ಇದು ಮಳೆಗಾಲ. ಜೋರಾಗಿ ಮಳೆ ಬಂದ್ರೆ ಗಾಳಿ, ಗುಡುಗು, ಸಿಡಿಲು ಬರುವುದು ಎಲ್ಲಾ ಊರಿನಲ್ಲೂ ಕಾಮನ್ . ಹೆಚ್ಚೆಂದರೆ ಈ ಮಳೆಯ ಜೊತೆಗೆ ಕೆಲವೊಮ್ಮೆ ಆಲಿಕಲ್ಲಿ ಆಕಾಶದಿಂದ ಭೂಮಿಗೆ ಬೀಳಬಹುದು. ಆದರೆ ಮಳೆ ಬಂದಾಗ ಜಮೀನುಗಳಲ್ಲಿ ವಜ್ರದ ಹರಳುಗಳು ಸಿಗುತ್ತೆ ಅಂದ್ರೆ ಇದನ್ನ ನೀವು ಒಪ್ಪುತ್ತೀರಾ. ಆದ್ರೆ ಇದು ನಿಜ ಸಂಗತಿ. ಇಂತಹದ್ದೊಂದು ಅಚ್ಚರಿ ಆ ಊರಿನಲ್ಲಿ ಪ್ರತಿ ವರ್ಷವೂ ನಡೆಯುತ್ತೆ!

ಯಾವ ಊರಲ್ಲಿ ವಜ್ರದ ಮಳೆಯಾಗುತ್ತೆ?
ಆಂದ್ರಪ್ರದೇಶದ ಕರ್ನೂಲಿನ ವಜ್ರಕೂರು ಗ್ರಾಮದಲ್ಲಿ ಮಳೆಗಾಲದ ಸಮಯದಲ್ಲಿ ವಜ್ರದ ಮಳೆಯಾಗುತ್ತಂತೆ. ಸಾವಿರಾರು ಜನ ಇಲ್ಲಿನ ಹೊಲಗಳಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ವಜ್ರದ ಹರಳಿಗಾಗಿ ಹುಡುಕಾಟ ನಡೆಸುತ್ತಾರೆ. ಪ್ರತಿ ವರ್ಷವೂ ಮಳೆಯಾದಾಗ ಇಲ್ಲಿನ ರೈತರು ವಜ್ರಕ್ಕಾಗಿ ಶೋಧ ಕಾರ್ಯ ನಡೆಸುತ್ತಾರೆ. ಇಲ್ಲಿನ ಕೆಲ ಶ್ರೀಮಂತ ವ್ಯಕ್ತಿಗಳು ಕೂಲಿ ಕೊಟ್ಟು ಜಮೀನಿನಲ್ಲಿ ವಜ್ರದ ಹುಡುಕಲು ಆಳುಗಳನ್ನು ನೇಮಿಸುತ್ತಾರೆ ಎನ್ನಲಾಗಿದೆ.
ಆಂದ್ರಪ್ರದೇಶದ ವಜ್ರಕೂರು ಸೇರಿದಂತೆ ತುಗ್ಗಲಿ, ಜೊನ್ನಗಿರಿ, ಮಡ್ಡಿಕೇರಾ, ಚನ್ನಗಿರಿ, ಮುದ್ದಿಕೇರಿಯಲ್ಲೂ ಕೂಡ ಜನಸಾಮಾನ್ಯರು ಮತ್ತು ರೈತರು ವಜ್ರದ ಹರಳನ್ನು ಹುಡುಕುತ್ತಾರೆ. ಈ ರೀತಿ ಹಲವು ಬಾರಿ ಮಳೆಗಾಲದಲ್ಲಿ ಜಮೀನುಗಳಲ್ಲಿ ವಜ್ರದ ಹರಳು ಸಿಕ್ಕಿದ ಉದಾಹರಣೆಗಳಿವೆಯಂತೆ. ಅದಕ್ಕಾಗಿಯೇ ಕೆಲವರು ಜಮೀನುಗಳನ್ನು ಲೀಸ್ ಗೆ ಪಡೆದು ವಜ್ರ ಹುಡುಕುತ್ತಾರೆ. ಬೇರೆ ಕಡೆ ಮಳೆ ಬಂದಾಗ ರೈತರು ಬೆಳೆ ಬೆಳೆಯುತ್ತಾರೆ. ಆದರೆ ಈ ಊರಿನ ರೈತರು ಮತ್ತು ಜನ ಮಳೆ ಬಂದರೆ ವಜ್ರಕ್ಕಾಗಿ ಮುಗಿಬೀಳುತ್ತಾರೆ.