ಮಕ್ಕಳು ಹಾಗೂ ಗರ್ಭಿಣಿ ಸ್ತ್ರೀಯರನ್ನು ದಡಾರ್, ರುಬೆಲ್ಲಾ ರೋಗಗಳಿಂದ ದೂರವಿಡಲು ಆರೋಗ್ಯ ಇಲಾಖೆ ಪರಿಣಾಮಕಾರಿ ಇಂದ್ರಧನುಷ್ ಅಭಿಯಾನವನ್ನ ಆರಂಭಿಸಿದೆ. ರಾಯಚೂರಿನಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್. ಈ ವೇಳೆ ಮಾತನಾಡಿದ ಗುಂಡೂರಾವ್ ಕರ್ನಾಟಕವನ್ನ ದಡಾರ್, ರುಬೆಲ್ಲಾ ಮುಕ್ತ ರಾಜ್ಯವನ್ನಾಗಿ ನಿರ್ಮಿಸುವತ್ತ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದ್ಯಂತೆ.

ಪರಿಣಾಮಕಾರಿ ಇಂದ್ರಧನುಷ್ ಅಭಿಯಾನದ ಮೂಲಕ ರಾಜ್ಯದಲ್ಲಿ 1 ಲಕ್ಷದ 65 ಸಾವಿರ ಮಕ್ಕಳು ಹಾಗೂ 32 ಸಾವಿರ ಗರ್ಭಿಣಿ ಸ್ತ್ರೀಯರನ್ನ ಗುರುತಿಸಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಭಿಯಾನ ಆರಂಭ ಆದ ಮೂರು ತಿಂಗಳವರೆಗೆ ಅಭಿಯಾನ ನಡೆಯಲಿದ್ದು, ಪ್ರತಿ ತಿಂಗಳು 6 ದಿನ ಲಸಿಕೆ ಹಾಕುವ ಕಾರ್ಯ ಚಾಲ್ತಿಯಲ್ಲಿರುತ್ತದೆ. ರಾಜ್ಯದ ಜನರು ತಪ್ಪದೇ 5 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ಸಾಂಕೇತಿಕವಾಗಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಸಚಿವರು, ಲಸಿಕೆ ಕಾರ್ಯಕ್ರಮ ಸಂಪೂರ್ಣವಾಗಿ ಅನುಷ್ಠಾನವಾಗಬೇಕು ಎಂದರು. 12 ಲಸಿಕೆಗಳನ್ನ ರಾಜ್ಯದಲ್ಲಿ ಮಕ್ಕಳಿಗೆ ನೀಡುತ್ತಿದ್ದೇವೆ. ಈಗಾಗಲೇ ಶೇಕಡಾ 97% ರಷ್ಟು ಲಸಿಕೆಗಳನ್ನ ರಾಜ್ಯದಲ್ಲಿ ನೀಡಲಾಗಿದೆ. ಆದರೆ ರಾಜ್ಯ ದಡಾರ್, ರುಬೆಲ್ಲಾ ರೋಗಗಳಿಂದ ಸಂಪೂರ್ಣವಾಗಿ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ಸಹಕಾರಿಯಾಗಲಿದೆ ಎಂದು ಹೇಳಿದರು.

ರಾಯಚೂರಿನಲ್ಲಿ ಶೇ 92% ರಷ್ಟು ಮಾತ್ರ ಲಸಿಕೆ ಹಾಕಲಾಗಿದ್ದು, ರಾಯಚೂರಿನಲ್ಲಿ ಪೂರ್ಣ ಪ್ರಮಾಣದ ಲಸಿಕೆ ಕಾರ್ಯ ಆಗಬೇಕಿದೆ. ಹೀಗಾಗಿ ರಾಜ್ಯದಾದ್ಯಂತ ನಡೆಯಲಿರುವ ಅಭಿಯಾನಕ್ಕೆ ರಾಯಚೂರಿನಿಂದಲೇ ಚಾಲನೆ ನೀಡಲಾಗಿದೆ. ಇನ್ನೂ ರಾಜ್ಯದ ಹಲವು ಜಿಲ್ಲೆ ಲಸಿಕೆ ಹಾಕುವಲ್ಲಿ ಹಿಂದೆ ಬಿದ್ದಿದ್ದು ದಡಾರ ಕಾಯಿಲೆ ಕಾಡುತ್ತಿದೆ.
ಬಾಗಲಕೋಟೆ, ಬಳ್ಳಾರಿ, ಬಿಬಿಎಂಪಿ, ಬೆಂಗಳೂರು ನಗರ, ಬೆಳಗಾವಿ, ಧಾರವಾಡ, ಮೈಸೂರು, ರಾಮನಗರ, ಯಾದಗಿರಿ ಸೇರಿದಂತೆ 12 ಜಿಲ್ಲೆಗಳನ್ನ ಅಪಾಯದ ಜಿಲ್ಲೆಗಳೆಂದು ಗುರುತಿಸಿ ಪರಿಣಾಮಕಾರಿಯಾಗಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಂಆರ್ 1 ಮತ್ತು ಎಂಆರ್ 2 ಲಸಿಕೆ ಯನ್ನ ಸಂಪೂರ್ಣವಾಗಿ ನೀಡುವತ್ತ ಹೆಚ್ಚಿನ ಗಮನ ಹರಿಸಲಾಗಿದೆ. ರಾಜ್ಯದ ಜನರು ಇದರ ಸದುಪಯೋಗ ಪಡೆದುಕೊಳ್ಳುವ ಅವಶ್ಯಕತೆ ಇದೆ.
ಲಸಿಕೆ ಪ್ರಕ್ರಿಯೆ ಯಾವ ತರ ಇರುತ್ತೆ ಅಂತ ನೋಡೋದಾದ್ರೆ ಮೂರು ಹಂತದಲ್ಲಿ ದಡಾರ್, ರುಬೆಲ್ಲಾ ವಿರುದ್ಧ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಅಗಸ್ಟ್ ತಿಂಗಳು 7 ರಿಂದ 12, ಸೆಪ್ಟೆಂಬರ್ 11 ರಿಂದ 16 ಮತ್ತು ಅಕ್ಟೋಬರ್ 9 ರಿಂದ 14 ರ ವರೆಗೆ ಪ್ರತಿ ತಿಂಗಳು 6 ದಿನಗಳ ಕಾಲ ಇಂದ್ರಧನುಷ್ ಅಭಿಯಾನ ನಡೆಯಲಿದೆ. ರಾಜ್ಯದ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಲಬ್ಯವಿದ್ದು, ಕಳೆದ ಬಾರಿ ಲಸಿಕೆಯಿಂದ ವಂಚಿತರಾದವರು ಅಭಿಯಾನದ ಪ್ರಯೋಜನ ಪಡೆಯಬೇಕು..
ಅಲ್ಲದೇ ಈ ವರ್ಷ ನಾಲ್ಕು ಜಿಲ್ಲೆಗಳಲ್ಲಿ ಆಶಾಕಿರಣ ಕಾರ್ಯಕ್ರಮವನ್ನ ಕೂಡ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಉಚಿತ ಕಣ್ಣಿನ ಪರೀಕ್ಷೆ ,ಚಿಕಿತ್ಸೆ ನೀಡಿ ಕನ್ನಡಕ ನೀಡುವ ಆಶಾಕಿರಣ ಕಾರ್ಯಕ್ರಮ ಅನೇಕರಿಗೆ ಸಹಕಾರಿಯಾಗಲಿದೆ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ