ಬೆಳ್ಳಿ ಪರದೆ ಮೇಲೆ ಎಲ್ಲವೂ ಚೆಂದವೇ. ನಟ/ನಟಿಯರ ಕಾಸ್ಟ್ಯೂಮ್, ಹಾಡು, ಕುಣಿತ, ಫೈಟಿಂಗ್, ಡೈಲಾಗ್ ಇವೆಲ್ಲವನ್ನೂ ನೋಡಿ ಕಣ್ತುಂಬಿಕೊಳ್ಳುವ ಪ್ರೇಕ್ಷಕ ತಾನು ಕೊಟ್ಟ ದುಡ್ಡಿಗೂ ಸಾರ್ಥಕ ಎನ್ನುವಂತೆ ಫೀಲ್ ಆಗುತ್ತಾನೆ. ಆದರೆ ತೆರೆ ಹಿಂದಿನ ಲೋಕವೇ ಬೇರೆ. ರೀಲ್ನಲ್ಲಿ ಜನರನ್ನು ರಂಜಿಸುವ ಬಹುತೇಕ ನಟ/ನಟಿಯರ ಜೀವನ ಖಂಡಿತ ಅಂದುಕೊಂಡಂತೆ ಇರುವುದಿಲ್ಲ. ಅವರಿಗೂ ಸಾಮಾನ್ಯರಂತೆ ಸಾಕಷ್ಟು ಕಷ್ಟಗಳಿರುತ್ತವೆ. ಅಂತಹ ಎಷ್ಟೋ ಕಲಾವಿದರು ದುರಂತ ಅಂತ್ಯ ಕಂಡಿದ್ದಾರೆ. ಕೆಲವರು ಪಡಬಾರದ ಕಷ್ಟ ಪಟ್ಟು ಅದರಿಂದ ಹೊರ ಬಂದು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಹಿರಿಯ ನಟಿ, ಡ್ಯಾನ್ಸರ್ ಅನುರಾಧಾ ಕೂಡಾ ಒಬ್ಬರು. ಅನುರಾಧಾ ನಟನೆಯಿಂದ ದೂರವಾದ ಕಥೆ, ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಪತಿಗಾಗಿ ಚಿತ್ರರಂಗವನ್ನು ತೊರೆದ ಅವಳ ಕುರಿತ ಆಸಕ್ತಿಕರ ಕಥೆ ಹೀಗಿದೆ.
80-90ರ ದಶಕದಲ್ಲಿ ಅನುರಾಧಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ನಟಿಯಾಗಿ, ಡ್ಯಾನ್ಸರ್ ಆಗಿ ಸಿನಿರಸಿಕರನ್ನು ರಂಜಿಸಿದವರು. ಮೂಲತ: ತಮಿಳಿನವರಾದ ಅನುರಾಧಾ ತಮಿಳು ಚಿತ್ರರಂಗದ ಮೂಲಕವೇ ಚಿತ್ರರಂಗಕ್ಕೆ ಬಂದರೂ, ನಂತರ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಒರಿಯಾ ಭಾಷೆಗಳ ಸಿನಿಮಾಗಳಲ್ಲಿ ಕೂಡಾ ಹೆಸರು ಮಾಡಿದ್ದಾರೆ. ಅನುರಾಧಾ ಅವರ ಮೊದಲ ಹೆಸರು ಸುಲೋಚನಾ ದೇವಿ. ಇವರ ತಂದೆ ಕೃಷ್ಣ ಕುಮಾರ್ ಹಾಗೂ ತಾಯಿ ಸರೋಜಾ ದೇವಿ. ತಂದೆ ತಾಯಿ ಇಬ್ಬರೂ ಕೂಡಾ ಚಿತ್ರರಂಗದಲ್ಲಿ ತೆರೆಹಿಂದೆ ಕೆಲಸ ಮಾಡಿದವರು. ಇದೇ ಕಾರಣಕ್ಕೆ ಅನುರಾಧಾ, ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬರಲು ಸಾಧ್ಯವಾಯ್ತು. ಅನುರಾಧಾಗೆ ಚಿಕ್ಕಂದಿನಿಂದ ಡ್ಯಾನ್ಸ್ ಎಂದರೆ ಬಹಳ ಇಷ್ಟ.

ಸುಲೋಚನಾ 13 ವರ್ಷ ವಯಸ್ಸಿನವರಾಗಿದ್ದಾಗ ನಿರ್ದೇಶಕ ಕೆಜೆ ಜಾರ್ಜ್ ಅವರ ತಂದೆ ತಾಯಿ ಅನುಮತಿ ಪಡೆದು ಆಕೆಯನ್ನು ಚಿತ್ರರಂಗಕ್ಕೆ ಕರೆತಂದರು. ಆ ವಯಸ್ಸಿನಲ್ಲೇ ಸುಲೋಚನಾ ಎತ್ತರ ಇದ್ದಿದ್ದರಿಂದ ನಾಯಕಿಯ ಪಾತ್ರ ದೊರೆಯಿತು. ಸುಲೋಚನಾ ಎಂಬ ಹೆಸರನ್ನು ನಿರ್ದೇಶಕ ಜಾರ್ಜ್ ಅನುರಾಧಾ ಎಂದು ಬದಲಿಸಿದರು. ಆರಂಭದಲ್ಲಿ ಅನುರಾಧಾಗೆ ನಾಯಕಿ ಪಾತ್ರಗಳು ದೊರೆತರೂ ಕ್ರಮೇಣ ಐಟಂ ಡ್ಯಾನ್ಸ್ ಪಾತ್ರಗಳಿಗೆ ಹೆಚ್ಚು ಅವಕಾಶಗಳು ಹುಡುಕಿ ಬಂದವು. ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಆಸೆಯಿಂದ ಅನುರಾಧಾ, ಯಾವ ಪಾತ್ರವನ್ನೂ ನಿರಾಕರಿಸದೆ ಎಲ್ಲವನ್ನೂ ಒಪ್ಪಿಕೊಂಡರು. ಇದುವರೆಗೂ ಅನುರಾಧಾ ವಿವಿಧ ಭಾಷೆಗಳ ಸುಮಾರು 700 ಸಿನಿಮಾಗಳಲ್ಲಿ ನಟಿಯಾಗಿ, ಡ್ಯಾನ್ಸರ್ ಆಗಿ ನಟಿಸಿದ್ದಾರೆ. ಅನುರಾಧಾ ಮಾರ್ಷಲ್ ಆರ್ಟ್ಸ್ ಕೂಡಾ ಕಲಿತಿದ್ದರಿಂದ ಬಹಳಷ್ಟು ಸಿನಿಮಾಗಳಲ್ಲಿ ಡೂಪ್ ಇಲ್ಲದೆ ತಾವೇ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ ತಂಗಮ್, ಕಣ್ಣಾನ ಕಣ್ಣೇ, ಮುತ್ತಾರಮಂದ್ ದೈವಂಗಳ್ ಸೇರಿದಂತೆ ಕೆಲವೊಂದು ತಮಿಳು ಧಾರಾವಾಹಿಗಳಲ್ಲಿ ಕೂಡಾ ಅನುರಾಧಾ ನಟಿಸಿದ್ದಾರೆ.

ಇಷ್ಟೆಲ್ಲಾ ಹೆಸರು ಗಳಿಸಿದ್ದ ನಟಿ ಅನುರಾಧಾ 1987 ರಲ್ಲಿ ಕೊರಿಯೋಗ್ರಾಫರ್ ಸತೀಶ್ ಕುಮಾರ್ ಅವರನ್ನು ಮದುವೆ ಆದರು. ಈ ದಂಪತಿಗೆ ಅಭಿನಯಶ್ರೀ ಹಾಗೂ ಕಾಳಿಚರಣ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಜನಿಸಿದ ನಂತರವೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ಅನುರಾಧಾ, ಪತಿಗೆ ಅಪಘಾತವಾದ ನಂತರ ಅವರ ಆರೈಕೆ ಮಾಡಲು ಚಿತ್ರರಂಗ ತೊರೆದರು. 1996 ನವೆಂಬರ್ನಲ್ಲಿ ಸತೀಶ್ ಕುಮಾರ್, ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಪರಿಣಾಮ ಅವರ ತಲೆಗೆ ಪೆಟ್ಟು ಬಿದ್ದು ಕೋಮಾಗೆ ಜಾರಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸತೀಶ್ ಗುಣಮುಖರಾಗಲಿಲ್ಲ. ಅವರು ಹಳೆಯದನ್ನೆಲ್ಲಾ ಮರೆತಿದ್ದರು. ಅಷ್ಟು ದಿನಗಳು ನನಗೆ ಇಬ್ಬರು ಮಕ್ಕಳಿದ್ದರು, ನಂತರ ಮೂವರು ಮಕ್ಕಳಾದರೂ. ಸತೀಶ್ ಅವರನ್ನು ಮಗುವಂತೆ ನೋಡಿಕೊಳ್ಳಬೇಕಾಯ್ತು. ಅವರಿಗೆ ಏನೂ ನೆನಪಿರಲಿಲ್ಲ. ಸುಮಾರು ವರ್ಷಗಳ ಕಾಲ ಅವರಿಗೆ ಮಗುವಿನಿಂದ ಸೇವೆ ಮಾಡಿದೆ. ಅದಕ್ಕಾಗಿ ಚಿತ್ರರಂಗ ಕೂಡಾ ಬಿಟ್ಟೆ ಎಂದು ಅನುರಾಧಾ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 2007 ರಲ್ಲಿ ಸತೀಶ್ ಕುಮಾರ್ ಹೃದಯಾಘಾತದಿಂದ ನಿಧನರಾದರು.
ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂದುಕೊಂಡಿದ್ದ ಅನುರಾಧಾಗೆ ಅವಕಾಶಗಳೇ ದೊರೆಯಲಿಲ್ಲ. ಇದೀಗ ಆಕೆ ತಮ್ಮ ಮಕ್ಕಳೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ. ಪುತ್ರಿ ಅಭಿನಯಶ್ರೀ 2003ರಲ್ಲಿ ತೆರೆ ಕಂಡ ಕರಿಯ ಚಿತ್ರದಲ್ಲಿ ದರ್ಶನ್ಗೆ ನಾಯಕಿಯಾಗಿ ನಟಿಸಿದ್ದರು. ಆದರೆ ಆಕೆಗೂ ಹೇಳಿಕೊಳ್ಳುವಂಥ ಅವಕಾಶಗಳು ದೊರೆಯಲಿಲ್ಲ. ಅಭಿನಯಶ್ರೀ ಈಗ ಕೊರಿಯೋಗ್ರಾಫರ್ ಆಗಿ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಮಗ ಕಾಳಿಚರಣ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅನುರಾಧಾ ಅಪರೂಪಕೊಮ್ಮೆ ತಮಿಳು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದು ಹೆಣ್ಣು ಆರು ಕಣ್ಣು ಚಿತ್ರದ ಮೂಲಕ ಅನುರಾಧಾ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ ಲಕ್ಷ್ಮೀ ಕಟಾಕ್ಷ, ಪ್ರಚಂಡ ಕುಳ್ಳ, ಗಂಡುಗಲಿ ರಾಮ, ಮೂರು ಜನ್ಮ, ಕೈದಿ, ಬೆಂಕಿ ಬಿರುಗಾಳಿ, ಸಂಗ್ರಾಮ, ಬಡ್ಡಿ ಬಂಗಾರಮ್ಮ, ಜೀವನ ಚಕ್ರ, ಬೇಟೆ, ಒಲವಿನ ಆಸರೆ, ಶಿವಣ್ಣ, ಮಾರಿ ಕಣ್ಣು ಹೋರಿ ಮ್ಯಾಗೆ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.