ವಾರ, ಹಬ್ಬ ಹರಿದಿನದಂಥ ವಿಶೇಷ ಸಂದರ್ಭಗಳಲ್ಲಿ ಮನೆಯಲ್ಲಿ ತಾಮ್ರದ ಪಾತ್ರೆಗಳನ್ನು ಶುಚಿಗೊಳಿಸುತ್ತೇವೆ. ಕೆಲವರು ದೇವರ ಮನೆಯಲ್ಲಿ ತಾಮ್ರದ ವಿಗ್ರಹಗಳನ್ನಿಟ್ಟು ಪೂಜೆ ಮಾಡುತ್ತಾರೆ. ತಾಮ್ರದ ತಟ್ಟೆಯಲ್ಲಿ ಊಟ ಮಾಡುವುದು, ತಾಮ್ರದ ಲೋಟದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತನ್ನೂ ಕೇಳಿದ್ದೇವೆ. ಆದರೆ ಅವುಗಳನ್ನು ಸ್ವಚ್ಛಗೊಳಿಸುವುದು ಕಷ್ಟ. ತಾಮ್ರದ ವಸ್ತುಗಳು ಸ್ವಲ್ಪ ಬಣ್ಣ ಮಾಸಿದರೂ ನೋಡಲು ಸುಂದರವಾಗಿ ಕಾಣುವುದಿಲ್ಲ. ಮಾರುಕಟ್ಟೆಯಲ್ಲಿ ತಾಮ್ರದ ವಸ್ತುಗಳನ್ನು ಸ್ವಚ್ಛಗೊಳಿಸುವ ಪುಡಿಗಳು ದೊರೆಯುತ್ತವೆಯಾದರೂ ಅದನ್ನು ಬಳಸಿದರೆ ಫಲಿತಾಂಶ ಅಷ್ಟಕ್ಕಷ್ಟೇ.
ನಿಮ್ಮ ಮನೆಯಲ್ಲೂ ತಾಮ್ರದ ಸಾಮಗ್ರಿಗಳಿದ್ದರೆ, ನಿಮಗೂ ಅದನ್ನು ಸ್ವಚ್ಛಗೊಳಿಸುವುದು ತಲೆನೋವಾಗಿದ್ದರೆ ನಿಮಗೆ ಇಲ್ಲಿ ಒಂದೊಳ್ಳೆ ಟಿಪ್ಸ್ ಇದೆ. ಇದನ್ನು ಬಳಸಿ ನಿಮ್ಮ ಮನೆ ಮತ್ತು ಪೂಜಾ ಕೊಠಡಿಯಲ್ಲಿರುವ ತಾಮ್ರದ ದೀಪಗಳು, ತಾಮ್ರದ ಪಾತ್ರೆಗಳು, ತಾಮ್ರದ ಬಟ್ಟಲುಗಳನ್ನು ಕ್ಲೀನ್ ಮಾಡಿದರೆ ಅವು ಖಂಡಿತ ಹೊಸದರಂತೆ ಹೊಳೆಯುತ್ತವೆ.

ತಾಮ್ರದ ವಸ್ತುಗಳನ್ನು ಸ್ವಚ್ಛಗೊಳಿಸಲು ಬೇಕಾಗುವ ಪದಾರ್ಥಗಳು
ಕಡ್ಲೆಹಿಟ್ಟು – 2 ಸ್ಪೂನ್
ಅರಿಶಿನ – 1 ಸ್ಪೂನ್
ನಿಂಬೆರಸ – 1/2 ಟೀ ಸ್ಪೂನ್
ಉಪ್ಪು – 1 ಸ್ಪೂನ್
ಈ ಪದಾರ್ಥಗಳನ್ನು ಬಳಸಿ ತಾಮ್ರದ ವಸ್ತುಗಳನ್ನು ಹೀಗೆ ಸ್ವಚ್ಛಗೊಳಿಸಿ
ಒಂದು ಬೌಲ್ನಲ್ಲಿ ಕಡ್ಲೆಹಿಟ್ಟು, ಉಪ್ಪು, ಅರಿಶಿನ ಸೇರಿಸಿ ಮಿಕ್ಸ್ ಮಾಡಿ ಅದಕ್ಕೆ ನಿಂಬೆ ರಸ ಸೇರಿಸಿ, ಇದಕ್ಕೆ ಒಂದೆರಡು ಸ್ಪೂನ್ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನೀವು ಸ್ವಚ್ಛಗೊಳಿಸಬೇಕು ಎಂದುಕೊಂಡಿರುವ ತಾಮ್ರದ ಸಾಮಗ್ರಿಗಳಿಗೆ ಹಚ್ಚಿ 5 ನಿಮಿಷ ಬಿಡಿ (ಉಜ್ಜುವ ಅವಶ್ಯಕತೆ ಇಲ್ಲ). ನಂತರ ಕೈಯಿಂದ ಆ ಪೇಸ್ಟನ್ನು ಸ್ವಚ್ಛಗೊಳಿಸಿ ನೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಖಂಡಿತ ನೀವು ಬಳಸುವ ತಾಮ್ರದ ಪಾತ್ರೆಗಳು ಫಳ ಫಳ ಹೊಳೆಯುತ್ತದೆ.
ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಮತ್ತೊಂದು ವಿಧಾನವಿದೆ. ಇದಕ್ಕೆ ಕಡ್ಲೆಹಿಟ್ಟು 2 ಸ್ಪೂನ್, ಹುಳಿ ಮೊಸರು 1 ಸ್ಪೂನ್, ಹರಳು ಉಪ್ಪು 1 ಸ್ಪೂನ್, ನಿಂಬೆರಸ, ಅರ್ಧ ನಿಂಬೆ ಹೋಳು ಬೇಕು. ಒಂದು ಬೌಲ್ನಲ್ಲಿ ಇಲ್ಲಿ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಮಿಕ್ಸ್ ಮಾಡಿಕೊಳ್ಳಿ. ಇದನ್ನು ತಾಮ್ರದ ಪಾತ್ರೆಗೆ ಹಚ್ಚಿ 5ನಿಮಿಷ ಬಿಡಿ. ನಂತರ ನಿಂಬೆ ಹೋಳಿನಿಂದ ಉಜ್ಜಿ ತೊಳೆಯಿರಿ.

ತಾಮ್ರದ ಉಪಯೋಗಗಳು
ತಾಮ್ರದ ಪಾತ್ರೆಗಳನ್ನು ಬಳಸುವುದರಿಂದ ಬಹಳ ಪ್ರಯೋಜನಗಳಿವೆ. ತಾಮ್ರದ ವಸ್ತುಗಳಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಉತ್ತಮವಾಗಿವೆ. ತಾಮ್ರದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸಂಧಿವಾತ, ಜೀರ್ಣಕಾರಿ ಸಮಸ್ಯೆಗಳು, ದುರ್ಬಲತೆಯಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ಇಡುವ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸುತ್ತವೆ. ತಾಮ್ರವು ದೇಹಕ್ಕೆ ಹಾನಿಕಾರಕವಾದ ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು, ಶಿಲೀಂಧ್ರಗಳು ಇತ್ಯಾದಿಗಳನ್ನು ಕೊಲ್ಲುತ್ತದೆ, ನೀರನ್ನು ಕುಡಿಯಲು ಸುರಕ್ಷಿತಗೊಳಿಸುತ್ತದೆ. ಅಷ್ಟೇ ಅಲ್ಲ, ತಾಮ್ರದ ಪಾತ್ರೆಯಲ್ಲಿ ರಾತ್ರಿಯಿಡೀ ಇಟ್ಟ ನೀರು ತಾಮ್ರದಿಂದ ಪ್ರಯೋಜನಕಾರಿ ಗುಣವನ್ನು ಪಡೆಯುತ್ತದೆ. ತಾಮ್ರವು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಖನಿಜಗಳಲ್ಲಿ ಒಂದಾಗಿದೆ. ಇದು ಉತ್ಕರ್ಷಣ ನಿರೋಧಕ, ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ.

ತಾಮ್ರವು ಹೃದಯ ಕಾಯಿಲೆಯನ್ನು ತಡೆಯುತ್ತದೆ. ಅಷ್ಟೇ ಅಲ್ಲ, ತಾಮ್ರವು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ಗೆ ಪ್ರಮುಖ ಕಾರಣ ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳು. ತಾಮ್ರವು ಅವುಗಳ ವಿರುದ್ಧ ಹೋರಾಡುತ್ತದೆ ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಆಧಾರದ ಮೇಲೆ ಪ್ರಕಟಿಸಲಾಗಿದೆ. ಬಳಸುವ ಮುನ್ನ ತಜ್ಞರ ಸಲಹೆ ಪಡೆಯಿರಿ.