ಬಿಗ್ಬಾಸ್ ರಿಯಾಲಿಟಿ ಶೋ ಸ್ಥಗಿತದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಿಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಹಾಗೂ ಏಕವಚನ ಬಳಸಿ ಟ್ವೀಟ್ ಮಾಡುವುದು ಮುಂದುವರಿದಿದೆ. ಈ ಶೋನಲ್ಲಿ ಎದುರಾದ ಅಡಚಣೆಗೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಅವರ ಮೇಲೆ ಕೋಪದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜೆಡಿಎಸ್ ಆರೋಪಿಸಿತ್ತು.

ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡುವುದು ಜೆಡಿಎಸ್ ಪಕ್ಷದ ನಿತ್ಯದ ಅಭ್ಯಾಸವಾಗಿಬಿಟ್ಟಿದೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮಾರ್ ಅಡಚಣೆ ಮಾಡಿದರೆಂದು ಹೇಳಲು ಏನಾದರೂ ಸಾಕ್ಷಿ ಇದೆಯೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಸ್ವತಃ ಸುದೀಪ್ ಅವರೇ ಈ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಬಿಗ್ ಬಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಅವರ ಟ್ವೀಟ್ ನಿಮ್ಮ ಸುಳ್ಳು ಆರೋಪಗಳಿಗೆ ಸಮಾಧಿ ಕಟ್ಟಿದೆ. ಕೇಂದ್ರದ ತುಕ್ಕು ಸಚಿವರು ರಾಜ್ಯಕ್ಕೆ ಬಂದು ಸುಳ್ಳು ಆರೋಪ ಮಾಡಿ ದೆಹಲಿಗೆ ಓಡಿ ಹೋಗುವುದು ಜನಸೇವೆ ಅಲ್ಲ ಎಂದು ವ್ಯಂಗ್ಯ ಮಾಡಿದೆ.

ಡಿ.ಕೆ. ಶಿವಕುಮಾರ್ ಅವರ ಬಹಿರಂಗ ಚರ್ಚೆಯ ಪಂಥಾಹ್ವಾನವನ್ನು ಸ್ವೀಕರಿಸಲು ನಿಮ್ಮ “ಉತ್ತರ ಕುಮಾರ” ಹೆದರುತ್ತಿರುವುದೇಕೆ?. ಧೈರ್ಯವಿದ್ದರೆ ಚರ್ಚೆಗೆ ಬನ್ನಿ, ರಾಜ್ಯದ ಜನರ ಮುಂದೆ ನಾಟಕ ಮಾಡ್ತಿರೋದು ಯಾರು ಅಂತ ಗೊತ್ತಾಗಲಿ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಕಾಂಗ್ರೆಸ್ ಜೆಡಿಎಸ್ನ ನಡುವೆ ಕಿಚ್ಚ ಸುದೀಪ್ ಅವರ ಟ್ವೀಟ್ ದಾಳವಾಗಿ ಬಳಕೆ ಆಗುತ್ತಿದೆ. ನಟ ಕಿಚ್ಚ ಸುದೀಪ್ ಅವರು, ಮಾನ್ಯ / ಗೌರವಾನ್ವಿತ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಡಿ.ಕೆ ಶಿವಕುಮಾರ್ ಸರ್ ಅವರ ಸಮಯೋಚಿತ ಬೆಂಬಲಕ್ಕಾಗಿ ಧನ್ಯವಾದ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ #BBK ಭಾಗಿಯಾಗಿಲ್ಲ ಅಥವಾ ಭಾಗವಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.
ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ DCM ಅವರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು #Nalpad ಅವರ ಪ್ರಯತ್ನಗಳಿಗೆ ಧನ್ಯವಾದಗಳು. #BBK12 ಇಲ್ಲಿಯೇ ಇರುತ್ತದೆ🔥 ಎಂದು ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಕಾಂಗ್ರೆಸ್ ಹಂಚಿಕೊಂಡಿದ್ದು, ಜೆಡಿಎಸ್ಗೆ ತಿರುಗೇಟು ನೀಡಿದೆ.



