ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 723ರ ಎಪಿಸೋಡ್ ಕಥೆ ಇಲ್ಲಿದೆ. ಬರ್ತ್ಡೇಗಾಗಿ ಅಪ್ಪ ಕೊಡಿಸಿದ ಫೋನ್ ತನ್ವಿಗೆ ಬಹಳ ಇಷ್ಟವಾಗುತ್ತದೆ. ಆದ್ದರಿಂದ ಅಮ್ಮ ಕೊಡಿಸಿದ ಫೋನನ್ನು ನಿರಾಕರಿಸುತ್ತಾಳೆ. ತನ್ವಿ ವರ್ತನೆಯಿಂದ ಭಾಗ್ಯಾ ಬೇಸರಗೊಳ್ಳುತ್ತಾಳೆ. ತನ್ಮಯ್ ಈ ವಿಚಾರದ ಬಗ್ಗೆ ಅಕ್ಕನ ಬಳಿ ಬೇಸರ ವ್ಯಕ್ತಪಡಿಸುತ್ತಾನೆ. ಮರುದಿನ ತನ್ವಿ ಸಿಮ್ ಆಕ್ಟಿವೇಟ್ ಆಗಿರುತ್ತದೆ. ಈ ಫೋನಿನಲ್ಲಿ ಮೊದಲು ಅಮ್ಮನಿಗೇ ಕರೆ ಮಾಡೋಣ ಎಂದು ತನ್ವಿ ತನ್ನ ರೂಮ್ನಿಂದಲೇ ಭಾಗ್ಯಾಗೆ ಕರೆ ಮಾಡಿ ಅಮ್ಮನಿಗೆ ಐ ಲವ್ ಯೂ ಹೇಳುತ್ತಾಳೆ. ಹಿಂದಿನ ದಿನ ತಾನು ನಡೆದುಕೊಂಡ ರೀತಿಗೆ ಸಾರಿ ಕೂಡಾ ಕೇಳುತ್ತಾಳೆ.
ತನ್ನನ್ನು ತನ್ನ ಜೀವನದ ಅತ್ಯಂತ ಮುಖ್ಯವಾದ ವ್ಯಕ್ತಿ ಎಂದು ಮಗಳು ಪರಿಗಣಿಸಿದ್ದಕ್ಕೆ ಭಾಗ್ಯಾ ಖುಷಿಯಾಗುತ್ತಾಳೆ. ಇತ್ತ ತಾಂಡವ್ ಕೂಡಾ ತನ್ವಿ ನಂಬರ್ಗೆ ಕರೆ ಮಾಡುತ್ತಾನೆ. ಆದರೆ ನಂಬರ್ ಬ್ಯುಸಿ ಇರುತ್ತದೆ. ತನ್ವಿ, ಭಾಗ್ಯಾಗೆ ಮೊದಲು ಕರೆ ಮಾಡಿದ್ದನ್ನು ಕೇಳಿ ತಾಂಡವ್ ಸಿಟ್ಟಾಗುತ್ತಾನೆ. ಬರ್ತ್ಡೇ ಮಾಡಿದ್ದು ನಾನು, ಮೊಬೈಲ್ ಕೊಡಿಸಿದ್ದು ನಾನು, ಆದರೆ ಮೊದಲ ಕಾಲ್ ಮಾಡಿದ್ದು ಮಾತ್ರ ಆ ಎಮ್ಮೆ ಭಾಗ್ಯಾಗೆ ಎಂದು ಕೋಪಗೊಂಡು ಫೋನ್ ಡಿಸ್ಕನೆಕ್ಟ್ ಮಾಡುತ್ತಾನೆ. ಅಪ್ಪ ಆಫೀಸ್ ಕೆಲಸದಲ್ಲಿ ಬ್ಯುಸಿ ಇರಬಹುದು, ಮತ್ತೆ ಮಾತನಾಡಿದರೆ ಆಯ್ತು ಎಂದು ತನ್ವಿ ಮತ್ತೆ ಅಪ್ಪನಿಗೆ ಕರೆ ಮಾಡುವುದಿಲ್ಲ.
ಭಾಗ್ಯಾ ತರಕಾರಿ ತರಲು ಮಾರ್ಕೆಟ್ಗೆ ಹೋಗುತ್ತಾಳೆ. ಅದೇ ಮಾರ್ಕೆಟ್ಗೆ ಶ್ರೇಷ್ಠಾ ಕೂಡಾ ಬರುತ್ತಾಳೆ. ತರಕಾರಿ ಅಂಗಡಿಯಲ್ಲಿ ಭಾಗ್ಯಾ ಚೌಕಾಸಿ ಮಾಡುವುದನ್ನು ನೋಡಿ ತಾನೇ ಮಾತನಾಡಿಸಿ ಕೊಂಕು ಶುರು ಮಾಡುತ್ತಾಳೆ. ಏನು ಭಾಗ್ಯಾ ಕೆಲಸ ಹೋಯ್ತು, ತರಕಾರಿ ಖರೀದಿಸಲು ದುಡ್ಡು ಇಲ್ವಾ ಎಂದು ಕೇಳುತ್ತಾಳೆ. ನಿನ್ನ ಜೊತೆ ಮಾತನಾಡುವುದು ಏನೂ ಇಲ್ಲ ಎಂದು ಭಾಗ್ಯಾ ಅಲ್ಲಿಂದ ಹೋಗುತ್ತಾಳೆ. ಆದರೆ ಶ್ರೇಷ್ಠಾ ಮಾತ್ರ ಭಾಗ್ಯಾಳನ್ನು ಬಿಡುವುದಿಲ್ಲ. ನಿನಗೆ ದುಡ್ಡು ಮಾಡುವುದನ್ನು ನಾನು ಹೇಳಿಕೊಡುತ್ತೇನೆ. ನಿನ್ನ ಕತ್ತಿನಲ್ಲೇ ಪರಿಹಾರ ಇದೆ, ಈ ತಾಳಿಯನ್ನು ಮಾರಿಬಿಡು, ಸ್ವಲ್ಪ ದುಡ್ಡು ಸಿಗುತ್ತದೆ, ಗಂಡನೇ ನಿನ್ನ ಜೊತೆ ಇಲ್ಲವೆಂದ ಮೇಲೆ ಈ ತಾಳಿ ಕಟ್ಟಿಕೊಂಡು ಏನು ಪ್ರಯೋಜನ ಎಂದು ಕೇಳುತ್ತಾಳೆ.
ಶ್ರೇಷ್ಠಾ, ತಾಳಿಗೆ ಕೈ ಹಾಕಿದ್ದನ್ನು ಕಂಡು ಭಾಗ್ಯಾ ಸಿಟ್ಟು ನೆತ್ತಿಗೇರುತ್ತದೆ. ಕೈ ತೆಗಿ ಎಂದರೂ ಶ್ರೇಷ್ಠಾ ಕೈ ತೆಗೆಯುವುದಿಲ್ಲ. ಕೋಪಗೊಂಡ ಭಾಗ್ಯಾ ಅವಳ ಕೆನ್ನೆಗೆ ಬಾರಿಸುತ್ತಾಳೆ. ನನಗೆ ಹೊಡೆಯಲು ನಿನಗೆ ಎಷ್ಟು ಧೈರ್ಯ ಎಂದು ಶ್ರೇಷ್ಠಾ ಅರಚುತ್ತಾಳೆ. ಅಷ್ಟರಲ್ಲಿ ಮಾರ್ಕೆಟ್ನಲ್ಲಿದ್ದವರು ಸುತ್ತಮುತ್ತ ನೆರೆಯುತ್ತಾರೆ. ಇದು ತಾಳಿ , ಗಂಡನ ಆಯಸ್ಸನ್ನು ಬಯಸುವ ಮಂಗಳಸೂತ್ರ, ಇದರಲ್ಲಿ ಹೆಣ್ಣನ್ನು ಹೆತ್ತವರ ಕಷ್ಟ ಅಡಗಿದೆ, ಇದನ್ನೇನು ನೀನು ಜಾತ್ರೆಯಲ್ಲಿ ಕೊಂಡುಕೊಂಡ ಸರ ಎಂದು ತಿಳಿದುಕೊಂಡಿದ್ದೀಯ ಎಂದು ಭಾಗ್ಯಾ ಕೇಳುತ್ತಾಳೆ. ಬೇರೆಯವರ ಗಂಡನನ್ನು ಕಸಿದುಕೊಳ್ಳೋಳಿಗೆ ತಾಳಿ ಬೆಲೆ ಏನು ಗೊತ್ತು? ಮುತ್ತೈದೆಗೆ ಇರೋ ಮರ್ಯಾದೆ ಈ ಮೂರು ಬಿಟ್ಟವಳಿಗೆ ಇರೋಲ್ಲ, ಅವಳ ಗಂಡ ಅವಳ ತಾಳಿ ಅವಳು ಏನು ಬೇಕಾದರೂ ಮಾಡಿಕೊಳ್ಳುತ್ತಾಳೆ, ನೀನು ಇಲ್ಲಿಂದ ಹೋಗದಿದ್ದರೆ ನಾವೆಲ್ಲಾ ನಿನ್ನನ್ನು ವಿಚಾರಿಸಿಕೊಳ್ಳುತ್ತೇವೆ ಎಂದು ತರಕಾರಿ ಮಾರುವವರು ಶ್ರೇಷ್ಠಾಳಿಗೆ ಎಚ್ಚರಿಕೆ ನೀಡುತ್ತಾರೆ.
ತನಗಾದ ಅವಮಾನಕ್ಕೆ ಶ್ರೇಷ್ಠಾ ಕೋಪಕೊಂಡು ಅಲ್ಲಿಂದ ಹೊರಡುತ್ತಾಳೆ. ತಾಳಿ ತಾಳಿ ಎನ್ನುವ ಭಾಗ್ಯಾಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ, ಅದಕ್ಕಾಗಿ ಏನಾದರೂ ಮಾಡಲೇಬೇಕು ಎಂದು ಶೌರ್ಯನಿಗೆ ಕರೆ ಮಾಡಿ ನಾನು ಹಾಗೂ ತಾಂಡವ್ ಇವತ್ತೇ ಮದುವೆ ಆಗಬೇಕು, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡು ಎನ್ನುತ್ತಾಳೆ. ಶೌರ್ಯ ಉತ್ತರ ಕೊಡುವ ಮುನ್ನವೇ ಶ್ರೇಷ್ಠಾ ಫೋನ್ ಕಟ್ ಮಾಡುತ್ತಾಳೆ. ಇತ್ತ ತಾಂಡವ್, ತನ್ವಿ ವಿಚಾರಕ್ಕೆ ಬೇಸರ ಮಾಡಿಕೊಂಡಿರುತ್ತಾನೆ. ಫೋನ್ ಡಿಸ್ಕನೆಕ್ಟ್ ಮಾಡಿ ಎಷ್ಟು ಸಮಯ ಆಯ್ತು, ಇದುವರೆಗೂ ಏಕೆ ಕಾಲ್ ಮಾಡಿಲ್ಲ ತನ್ವಿ, ಈ ಶ್ರೇಷ್ಠಾ ಬೇರೆ ಎಲ್ಲಿ ಹೋದಳೋ ಎಂದು ಗೊಣಗುತ್ತಾನೆ. ಅಷ್ಟರಲ್ಲಿ ಶ್ರೇಷ್ಠಾ ಬರುತ್ತಾಳೆ. ನೀನು ಇವತ್ತು ಆಫೀಸಿಗೆ ಹೋಗಬಾರದು ಎಂದು ಹೇಳುತ್ತಾಳೆ. ನೀನು ಹೇಳಿದ ಹಾಗೆ ಕುಣಿಯಲು ನಾನು ನಿನ್ನ ಮನೆ ಆಳಲ್ಲ ಎಂದು ತಾಂಡವ್ ಹೇಳುತ್ತಾನೆ. ಕುಣಿಯಲೇಬೇಕು ಎಂದು ಶ್ರೇಷ್ಠಾ, ತಾಂಡವ್ಗೆ ಮದುವೆ ಬಟ್ಟೆಗಳನ್ನು ಕೊಡುತ್ತಾನೆ.
ಶ್ರೇಷ್ಠಾ ಹೇಳಿದಂತೆ ಶೌರ್ಯ, ಮದುವೆಗೆ ಎಲ್ಲಾ ವ್ಯವಸ್ಥೆ ಮಾಡುತ್ತಾನಾ? ತಾಂಡವ್, ಶ್ರೇಷ್ಠಾಗೆ ತಾಳಿ ಕಟ್ಟೇ ಬಿಡುತ್ತಾನಾ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.