ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 740ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ಪ್ರತಿದಿನ ಕಷ್ಟಪಡುವಂತಾಗಿದೆ. ಹೇಗಾದರೂ ಮಾಡಿ ಮಕ್ಕಳ ಓದಿಗೆ, ಮನೆ ನಡೆಸಲು, ಇಎಂಐ ಕಟ್ಟಲು ಹಣ ಹೊಂದಿಸಲೇಬೇಕು ಎಂಬ ಹಠದಿಂದ ಭಾಗ್ಯಾ ಕಷ್ಟವಾದರೂ ಜೋಕರ್ ಕೆಲಸ ಮಾಡುತ್ತಿದ್ದಾಳೆ. ಭಾಗ್ಯಾ ಈ ಕೆಲಸ ಮಾಡುತ್ತಿರುವುದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಆದರೆ ಫ್ರೆಂಡ್ ಬರ್ತ್ಡೇ ಪಾರ್ಟಿಗೆಂದು ರೆಸಾರ್ಟ್ಗೆ ಬಂದ ಗುಂಡಣ್ಣನಿಗೆ ಅಮ್ಮ ಮಾಡುತ್ತಿರುವ ಕೆಲಸದ ಬಗ್ಗೆ ಗೊತ್ತಾಗಿದೆ.
ಅಮ್ಮ ಮನೆಗೆ ಬಂದ ಕೂಡಲೇ ಅವಳಿಗೆ ಕೈ ತುತ್ತು ತಿನ್ನಿಸುವ ಗುಂಡಣ್ಣ, ದಣಿದ ಪಾದಗಳಿಗೆ ರಿಲಾಕ್ಸ್ ಆಗಲಿ ಎಂದು ಬಿಸಿ ನೀರಿನ ಶಾಖ ಕೊಡುತ್ತಾನೆ. ಅಮ್ಮನ ಭುಜಗಳನ್ನು ಒತ್ತುತ್ತಾನೆ. ಮಗನ ಪ್ರೀತಿ ಕಂಡು ಭಾಗ್ಯಾ ಭಾವುಕಳಾಗುತ್ತಾಳೆ. ಮತ್ತೊಂದೆಡೆ ತಾಂಡವ್ಗೆ ಭಾಗ್ಯಾ ಗೆದ್ದಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರ ಜೊತೆಗೆ ಅವಳಿಗೆ ಯಾವುದೋ ಹೋಟೆಲ್ನಲ್ಲಿ ಕೆಲಸ ಸಿಕ್ಕಿದೆ ಎಂದು ಗೊತ್ತಾಗಿದೆ. ಅದನ್ನೂ ಹೇಗಾದರೂ ಮಾಡಿ ಹಾಳು ಮಾಡಬೇಕು. ಇಲ್ಲವಾದರೆ ಭಾಗ್ಯಾ ಮುಂದಿನ ತಿಂಗಳ ಇಎಂಐ ಕಟ್ಟಿಬಿಡುತ್ತಾಳೆ ಎಂದು ಯೋಚಿಸುತ್ತಾನೆ. ಏನಾದರೂ ಮಾಡೋಣ ಡೋಂಟ್ ವರಿ ಎಂದು ಶ್ರೇಷ್ಠಾ, ತಾಂಡವ್ಗೆ ಸಮಾಧಾನ ಮಾಡುತ್ತಾಳೆ.
ಅಮ್ಮನ ಕಷ್ಟವನ್ನು ನೆನೆದ ಗುಂಡಣ್ಣನಿಗೆ ಬಹಳ ನೋವಾಗುತ್ತದೆ. ನಮ್ಮ ಸ್ಕೂಲ್ ಫೀಸ್ ಕಟ್ಟಲೆಂದೇ ಅಮ್ಮ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದಾಗಿನಿಂದ ಗುಂಡಣ್ಣನ ಮನಸ್ಸು ಒಡೆದಿದೆ. ಅಮ್ಮನಿಗೆ ಬಹಳ ಕಷ್ಟವಾಗುತ್ತಿದೆ. ಹೇಗಾದರೂ ಮಾಡಿ ನಾನು ಅವಳಿಗೆ ಸಹಾಯ ಮಾಡಬೇಕೆಂದು ತನ್ಮಯ್ ನಿರ್ಧರಿಸುತ್ತಾನೆ. ಏನು ಮಾಡುವುದು ಎಂದು ಯೋಚಿಸುವಾಗ ಅವನಿಗೆ ಸ್ಕೂಲ್ ಬಳಿ ಶೂ ಪಾಲಿಶ್ ಮಾಡುವ ವ್ಯಕ್ತಿ ನೆನಪಾಗುತ್ತಾನೆ. ನಾನೂ ಶೂ ಪಾಲಿಶ್ ಮಾಡಿ ಹಣ ಸಂಪಾದನೆ ಮಾಡಿದರೆ ಅಮ್ಮನಿಗೆ ಸ್ವಲ್ಪವಾದರೂ ಹೆಲ್ಪ್ ಆಗುತ್ತದೆ ಎಂದು ಯೋಚಿಸಿ ಹೇಗೋ ಶೂ ಪಾಲಿಶ್ ಕಿಟ್ ಖರೀದಿಸುತ್ತಾನೆ. ಆದರೆ ಗುಂಡಣ್ಣನ ಲಂಚ್ ಬ್ಯಾಗ್ನಲ್ಲಿ ಅದನ್ನು ನೋಡಿ ಭಾಗ್ಯಾ ಇದೆಲ್ಲಾ ಏಕೆ ಇಟ್ಟುಕೊಂಡಿದ್ದೀಯ ಎಂದು ಕೇಳುತ್ತಾಳೆ.
ಅದು ಹೇಗೆ ಅಲ್ಲಿ ಬಂತು ನನಗೆ ಗೊತ್ತಿಲ್ಲ ಎಂದು ಗುಂಡಣ್ಣ ಸುಳ್ಳು ಹೇಳುತ್ತಾನೆ. ಮಗನ ಮಾತನ್ನು ನಂಬುವ ಭಾಗ್ಯಾ ಸರಿ ಇದನ್ನೆಲ್ಲಾ ನನ್ನ ಬಳಿ ಇರಲಿ ಎಂದು ತನ್ನ ಬ್ಯಾಗ್ನಲ್ಲಿಟ್ಟುಕೊಳ್ಳುತ್ತಾಳೆ. ಮಗನನ್ನು ಸ್ಕೂಲ್ ಬಳಿ ಇಳಿಸಿ ತಾನು ಕೆಲಸಕ್ಕೆ ಹೊರಡುತ್ತಾಳೆ. ಗುಂಡಣ್ಣ ಸ್ಕೂಲ್ನತ್ತ ಹೆಜ್ಜೆ ಹಾಕುತ್ತಾ, ಅಯ್ಯೋ ಅಮ್ಮನಿಗೆ ಸಹಾಯ ಮಾಡಲು ಇದ್ದ ದಾರಿ ಮಿಸ್ ಆಯ್ತು ಏನು ಮಾಡೋದು ಎಂದು ಯೋಚಿಸುತ್ತಾನೆ. ಸ್ಕೂಲ್ನತ್ತ ಹೋಗುತ್ತಿದ್ದವನು ಶೂ ಪಾಲಿಶ್ ಮಾಡುವವನತ್ತ ಹೆಜ್ಜೆ ಹಾಕುತ್ತಾನೆ. ನನಗೆ ನಿಮ್ಮಿಂದ ಸಹಾಯ ಆಗಬೇಕು, ನನ್ನ ಸ್ಕೂಲ್ ಪ್ರಾಜೆಕ್ಟ್ಗೆ ಶೂ ಪಾಲಿಶ್ ಕಿಟ್ ಬೇಕಿತ್ತು, ಸಂಜೆ ವಾಪಸ್ ಕೊಡುತ್ತೇನೆ ಎಂದು ಮನವಿ ಮಾಡುತ್ತಾನೆ. ಆತ ಗುಂಡಣ್ಣನಿಗೆ ಬ್ರಷ್ ಹಾಗೂ ಪಾಲಿಶ್ ಕೊಡುತ್ತಾನೆ.
ಇಲ್ಲೇ ಇದ್ದರೆ ಯಾರಾದರೂ ನೋಡುತ್ತಾರೆ ಎಂದುಕೊಂಡು ಪಕ್ಕದ ರಸ್ತೆಗೆ ಹೋಗುವ ಗುಂಡಣ್ಣ ಅಲ್ಲಿ 2 ಇಟ್ಟಿಗೆಗಳನ್ನು ಇಟ್ಟುಕೊಂಡು ಶೂ ಪಾಲಿಶ್.. ಶೂ ಪಾಲಿಶ್ ಎಂದು ಅರಚುತ್ತಾನೆ. ಅವನನ್ನು ನೋಡಿ ಜನರು ಬಂದು ಶೂ ಪಾಲಿಶ್ ಮಾಡಿಸಿಕೊಳ್ಳುತ್ತಾರೆ. ಯಾರದೋ ಮೊಬೈಲ್ ಪಡೆದು ಅಜ್ಜಿ ನಂಬರ್ಗೆ ಕರೆ ಮಾಡುವ ಗುಂಡಣ್ಣ, ನನ್ನನ್ನು ಕರೆದುಕೊಂಡು ಹೋಗಲು ಯಾರೂ ಬರುವುದು ಬೇಡ, ನಾನು ಫ್ರೆಂಡ್ ಮನೆಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಾನೆ. ಸ್ಕೂಲ್ಗೆ ಚಕ್ಕರ್ ಹಾಕಿ ಸಂಜೆವರೆಗೂ ಶೂ ಪಾಲಿಶ್ ಮಾಡುವ ಗುಂಡಣ್ಣ ದೊರೆತ ಹಣವನ್ನು ಎಣಿಸಿ ಜೇಬಿನೊಳಗೆ ಹಾಕಿಕೊಳ್ಳುತ್ತಾನೆ. ಶೂ ಕಿಟ್ ವಾಪಸ್ ಕೊಟ್ಟು ಮನೆಕಡೆ ಬರುತ್ತಾನೆ.
ಗುಂಡಣ್ಣ ಇಷ್ಟು ಹೊತ್ತಾದರೂ ಮನೆಗೆ ಬಂದಿಲ್ಲ ಎಂದು ಎಲ್ಲರೂ ಗಾಬರಿ ಆಗಿರುತ್ತಾರೆ. ಅಷ್ಟರಲ್ಲಿ ತನ್ಮಯ್ ಬರುತ್ತಾನೆ. ಅವನ ಬಟ್ಟೆ ಕಪ್ಪು ಕಲೆ ಆಗಿದ್ದನ್ನು ನೋಡಿ ಏನಾಯ್ತು ಎಂದು ಕೇಳುತ್ತಾರೆ. ಏನಿಲ್ಲ ಆಟ ಆಡುತ್ತಿದ್ದೆ ಅದಕ್ಕೆ ಇಷ್ಟು ಕೊಳೆ ಆಗಿದೆ, ನಾಳೆಯಿಂದ ಈ ರೀತಿ ಆಗುವುದಿಲ್ಲ ಎಂದು ರೂಮ್ನೊಳಗೆ ಹೋಗುತ್ತಾನೆ. ಭಾಗ್ಯಾ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಾಳೆ. ನೀನು ಇಲ್ಲದ ಸಮಯದಲ್ಲಿ ನಿನ್ನ ಮಗ ಏನು ಅವಾಂತರ ಮಾಡಿಕೊಂಡಿದ್ದಾನೆ ನೋಡುಹೋಗು ಎಂದು ಸುನಂದಾ ಮಗಳಿಗೆ ಹೇಳುತ್ತಾಳೆ. ಭಾಗ್ಯಾ ರೂಮ್ಗೆ ಬಂದು ಮಗನನ್ನು ಕರೆಯುತ್ತಾಳೆ. ಆದರೆ ಆತ ಅಲ್ಲಿ ಇರುವುದಿಲ್ಲ. ಬಟ್ಟೆಗಳನ್ನು ನೋಡಿ ಭಾಗ್ಯಾ ಇದೇನು ಇಷ್ಟು ಕೊಳೆ ಮಾಡಿಕೊಂಡಿದ್ದಾನೆ ಎನ್ನುತ್ತಾಳೆ. ಜೇಬಿನಲ್ಲಿ ದುಡ್ಡು ನೋಡಿ ಇಷ್ಟು ದುಡ್ಡು ಇವನ ಬಳಿ ಹೇಗೆ ಬಂತು ಎಂದುಕೊಂಡು ಗಾಬರಿಯಾಗುತ್ತಾಳೆ.
ಮಗ ಶೂ ಪಾಲಿಶ್ ಮಾಡುತ್ತಿರುವ ಕೆಲಸ ಭಾಗ್ಯಾಗೆ ಗೊತ್ತಾಗುವುದಾ? ಗುಂಡಣ್ಣ ಸ್ಕೂಲ್ ಫೀಸನ್ನು ಭಾಗ್ಯಾ ಹೇಗೆ ಹೊಂದಿಸುತ್ತಾಳೆ? ನಾಳಿನ ಸಂಚಿಕೆಯಲ್ಲಿ ತಿಳಿಯಲಿದೆ.