ದೇವಸ್ಥಾನ ಎಂದರೆ ಅದು ಮನಸ್ಸಿಗೆ ಶಾಂತಿ ನೀಡುವ ಸ್ಥಳ. ಕಷ್ಟವನ್ನೆಲ್ಲಾ ದೇವರ ಬಳಿ ಹೇಳಿಕೊಂಡು ಪರಿಹಾರಕ್ಕೆ ಪ್ರಾರ್ಥಿಸಿದರೆ ಮನಸ್ಸು ಹಗುರಾಗುತ್ತದೆ. ಒಂದು ರೀತಿಯ ಸಂತೃಪ್ತಿ ಭಾವನೆ ಉಂಟಾಗುತ್ತದೆ. ದೇವಸ್ಥಾನಕ್ಕೆ ತೆರಳಿದರೆ ಪಾಸಿಟಿವ್ ವೈಬ್ಸ್ ಉಂಟಾಗುತ್ತದೆ. ಗಂಟೆ ನಾದ, ದೀಪಗಳ ಬೆಳಕು, ಹೂಗಳ ಘಮ, ದೇವರಿಗೆ ಮಾಡುವ ಅಲಂಕಾರ, ಭಜನೆ, ಆರತಿ ಎಲ್ಲವೂ ಮನಸ್ಸಿಗೆ ಖುಷಿ ನೀಡುತ್ತದೆ. ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ ಸಮಾಧಾನ ಎನಿಸುತ್ತದೆ. ನಾವೇ ಪುಣ್ಯವಂತರು ಎಂದು ಫೀಲ್ ಆಗುತ್ತದೆ. ಆದರೆ ಭಾರತದ ಈ ದೇವಸ್ಥಾನದಲ್ಲಿ ಒಂದು ಮೆಟ್ಟಿಲನ್ನು ತುಳಿದರೆ ಜೀವನದಲ್ಲಿ ನೀವು ಮಾಡಿರುವ ಪುಣ್ಯವೆಲ್ಲಾ ನಾಶವಾಗುವುದಂತೆ.
ದೇವಸ್ಥಾನಕ್ಕೆ ಹೋದರೆ ಪಾಪಗಳು ಕಳೆದು ಪುಣ್ಯ ಬರುವುದನ್ನು ಕೇಳಿದ್ದೇವೆ, ಆದರೆ ಇದ್ಯಾವ ದೇವಸ್ಥಾನ? ಪುಣ್ಯಗಳು ನಶಿಸಿ ಪಾಪ ಏಕೆ ಬರುತ್ತದೆ? ನರಕ ಏಕೆ ಪ್ರಾಪ್ತಿಯಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಆಶ್ಚರ್ಯವಾದರೂ ಸತ್ಯ. ಒಡಿಶಾದ ಪುರಿ ಜಗನ್ನಾಥ ಮಂದಿರದ ಒಂದು ಕಪ್ಪು ಶಿಲೆ ಇರುವ ಮೆಟ್ಟಿಲನ್ನು ತುಳಿದರೆ ಖಂಡಿತ ಈ ಶಾಪ ನಿಮ್ಮ ಬೆನ್ನೇರುತ್ತದೆ. ಇದನ್ನು ಯಮಶಿಲೆ ಎಂದು ಕರೆಯಲಾಗುತ್ತದೆ.ಪುರಿ ಜಗನ್ನಾಥ ದೇವಾಲಯವನ್ನು ಪ್ರವೇಶಿಸಲು 4 ಪ್ರಮುಖ ದ್ವಾರಗಳಿವೆ. ಒಂದು ದ್ವಾರದ ಮೂಲಕ ಸುಮಾರು 22 ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನದ ಒಳಗೆ ಹೋಗಬೇಕು. ಆದರೆ ಈ ಮೆಟ್ಟಿಲುಗಳಲ್ಲಿ ಯಮಶಿಲೆ ಎಂಬ ಒಂದು ಮೆಟ್ಟಿಲು ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಅಪ್ಪಿ ತಪ್ಪಿ ಈ ಒಂದು ಮೆಟ್ಟಿಲನ್ನು ತುಳಿದರೆ, ಅವರು ಜೀವನದಲ್ಲಿ ಮಾಡಿರುವ ಎಲ್ಲಾ ಪುಣ್ಯಗಳು ಮರೆಯಾಗಿ, ಸತ್ತ ನಂತರ ನರಕಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಮನೆ ಮಾಡಿದೆ. ಆದ್ದರಿಂದ ಇಲ್ಲಿ ಹೋಗುವ ಜನರು ಬೇರೆ ದ್ವಾರದ ಮೂಲಕ ಜಗನ್ನಾಥನ ದರ್ಶನ ಪಡೆಯುತ್ತಾರೆ. ಇದರ ಹಿಂದೆ ಒಂದು ಪುರಾಣ ಕಥೆ ಇದೆ.
ಜಗನ್ನಾಥನ ದರ್ಶನಕ್ಕೆ ಬರುವ ಭಕ್ತರು, ಆತನ ಕೃಪೆಗೆ ಪಾತ್ರರಾಗಿ, ಅವನ ಆಶೀರ್ವಾದ ಪಡೆದು ವಾಪಸ್ ಹೋಗುತ್ತಾರೆ. ದೇವಸ್ಥಾನಕ್ಕೆ ಬಂದು ಹೋದವರಲ್ಲಿ ಪಾಪ ಮಾಡಿದವರು ಕೂಡಾ ಸತ್ತ ನಂತರ ಸ್ವರ್ಗಕ್ಕೆ ಹೋಗುತ್ತಾರೆ. ಇದನ್ನು ಅರಿತ ಯಮಧರ್ಮನು ಜಗನ್ನಾಥನ ಬಳಿ ಬಂದು ನಿನ್ನ ಆಶೀರ್ವಾದ ಪಡೆದ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಿದ್ದಾರೆ, ನರಕಕ್ಕೆ ಒಬ್ಬರೂ ಬರುತ್ತಿಲ್ಲ. ದಯವಿಟ್ಟು ಜನರು ಮಾಡಿದ ಕೆಟ್ಟ ಕೆಲಸಗಳನ್ನು ಕ್ಷಮಿಸದಂತೆ ಮನವಿ ಮಾಡುತ್ತಾನೆ. ಯಮನ ಮನವಿಯನ್ನು ಮನ್ನಿಸಿದ ಜಗನ್ನಾಥನು, ದೇವಾಲಯದ ಪ್ರಮುಖ ದ್ವಾರದ 3ನೇ ಮೆಟ್ಟಿಲಿನಲ್ಲಿ ನೆಲೆಸುವಂತೆ ಸೂಚಿಸುತ್ತಾನೆ. ಅಂದಿನಿಂದ ಯಮನು 22 ಮೆಟ್ಟಿಲುಗಳನ್ನು 3ನೇ ಮೆಟ್ಟಿಲಿನಲ್ಲಿ ಅಡಗಿ ಕೂರುತ್ತಾನೆ. ಈ ಮೆಟ್ಟಿಲು ಇತರ ಮೆಟ್ಟಿಲುಗಳಿಗಿಂತ ಬಹಳ ವಿಭಿನ್ನವಾಗಿದೆ. ಜನರು ತಿಳಿದೋ, ತಿಳಿಯದೆಯೋ ಆ ಮೆಟ್ಟಿಲನ್ನು ತುಳಿದರೆ, ಅದರಲ್ಲೂ ದೇವಸ್ಥಾನದಿಂದ ವಾಪಸ್ ಬರುವಾಗ ಆ ಮೆಟ್ಟಿಲನ್ನು ತುಳಿದರೆ ಅವರು ಮಾಡಿದ ಪುಣ್ಯದ ಕೆಲಸಗಳೆಲ್ಲಾ ನಶಿಸಿ ಸಾವನ್ನಪ್ಪಿದ ನಂತರ ನರಕಕ್ಕೆ ಹೋಗಿ ಯಮನಿಂದ ಶಿಕ್ಷೆ ಅನುಭವಿಸುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ ಪುರಿ ಜಗನ್ನಾಥ ದೇವಾಲಯಕ್ಕೆ ಹೋದರೆ ಜನರು ಆ ದ್ವಾರದ ಮೂಲಕ ದೇವಸ್ಥಾನಕ್ಕೆ ಹೋಗಲು, ವಾಪಸ್ ಬರಲು ಹೆದರುತ್ತಾರೆ.
ಪುರಿ ಜಗನ್ನಾಥ ದೇವಾಲಯ ಅನೇಕ ನಿಗೂಢತೆಗೆ ಹೆಸರಾಗಿದೆ, ಜೊತೆಗೆ ಬಹಳ ವೈಶಿಷ್ಟ್ಯವಿದೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ ಒಡಿಶಾದ ಪುರಿ ದೇವಸ್ಥಾನದಲ್ಲಿ ಜಗನ್ನಾಥನ ರಥಯಾತ್ರೆ ನಡೆಯುತ್ತದೆ. ಇದರಲ್ಲಿ ಪಾಲ್ಗೊಳ್ಳಲು ದೇಶಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರು ಜಗನ್ನಾಥನನ್ನು ನೋಡಲು ಇಲ್ಲಿಗೆ ಬಂದರೆ, ಸ್ವತಃ ಜಗನ್ನಾಥನು ತಾನೇ ಒಬ್ಬ ಭಕ್ತನ ಬಳಿ ಹೋಗಿ ದರ್ಶನ ನೀಡುತ್ತಾನೆ. ಪ್ರತಿ ಬಾರಿಯೂ ದೇವಸ್ಥಾನದಿಂದ ಪ್ರಾರಂಭವಾಗುವ ರಥಯಾತ್ರೆ ಸುಮಾರು 200 ಮೀಟರ್ ದೂರ ಕ್ರಮಿಸಿದ ನಂತರ ತಂತಾನೇ ನಿಲ್ಲುತ್ತದೆ. ಈ ಸಮಯದಲ್ಲಿ ಜನರು ಎಷ್ಟು ಬಲದಿಂದ ರಥ ಎಳೆದರೂ ಸ್ವಲ್ಪವೂ ಕದಲುವುದಿಲ್ಲ. ಆ ಸ್ಥಳವನ್ನು ಮಾಜರ್ ಎಂದು ಕರೆಯುತ್ತಾರೆ. ಇದು ಜಗನ್ನಾಥನ ಮುಸ್ಲಿಂ ಭಕ್ತ ಸಾಲ್ಬೇಗ್ ಎನ್ನುವವರ ಸಮಾಧಿ.
ಸಾಲ್ಬೇಗ್, ಜಗನ್ನಾಥನ ಪರಮ ಭಕ್ತ, ಜಗನ್ನಾಥನ ದರ್ಶನ ಮಾಡಬೇಕು ಎಂದು ಬಯಸಿದರೂ ಆತನಿಗೆ ಸಾಧ್ಯವಾಗುವುದಿಲ್ಲ. ಸಾಯುವುದರ ಒಳಗೆ ಒಮ್ಮೆ ಜಗನ್ನಾಥನ ದರ್ಶನ ಮಾಡಬೇಕೆಂಬು ಅವನ ಆಸೆಯಾಗಿರುತ್ತದೆ. ಅದರೆ ಕೊನೆವರೆಗೂ ಸಾಧ್ಯವಾಗುವುದಿಲ್ಲ. ಸಾಲ್ಬೇಗ್ ಆಸೆಯಂತೆ ಅವನ ಮನೆಯಲ್ಲೇ ಆತನನ್ನು ಸಮಾಧಿ ಮಾಡಲಾಗುತ್ತದೆ. ಆ ಸಮಾಧಿ ಸ್ಥಳವೇ ಮಾಜರ್, ಸಾಲ್ಬೇಗ್ ಆಸೆಯನ್ನು ಅರಿತ ಜಗನ್ನಾಥ ಅಂದಿನಿಂದ ಇಲ್ಲಿವರೆಗೂ ಆತನ ಸಮಾಧಿ ಬಳಿ ನಿಂತು ಅವನಿಗೆ ದರ್ಶನ ಕೊಟ್ಟು ನಂತರವೇ ಮುಂದೆ ಚಲಿಸುತ್ತಾನೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರ, ಪುರಾಣ ಕಥೆಗಳನ್ನು ಆಧರಿಸಿದ್ದು, ನಿಮ್ಮ ನಂಬಿಕೆ, ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ.