ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 761ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ಕ್ಯಾಟರಿಂಗ್ ಬಿಸ್ನೆಸ್ ಹಾಳು ಮಾಡಿ ಅವಳನ್ನು ಸೋಲಿಸಲು ತಾಂಡವ್ ಹಾಗೂ ಶ್ರೇಷ್ಠಾ ಇಬ್ಬರೂ ಕನ್ನಿಕಾ ಸಹಾಯ ಕೇಳುತ್ತಾರೆ. ಭಾಗ್ಯಾ ಈ ಬಿಸ್ನೆಸ್ ಮುಚ್ಚಿ ಬಿಡಿಗಾಸಿಗೂ ಕಷ್ಟಪಡಬೇಕು, ಅವಳು ಬೀದಿಗೆ ಬೀಳಬೇಕು ಹಾಗೆ ಮಾಡು ಎಂದು ಕನ್ನಿಕಾಗೆ ತಾಂಡವ್ ಹೇಳುತ್ತಾನೆ. ಅವಳ ವಿಚಾರ ನನಗೆ ಬಿಡಿ ಎಂದು ಕನ್ನಿಕಾ ಹೇಳುತ್ತಾಳೆ.
ಇತ್ತ ಭಾಗ್ಯಾ ತನ್ನ ತಾಯಿ ನೆರೆಮನೆಯವರ ಸತ್ಯನಾರಾಯಣ ಪೂಜೆಗೆ ಬಂದು ಪ್ರಸಾದ ಮಾಡುತ್ತಾಳೆ. ಕುಸುಮಾ ಕರೆ ಮಾಡಿ ಅಡುಗೆಗಾಗಿ ಆರ್ಡರ್ಗಳು ಬಂದಿವೆ ಎನ್ನುತ್ತಾಳೆ. ನೆರೆಹೊರೆಯವರು ಬಂದು ಭಾಗ್ಯಾಳನ್ನು ಮಾತನಾಡಿಸುತ್ತಾರೆ. ಮನೆ ಓನರ್ ನಿರ್ಮಲಾ ಕೂಡಾ ಭಾಗ್ಯಾಳನ್ನು ಮಾತನಾಡಿಸುತ್ತಾಳೆ. ಹೆಗಿದ್ದೀಯ ಎಂದು ಕೇಳಿ ನಂತರ ಅವಳ ಜೀವನದ ಬಗ್ಗೆ ಕೊಂಕು ಮಾತುಗಳನ್ನು ಆಡುತ್ತಾಳೆ. ನಿನ್ನ ಗಂಡನಿಂದ ದೂರ ಆಗಿದ್ದೀಯಂತೆ, ಅವನು ಬೇಡ ಎಂದು ತಾಳಿ ತೆಗೆದು ಬಂದಿದ್ದೀಯಂತೆ ಇದೆಲ್ಲಾ ಬೇಕಿತ್ತಾ ಎಂದು ಕೇಳುತ್ತಾಳೆ. ನಿರ್ಮಲಾ ಮಗಳು ತಾಯಿಯ ವರ್ತನೆಯಿಂದ ಬೇಸರಗೊಂಡು ಅಮ್ಮ ಇದೆಲ್ಲಾ ಈಗ ಬೇಕಾ, ಹೋಗೋಣ ಬಾ ಎಂದು ಹೊರಗೆ ಕರೆತರುತ್ತಾಳೆ.
ಸತ್ಯನಾರಾಯಣ ಪೂಜೆ ಮುಗಿಯುತ್ತದೆ. ನಿರ್ಮಲಾ ಮಗಳು ಎಲ್ಲರಿಗೂ ಆರತಿ ನೀಡಿ ಹಿರಿಯರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾಳೆ. ಸುನಂದಾಗೂ ನಮಸ್ಕರಿಸುತ್ತಾಳೆ. ಅವಳಿಗೆ ಬುದ್ಧಿ ಮಾತು ಹೇಳುವ ಸುನಂದಾ, ಮದುವೆ ಫಿಕ್ಸ್ ಆಗಿದೆ, ಗಂಡನ ಮನೆಯಲ್ಲಿ ಅಪ್ಪನ ಮನೆಯಂತೆ ಇರಬೇಡ, ನೀನು ಕೇಳಿದ್ದನ್ನೆಲ್ಲಾ ಕೊಡಿಸಬೇಡ ಎಂದು ನಾನು ನಿರ್ಮಲಾಗೆ ಅನೇಕ ಸಾರಿ ಹೇಳಿದ್ದೆ, ಆದರೆ ಅವಳು ನನ್ನ ಮಾತು ಕೇಳಲಿಲ್ಲ ನೀನು ಕೇಳಿದ್ದನ್ನೆಲ್ಲಾ ಕೊಡಿಸಿದಳು. ಈಗ ಗಂಡನ ಮನೆಗೆ ಹೋದರೆ ಕಷ್ಟವಾಗುತ್ತದೆ, ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗು ಎನ್ನುತ್ತಾಳೆ. ಸುನಂದಾ ಮಾತುಗಳನ್ನು ಕೇಳಿ ನಿರ್ಮಲಾ ಕೋಪಗೊಳ್ಳುತ್ತಾಳೆ.
ಇದೇನು ಸುನಂದಕ್ಕ ನನ್ನ ಮಗಳಿಗೆ ಈ ರೀತಿ ಹೇಳಿಕೊಡುತ್ತಿದ್ದೀರ, ನೀವು ಅದನ್ನು ನಿಮ್ಮ ಮಗಳಿಗೆ ಹೇಳಿ ಎನ್ನುತ್ತಾಳೆ. ನಾನು ನಿನ್ನ ಮಗಳಿಗೆ ಕೆಟ್ಟದ್ದನ್ನು ಹಾರೈಸಲಿಲ್ಲ, ಅವಳಿಗೆ ಒಳ್ಳೆ ಮಾತುಗಳನ್ನು ಹೇಳಿದೆ ಅಷ್ಟೇ ಎನ್ನುತ್ತಾಳೆ. ನಿನ್ನ ಮಗಳೇ ಗಂಡನನ್ನು ಬಿಟ್ಟಿದ್ದಾಳೆ. ಅವಳಿಗೆ ಬುದ್ಧಿ ಹೇಳಿ ಮೊದಲು. ಅಕ್ಕನೇ ಹೀಗಾದರೆ ಇನ್ನು ತಂಗಿ ಕಥೆ ಹೇಗಿರಬೇಡ, ನಿಮ್ಮ ಎರಡನೇ ಮಗಳನ್ನು ಯಾರು ಮದುವೆ ಆಗುತ್ತಾರೆ ಎಂದು ನಿರ್ಮಲಾ ಕೇಳುತ್ತಾಳೆ. ಅವಳ ಮಾತುಗಳನ್ನು ಕೇಳಿ ಸುನಂದಾ ಬೇಸರವಾಗುತ್ತಾಳೆ. ಭಾಗ್ಯಾ ಕೂಡಾ ಒಳಗಿನಿಂದ ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಾಳೆ. ಹೊರಗೆ ಬರುವ ಭಾಗ್ಯಾ , ಮದುವೆ ಫಿಕ್ಸ್ ಆಗಿದ್ದಕ್ಕೆ ನಿರ್ಮಲಾ ಮಗಳಿಗೆ ಹಾರೈಸುತ್ತಾಳೆ.
ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗು, ಎಲ್ಲರಿಗೂ ಪ್ರೀತಿ ತೋರಿಸು, ನಿನ್ನ ಬದುಕು ಚೆನ್ನಾಗಿರಲಿ ಒಂದು ವೇಳೆ ನಿನ್ನ ಬದುಕು ನನ್ನಂತೆ ಆದರೆ ಧೈರ್ಯವಾಗಿ ನಿನಗೆ ತೋಚಿದಂತೆ ನಿರ್ಧಾರ ತೆಗೆದುಕೋ ಎನ್ನುತ್ತಾಳೆ. ನಾನು ಗಂಡನನ್ನು ಬಿಟ್ಟು ದೂರ ಇದ್ದೀನಿ ಎಂದ ಮಾತ್ರಕ್ಕೆ ಜೀವನದಲ್ಲಿ ಕಷ್ಟ ಅನುಭವಿಸುತ್ತಿದ್ದೇನೆ ಎಂದು ಅರ್ಥವಲ್ಲ. ನಾನು ಈಗಲೇ ನೆಮ್ಮದಿಯಾಗಿದ್ದೇನೆ, ಊಟಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿದ್ದೇನೆ ನೋಡಿಕೊಳ್ಳಿ ಎನ್ನುತ್ತಾ ಭಾಗ್ಯಾ ಅಲ್ಲಿಂದ ಹೊರ ಹೋಗುತ್ತಾಳೆ. ಸುನಂದಾ ಕೂಡಾ ಮಗಳನ್ನು ಹಿಂಬಾಲಿಸುತ್ತಾಳೆ. ಎಲ್ಲರ ಮುಂದೆ ನಾನು ಈಗಲೇ ನೆಮ್ಮದಿಯಾಗಿದ್ದೀನಿ ಎಂದು ಹೇಳಿದೆ ಇದೆಲ್ಲಾ ಬೇಕಿತ್ತಾ ಎನ್ನುತ್ತಾಳೆ.
ಅದರಲ್ಲಿ ಏನಿದೆ, ನಾನು ಸುಳ್ಳು ಹೇಳಲಿಲ್ಲ, ಇರುವ ಸತ್ಯವನ್ನೇ ಹೇಳಿದೆ ಎಂದು ಭಾಗ್ಯಾ ಉತ್ತರಿಸುತ್ತಾಳೆ. ಅವರು ಹೇಳಿದಂತೆ ನಿನ್ನ ತಂಗಿ ಪೂಜಾಳನ್ನು ಯಾರೂ ಮದುವೆ ಆಗಲು ಮುಂದೆ ಬರದಿದ್ದರೆ ಏನು ಮಾಡುವುದು ಎಂದು ಸುನಂದಾ ಆತಂಕ ವ್ಯಕ್ತಪಡಿಸುತ್ತಾಳೆ. ಪೂಜಾ ಜೀವನ ಚೆನ್ನಾಗಿರುತ್ತದೆ, ನಾನೇ ಮುಂದೆ ನಿಂತು ಅವಳ ಮದುವೆ ಮಾಡಿಸುತ್ತೇನೆ, ಆ ಜವಾಬ್ದಾರಿ ನನ್ನದು ಎಂದು ಭಾಗ್ಯಾ ತನ್ನ ತಾಯಿಗೆ ಮಾತು ಕೊಡುತ್ತಾಳೆ.