ಕರ್ನಾಟಕದ ದೇವರು, ಬಂಗಾರದ ಮನುಷ್ಯ, ದೇವತಾ ಮನುಷ್ಯ ಎಂದೇ ಡಾ. ರಾಜ್ ಕುಮಾರ್ ಅವರನ್ನು ಕರೆಯುತ್ತಾರೆ. ಇವರು ಅಗಲಿ 18 ವರ್ಷ ಕಳೆದಿದ್ದರು ಸಹ ಇಂದಿಗೂ ಯಾರು ಕೂಡ ಡಾ. ರಾಜ್ ಕುಮಾರ್ ಅವರು ಇಲ್ಲ ಎಂದು ಭಾವಿಸಿಲ್ಲ. ಅಣ್ಣಾವ್ರು ನಮ್ಮೊಡನೆಯೇ ಇದ್ದಾರೆ ಎಂದು ಅವರ ಅಭಿಮಾನಿಗಳು ನಂಬಿದ್ದಾರೆ. ಡಾ. ರಾಜ್ ಕುಮಾರ್ ಅವರು ಒಬ್ಬ ಅದ್ಭುತ ನಟ, ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರು. ಆದರೆ ಇವರು ಒಂದೇ ಒಂದು ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದರು. ಇದು ಹಲವರಿಗೆ ಗೊತ್ತಿಲ್ಲ. ಹಾಗಿದ್ದಲ್ಲಿ ಅಣ್ಣಾವ್ರು ನಿರ್ಮಾಣ ಮಾಡಿದ ಆ ಸಿನಿಮಾ ಯಾವುದು ಎಂದು ತಿಳಿಯೋಣ..
ಡಾ. ರಾಜ್ ಕುಮಾರ್ ಅವರು 50ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು. ಇವರು ಎಂಥಾ ಮಹಾನ್ ಕಲಾವಿದ, ಅದ್ಭುತವಾದ ನಟರು, ಗಾಯಕರು ಹೌದು ಎನ್ನುವುದು ನಮಗೆಲ್ಲಾ ಗೊತ್ತಿರುವ ವಿಷಯ. ಡಾ. ರಾಜ್ ಕುಮಾರ್ ಅವರು ನಟರಾಗಿದ್ದು, ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ವಿಶ್ವದ ಮೊದಲ ನಾಯಕನಟ. ಅಪರೂಪದ ವ್ಯಕ್ತಿತ್ವ ಹೊಂದಿದ್ದ ಡಾ. ರಾಜ್ ಕುಮಾರ್ ಅವರು ಸರಳತೆಗೆ ಇನ್ನೊಂದ್ ಹೆಸರು ಎಂಬಂತೆ ಜೀವಿಸಿದವರು. ನಟನಾಗಿ ಎಲ್ಲರೂ ಇವರನ್ನು ನೋಡಿದ್ದೀರಿ, ಆದರೆ ನಿರ್ಮಾಪಕರಾಗಿಯೂ ಅಣ್ಣಾವ್ರು ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೌದು, ಅದೊಂದು ಅದ್ಭುತವಾದ ಸಿನಿಮಾ..

ಪಾರ್ವತಮ್ಮ ರಾಜ್ ಕುಮಾರ್ ಅವರು ಅಣ್ಣಾವ್ರ ಮಡದಿಯಾಗಿ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಆದರೆ ಅಣ್ಣಾವ್ರು ಕೂಡ ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆ ಸಿನಿಮಾ ಮತ್ಯಾವುದು ಅಲ್ಲ, ಖುದ್ದು ಅಣ್ಣಾವ್ರೆ ನಾಯಕನಾಗಿ ನಟಿಸಿದ್ದ ರಣಧೀರ ಕಂಠೀರವ ಸಿನಿಮಾ. ಈ ಸಿನಿಮಾವನ್ನು ಅಣ್ಣಾವ್ರು ಮಾತ್ರ ನಿರ್ಮಾಣ ಮಾಡಿರಲಿಲ್ಲ, ಬದಲಾಗಿ ಕನ್ನಡದ ಮತ್ತೊಬ್ಬ ಹಿರಿಯನಟ ಬಾಲಣ್ಣನವರು, ಜಿ.ವಿ ಅಯ್ಯರ್ ಅವರು ಹಾಗೂ ನರಸಿಂಹ ರಾಜು ಅವರು, ಈ ನಾಲ್ವರು ಸೇರಿ ರಣಧೀರ ಕಂಠೀರವ ಸಿನಿಮಾ ನಿರ್ಮಾಣ ಮಾಡಿದರು.
ಈ ಸಿನಿಮಾವನ್ನು ಜೊತೆಯಾಗೆ ಬಿಡುಗಡೆ ಮಾಡಿದರು, ಸಿನಿಮಾ ಅದ್ಭುತವಾದ ಯಶಸ್ಸನ್ನು ಸಹ ಕಂಡಿತು. ಆದರೆ ಬಿಡುಗಡೆಯಾದ ನಂತರ ಲಾಭದ ವಿಷಯದಲ್ಲಿ ಹಂಚಿಕೆ ಸರಿಯಾಗಿ ಆಗಲಿಲ್ಲ ಎನ್ನುವ ಕಾರಣಕ್ಕೆ ಮತ್ತೆ ಎಲ್ಲರೂ ಜೊತೆಗೂಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಲಿಲ್ಲ. ಹಾಗೆಯೇ ಅಣ್ಣಾವ್ರು ಸಹ ನಿರ್ಮಾಣದಿಂದ ದೂರ ಉಳಿದುಬಿಟ್ಟರು. ಇಲ್ಲಿ ಮುಖ್ಯವಾದ ವಿಷಯ ಒಂದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅದೇನು ಎಂದರೆ, ಅಣ್ಣಾವ್ರು ಅದ್ಭುತವಾದ ನಟರು ಎನ್ನುವುದು ಸತ್ಯ. ಆದರೆ ಅವರಿಗೆ ಹೆಚ್ಚಿನ ವ್ಯವಹಾರ ಜ್ಞಾನ ಇರಲಿಲ್ಲ. ಅವರಿಗೆ ವ್ಯವಹಾರದ ಬಗ್ಗೆ ಆಸಕ್ತಿ ಸಹ ಇರಲಿಲ್ಲ.

ಹಾಗಾಗಿ ಅಣ್ಣಾವ್ರು ನಟನೆಯನ್ನಷ್ಟೇ ಮಾಡಿದರು. ಆದರೆ ವ್ಯವಹಾರದ ವಿಷಯದಲ್ಲಿ ಅಣ್ಣಾವ್ರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರು ಜೊತೆಗೆ ನಿಂತರು. ಅಣ್ಣಾವ್ರು ಸಿನಿಮಾ ಮಾಡಿದರೆ ಪಾರ್ವತಮ್ಮನವರು, ಅಣ್ಣಾವ್ರ ಸಿನಿಮಾಗಳನ್ನು ನೋಡಿಕೊಳ್ಳುವುದರ ಜೊತೆಗೆ, ತಾವೇ ಒಂದು ಸಿನಿಮಾ ವಿತರಣೆ ಸಂಸ್ಥೆ ಮತ್ತು ಸಿನಿಮಾ ನಿರ್ಮಾಣ ಸಂಸ್ಥೆ ಎರಡನ್ನು ಶುರು ಮಾಡಿದರು, ತಮ್ಮ ಸಂಸ್ಥೆಯ ಮೂಲಕ ಪತಿಯ ಸಿನಿಮಾ, ಮಕ್ಕಳ ಸಿನಿಮಾ ಎಲ್ಲವನ್ನು ನಿರ್ಮಾಣ ಮಾಡಿದರು. ಪಾರ್ವತಮ್ಮನವರು ತಮ್ಮ ಮನೆಯ ನಾಯಕರಿಗೆ ಸರಿ ಹೊಂದುವಂಥ ಕಥೆಗಳನ್ನು ಉತ್ತಮವಾಗಿ ಅರಿಸುತ್ತಿದ್ದರು. ಶಿವ ರಾಜ್ ಕುಮಾರ್ ಅವರನ್ನು, ರಾಘವೇಂದ್ರ ರಾಜ್ ಕುಮಾರ್ ಅವರನ್ನು, ಪುನೀತ್ ರಾಜ್ ಕುಮಾರ್ ಅವರನ್ನು, ಹಾಗೂ ಮೂರನೇ ತಲೆಮಾರಿನ ವಿನಯ್ ರಾಜ್ ಕುಮಾರ್ ಅವರನ್ನು ಕೂಡ ಪಾರ್ವತಮ್ಮನವರೇ ಲಾಂಚ್ ಮಾಡಿದರು. ನಿರ್ಮಾಪಕಿಯಾಗಿ ಒಂದು ಸಾಮ್ರಾಜ್ಯವನ್ನೇ ಕಟ್ಟಿದರು. ಅಣ್ಣಾವ್ರ ಪ್ರತಿ ಕೆಲಸದಲ್ಲೂ ಬೆನ್ನೆಲುಬಾಗಿ ನಿಂತಿದ್ದರು.