ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ದಂಪತಿಗೆ ಇಂದು (ನವೆಂಬರ್ 12) ಗಂಡು ಮಗು ಜನಿಸಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಬೆಳಗ್ಗೆ 8.30 ಸುಮಾರಿಗೆ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದು, ಮೊಮ್ಮಗನನ್ನು ಹಿಡಿದು ಮಾಜಿ ಸಂಸದೆ ಸುಮಲತಾ ಭಾವುಕರಾಗಿರುವ ಫೋಟೋ ವೈರಲ್ ಆಗಿದೆ.
ವೈರಲ್ ಆಗಿರುವ ಫೋಟೊದಲ್ಲಿ ಅವಿವಾ ಮಗು ಬಹಳ ಮುದ್ದಾಗಿ ಕಾಣಿಸುತ್ತಿದೆ. ಈಗ ಅಂಬರೀಷ್ ಅವರ ಮನೆಯಲ್ಲಿ ಖುಷಿ ಮನೆ ಮಾಡಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂಬರೀಷ್ ಅಭಿಮಾನಿಗಳು ‘ಅಂಬಿ ಮತ್ತೆ ಹುಟ್ಟಿ ಬಂದ್ರು’ ಎಂದು ಬರೆದುಕೊಳ್ಳುತ್ತಿದ್ದಾರೆ. ಅವಿವಾ ಅವರು ಪ್ರೆಗ್ನೆಂಟ್ ಎನ್ನುವ ವಿಚಾರ ಇತ್ತೀಚೆಗಷ್ಟೇ ರಿವೀಲ್ ಆಗಿತ್ತು. ಅದ್ಧೂರಿಯಾಗಿ ಸೀಮಂತಶಾಸ್ತ್ರ ಕೂಡ ನೆರವೇರಿತ್ತು. ಹಸಿರು ಸೀರೆಯಲ್ಲಿ ಅವೀವಾ ಮಿಂಚಿದ್ದರು. ವಿಶೇಷವೆಂದರೆ ಫೋಟೋ ನೋಡಿದವರು ಗಂಡು ಮಗುನೇ ಆಗುವುದು ಎಂದು ಗೆಸ್ ಮಾಡಿದ್ದರು. ಅವಿವಾ ಸೀಮಂತ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು.

ಅವಿವಾ ಬಿದಪ್ಪ ಅವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಪುತ್ರಿ. ಇವರು ಕೂಡ ಸ್ವತಃ ಫ್ಯಾಷನ್ ಡಿಸೈನರ್. ತಮ್ಮದೇ ಸ್ವಿಮ್ ಸೂಟ್ ಬ್ರ್ಯಾಂಡ್ನ ಲಾಂಚ್ ಮಾಡಿದ್ದಾರೆ. ಅಭಿಷೇಕ್-ಅವಿವಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಪೋಷಕರ ಒಪ್ಪಿಗೆ ಮೇಲೆ ಜೂನ್ 5, 2023ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಭಿಷೇಕ್ 2019ರ ‘ಅಮರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸ್ವಲ್ಪ ದಿನಗಳ ಕಾಲ ವಿರಾಮ ತೆಗೆದುಕೊಂಡ ಅವರು 2023ರಲ್ಲಿ ‘ಬ್ಯಾಡ್ ಮ್ಯಾನರ್ಸ್’ ಹೆಸರಿನ ಸಿನಿಮಾ ಮಾಡಿದರು. ಈಗ ಕಾಳಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.