಮೀಸಲಿಡಲಾಗಿದೆ.
5೦೦೦ ಉದ್ಯೋಗ ಸೃಷ್ಟಿ
ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ 4ನೇ ಕ್ಯಾಂಪಸಯಿದ್ದಾಗಿದ್ದು, ಗೂಗಲ್ ಸರ್ಚ್, ಮ್ಯಾಪ್, ಗೂಗಲ್ ಪೇ, ಕ್ಲೌಡ್ ಹಾಗೂ ಇತರೆ ಅಪ್ಲಿಕೇಶನ್ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು 5000 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲಿದೆ.



