ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 760ರ ಎಪಿಸೋಡ್ ಕಥೆ ಇಲ್ಲಿದೆ. ಇಷ್ಟು ದಿನಗಳಿಂದ ಕೆಲಸ ಹುಡುಕುತ್ತಿದ್ದ ಪೂಜಾಗೆ ಇಂಟರ್ವ್ಯೂ ಇಲ್ಲದೆಯೇ ಕೆಲಸ ಸಿಕ್ಕಿದೆ, ಜಿಮ್ವೊಂದರಲ್ಲಿ ರಿಸಪ್ಷನಿಸ್ಟ್ ಕೆಲಸ ಪಡೆದಿರುವ ಪೂಜಾಗೆ ನಮ್ಮ ಬಾಸ್ ಯಾರೆಂದು ತಿಳಿಯುವ ಕುತೂಹಲ ಹೆಚ್ಚಾಗುತ್ತದೆ. ಅದಕ್ಕೆ ಅವಕಾಶ ದೊರೆಯದೆ ಇದ್ದಾಗ ಕೆಲಸ ಬಿಟ್ಟು ಹೋಗಲು ನಿರ್ಧರಿಸುತ್ತಾಳೆ. ಆಗ ಪೂಜಾ ಕಾಲೇಜ್ ಸೀನಿಯರ್ ಕಿಶನ್ ಅವಳ ಮುಂದೆ ಬಂದು ನಿಲ್ಲುತ್ತಾನೆ.
ಕಾಲೇಜಿನಲ್ಲಿ ಓದುವಾಗ ಪೂಜಾ ಮಾಡಿದ ಅವಾಂತರಗಳನ್ನು ಕಿಶನ್ ನೆನಪಿಸಿಕೊಳ್ಳುತ್ತಾನೆ. ಪರೀಕ್ಷೆ ಬರೆಯುವಾಗ ಪೂಜಾ, ಕಾಪಿಚೀಟಿಗಳನ್ನು ಕಿಶನ್ಗೆ ಕೊಟ್ಟು ತಾನೂ ಇಟ್ಟುಕೊಳ್ಳುತ್ತಾಳೆ. ಪರೀಕ್ಷೆ ಮೇಲ್ವಿಚಾರಕರಿಗೆ ಪೂಜಾ ಮೇಲೆ ಅನುಮಾನ ಉಂಟಾಗಿ ಅವಳ ಬಳಿ ಚೀಟಿ ಇದೆಯೇ ಎಂಬುದನ್ನು ಚೆಕ್ ಮಾಡಲು ಮಹಿಳಾ ಮೇಲ್ವಿಚಾರಕರನ್ನು ಕರೆಸಲು ಹೋಗುತ್ತಾರೆ. ಅಷ್ಟರಲ್ಲಿ ಪೂಜಾ ತನ್ನ ಬಳಿ ಇದ್ದ ಚೀಟಿಗಳನ್ನು ಕಿಶನ್ ಬಳಿ ಎಸೆಯುತ್ತಾಳೆ. ಮಹಿಳಾ ಪರೀಕ್ಷಾ ಮೇಲ್ವಿಚಾರಕರು ಬಂದು ಪೂಜಾಗಳನ್ನು ಚೆಕ್ ಮಾಡಿದಾಗ ಅವಳ ಬಳಿ ಏನೂ ದೊರೆಯುವುದಿಲ್ಲ. ಆದರೆ ಕಿಶನ್ ಬಳಿ ಚೀಟಿ ದೊರೆಯುತ್ತದೆ. ಎಕ್ಸಾಂ ಹಾಲ್ನಿಂದ ಅವನನ್ನು ಹೊರ ಹಾಕಲಾಗುತ್ತದೆ. ಹಳೆಯದನ್ನು ನೆನಪಿಸಿಕೊಂಡು ಕಿಶನ್ ಸಿಟ್ಟಾಗುತ್ತಾನೆ, ಆಗೇನೋ ತಪ್ಪಿಸಿಕೊಂಡೆ ಆದರೆ ಈಗ ನಿನ್ನನ್ನು ಬಿಡುವುದಿಲ್ಲ ಎನ್ನುತ್ತಾನೆ. ನಾನೂ ಅಷ್ಟೇ ಈಗ ಸುಮ್ಮನಿರುವುದಿಲ್ಲ, ಕೆಲಸ ಬಿಟ್ಟು ಹೋಗೋಣ ಎಂದುಕೊಂಡೆ ಅದರೆ ಈ ಜಿಮ್ ಬಾಸ್ ನೀನು ಎಂದು ತಿಳಿದ ನಂತರ ಕೆಲಸ ಬಿಡಬಾರದೆಂದು ನಿರ್ಧರಿಸಿದ್ದೇನೆ ಎಂದು ತನ್ನ ಸ್ಥಳಕ್ಕೆ ಹೋಗಿ ಕೂರುತ್ತಾಳೆ.
ಭಾಗ್ಯಾ ಗೆಲುವನ್ನು ಸಹಿಸಲಾಗದೆ ತಾಂಡವ್ ಒದ್ದಾಡುತ್ತಾನೆ, ಅವಳನ್ನು ಯಾವ ಕಾರಣಕ್ಕೂ ಇದೇ ರೀತಿ ಮುಂದುವರೆಯಲು ನಾನು ಬಿಡುವುದೇ ಇಲ್ಲ. ಅವಳು ನನ್ನ ಮುಂದೆ ಸೋಲಲೇಬೇಕು, ತಲೆ ಬಾಗಲೇಬೇಕು ಎಂದುಕೊಂಡು ಹೊಸ ಐಡಿಯಾ ಮಾಡುತ್ತಾನೆ. ಕನ್ನಿಕಾಳನ್ನು ಭೇಟಿ ಆಗಲು ಶ್ರೇಷ್ಠಾ ಜೊತೆ ಹೊರಡುತ್ತಾನೆ. ಕನ್ನಿಕಾ ಬಂದು ಇಬ್ಬರನ್ನೂ ಭೇಟಿ ಆಗುತ್ತಾಳೆ. ಭಾಗ್ಯಾ ನನಗೆ ಹೇಗೆ ಶತ್ರುವೋ ನಿನಗೆ ಕೂಡಾ ಅದೇ ರೀತಿ ಶತ್ರು. ಅವಳು ಹೊಸದಾಗಿ ಕ್ಯಾಟರಿಂಗ್ ಬಿಸ್ನೆಸ್ ಶುರು ಮಾಡಿದ್ದಾಳೆ. ಅವಳ ಬಿಸ್ನೆಸ್ ಹಾಳು ಮಾಡಬೇಕು, ಅವಳು ಪೈಸೆ ಪೈಸೆಗೂ ಕಷ್ಟಪಡಬೇಕು, ಬೀದಿಗೆ ಬರಬೇಕು, ಅದಕ್ಕೆ ಅವಳ ಬಿಸ್ನೆಸ್ ನಿಲ್ಲಬೇಕು, ಏನಾದರೂ ಐಡಿಯಾ ಮಾಡು ಎನ್ನುತ್ತಾನೆ.
ಅವಳು ತನ್ನ ಹೊಟ್ಟೆಪಾಡಿಗಾಗಿ ಏನೋ ಚಿಲ್ಲರೆ ವ್ಯಾಪಾರ ಮಾಡುತ್ತಿದ್ದಾಳೆ. ಅದನ್ನು ಹಾಳು ಮಾಡಲು ಏಕೆ ಪ್ರಯತ್ನಿಸುತ್ತೀರಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೇಕೆ ಎಂದು ಕನ್ನಿಕಾ ಹೇಳುತ್ತಾಳೆ. ಅದಕ್ಕೆ ತಾಂಡವ್ ನಿನ್ನ ಕೈಲಿ ಆಗದಿದ್ದರೆ ಆಗುತ್ತೆ ಅಂತ ಹೇಳು ಇಲ್ಲದಿದ್ದರೆ ಬಿಡು ಎನ್ನುತ್ತಾನೆ. ಅವನ ಮಾತಿಗೆ ಸಿಟ್ಟಾಗುವ ಕನ್ನಿಕಾ ಜೋರಾಗಿ ತಾಂಡವ್ ಎಂದು ಅರಚುತ್ತಾಳೆ. ಈ ಕನ್ನಿಕಾ ಕೈಯಲ್ಲಿ ಆಗದ ಕೆಲಸವೇ ಇಲ್ಲ, ಹೀಗೆಲ್ಲಾ ಮಾತನಾಡಿ ನನಗೆ ಇರಿಟೇಟ್ ಮಾಡಬೇಡ ಎನ್ನುತ್ತಾಳೆ. ಕನ್ನಿಕಾ ಕೋಪಗೊಂಡಿದ್ದಾಳೆ ಎಂದು ತಿಳಿದ ಶ್ರೇಷ್ಠಾ ಅವನ ಪರವಾಗಿ ನಾನು ನಿನಗೆ ಕ್ಷಮೆ ಕೇಳುತ್ತೇನೆ ಎಂದು ಹೇಳುತ್ತಾಳೆ. ಸರಿ ನಿನ್ನ ಬಳಿ ಏನಾದರೂ ಐಡಿಯಾ ಇದೆಯಾ ಎಂದು ಕನ್ನಿಕಾ ಕೇಳುತ್ತಾಳೆ. ನನ್ನ ಬಳಿ ಏನೂ ಐಡಿಯಾ ಇಲ್ಲ, ನೀನೇ ಏನಾದರೂ ಮಾಡು ಎಂದು ತಾಂಡವ್ ಹೇಳುತ್ತಾನೆ, ಸರಿ ಭಾಗ್ಯಾ ಬಿಸ್ನೆಸ್ ನಿಲ್ಲಬೇಕು ತಾನೇ ನಾನು ಅದನ್ನು ನೋಡಿಕೊಳ್ಳುತ್ತೇನೆ ಎನ್ನುತ್ತಾಳೆ. ಅದನ್ನು ಕೇಳಿ ತಾಂಡವ್ಗೆ ಖುಷಿಯಾಗುತ್ತದೆ.
ಪ್ರತಿ ಬಾರಿ ಭಾಗ್ಯಾ ಮುಂದೆ ಸೋಲುವ ತಾಂಡವ್ ಈ ಬಾರಿ ಭಾಗ್ಯಾ ಬಿಸ್ನೆಸ್ ಹಾಳು ಮಾಡಿ ಗೆಲ್ಲುತ್ತಾನಾ? ಅಥವಾ ಮತ್ತೆ ಸೋಲುತ್ತಾನಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.