ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 759ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾಗೂ ಮುಂಚೆ ನಾನು ತನ್ಮಯ್ ಸ್ಕೂಲ್ ಫೀಸ್ ಕಟ್ಟಿದರೆ ಅವಳು ನನ್ನ ಮುಂದೆ ಸೋಲುತ್ತಾಳೆ ಎಂದು ತಾಂಡವ್ ಶ್ರೇಷ್ಠಾ ಸಹಾಯ ಪಡೆದು ಭಾಗ್ಯಾ ಬಿಸ್ನೆಸ್ ಹಾಳು ಮಾಡಲು ಪ್ರಯತ್ನಿಸುತ್ತಾನೆ. ಆದರೆ ಅದು ಯಶಸ್ವಿಯಾಗುವುದಿಲ್ಲ. ಸುಳ್ಳು ಆರ್ಡರ್ ಕೊಟ್ಟ ಯುವತಿಯಿಂದ ಮಾಹಿತಿ ಪಡೆದ ಭಾಗ್ಯಾ, ಶ್ರೇಷ್ಠಾ ಬಳಿ ಹೋಗಿ ಅವಳ ಕೆನ್ನೆಗೆ ಬಾರಿಸಿ ತನಗೆ ಬರಬೇಕಿದ್ದ ಹಣ ಪಡೆದು ಅವಳಿಗೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟು ಬರುತ್ತಾಳೆ.
ಆದರೆ ಈಗಾಗಲೇ ತನ್ಮಯ್ ಸ್ಕೂಲ್ ಫೀಸ್ ಕಟ್ಟಲಾಗಿದೆ ಎಂದು ತಿಳಿದು ತಾಂಡವ್ ಸಿಟ್ಟಾಗುತ್ತಾನೆ. ಪ್ರತಿ ಬಾರಿ ನೀವು ಎಷ್ಟೇ ಪ್ರಯತ್ನ ಪಟ್ಟರೂ ನನ್ನನ್ನು ಏನೂ ಮಾಡಲಾಗುತ್ತಿಲ್ಲ. ಇನ್ಮುಂದೆ ಕೂಡಾ ನೀವು ಏನೂ ಮಾಡಲಾಗುವುದಿಲ್ಲ ಎಂದು ಭಾಗ್ಯಾ ತಾಂಡವ್ ಮುಂದೆ ಖಡಕ್ ಮಾತುಗಳನ್ನಾಡಿ ಮಗನನ್ನು ಕರೆದುಕೊಂಡು ಮನೆಗೆ ಹೋಗುತ್ತಾಳೆ. ತನ್ಮಯ್ ತನ್ನ ಸ್ಕೂಲ್ನಲ್ಲಿ ನಡೆದ ಎಲ್ಲಾ ವಿಚಾರವನ್ನು ಮನೆಯವರ ಮುಂದೆ ಹೇಳುತ್ತಾನೆ. ತನ್ನ ಅಮ್ಮ ಎಷ್ಟು ಗಟ್ಟಿಗಿತ್ತಿ ಅನ್ನೋದನ್ನು ಎಲ್ಲರ ಮುಂದೆ ವಿವರಿಸುತ್ತಾನೆ. ಶ್ರೇಷ್ಠಾಗೆ ಎಷ್ಟು ಬುದ್ಧಿ ಹೇಳಿದರೂ, ಎಷ್ಟು ಹೊಡೆದರೂ ಇನ್ನೂ ಬುದ್ಧಿ ಕಲಿತಿಲ್ಲ. ನಮ್ಮ ಕೆಲಸ ಹಾಳು ಮಾಡುವುದು ಎಂದರೆ ಅವಳಿಗೆ ಏಕೆ ಅಷ್ಟು ಖುಷಿ ಎಂದು ಕುಸುಮಾ ಕೋಪಗೊಳ್ಳುತ್ತಾಳೆ. ನೀವು ಅವಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಭಾಗ್ಯಾ ಸಮಾಧಾನ ಮಾಡುತ್ತಾಳೆ.
ಇತ್ತ ಸಿಟ್ಟಿನಿಂದಲೇ ಮನೆಗೆ ವಾಪಸ್ ಆಗುವ ತಾಂಡವ್, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಎಸೆಯುತ್ತಾನೆ. ಎಷ್ಟು ಪ್ರಯತ್ನಿಸಿದರೂ ಆ ಭಾಗ್ಯಾ ಗೆಲ್ಲುತ್ತಲೇ ಇದ್ದಾಳೆ. ನನಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೇಗಾದರೂ ಮಾಡಿ ಅವಳು ಸೋಲಬೇಕು, ನನ್ನ ಮುಂದೆ ತಲೆ ಬಾಗಬೇಕು ಎಂದು ಅರಚಾಡುತ್ತಾನೆ. ತಾಂಡವ್ ಕೋಪ ನೋಡಿ ಶ್ರೇಷ್ಠಾ ಭಯಗೊಳ್ಳುತ್ತಾಳೆ. ಅವನನ್ನು ಸಮಾಧಾನ ಮಾಡಲು ಯತ್ನಿಸಿದರೂ ತಾಂಡವ್ ಸುಮ್ಮನಾಗುವುದಿಲ್ಲ. ನನಗೆ ಒಂದೊಳ್ಳೆ ಐಡಿಯಾ ಸಿಕ್ಕಿದೆ, ಖಂಡಿತ ಇದು ವರ್ಕೌಟ್ ಆದರೆ ಭಾಗ್ಯಾ ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ ಎಂದು ಖುಷಿಯಾಗುತ್ತಾನೆ.
ಮತ್ತೊಂದೆಡೆ ಪೂಜಾ, ತನಗೆ ಕೆಲಸ ಕೊಟ್ಟಿದ್ದು ಯಾರು ಎಂಬ ಯೋಚನೆಯಲ್ಲಿ ಮುಳುಗುತ್ತಾಳೆ. ಕೆಲಸ ಸಿಕ್ಕಿದ್ದಕ್ಕೆ ಮನೆಯವರು ಪೂಜಾಗೆ ಕಂಗ್ರಾಜುಲೇಶನ್ಸ್ ಹೇಳುತ್ತಾರೆ. ಕೆಲಸ ಸಿಕ್ಕಿದ್ದು ಪೂಜಾಗೆ ಖುಷಿ ಆದರೂ ಬಾಸ್ ಯಾರೆಂದು ತಿಳಿಯಬೇಕೆಂಬ ಕುತೂಹಲದಲ್ಲಿರುತ್ತಾಳೆ. ಮರುದಿನ ಜಿಮ್ ಓನರ್ ಯಾರು ಎಂದು ತಿಳಿಯಲು ಒಳಗೆ ಹೋಗುತ್ತಾಳೆ. ಆದರೆ ಜಿಮ್ ಸಿಬ್ಬಂದಿ ಪೂಜಾಳನ್ನು ತಡೆಯುತ್ತಾಳೆ. ನಮ್ಮ ಬಾಸ್ ಬಹಳ ಬ್ಯುಸಿ ಇದ್ದಾರೆ ಅವರನ್ನು ಮೀಟ್ ಮಾಡಲು ಆಗುವುದಿಲ್ಲ ಎನ್ನುತ್ತಾಳೆ. ಆಕೆಯ ಮಾತಿಗೆ ಪೂಜಾ ಸಿಟ್ಟಾಗುತ್ತಾಳೆ. ಹೇಗಾದರೂ ಮಾಡಿ ಇವತ್ತು ಆ ಬಾಸ್ ಯಾರೆಂದು ತಿಳಿದುಕೊಳ್ಳಲೇಬೇಕು ಎಂದು ನಿರ್ಧರಿಸುತ್ತಾಳೆ.
ಸರಿ ನಿಮ್ಮ ಬಾಸ್ ಮೀಟ್ ಮಾಡಲು ಅವಕಾಶ ದೊರೆಯದಿದ್ದರೆ ಪರವಾಗಿಲ್ಲ. ನಾನು ಕೆಲಸ ಬಿಡುತ್ತಿದ್ದೇನೆ ಎಂದು ಅವರ ಬಳಿ ಹೇಳಿ ಎಂದು ಪೂಜಾ ಹೊರಗೆ ಬರುತ್ತಾಳೆ. ಜಿಮ್ ಸಿಬ್ಬಂದಿ ಈ ವಿಚಾರವನ್ನು ತಮ್ಮ ಬಾಸ್ಗೆ ತಿಳಿಸುತ್ತಾಳೆ. ಅದನ್ನು ಕೇಳಿದ ಆತ ಅವಳನ್ನು ನಾನು ಕೆಲಸ ಬಿಟ್ಟು ಹೋಗಲು ಬಿಡುವುದಿಲ್ಲ ಎಂದು ಹೊರಗೆ ಬರುತ್ತಾನೆ. ಬ್ಯಾಗ್ ತೆಗೆದುಕೊಂಡು ಹೋಗುತ್ತಿದ್ದ ಪೂಜಾಳನ್ನು ಕರೆಯುತ್ತಾನೆ. ಆತನನ್ನು ನೋಡಿ ಪೂಜಾ ಶಾಕ್ ಆಗುತ್ತಾಳೆ. ಪೂಜಾ ಕಾಲೇಜ್ನಲ್ಲಿ ಸೂಪರ್ ಸೀನಿಯರ್ ಆಗಿದ್ದ ಕಿಶನ್ ಆ ಜಿಮ್ ಓನರ್ ಆಗಿರುತ್ತಾನೆ. ಜಿಮ್ ಸಿಬ್ಬಂದಿ ಹೊರಬಂದು ಸರ್ ನಿಮಗೆ ಇವರು ಮೊದಲೇ ಗೊತ್ತಾ ಎಂದು ಕೇಳುತ್ತಾಳೆ. ನಾನು ಇವಳ ಸೂಪರ್ ಸೀನಿಯರ್, ಇವಳು ಮಾಡಿದ ಅವಾಂತರಗಳು ಸಾಕಷ್ಟಿದೆ ಎಂದು ಹೇಳಿ ಹಳೆಯ ನೆನಪುಗಳಿಗೆ ಜಾರುತ್ತಾನೆ.
ತಾಂಡವ್ ಹೊಸ ಪ್ಲ್ಯಾನ್ ಏನು? ಪೂಜಾ ಹಾಗೂ ಕಿಶನ್ ಮಧ್ಯೆ ಪ್ರೀತಿ ಚಿಗುರುವುದಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ