ಕಾಂಗ್ರೆಸ್ ನಾಯಕರು ಒಳ ಜಗಳಗಳು, ಶೀತಲ ಸಮರ ಮುಂದುವರೆದಿದೆ. ಇದಕ್ಕೆ ಯಾವ ರೀತಿ ಕಡಿವಾಣ ಹಾಕಬೇಕು ಅನ್ನೋದೆ ಹೈ ಕಮಾಂಡ್ ಗೂ ಗೊತ್ತಾಗ್ತಾ ಇಲ್ಲ ಅನ್ನಿಸುತ್ತೆ. ಹೀಗಾಗಿ ಅದು ಎಷ್ಟು ದಿನ ಮಾತಾಡ್ತಾರೋ ಮಾತಾಡಲಿ ಅಂತ ಬಿಟ್ಟಂತಿದೆ ಹೈ ಕಮಾಂಡ್. ಸದ್ಯ ದಿನಕ್ಕೊಂದು ಹೇಳಿಕೆಗಳನ್ನ ನೀಡ್ತಾ ಇದ್ದಾರೆ ಸಚಿವರುಗಳು. ಪವರ್ ಶೇರಿಂಗ್, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಹೀಗೆ ಒಂದಲ್ಲ ಒಂದು ಹೇಳಿಕೆ ಕೊಡ್ತಾನೆ ಇದ್ದಾರೆ.
ಪವರ್ ಶೇರಿಂಗ್ ಬಗ್ಗೆ ಯಾವಾಗ ಡಿಕೆ ಶಿವಕುಮಾರ್ ಮಾತನಾಡಿದ್ರೋ ಅಂದಿನಿಂದ ಸಿದ್ದರಾಮಯ್ಯ ಆಪ್ತ ಸಚಿವರುಗಳು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಚಕಾರ ಎತ್ತಿದರು. ಲೋಕಸಭಾ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವ ಬಗ್ಗೆ ಹೈ ಕಮಾಂಡ್ ಗಮನಕ್ಕಿದೆ, ಅದು ಆಗಲೇ ಬೇಕು ಅನ್ನೋ ಪಟ್ಟು ಹಿಡಿದರು. ಇತ್ತ ಸಿಎಂ ಸ್ಥಾನಕ್ಕೆ ಕಣ್ಣಿಟ್ಟು ಮಾತನಾಡುತ್ತಿದ್ದ ಡಿಕೆಶಿಗೆ ತಾವೂ ಆಕಾಂಕ್ಷಿ ಅನ್ನೋ ಮಾತುಗಳನ್ನ ಹೇಳಲು ಪ್ರಾರಂಭ ಮಾಡಿದರು. ಪ್ರತಿ ಬಾರಿಯೂ ಡಿಕೆ ಶಿವಕುಮಾರ್ ಗೆ ಅಡ್ಡಿ ಮಾಡುತ್ತಲೇ ಇದ್ದಾರೆ ಸಿದ್ದರಾಮಯ್ಯ ಆಪ್ತ ಸಚಿವರು.

ಇಷ್ಟು ದಿನ ಸೈಲೆಂಟ್ ಆಗಿಯೇ ಉತ್ತರ ನೀಡ್ತಾ ಇದ್ದ ಡಿಕೆ ಶಿವಕುಮಾರ್ ಈಗ ರೆಬಲ್ ಆದಂತೆ ಕಾಣ್ತಾ ಇದೆ. ಹೇಳಿಕೆ ಕೊಡ್ತಾ ಇದ್ದ ಸಚಿವರುಗಳಿಗೆ ತಮ್ಮ ಆಪ್ತರಿಂದ ಆಗಿಂದಾಗಲೇ ತಿರುಗೇಟು ನೀಡ್ತಾ ಇದ್ದ ಡಿಕೆ, ಕೊನೆಗೆ ಹೈ ಕಮಾಂಡ್ ತನಕವೂ ಹೋದರು. ಅಲ್ಲಿನಿಂದಲೇ ಹೇಳಿಕೆ ಕೊಡುವವರಿಗೆ ಸೂಚನೆ ಕೊಡಿಸಿದ್ರು. ಆದರೆ ಇದ್ಯಾವುದಕ್ಕೂ ಸಚಿವರುಗಳು ತಲೆ ಕೆಡಿಸಿಕೊಳ್ಳಲೇ ಇಲ್ಲ. ಬಹಿರಂಗ ಹೇಳಿಕೆಗಳನ್ನ ಕೊಡೋದನ್ನ ಇನ್ನೂ ಜಾಸ್ತಿ ಮಾಡಿದ್ದಾರೆ. ಜೊತೆಗೆ ಪದೇ ಪದೇ ಹೈ ಕಮಾಂಡ್ ಭೇಟಿಗೆ ದಲಿತ ಸಚಿವರುಗಳು ದೆಹಲಿಗೆ ಹೋಗುತ್ತಲೇ ಇದ್ದಾರೆ. ಇಲ್ಲಿ ಆಗ್ತಾ ಇರೋ ಬೆಳವಣಿಗೆ, ಡಿಕೆಶಿ ತಂತ್ರ ಎಲ್ಲವನ್ನೂ ಕೂಡ ಹೈ ಕಮಾಂಡ್ ಗೆ ಹೇಳುತ್ತಿದ್ದಾರೆ. ಇದು ಕೂಡ ಡಿಕೆಗೆ ದೊಡ್ಡ ತಲೆನೋವಾಗಿದೆ.

ಹೀಗಾಗಿ ಹೊಸ ತಂತ್ರ ಮಾಡಿರೋ ಡಿಕೆಶಿ, ಸಚಿವ ಸಂಪುಟ ಸರ್ಜರಿಗೆ ಕೈ ಹಾಕಿದ್ದಾರಂತೆ. ದಲಿತ ಸಚಿವರ ದೆಹಲಿ ದಂಡಯಾತ್ರೆ ಬಳಿಕ ಡಿಕೆ ಶಿವಕುಮಾರ್ ಫುಲ್ ಅಲರ್ಟ್ ಆಗಿಬಿಟ್ಟಿದ್ದಾರೆ. ಪರಮೇಶ್ವರ್, ಮಹದೇವಪ್ಪ, ಕೆ.ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ಇಟ್ಟಿದ್ದಾರಂತೆ ಡಿಕೆ ಶಿವಕುಮಾರ್. ತಮ್ಮ ವಿರುದ್ದ ಹೈಕಮಾಂಡ್ ಗೆ ಕಂಪ್ಲೇಂಟ್ ಕೊಟ್ಟ ಬಳಿಕ ಸಿಎಂ ಆಪ್ತ ಸಚಿವರ ವಿರುದ್ದ ಡಿ.ಕೆ ಶಿವಕುಮಾರ್ ಬಹಿರಂಗವಾಗಿಯೇ ಅಖಾಡಕ್ಕೆ ಇಳಿದಿದ್ದಾರೆ. ಒಂದಾದ ಮೇಲೊಂದು ಹೊಸ ದಾಳ ಉರುಳಿಸ್ತಿದ್ದಾರೆ. ಬಹಿರಂಗ ಹೇಳಿಕೆಗೆ ಬಗ್ಗದ ಸಚಿವರುಗಳಿಗೆ ಒಳ ಏಟು ಕೊಡಲು ತಯಾರಿ ನಡೆಸಿದ್ದಾರಂತೆ. ಸದ್ಯ ಸಚಿವ ಸಂಪುಟ ವಿಸ್ತರಣೆಗೂ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಡಿಸಿಎಂ ಒತ್ತಡಕ್ಕೆ ಹೈಕಮಾಂಡ್ ಕೂಡ ಮಣಿದಿದೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಬಜೆಟ್ ನಂತರ ಮಾರ್ಚ್ ತಿಂಗಳಲ್ಲೇ ಸಿದ್ದರಾಮಯ್ಯ ಸಂಪುಟಕ್ಕೆ ಮೇಜರ್ ಸರ್ಜರಿ ಆಗೋ ಸಾಧ್ಯತೆ ಇದೆ. ಸಿಎಂಗೆ ಹೈಕಮಾಂಡ್ ನಿಂದಲೂ ಸಂಪುಟ ಪುನರ್ ರಚನೆ ಬಗ್ಗೆ ಮಾಹಿತಿ ರವಾನೆ ಆಗಿದ್ದು, ಪುನರ್ ರಚನೆಗೆ ಸಿದ್ದರಾಗಿರುವಂತೆ ಸಿಎಂಗೆ ಸೂಚನೆ ಬಂದಿದೆಯಂತೆ.

ಈ ಮೂಲಕ ಇದು ಸಿದ್ದರಾಮಯ್ಯ ಆಪ್ತ ಬಳಗದ ಘಟಾನುಘಟಿ ಸಚಿವರುಗಳ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈ ಬೆಳವಣಿಗೆ ಆಪ್ತ ಸಚಿವರಿಗೆ ಟೆನ್ಷನ್ ಉಂಟು ಮಾಡಿದೆ. ದಲಿತ ಸಚಿವರ ಜೊತೆಗೆ ಸಿಎಂ ಆಪ್ತ ಮಂತ್ರಿಗಳಾದ ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಎಂ.ಬಿ ಪಾಟೀಲ್, ಆರ್ ಬಿ ತಿಮ್ಮಾಪುರ್, ಕೆ ವೆಂಕಟೇಶ್, ಬೋಸರಾಜು ಅವ್ರನ್ನೂ ಸಂಪುಟದಿಂದ ಕೈ ಬಿಡುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಸರ್ಕಾರ ಹಾಗೂ ಪಕ್ಷದಲ್ಲಿನ ಸಚಿವರ ಕಾರ್ಯವೈಖರಿ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪ್ರತ್ಯೇಕವಾಗಿ ಎರಡು ರಿಪೋರ್ಟ್ ಕಾರ್ಡ್ ಹೈಕಮಾಂಡ್ ಗೆ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈಗ ಸಚಿವ ಸಂಪುಟ ಪುನರ್ ರಚನೆಗೆ ಒತ್ತಡ ಹಾಕಿ, ಮೇಲುಗೈ ಸಾಧಿಸಲು ಡಿಕೆಶಿ ತಂತ್ರ ರೂಪಿಸಿದ್ದಾರೆ. ಈ ಆಪ್ತ ಸಚಿವರ ಅಧಿಕಾರ ಕಿತ್ತುಕೊಂಡರೆ ಸಿಎಂ ಪರ ನಿಲ್ಲುವವರ ಸಂಖ್ಯೆ ಕಡಿಮೆ ಆಗಲಿದೆ. ಜೊತೆಗೆ ಸಿಎಂ ತಮ್ಮನ್ನ ಉಳಿಸಿಕೊಳ್ಳಲಿಲ್ಲ ಅನ್ನೋ ಅಪವಾದ ಸಿಎಂ ಮೇಲೆ ಬರಲಿದೆ. ಇದರಿಂದ ತಮ್ಮ ಸಿಎಂ ಕನಸಿನ ಹಾದಿ ಸಲೀಸಾಗಲಿದೆ ಅನ್ನೋದು ಲೆಕ್ಕಾಚಾರ.
ಡಿಕೆಶಿ ಅಂಡ್ ಟೀಂ ಒತ್ತಡಕ್ಕೆ ಮಣಿದು ಜೇನುಗೂಡಿಗೆ ಹೈಕಮಾಂಡ್ ಕೈ ಹಾಕುತ್ತಾ..? ಅನ್ನೋದು ಒಂದು ಕಡೆಯಾದ್ರೆ, ಅನಗತ್ಯ ಗೊಂದಲ ಬೇಡ ಅಂತಾ ಸಂಪುಟ ಪುನರ್ ರಚನೆಯನ್ನ ಮುಂದೂಡುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.