ಭಾರತದ ಮಾಜಿ ಸಾಲಿಸಿಟರ್ ಜನರಲ್ ಹಾಗೂ ಹೆಸರಾಂತ ವಕೀಲ ಹರೀಶ್ ಸಾಳ್ವೆ ಅವರು 68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದು, ವಿವಾಹ ಸಮಾರಂಭದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿವೆ; ಇತ್ತೀಚೆಗೆ ಲಂಡನ್ನಲ್ಲಿ ನಡೆದ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಸಾಳ್ವೆ ಅವರು ಟ್ರಿನಾ ಎಂಬುವರನ್ನು ವರಿಸಿದ್ದಾರೆ ಎಂದು ಆಂಗ್ಲ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ, ಐಪಿಎಲ್’ ಮಾಜಿ ಮುಖ್ಯಸ್ಥ ಹಾಗೂ ಸುಸ್ತಿದಾರ ಲಲಿತ್ ಮೋದಿ ಮತ್ತವರ ಗೆಳತಿ ಉಜ್ವಲಾ ರಾವತ್ ಸೇರಿದಂತೆ ಹಲವರು ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾದರು.

ಹರೀಶ್ ಸಾಲ್ಟ್ ಅವರು 1982ರಲ್ಲಿ ಮೀನಾಕ್ಷಿ ಎಂಬುವರ ಜತೆ ಮದುವೆಯಾಗಿದ್ದರು. ಈ ದಂಪತಿಗೆ ಸಾಕ್ಷಿ ಹಾಗೂ ಸಾನಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 2020ರಲ್ಲಿ ವಿಚ್ಛೇದನವಾಗಿದೆ. ನಂತರ ಅದೇ ವರ್ಷ ಸಾಳ್ವೆ ಅವರು ಕಾರೋಲಿನ್ ಬೊಸಾರ್ಡ್ ಎನ್ನುವವ ರನ್ನು ವರಿಸಿದ್ದರು. ಈಗ 3ನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಗಮನ ಸಳೆದಿದೆ.
ಗೂಢಾಚಾರಿಕೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿ ಪಾಕ್ ಜೈಲಿನಲ್ಲಿ ವರ್ಷಗಟ್ಟಲೆ ಸಂಕಷ್ಟ ಅನುಭವಿಸಿದ್ದ ಭಾರತೀಯ ನೌಕಾಪಡೆಯ ಮಾಜಿ ಉದ್ಯೋಗಿ ಕುಲಭೂಷಣ್ ಜಾಧವ್ ಪ್ರಕರಣ, 2002 ಸಲ್ಮಾನ್ ಖಾನ್ರ ಹಿಟ್ ಅಂಡ್ ರನ್ ಕೇಸ್ ಸೇರಿದಂತೆ ಹಲವು ಹೈಪ್ರೊಫೈಲ್ ಕೇಸ್ ಗಳಲ್ಲಿ ಸಾಳ್ವೆ ವಾದ ಮಂಡಿಸಿದ್ದರು. 2018ರಲ್ಲಿ ಕಾವೇರಿ ನೀರು ವಿವಾದ ಪ್ರಕರಣದಲ್ಲಿ ಕೇಂದ್ರ ಸರಕಾರದ ಪರ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು.



