ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ 1ನೇ ತರಗತಿಗೆ ಪ್ರವೇಶಾತಿ ಪಡೆಯಲು ಇಚ್ಛಿಸುವ ಮಕ್ಕಳು ಕನಿಷ್ಠ ಐದುವರೆ ವರ್ಷದವರಾಗಿರಬೇಕು ಎಂದು ಆದೇಶ ಹೊರಡಿಸಿತ್ತು. ಇದೀಗ ಕೇಂದ್ರ ಸರ್ಕಾರ ಈ ವಯೋಮಿತಿಯನ್ನು 6ಕ್ಕೆ ಏರಿಸುವಂತೆ ಸುತ್ತೋಲೆ ಹೊರಡಿಸಿರುವುದು ಶಾಲಾ ಸಿಬ್ಬಂದಿ ಹಾಗೂ ಪೋಷಕರಿಗೆ ಮತ್ತಷ್ಟು ಗೊಂದಲಾವುಂಟು ಮಾಡಿದೆ.
2025-26ನೇ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ 1ನೇ ತರಗತಿಗೆ ಪ್ರವೇಶಾತಿ ಪಡೆಯ ಬಯಸುವ ಮಕ್ಕಳು ಕನಿಷ್ಠ 6 ವರ್ಷದವರಾಗಿರಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) 2020, ಮಕ್ಕಳ ಶಿಕ್ಷಣ ಹಕ್ಕು(ಆರ್ಟಿಇ)ಕಾಯ್ದೆ 2009ರ ಅಡಿಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಫೆ.15ರಂದು ಸುತ್ತೋಲೆ ಹೊರಡಿಸಿರುವ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೂಚನೆಯನ್ನು ರವಾನಿಸಿದೆ. ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಈ ನಿರ್ದೇಶನವನ್ನು ಪಾಲಿಸಿ, ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಅದನ್ನು ಅನುಸರಿಸಲಾಗಿದೆಯೇ ಎಂದು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.

ಕೇಂದ್ರ ಸರ್ಕಾರ ಈ ಹಿಂದೆಯೇ ಅಂದರೆ ಕಳೆದ ವರ್ಷದ ಫೆಬ್ರವರಿಯಲ್ಲಯೇ 2024-25ನೇ ಸಾಲಿನ ಶೈಕ್ಷಣಿಕ ದಾಖಲಾತಿ ಸಂದರ್ಭದಲ್ಲಿಯೇ 1ನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಯನ್ನು 6 ವರ್ಷಕ್ಕೆ ಬದಲಾಯಿಸುವಂತೆ ಆದೇಶ ಹೊರಡಿಸಿತ್ತು. ಇದೀಗ ಮತ್ತೊಮ್ಮೆ ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದು ಜೂನ್ 2025ರಿಂದ ಪ್ರಾರಂಭವಾಗಲಿರುವ ಶೈಕ್ಷಣಿಕ ಸಾಲಿನ ದಾಖಲಾತಿ ಸಮಯದಲ್ಲಿ ಈ ನಿಯಮವನ್ನು ಪಾಲಿಸುವಂತೆ ಸೂಚಿಸಿದೆ.
ಇನ್ನೂ ರಾಜ್ಯ ಸರ್ಕಾರ ನಿಗದಿಗೊಳಿಸಿರುವುದಕ್ಕಿಂತ 6 ತಿಂಗಳ ಹೆಚ್ಚಿನ ವಯೋಮಿತಿಯನ್ನು ಕೇಂದ್ರ ಸರ್ಕಾರ ನಿಗದಿಗೊಳಿಸಿದ್ದು, ಈ ಕುರಿತಂತೆ ಏನಾದರೂ ಆಕ್ಷೇಪಣೆಯಿದ್ದಲ್ಲಿ ಸಲ್ಲಿಸಬಹುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಸಮಾಲೋಚನಾ ಸಭೆ ನಡೆಸಿದ್ದು, ಇದರಿಂದ ಪೋಷಕರು ಹಾಗೂ ಶಾಲಾ ಸಿಬ್ಬಂದಿಗಳಲ್ಲಿ ಗೊಂದಲವುಂಟಾಗಿದ್ದು, 2025-26ರ ದಾಖಲಾತಿ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಬೇಕೆಂದು ಕೋರಿ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ.
2022ರ ನ.15ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಂತೆ 2023-24 ಹಾಗೂ 2024-25ನೇ ಶೈಕ್ಷಣಿಕ ಸಾಲಿನಲ್ಲಿ 1ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಐದೂವರೆ ವರ್ಷ ವಯಸ್ಸನ್ನು ನಿಗದಿಪಡಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಜೂನ್ 2025ನೇ ಸಾಲಿಗೆ ಕನಿಷ್ಠ 6 ವರ್ಷ ವಯಸ್ಸಾಗಿರಬೇಕು ಎಂದು ಹೇಳುತ್ತಿದೆ. ಈ ಕುರಿತಂತೆ ಕೇಂದ್ರ ಸರ್ಕಾರದಿಂದ ಮತ್ತಷ್ಟು ಸ್ಪಷ್ಟನೆಯನ್ನು ಕೋರಲಿದ್ದೇವೆ. ಒಂದು ವೇಳೆ 6 ವರ್ಷ ವಯೋಮಿತಿ ಎಂದು ನಿಗದಿಪಡಿಸಿದರೆ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ರಾಜ್ಯ ಶಿಕ್ಷಣ ಇಲಾಖೆಯ ಅಧಿಕಾರಿಯಬ್ಬರು ಹೇಳಿದ್ದಾರೆ.
ಕೇಂದ್ರದ ಮೊರೆ ಹೋಗಲಿರುವ ಖಾಸಗಿ ಶಾಲಾ ಮಾಲೀಕರು:
ರಾಜ್ಯ ಸರ್ಕಾರದ ಆದೇಶದಂತೆ 1ನೇ ತರಗತಿಗೆ 5.5 ವರ್ಷ ದಾಟಿದ ಮಕ್ಕಳನ್ನು ಸೇರಿಸಿಕೊಳ್ಳಬೇಕೋ ಅಥವಾ ಕೇಂದ್ರ ಸರ್ಕಾರದ ಸೂತ್ತೋಲೆಯನ್ನು ಅನುಸರಿಸಿ ೬ ವರ್ಷಕ್ಕೆ ಸೇರಿಸಿಕೊಳ್ಳಬೇಕೋ ಎಂಬ ಗೊಂದಲಕ್ಕೆ ತೆರೆ ಎಳೆಯಲು ಪ್ರಯತ್ನಿಸಲಾಗುವುದು. ಈ ಕುರಿತಂತೆ ಕೇಂದ್ರ ಶಿಕ್ಷಣ ಇಲಾಖೆಗೆ ಪತ್ರ ಬರೆದು ಕನಿಷ್ಠ ವಯೋಮಿತಿಯ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಲಾಗುವುದು. ಸ್ಪಷ್ಟೀಕರಣದ ನಂತರವೇ 2025-26ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ವೇಳೆ ನಿಯಮವನ್ನು ಪಾಲಿಸಲಾಗುವುದು ಎಂದು ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾಸಗಿ ಶಾಲೆಗಳ ನಿರ್ವಾಹಣಾ ಸಂಘದ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.