ಕಾಂಗ್ರೆಸ್ ನಲ್ಲಿ ನಾಯಕತ್ವದ ವಿಚಾರ ಸದ್ಯಕ್ಕೆ ಹೆಚ್ಚು ಚರ್ಚೆಯಲ್ಲಿ ಇದೆ. ಯಾವಾಗ ದಲಿತ ಸಚಿವರುಗಳು ನಾಯಕತ್ವ ವಿಚಾರವನ್ನ ಜೋರಾಗಿ ಮಾತನಾಡಲು ಪ್ರಾರಂಭ ಮಾಡಿದರೋ ಅಂದಿನಿಂದಲೂ ಕೂಡ ಒಂದಿಷ್ಟು ಗೊಂದಲ ಶುರುವಾದ್ವು. ತೆರೆ ಮರೆಯಲ್ಲಿ ಪವರ್ ಶೇರಿಂಗ್ ಬಗ್ಗೆ ಮಾತನಾಡುತ್ತಿದ್ದ ನಾಯಕರು ಕಳೆದ ಎರಡ್ಮೂರು ತಿಂಗಳಿಂದ ಬಹಿರಂಗವಾಗಿಯೇ ಮಾತನಾಡಲು ಶುರುಮಾಡಿದರು. ಇದು ಎಲ್ಲಿಂಗೆ ಬಂದು ನಿಂತಿದೆ ಅಂದರೆ ಇವರುಗಳು ಮಾತನಾಡಿಯೇ ಇಡೀ ರಾಜ್ಯದ ಜನರಿಗೆ ಸಿದ್ದರಾಮಯ್ಯ ಬದಲಾಗ್ತಾರೆ ಅನ್ನೋ ಗುಮಾನಿ ಶುರುವಾಗುವಂತೆ ಮಾಡಿದ್ದಾರೆ.
ಅತ್ತ ಹೈಕಮಾಂಡ್ ಹೇಳಿದ ಮೇಲೆಯೂ ಕೂಡ ಬಹಿರಂಗವಾಗಿ ಹೇಳಿಕೆ ಕೊಡೋದನ್ನ ಬಿಡಲೇ ಇಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿಯೂ ಕೂಡ ಹೇಳಿಕೆಗಳು ಜೋರಾದವು. ಈ ಬೆನ್ನಲ್ಲೇ ದಲಿತ ನಾಯಕರುಗಳು ಕೂಡ ದೆಹಲಿ ಅಂಗಳಕ್ಕೆ ಹೋಗಿ ಬಂದರು. ಬಳಿಕ ಡಿಕೆ ಶಿವಕುಮಾರ್ ಕೂಡ ದೆಹಲಿ ಭೇಟಿ ನೀಡಿ, ವೇಣುಗೋಪಾಲ್ ಸೇರಿದಂತೆ ಹಲವು ನಾಯಕರನ್ನ ಭೇಟಿ ಮಾಡಿ, ಹಲವು ಮಹತ್ವದ ವಿಚಾರಗಳನ್ನ ಚರ್ಚೆ ಮಾಡಿ ಬಂದರು.
ಹೊದ ವಿಚಾರ ಏನಪ್ಪ ಅಂದ್ರೆ ದೆಹಲಿಗೆ ಹೋಗಿ ಬಂದ ಬಳಿಕ ಒಂದಿಷ್ಟು ಬದಲಾವಣೆ ಡಿಕೆ ಶಿವಕುಮಾರ್ ಮಾತಿನಲ್ಲಿ ಕಾಣಿಸ್ತಾ ಇದೆ. ಯಾವತ್ತೂ ಮಾಧ್ಯಮದ ಮುಂದೆ ಪವರ್ ಶೇರಿಂಗ್, ಅಥವಾ ನಾಯಕರುಗಳ ಮಾತಿಗೆ ಸರಿಯಾಗಿ ರಿಪ್ಲೇ ಮಾಡದೇ ಒದ್ದ ಡಿಕೆ.ಶಿವಕುಮಾರ್, ನಿನ್ನೆ ಈ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಇಷ್ಟೆಲ್ಲ ಬಹಿರಂಗವಾಗಿ ಮಾತನಾಡ್ತಾ ಇರೋ ಡಿಕೆ.ಶಿವಕುಮಾರ್ ಗೆ ಹೈ ಕಮಾಂಡ್ ಬೆಂಬಲ ಸಿಕ್ತಾ ಅನ್ನೋ ಚರ್ಚೆ ಶುರುವಾಗಿದೆ. ವರಿಷ್ಠರು ಶಿವಕುಮಾರ್ ಮನವಿಗಳಿಗೆ ಸ್ಪಂದಿಸಿ ಬಹುಪರಾಕ್ ಹೇಳಿದ್ರಾ ಅನ್ನೋದೆ ಕುತೂಹಲ.

ದೆಹಲಿಗೆ ಹೋಗಿ ಬಂದ ಬಳಿಕ ಇಡೀ ಮಾತಿನ ವರಸೆಯೇ ಬದಲಾಗಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿರೋ ಅವರು, ಕಾಂಗ್ರೆಸ್ ಪಕ್ಷ ನನ್ನನ್ನು ಉಪಮುಖ್ಯಮಂತ್ರಿ ಮಾಡಿದೆ. 90ನೇ ಇಸವಿಯಿಂದಲೇ ಮಂತ್ರಿ ಮಾಡಿ ಬೆಳೆಸಿದೆ. ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ, ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ ಹೇಗೆ? ನಾನು ಮನೆಯಲ್ಲಿ ಕೂರುವುದಕ್ಕಾ ಕಾಂಗ್ರೆಸ್ ನನಗೆ ಶಕ್ತಿ ಕೊಟ್ಟಿರುವುದು. ನಾನು ಯಾವುದೇ ಸ್ಥಾನದಲ್ಲಿದ್ದರೂ ನಾಯಕತ್ವ ವಹಿಸುತ್ತೇನೆ. ಪಕ್ಷ ಇಷ್ಟೆಲ್ಲ ನಾಯಕತ್ವ ಕೊಟ್ಟಾಗ ನನ್ನ ಲೀಡರ್ ಶಿಪ್ನಲ್ಲಿ ಮುಂದೆ ಚುನಾವಣೆ ಎದುರಿಸಬೇಕು ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
ಇನ್ನು ಕಳೆದ ಎರಡ್ಮೂರು ಬಾರಿ ನನ್ನ ನಾಯಕತ್ವದಲ್ಲೇ ಚುನಾವಣೆ ಎಂಬ ಹೇಳಿಕೆಯನ್ನೂ ಇದೀಗ ನಿನ್ನೆ ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರೋ ಅವರು, ಹೌದ್ರೀ, ನಾನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ. ಪಕ್ಷ ನನ್ನ ಡೆಪ್ಯುಟಿ ಸಿಎಂ ಮಾಡಿದೆ. ಏನೇ ಸ್ಥಾನದಲ್ಲಿ ನಾನು ಇದ್ದರೂ ನಾಯಕತ್ವ ವಹಿಸುತ್ತೇನೆ. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಕ್ಯಾಂಪೇನ್ ಕಮಿಟಿ ಅಧ್ಯಕ್ಷ ಆಗಿದ್ದೆ. ಕಳೆದ ಚುನಾವಣೆ ವೇಳೆ ಅಧ್ಯಕ್ಷ ಆಗಿದ್ದೆ. ಈಗ ಡಿಸಿಎಂ ಆಗಿದ್ದೇನೆ. ಪಕ್ಷ ನನಗೆ ಹಲವು ಜವಾಬ್ದಾರಿ ಕೊಟ್ಟು ನಾಯಕನಾಗಿ ಮಾಡಿದೆ. ನನಗೆ ಫೇಸ್ ಇದೆ, ವೈಬ್ರೇಷನ್ ಇದೆ. ನನ್ನನ್ನು ದೆಹಲಿಗೂ ಕರೆಯುತ್ತಾರೆ. ಬಿಹಾರಕ್ಕೆ ಕರೆಯುತ್ತಾರೆ. ಕೇರಳಕ್ಕೂ ಬಾ ಅಂತಾರೆ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೂ ಕರೆಯುತ್ತಾರೆ. ನನಗೆ ಲೀಡರ್ ಶಿಪ್ ಇದೆ ಅಂತ ಬೇರೆ ಬೇರೆ ರಾಜ್ಯಕ್ಕೆ ಕರೆಯುತ್ತಾರೆ. ನಿಮ್ಮನ್ನ ಕರೀತಾರಾ? ಬೇರೆಯವರನ್ನ ಕರೀತಾರಾ?
ನನಗೆ ಇರುವ ಅನುಭವ ಶಕ್ತಿ ಹಾಗೂ ವೈಬ್ರೇಷನ್ ಅನ್ನು ಪಾರ್ಟಿಗೆ ಬಳಸಬೇಕು ಎಂದು ಸಿದ್ದರಾಮಯ್ಯ ಟೀಂ ಗೆ ತಿರುಗೇಟು ನೀಡಿದ್ದಾರೆ.

ಇನ್ನು ಇದರ ಜೊತೆಗೆ ಮತ್ತೊಂದು ಹೇಳಿಕೆ ನೀಡುವ ಮೂಲಕ ಗೊಂದಲವನ್ನೂ ಸೃಷ್ಟಿ ಮಾಡಿದ್ದಾರೆ ಡಿಕೆ ಶಿವಕುಮಾರ್, ನನ್ನ ನಾಯಕತ್ವದ ಜೊತೆಗೆ ಎಲ್ಲರನ್ನೂ ಬಳಸಿಕೊಳ್ಳಬೇಕು. ಇಲ್ಲಿ ಸಿದ್ದರಾಮಯ್ಯನವರ ನಾಯಕತ್ವ ಕೂಡ ಇರುತ್ತದೆ. ಸಿದ್ದರಾಮಯ್ಯ ಕೂಡ ಇರುತ್ತಾರೆ. ಪಕ್ಷದ ಯಾವುದೇ ನಿರ್ಧಾರವನ್ನೂ ನಾನು ಗೌರವಿಸುತ್ತೇನೆ ಅಂತ ಹೇಳಿದ್ದಾರೆ. ದೆಹಲಿ ಬಳಿಕ ಸಾಮೂಹಿಕ ನಾಯಕತ್ವ ಅನ್ನೋದರ ಬಗ್ಗೆ ವರಸೆ ಬದಲಾಯಿಸಿರೋ ಡಿಕೆ ಮಾತಿನ ಮರ್ಮ ಏನು ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ.
ಒಂದು ಕಡೆ ಸಾಮೂಹಿಕ ನಾಯಕತ್ವದ ಜಪ, ಮತ್ತೊಂದು ಕಡೆ ನಾನೂ ಪಕ್ಷಕ್ಕೆ ದುಡಿದಿದ್ದೇನೆ ಅನ್ನೋ ಸಂದೇಶ, ಮಗದೊಂದು ಕಡೆ ಪಕ್ಷ ನನ್ನ ವರ್ಚಸ್ಸು ಬಳಸಿಕೊಳ್ಳಲಿ ಅನ್ನೋ ಮಾತು. ಇವೆಲ್ಲವೂ ಕೂಡ ಡಿಕೆ ಶಿವಕುಮಾರ್ ಅವರು ಹೇಳ್ತಾ ಇರೋ ಮಾತಾದರೂ, ಇದರ ಹಿಂದೆ ಇರೋ ಮರ್ಮ ಏನು ಅಂತ ಚರ್ಚೆ ಮಾಡುವ ಹಾಗೆ ಆಗಿದೆ. ಡಿಕೆ ಶಿವಕುಮಾರ್ ಮನವಿಗಳನ್ನ ಹೈ ಕಮಾಂಡ್ ಒಪ್ಪಿದೆಯಾ ಅನ್ನೋದು, ಅಥವಾ ಸಿದ್ದರಾಮಯ್ಯ ಬಿಟ್ಟರೆ ಪಕ್ಷಕ್ಕೆ ಕಷ್ಟ ಆಗುತ್ತೆ ಅನ್ನೋದನ್ನ ಏನಾದ್ರೂ ಸೂಚ್ಯವಾಗಿ ಹೇಳಿದೆಯಾ ಅನ್ನೋ ಪ್ರಶ್ನೆ ಎದ್ದಿದೆ. ಅಥವಾ ಇದೊಂದು ಬಾರಿ ನೇರವಾಗಿಯೇ ಸಿದ್ದು ಟೀಂ ಗೆ ಎಚ್ಚರಿಕೆ ಕೊಡೋಣ ಅಂತಲೇ ಹೀಗೆಲ್ಲಾ ಮಾತನಾಡಿದ್ರಾ ಅನ್ನೋ ಚರ್ಚೆ ಕೂಡ ರಾಜಕೀಯ ಪಡಸಾಲೆಯಲ್ಲಿ ಪ್ರಾರಂಭವಾಗಿದೆ.