ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಇಂದು, ಅವರಿಗೆ ಸಂಬಂಧಿಸಿದ ಹಾಗೆ ಅನೇಕ ವಿಚಾರಗಳು ವಿಶೇಷ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಅಪ್ಪು ಅವರನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಮಗುವಿನಂಥ ಸ್ವಭಾವ ಹೊಂದಿದ್ದ ಮಹಾನುಭಾವ ಅಪ್ಪು. ಇಂದು ಅವರಿಗೆ 50ನೇ ವರ್ಷದ ಹುಟ್ಟುಹಬ್ಬ. ಈ ಸಂಭ್ರಮವನ್ನು ಆಚರಿಸಲು ಅಪ್ಪು ಅವರು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲದೇ ಹೋದರು ಸಹ, ಅವರ ನಗು ನೆನಪುಗಳು ಎಲ್ಲವೂ ಸದಾ ನಮ್ಮ ಜೊತೆಯಲ್ಲೇ ಇದೆ. ಅಪ್ಪು ಅವರು ಚಿತ್ರರಂಗದಲ್ಲಿ ಬರೆದಿರುವ ದಾಖಲೆಗಳು ಒಂದೆರಡಲ್ಲ. ಕನ್ನಡದಲ್ಲಿ ಮೊದಲಿಗೆ ಕೋಟಿ ಸಂಭಾವನೆ ಪಡೆದಿದ್ದು ಕೂಡ ಅಪ್ಪು ಅವರೇ. ಅದು ಯಾವ ಸಿನಿಮಾಗೆ ಗೊತ್ತಾ? ತೆರೆ ಹಿಂದಿನ ಕಹಾನಿ ಇವತ್ತು ನಿಮ್ಮ ಮುಂದೆ ರಿವೀಲ್ ಆಗಲಿದೆ..

ಅಪ್ಪು ಅವರು ಬಾಲನಟ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಂದೆಯ ಹಲವು ಸಿನಿಮಾಗಳಲ್ಲಿ ಅವರ ಜೊತೆಯಾಗಿ ನಟಿಸಿದರು. ಭಕ್ತ ಪ್ರಹ್ಲಾದ, ಭಾಗ್ಯವಂತ ಈ ಸಿನಿಮಾಗಳನ್ನ ಮರೆಯೋಕೆ ಆಗುತ್ತಾ? ಚಿಕ್ಕವರಿದ್ದಾಗಲೇ ಆ ಪರಿ ಟ್ಯಾಲೆಂಟ್ ಹೊಂದಿದ್ದ ಮಗು ಇವರು. 10 ವರ್ಷದವರಿದ್ದಾಗ ಬೆಟ್ಟದ ಹೂವು ಸಿನಿಮಾದಲ್ಲಿ ನಟಿಸಿ, ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ, ಅಪ್ಪು ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತು. ಇಂಥ ಅದ್ಭುತ ಕಲಾವಿದನನ್ನು ನಾಯಕನಾಗಿ ತೆರೆಗೆ ತರಬೇಕು ಎನ್ನುವುದು ಡಾ. ರಾಜ್ ಕುಮಾರ್ ಅವರ ಹಾಗೂ ಪಾರ್ವತಮ್ಮನವರ ಆಸೆ ಆಗಿತ್ತು. ಅಂದು ವೀರಪ್ಪನ್ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿ 108 ದಿನಗಳ ನಂತರ ಬಿಟ್ಟನು. ಆ ಘಟನೆ ಎಲ್ಲವು ಸರಿ ಹೋದ ನಂತರ ಅಪ್ಪು ಅವರನ್ನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಬೇಕು ಎಂದು ಕುಟುಂಬದಲ್ಲಿ ಎಲ್ಲರ ಆಸೆ ಆಗಿತ್ತು.

ಶಿವಣ್ಣ ಅವರು ಯುವರಾಜ ಸಿನಿಮಾ ಮಾಡುವಾಗ ನಿರ್ದೇಶಕ ಪುರಿ ಜಗನ್ನಾಥ್ ಅವರು 3 ಬೇರೆ ಕಥೆಗಳನ್ನು ಹೇಳಿದ್ದರು, ಅದರಲ್ಲಿ ಒಂದು ಕಥೆ ಅಪ್ಪು ಅವರಿಗೆ ಸೂಟ್ ಆಗುತ್ತದೆ ಎಂದು ಭಾವಿಸಿದ ಶಿವಣ್ಣ, ಆ ಕಥೆಯನ್ನು ಅಪ್ಪಾಜಿ ಅಮ್ಮನ ಎದುರು ಹೇಳಿಸಿದ್ದರು. ಕುಟುಂಬದವರಿಗೆ ಕೂಡ ಆ ಕಥೆ ಇಷ್ಟವಾಗಿ. ಅದನ್ನೇ ಸಿನಿಮಾ ಮಾಡುವುದಕ್ಕೆ ಮುಂದಾದರು. ತಮ್ಮ ಸ್ವಂತ ಬ್ಯಾನರ್ ನಲ್ಲಿಯೇ ಪುನೀತ್ ರಾಜ್ ಕುಮಾತ್ ಅವರನ್ನು ಇಂಟ್ರೊಡ್ಯುಸ್ ಮಾಡಬೇಕು ಎನ್ನುವುದು ಅವರ ಆಸೆ ಆಗಿತ್ತು. ಅದೇ ರೀತಿ ಪೂರ್ಣಿಮಾ ಎಂಟರ್ಪ್ರೈಸಸ್ ಸಂಸ್ಥೆಯ ಮೂಲಕ ಅಪ್ಪು ಸಿನಿಮಾ ನಿರ್ಮಾಣ ಆಯಿತು. ಫೈಟ್ಸ್, ಡ್ಯಾನ್ಸ್ ಎಲ್ಲವನ್ನು ಕಲಿತಿದ್ದ ಅಪ್ಪು ಅವರು ಅದ್ಭುತವಾಗಿ ಸಿನಿಮಾದಲ್ಲಿ ಪರ್ಫಾರ್ಮ್ ಮಾಡಿದ್ದರು. ಆಗಿನ ಕಾಲಕ್ಕೆ 1 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು ಅಪ್ಪು ಸಿನಿಮಾ.

ಎಲ್ಲಾ ಕಡೆ ಸೂಪರ್ ಹಿಟ್ ಆದ ಅಪ್ಪು ಸಿನಿಮಾ ಒಟ್ಟು ಗಳಿಸಿದ್ದು 16 ರಿಂದ 17 ಕೋಟಿ ರೂಪಾಯಿಗಳನ್ನು. ಇನ್ನು ಅಪ್ಪು ಅವರ ಎರಡನೇ ಸಿನಿಮಾವನ್ನು ಕೂಡ ಪಾರ್ವತಮ್ಮನವರೇ ನಿರ್ಮಾಣ ಮಾಡಿದರು. ಅಭಿ ಸಿನಿಮಾವನ್ನು ದಿನೇಶ್ ಬಾಬು ಅವರು ನಿರ್ದೇಶನ ಮಾಡಿದರು. ಅಪ್ಪು ಸಿನಿಮಾಗಾಗಿ ಕೆಲಸ ಮಾಡಿದ್ದ ಬಹುತೇಕರು ಅಭಿ ತಂಡದಲ್ಲಿ ಕೂಡ ಇದ್ದರು. ಅಭಿ ಸಿನಿಮಾ ಕೂಡ ಬಾಕ್ಸ್ ಆಫೀಸ್ ಧೂಳೆಬ್ಬಿಸಿ ಅದ್ಧೂರಿ ದಾಖಲೆ ಬರೆದಿತ್ತು. ಎರಡು ಸಿನಿಮಾಗಳು ಈ ರೀತಿ ಹೆಸರು ಮಾಡಿದ್ದ ಕಾರಣ, ಪುನೀತ್ ಅವರ 3ನೇ ಸಿನಿಮಾ ಬಗ್ಗೆ ಎಲ್ಲರಲ್ಲೂ ಭಾರಿ ನಿರೀಕ್ಷೆ ಇತ್ತು. ಇದಕ್ಕಾಗಿ ಕಥೆಯ ಹುಡುಕಾಟ ಸಹ ನಡೆದಿತ್ತು. ಆ ವೇಳೆಗೆ ಅಪ್ಪು ಅವರ ಮೊದಲನೇ ಸಿನಿಮಾ ನಿರ್ದೇಶನ ಮಾಡಿದ್ದ ಪುರಿ ಜಗನ್ನಾಥ್ ಅವರು ತೆಲುಗಿನಲ್ಲಿ ಆಂಧ್ರವಾಲ ಸಿನಿಮಾ ನಿರ್ದೇಶನ ಮಾಡುತ್ತಿದ್ದರು.

ಒಂದೇ ಸಮಯಕ್ಕೆ ಆ ಸಿನಿಮಾವನ್ನು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ತೆರೆಗೆ ತರುವ ಪ್ಲಾನ್ ಮಾಡಿದರು. ತೆಲುಗಿನಲ್ಲಿ ಜ್ಯುನಿಯರ್ ಎನ್.ಟಿ.ಆರ್ ಅವರು ಹೀರೋ ಆದರೆ, ಕನ್ನಡದಲ್ಲಿ ಅಪ್ಪು ಅವರು. ಕನ್ನಡದಲ್ಲಿ ವೀರ ಕನ್ನಡಿಗ ಎಂದು ಹೆಸರನ್ನು ಇಡಲಾಯಿತು. ಇದರಲ್ಲಿ ಸ್ಲಮ್ ನಲ್ಲಿ ವಾಸ ಮಾಡುವ ಮುನ್ನ ಎನ್ನುವ ಹುಡುಗನ ಪಾತ್ರ ಹಾಗೆಯೇ ತಂದೆಯ ಪಾತ್ರ ಶಂಕರ್, ಹೀಗೆ ಎರಡು ಪಾತ್ರಗಳಲ್ಲಿ ನಟಿಸಿದರು ಅಪ್ಪು. ಮೊದಲ ಎರಡು ಸಿನಿಮಾಗಳು ಹೋಮ್ ಬ್ಯಾನರ್ ನಲ್ಲೇ ಮೂಡಿಬಂದಿದ್ದರಿಂದ ಸಂಭಾವನೆ ಬಗ್ಗೆ ಹೆಚ್ಚು ಚರ್ಚೆ ಆಗಿರಲಿಲ್ಲ. ಆದರೆ ಮೂರನೇ ಸಿನಿಮಾ ನಿರ್ಮಾಣ ಮಾಡಿದ್ದು ತೆಲುಗಿನ ಪ್ರೊಡಕ್ಷನ್ ಸಂಸ್ಥೆ. ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ, ಕೆ.ಎಸ್ ರಾಮಾರಾವ್ ಮತ್ತು ಕೆ.ಎಸ್ ವಲ್ಲಭ ಇವರಿಬ್ಬರು ವೀರ ಕನ್ನಡಿಗ ಸಿನಿಮಾ ನಿರ್ಮಾಣ ಮಾಡಿದರು.
ಪುನೀತ್ ಅವರು ಕೇಳಿದಷ್ಟು ಸಂಭಾವನೆ ಕೊಡೋದಕ್ಕೆ ಇವರು ರೆಡಿ ಇದ್ದರು. ಆಗಿನ ಕಾಲಕ್ಕೆ ಭಾರಿ ಬೇಡಿಕೆ ಹೊಂದಿದ್ದ ಅಪ್ಪು ಅವರು ಪಡೆದಿದ್ದು 1 ಕೋಟಿ ಸಂಭಾವನೆ. ಹೌದು, ಈಗೇನೋ ಎಲ್ಲ ಹೀರೋಗಳು ಅಷ್ಟು ಕೋಟಿ ಸಂಭಾವನೆ ಪಡೆದೆವು ಎಂದು ಹೇಳುತ್ತಾರೆ. ಆದರೆ 20 ವರ್ಷಗಳ ಹಿಂದೆಯೇ ಕೋಟಿ ಸಂಭಾವನೆ ಪಡೆದ ಮೊದಲ ನಟ ಅಪ್ಪು ಅವರು. ಈ ದಾಖಲೆ ಅಪ್ಪು ಅವರದ್ದೇ ಆಗಿದೆ. ಇನ್ನು ವೀರ ಕನ್ನಡಿಗ ಸಿನಿಮಾ ತೆರೆಕಂಡು ಹಿಟ್ ಅನ್ನಿಸಿಕೊಂಡಿತು. ಅಪ್ಪು ಅವರಿಗೆ ಫ್ಯಾನ್ ಬೇಸ್ ದೊಡ್ಡ ಮಟ್ಟದಲ್ಲಿ ಇದ್ದ ಕಾರಣ, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದು ಸಿನಿಮಾ ನೋಡಿದ್ದರು. ಅಂದುಕೊಂಡ ಮಟ್ಟಕ್ಕೆ ಯಶಸ್ವಿ ಆಗಲಿಲ್ಲ ಆದರೆ ಹಿಟ್ ಲಿಸ್ಟ್ ಗೆ ಸೇರಿತು ವೀರ ಕನ್ನಡಿಗ ಸಿನಿಮಾ. ಇನ್ನು ತೆಲುಗಿನಲ್ಲಿ ಸಿನಿಮಾ ಮಕಾಡೆ ಮಲಗಿತು.

ಹೀಗೆ ಸಂಭಾವನೆ ವಿಚಾರದಲ್ಲಿ ಸಹ ಅಪ್ಪು ಅವರದ್ದು ದೊಡ್ಡ ದಾಖಲೆ. ಪುನೀತ್ ಅವರ ಸಿನಿಮಾಗಳು ಅಂದರೆ ಜನರಿಗೆ ಅಷ್ಟು ಇಷ್ಟ ಆಗುತ್ತಿತ್ತು. ವೀರ ಕನ್ನಡಿಗ ನಂತರ ಅಪ್ಪು ಅವರು ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದರು. ಸಿನಿಮಾ ಹಾಗೂ ಜನಪ್ರಿಯತೆಗೆ ತಕ್ಕ ಹಾಗೆ ಹೆಚ್ಚು ಸಂಭಾವನೆಯನ್ನು ಸಹ ಪಡೆಯುತ್ತಿದ್ದರು. ಕೊನೆಯ ಸಿನಿಮಾಗೆ ಅಪ್ಪು ಅವರು 5 ರಿಂದ 6 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದರು ಎಂದು ಮಾಹಿತಿ ಸಿಕ್ಕಿದೆ. ಕೋವಿಡ್ ನಂತರ ಅಪ್ಪು ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂದು ನಿರ್ಧರಿಸಿ, ಹಲವು ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದರು. ಅಷ್ಟರಲ್ಲಿ ವಿಧಿ ಬರಹವೆ ಬೇರೆಯಾಗಿ, ನಮ್ಮನ್ನೆಲ್ಲ ಅಷ್ಟು ಬೇಗ ಬಿಟ್ಟು ಹೊರಟು ಹೋದರು.



