ವಿಮಾನದ ಮೂಲಕ ದೇಶ ಸುತ್ತ ಬೇಕು ಎಂಬುದು ಹಲವರ ಕನಸು. ಆದರೆ ಎಲ್ಲರೂ ವಿಮಾನಯಾನ ಮಾಡಲು ಸಾಧ್ಯವಾಗದು ಎಂಬುದು ತಿಳಿದಿರುವ ಸಂಗತಿಯೇ. ವಿಮಾನಯಾನದ ಕನಸು ಕಾಣುತ್ತಿದ್ದಂತೆ ಕಣ್ಣಮುಂದೆ ಬರುವುದು ಕೈತುಂಬ ಹಣವಿರಬೇಕು ಎಂಬ ಸತ್ಯ. ಈಗಿದಾಗ ಎಷ್ಟೋ ಮಂದಿ ಏರ್ಪೋರ್ಟ್ಗೆ ಹೋಗುವುದು ಸಹ ಕನಸೇ ಬಿಡು ಎಂದು ನಿರಾಸೆಗೊಂಡಿರುತ್ತಾರೆ. ಆದರೆ, ಇಲ್ಲೊಂದು ವಿಮಾನಯಾನ ಸಂಸ್ಥೆ ಕೇವಲ 11 ರೂಪಾಯಿ ಮೂಲಕ ವಿಯೆಟ್ನಾಂಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದರೆ ನಂಬುತ್ತೀರಾ…? ಇದೇನು ಆಟೋದ ಮಿನಿಮಮ್ ಚಾರ್ಜೆ 35-38ರೂಪಾಯಿ ಹೇಳ್ತಾರೆ. ಅಂತಹದರಲ್ಲಿ 11 ರೂಪಾಯಿಗೆ ವಿಯೆಟ್ನಾಂಗೆ ಹೋಗಬಹುದಾ ಎಂದು ಉದ್ಘಾರ ತೆಗೆತ್ತಿದ್ರೆ…ಇಲ್ಲಿರುವ ಮಾಹಿತಿ ಓದಿ….ನಂತರ ಟ್ರಿಪ್ ಪ್ಲಾನ್ ಮಾಡಿ…..
ವೀಯೆಟ್ನಾಂನ ವಿಯೆತ್ಜೆಟ್ ಏರ್ ಎಂಬ ವಿಮಾನಯಾನ ಸಂಸ್ಥೆಯೇ ಇಂತಹ ಒಂದು ಆಫರ್ನ ನೀಡಿರುವುದು. ಒಂದು ವಿಶೇಷ ಪ್ರಚಾರದ ಕೊಡುಗೆಯಾಗಿ ವಿಯೆತ್ಜೆಟ್ ಈ ಆಫರನ್ನು ಘೋಷಣೆ ಮಾಡಿದೆ.

ಆಫರ್ನಲ್ಲಿ ಏನಿದೆ…?
ಭಾರತದಿಂದ ವಿಯೆಟ್ನಾಂಗೆ ಎಕನಾಮಿಕ್ ಕ್ಲಾಸ್ನ ಒನ್ ವೇ ಟಿಕೆಟ್ ದರವನ್ನು ಕೇವಲ 11 ರೂಪಾಯಿಗೆ ನಿಗದಿ ಪಡಿಸಲಾಗಿದೆ. ತೆರಿಗೆ ಹಾಗೂ ಇತರ ಶುಲ್ಕಗಳನ್ನು ಹೊರತು ಪಡೆಸಿ ಈ ಮೊತ್ತ ನಿಗದಿಗೊಂಡಿದೆ.
ವಿಶೇಷ ಕೊಡುಗೆ ಏಕೆ ಘೋಷಿಸಲಾಗಿದೆ…?
ಭಾರತ ಹಾಗೂ ವಿಯೆಟ್ನಾಂ ನಡುವಿನ ನೇರ ಸಂಪರ್ಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕೊಡುಗೆಯನ್ನು ಘೋಷಿಸಲಾಗಿದೆ. ವಿಯೆತ್ಜೆಟ್ನಿಂದ ಹೊಸ ಮಾರ್ಗಗಳ ವಿಸ್ತರಣೆಯಾಗುತ್ತಿದೆ. ಮಾರ್ಚ್ 2025ರಿಂದ ಬೆಂಗಳೂರು ಹಾಗೂ ಹೈದರಾಬಾದ್ನಿಂದ ವಿಯೆಟ್ನಾಂನ ಹೋ ಚಿ ಮಿನ್ ಸಿಟಿಗೆ ನೇರವಾಗಿ ವಿಮಾನ ಸೇವೆ ಪ್ರಾರಂಭವಾಗಲಿದೆ. 10 ಮಾರ್ಗವಾಗಿ ವಾರಕ್ಕೆ 78 ವಿಮಾನಗಳು ಸಂಚರಿಸಲಿವೆ. ಹೊಸ ಮಾರ್ಗಗಳ ವಿಸ್ತರಣೆಯನ್ನು ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಈ ಕೊಡುಗೆಯನ್ನು ವಿಯೆತ್ಜೆಟ್ ಘೋಷಿಸಿದೆ.

ಪ್ರತಿ ಶುಕ್ರವಾರಕ್ಕೆ ಆಫರ್ ಅನ್ವಯ:
ಇನ್ನು 364 ದಿನವೂ ಈ ಆಫರ್ ಚಾಲ್ತಿಯಲ್ಲಿರುವುದಿಲ್ಲ. ಹಾಗಾಗಿ ಯಾವಗೆಂದರೆ ಆವಾಗ ವಿಯೆಟ್ನಾಂಗೆ ಹೋಗಲು ಪ್ಲಾನ್ ಮಾಡಬೇಡಿ. ಪ್ರತಿ ಶುಕ್ರವಾರ ಈ ಆಫರ್ ಲಭ್ಯವಿರುತ್ತದೆ. ಮಾರ್ಚ್ 10ರಿಂದ ಈ ಆಫರ್ ಪ್ರಾರಂಭವಾಗಲಿದ್ದು, ಇದೇ ವರ್ಷದ ಡಿಸೆಂಬರ್ 31ರ ವರೆಗೂ ಇದು ಚಾಲ್ತಿಯಲ್ಲಿರಲಿದೆ.
ಯಾವ್ಯಾವ ನಗರಕ್ಕೆ ಅನ್ವಯ..?
ಭಾರತದ ಯಾವ ಮೂಲೆಯಿಂದಾದರು ವಿಯೆಟ್ನಾಂನ ವಿಯೆತ್ಜೆಟ್ ಹತ್ತಬಹುದು ಎಂದು ತಿಳಿದುಕೊಂಡಿದ್ದರೆ, ಅದು ತಪ್ಪಾಗುತ್ತದೆ. ಮಹಾನಗರಗಳಾದ ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್, ಕೊಚ್ಚಿ, ಅಹಮದಾಬಾದ್ನಿಂದ ಮಾತ್ರ ವಿಯೆತ್ಜೆಟ್ ಹಾರಲಿದ್ದು, ವಿಯೆಟ್ನಾಂನ ಹೋ ಚಿ ಮಿನ್ ಸಿಟಿ, ಹನೋಯ್ ಹಾಗೂ ದಾ ನಾಂಗ್ಗೆ ಬಂದಿಳಿಯಲು ಈ ಆಫರ್ ಅನ್ವಯವಾಗಲಿದೆ.

ಟಿಕೆಟ್ ಬುಕ್ ಎಲ್ಲಿ ಮಾಡಬೇಕು….?
ಇತರೆ ವಿಮಾನಯಾನದ ಟಿಕೆಟ್ ಬುಕ್ ಮಾಡಿದಂತೆ ಎಲ್ಲೆಂದರಲ್ಲಿ ಈ ಆಫರ್ನ ಟಿಕೆಟ್ ಬುಕ್ ಮಾಡಲಾಗದು. ವಿಯೆತ್ಜೆಟ್ನ ಅಧಿಕೃತ ವೆಬ್ಸೈಟ್(www.vietjetair.com) ಅಥವಾ ವಿಯೆತ್ಜೆಟ್ನ ಮೊಬೈಲ್ ಆ್ಯಪ್ ಮೂಲಕ ಮಾತ್ರ ಟಿಕೆಟ್ ಬುಕ್ ಮಾಡಬೇಕಿದೆ. ಇನ್ನು ಈ ಆಫರ್ ಸೀಮಿತ ಸೀಟುಗಳಿಗೆ ಮಾತ್ರ ಲಭ್ಯವಿದ್ದು, ಪಬ್ಲಿಕ್ ಹಾಲಿಡೇ ಅಥವಾ ಪೀಕ್ ಸೀಸನ್ನಲ್ಲಿ ಬ್ಲ್ಯಾಂಕ್ಔಟ್ ದಿನಾಂಕಗಳು ಅನ್ವಯಿಸಬಹುದು ಎನ್ನಲಾಗಿದೆ. ಹಾಗೆಯೇ, ಟಿಕೆಟ್ ಬದಲಾವಣೆಯ ಶುಲ್ಕ ಹಾಗೂ ರದ್ಧತಿಯ ಸಂದರ್ಭದಲ್ಲಿನ ರಿಫಂಡ್ ಅಮೌಂಟ್ ಟ್ರಾವೆಲ್ ವಾಲೆಟ್ಗೆ ಕ್ರೆಡಿಟ್ ಆಗಲಿದೆ.
ಒಟ್ಟಾರೆ, ನೈಸರ್ಗಿಕ ಸೌಂದರ್ಯ, ಐತಿಹಾಸಿಕ ತಾಣಗಳು ಹಾಗೂ ರುಚಿಕಟ್ಟಾದ ಆಹಾರಕ್ಕೆ ಪ್ರಸಿದ್ಧಿಯಾಗಿರುವ ವಿಯೆಟ್ನಾಂ ಅನ್ನು ನೋಡಲು ಬಯಸಿದ್ದಲ್ಲಿ ಇದೊಂದು ಸದಾವಕಾಶ ಒದಗಿದೆ. ಕಡಿಮೆ ಬಜೆಟ್ನಲ್ಲಿ ಕುಟುಂಬ ಸಮೇತರಾಗಿ ಹೋಗಿ ವಿಯೆಟ್ನಾಂ ಸುತ್ತಿ ಬನ್ನಿ.