ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದ ಸಿನಿಮಾಗಳ ಪೈಕಿ ಕಾಂತಾರವೂ ಒಂದು. 2022 ರಲ್ಲಿ ಬಿಡುಗಡೆಯಾದ ಈ ಸಿನಿಮಾ ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದು ಮಾತ್ರವಲ್ಲದೇ ಬಾಕ್ಸ್ ಆಫೀಸ್ ನಲ್ಲಿ ಸಕತ್ ಸದ್ದು ಮಾಡಿತ್ತು. ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿಯಾಗಿ ನಟಿಸುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಹ್ಯಾಂಡ್ ಸಮ್ ಹುಡುಗನ ಹೆಸರು ಸೂಚನ್ ಶೆಟ್ಟಿ.
ಪೋಷಕ ಪಾತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಸೂಚನ್ ಶೆಟ್ಟಿ ಮನೋಜ್ಞ ನಟನೆಯ ಮೂಲಕ ಸಿನಿಪ್ರಿಯರ ಮನ ಸೆಳೆದರು. ರವಿ ಬಸ್ರೂರು ನಿರ್ದೇಶನದ “ಕಡಲ್” ಸಿನಿಮಾದಲ್ಲಿ ಅಭಿನಯಿಸಿದ್ದ ಸೂಚನ್ ಶೆಟ್ಟಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಖಳನಾಯಕನಾಗಿ. ಮೊದಲ ಬಾರಿಗೆ ವಿಲನ್ ಆಗಿ ತೆರೆಯ ಮೇಲೆ ಅಬ್ಬರಿಸಿದ ಸೂಚನ್ ಶೆಟ್ಟಿ ಸಿನಿ ಪ್ರಿಯರ ಮನ ಸೆಳೆದರು.

ನಟನೆಯಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸು ಹೊತ್ತಿರುವ ಜೀವಗಳ ನೋವು, ನಿರಾಸೆಗಳ ಕತೆಯನ್ನು ಒಳಗೊಂಡಿರುವ ಒಂದು ತಾತ್ಕಾಲಿಕ ಪಯಣ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಸಿನಿಮಾ ವೀಕ್ಷಕರ ಮನ ಸೆಳೆದಿದೆ. ಸದ್ಯ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಲಿರುವ ಸೂಚನ್ ಶೆಟ್ಟಿ ಅವರಿಗೆ ಬಾಲ್ಯದಿಂದಲೂ ನಾಟಕ, ಸಿನಿಮಾಗಳತ್ತ ವಿಶೇಷ ಒಲವು. ನಾನು ಕೂಡಾ ನಟನಾಗಬೇಕು ಎಂದು ಕನಸು ಕಂಡವರು. ಇದೀಗ ತಮ್ಮ ಬಾಲ್ಯದ ಕನಸು ನನಸು ಮಾಡಿಕೊಂಡಿರುವ ಸೂಚನ್ ಶೆಟ್ಟಿ ನಟ ಮಾತ್ರವಲ್ಲ ನಿರ್ದೇಶಕರೂ ಹೌದು.
“ಗಾಡ್ ಪ್ರಾಮಿಸ್” ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿರುವ ಸೂಚನ್ ಶೆಟ್ಟಿ ಆ ಸಿನಿಮಾದಲ್ಲಿ ಅವರು ಸ್ವತಃ ನಾಯಕನಾಗಿ ನಟಿಸಿದ್ದಾರೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವಂತಹ ಸಿನಿಮಾ ಇದಾಗಿದೆ. ಫ್ಯಾಮಿಲಿ ಕಥಾಹಂದರವನ್ನೊಳಗೊಂಡ ಈ ಸಿನಿಮಾ ಕಾಮಿಡಿ ಜಾನರ್ ಅನ್ನು ಒಳಗೊಂಡಿದೆ.
ಒಟ್ಟಿನಲ್ಲಿ ಸದ್ಯ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿರುವ ಸೂಚನ್ ಶೆಟ್ಟಿ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕಾಲೇಜು ದಿನಗಳಿಂದಲೇ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸೂಚನ್ ಅವರಿಗೆ ಕುಂದಾಪುರದ ಕನ್ನಡ ಭಾಷೆಯಲ್ಲಿ ಸಿನಿಮಾ ಹಾಡುಗಳನ್ನು ಬರೆಯುವ ಹವ್ಯಾಸವಿತ್ತು. ನಂತರ ರವಿ ಬಸ್ರೂರು ಅವರ ತಂಡ ಸೇರಿದ ಸೂಚನ್ ಶೆಟ್ಟಿ “ಗಿರ್ಮಿಟ್”, ” ಕಡಲ್” ಸಿನಿಮಾಗಳಲ್ಲಿ ಸಂಭಾಷಣೆ ಬರೆದಿದ್ದಾರೆ.