ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದ ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಹರ್ಷಿಕಾ ಪುಣಚ್ಚ ಮತ್ತು ಭುವನ್ ಪೊನ್ನಣ್ಣ ಸದ್ಯ ವಿವಾಹದ ಹೊಸ್ತಿಲಲ್ಲಿದ್ದಾರೆ. ಸ್ನೇಹಿತರಾಗಿದ್ದ ಇವರ ಸಂಬಂಧ ಪ್ರೀತಿಗೆ ಜಾರಿ ಇದೀಗ ಸಪ್ತಪದಿ ತುಳಿಯಲು ತಯಾರಾಗಿದ್ದಾರೆ. ಕೊಡವ ಸಂಪ್ರದಾಯದಂತೆ ಇವರಿಬ್ಬರ ವಿವಾಹ ಆಗಸ್ಟ್ 24 ರಂದು ನಡೆಯಲಿದ್ದು, ಈ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.


ಇತ್ತೀಚೆಗಷ್ಟೇ ನಡೆದ ‘ತಾಯ್ತ’ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಭಾಗವಹಿಸಿ ಮಾತನಾಡಿದ್ದ ಹರ್ಷಿಕಾ,’ ನಾನು ಹಾಗೂ ಭುವನ್ ವಿವಾಹವಾಗಲು ನಿಶ್ಚಯಿಸಿದ್ದು, ಆಗಸ್ಟ್ 23 ಹಾಗೂ 24ರಂದು ಕೊಡಗಿನ ಅಮ್ಮತ್ತಿಯಲ್ಲಿ ವಿವಾಹವಾಗಲಿದ್ದೇವೆ’ ಎಂದು ತಿಳಿಸಿದ್ದಾರೆ.ಈಗಾಗಲೇ ಇವರಿಬ್ಬರ ಮದುವೆ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದ್ದು, ಕೊಡವ ಭಾಷೆಯಲ್ಲಿ ಪತ್ರಿಕೆ ಸಿದ್ಧಪಡಿಸಲಾಗಿದೆ.
ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿರುವ ಭುವನ್ ಹಾಗೂ ಹರ್ಷಿಕಾ ಜೋಡಿ ತಮ್ಮ ಪ್ರೀತಿಯಲನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇವರಿಬ್ಬರೂ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹರ್ಷಿಕಾ ಇತ್ತೀಚಗೆ ‘ಭೇರ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೆ, ಭುವನ್ ‘ರಾಂಧವ’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಕೋವಿಡ್ ಸಮಯದಲ್ಲಿ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದ ಈ ಜೋಡಿ ಇದೀಗ ವಿವಾಹವಾಗುತ್ತಿದ್ದಾರೆ.