ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 744ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ರೆಸಾರ್ಟ್ನಲ್ಲಿ ಜೋಕರ್ ಕೆಲಸ ಮಾಡುತ್ತಿರುವುದು ತಾಂಡವ್ನಿಂದ ಮನೆಯವರಿಗೆಲ್ಲಾ ಗೊತ್ತಾಗಿದೆ. ವಿಚಾರ ಕೇಳಿ ಸುನಂದಾ ಕೋಪಗೊಂಡರೆ, ಕುಸುಮಾ-ಧರ್ಮರಾಜ್ ಸೊಸೆ ನಮಗಾಗಿ ಎಷ್ಟು ಕಷ್ಟಪಡುತ್ತಿದ್ದಾಳೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ನೀನು ಈ ಪರಿಸ್ಥಿತಿಗೆ ಬರಲು ತಾಳಿ ತೆಗೆದಿದ್ದೇ ಕಾರಣ ಎಂದು ಸುನಂದಾ , ಮಗಳ ಮೇಲೆ ಸಿಟ್ಟಾಗುತ್ತಾಳೆ.
ಎಲ್ಲಾ ಗಂಡ ಹೆಂಡತಿ ಜಗಳವಾಡುತ್ತಾರೆ, ನಿನ್ನ ಗಂಡನೊಂದಿಗೆ ಅನುಸರಿಸಿಕೊಂಡು ಹೋಗಬೇಕಿತ್ತು, ನೀನು ಈ ರೀತಿ ಕಷ್ಟ ಪಡುತ್ತಿರುವುದು ನನಗೆ ನೋಡಲಾಗುತ್ತಿಲ್ಲ ಎಂದು ಸುನಂದಾ ಹೇಳುತ್ತಾಳೆ. ನಿನಗೆ ನನ್ನ ಕಷ್ಟವನ್ನು ನೋಡಲಾಗುತ್ತಿಲ್ಲ ಎಂದರೆ ನೀನು ನನ್ನನ್ನು ನೋಡಲು ಇಲ್ಲಿಗೆ ಬರಬೇಡ ಎಂದು ಭಾಗ್ಯಾ ಹೇಳುತ್ತಾಳೆ. ಮಗಳ ಮಾತಿಗೆ ಬೇಸರ ಮಾಡಿಕೊಂಡ ಸುನಂದಾ ಸರಿ ನಾನು ನಮ್ಮ ಮನೆಗೆ ಹೋಗುತ್ತೇನೆ ಎಂದು ಅಲ್ಲಿಂದ ಹೊರಡುತ್ತಾಳೆ. ಮನೆಗೆ ಬಂದವಳೇ ಗಂಡನೊಂದಿಗೆ ಮಗಳು ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಂಡು ಅಳುತ್ತಾಳೆ. ಭಾಗ್ಯಾ ಗಂಡನನ್ನು ಬಿಟ್ಟವಳು ಎಂದು ಎಲ್ಲರೂ ಅಪಹಾಸ್ಯ ಮಾಡುತ್ತಿದ್ದಾರೆ, ಇವಳು ಗಂಡನಿಗೆ ಹೊಂದಿಕೊಂಡು ಬಾಳ್ವೆ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ತಾಳಿ ತೆಗೆದು ನಾನು ದೊಡ್ಡ ಸಾಧನೆ ಮಾಡಿದೆ ಎಂದು ಈಗ ಇಷ್ಟು ಕಷ್ಟಪಡುತ್ತಿದ್ದಾಳೆ. ನನ್ನ ಕಷ್ಟ ಯಾರಿಗೂ ಏಕೆ ಅರ್ಥವಾಗುತ್ತಿಲ್ಲ ಎಂದು ಸುನಂದಾ ಗಂಡನೊಂದಿಗೆ ನೋವು ಹೇಳಿಕೊಂಡು ಗೋಳಾಡುತ್ತಾಳೆ. ಭಾಗ್ಯಾ, ಗಂಡನನ್ನು ಬಿಟ್ಟಿಲ್ಲ. ಅವನೇ ಅವಳು ಬೇಡವೆಂದು ದೂರ ಹೋಗಿದ್ದು ಈಗ ಅವಳು ಸಂತೋಷವಾಗಿದ್ಧಾಳೆ ನೀನು ಇಲ್ಲದ್ದನ್ನೆಲ್ಲಾ ನೆನಪಿಸಿಕೊಂಡು ಗೋಳಾಡಬೇಡ ಎಂದು ವಿಠಲ್ ಮೂರ್ತಿ, ಸುನಂದಾಗೆ ಸಮಾಧಾನ ಮಾಡುತ್ತಾನೆ. ಆದರೆ ಸುನಂದಾ ಮಾತ್ರ, ಮಗಳ ಈ ಕಷ್ಟಕ್ಕೆ ಅವಳು ತಾಳಿ ತೆಗೆದದ್ದೇ ಕಾರಣ, ಇದೆಲ್ಲಾ ಯಾವಾಗ ಸರಿ ಆಗುವುದೋ ಎಂಬ ನೋವಿನಲ್ಲಿದ್ದಾಳೆ.
ಮರುದಿನ ಭಾಗ್ಯಾ ಕೆಲಸಕ್ಕೆ ಹೋಗುವ ತಯಾರಿಯಲ್ಲಿರುತ್ತಾಳೆ. ಅಷ್ಟರಲ್ಲಿ ಹಿಂದಿನ ದಿನ ಭೇಟಿಯಾಗಿದ್ದ ತನ್ಮಯ್ ಸ್ನೇಹಿತ ಮನೆಗೆ ಬರುತ್ತಾನೆ. ಆತ ಮನೆಗೆ ಬಂದಿದ್ದು ನೋಡಿ ಗುಂಡಣ್ಣ, ಭಾಗ್ಯಾ ಇಬ್ಬರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಿಮ್ಮ ಕೈ ರುಚಿ, ನನ್ನನ್ನು ಇಲ್ಲಿವರೆಗೂ ಬರುವಂತೆ ಮಾಡಿದೆ. ನಿನ್ನೆ ನೀವು ಕೊಟ್ಟ ಊಟ ತಿಂದು ನನಗೆ ನನ್ನ ಅಮ್ಮನ ನೆನಪಾಗುತ್ತಿದೆ. ನಿಮ್ಮ ಕೈ ರುಚಿ ಬಹಳ ಅದ್ಭುತ, ಇನ್ಮುಂದೆ ನನಗೆ ನೀವು ಏನು ಅಡುಗೆ ಮಾಡಿದರೂ ಒಂದು ಬಾಕ್ಸ್ ಬೇಕು, ಅದಕ್ಕಾಗಿ ಬಂದೆ ಎನ್ನುತ್ತಾನೆ. ಅದನ್ನು ಕೇಳಿ ಮನೆಯವರು ಖುಷಿಯಾಗುತ್ತಾರೆ. ಭಾಗ್ಯಾ ಆ ಹುಡುಗನಿಗಾಗಿ ಬಾಕ್ಸ್ ರೆಡಿ ಮಾಡಿಕೊಡುತ್ತಾಳೆ. ಇವತ್ತು ಏನೂ ವಿಶೇಷ ಮಾಡಿಲ್ಲ, ಪುಳಿಯೋಗರೆ ಮಾಡಿದ್ದೇನೆ. ನಿನಗೆ ಬೇಕಾದಾಗಲೆಲ್ಲಾ ಬಂದು ತೆಗೆದುಕೊಂಡು ಹೋಗು ಎನ್ನುತ್ತಾಳೆ.
ಭಾಗ್ಯಾ ಕೊಟ್ಟ ಬಾಕ್ಸನ್ನು ಖುಷಿಯಿಂದ ಪಡೆದ ತನ್ಮಯ್ ಸ್ನೇಹಿತ, ಅವಳಿಗೆ ದುಡ್ಡು ಕೊಡುತ್ತಾನೆ. ಆದರೆ ಭಾಗ್ಯಾ ಅವನಿಂದ ದುಡ್ಡು ಪಡೆಯುವುದಿಲ್ಲ. ಇವತ್ತು ನೀವು ಪ್ರೀತಿಯಿಂದ ಹೇಳಿದ್ದಕ್ಕೆ ನಾನು ಕೊಡುತ್ತಿಲ್ಲ, ಆದರೆ ನಾಳೆಯಿಂದ ನೀವು ದುಡ್ಡು ತೆಗೆದುಕೊಳ್ಳಲೇಬೇಕು ಎಂದು ಆತ ಅಲ್ಲಿಂದ ಹೊರಡುತ್ತಾನೆ. ಭಾಗ್ಯಾ ಗುಂಡಣ್ಣನನ್ನು ಸ್ಕೂಲ್ಗೆ ಬಿಟ್ಟು ಕೆಲಸಕ್ಕೆ ಹೊರಡುತ್ತಾಳೆ. ಅಲ್ಲಿ ಮ್ಯಾನೇಜರ್, ಭಾಗ್ಯಾಗೆ ಎದುರಾಗುತ್ತಾನೆ. ಎಲ್ಲಿಗೆ ಹೋಗುತ್ತಿದ್ದೀಯ ಎಂದು ಕೇಳುತ್ತಾನೆ. ಸರ್ ಕೆಲಸಕ್ಕೆ ಹೋಗುತ್ತಿದ್ದೇನೆ ಎನ್ನುತ್ತಾಳೆ. ಯಾವ ಕೆಲಸಕ್ಕೆ? ನಿನ್ನೆಯೆ ನಿನ್ನನ್ನು ಕೆಲಸದಿಂದ ತೆಗೆದಿದ್ದೇನೆ, ನಿನ್ನ ಜಾಗಕ್ಕೆ ಬೇರೆ ಹುಡುಗನನ್ನು ಕರೆತಂದಿದ್ದೇನೆ, ನೀನು ಒಂದು ದಿನವೂ ಸರಿಯಾಗಿ ಕೆಲಸ ಮಾಡಿದ್ದನ್ನು ನಾನು ನೋಡಿಲ್ಲ, ನಿನ್ನೆ ಕೂಡಾ ನಾನು ಅಷ್ಟು ಹೇಳುತ್ತಿದ್ದರೂ ನನ್ನ ಮಾತು ಕೇಳದೆ ಕೆಲಸದಿಂದ ಮನೆಗೆ ಹೋದೆ ಇನ್ನು ಇಲ್ಲಿಂದ ಹೊರಡು ಎನ್ನುತ್ತಾನೆ.
ಮ್ಯಾನೇಜರ್ ಮಾತು ಕೇಳಿ ಭಾಗ್ಯಾ ಶಾಕ್ ಆಗುತ್ತಾಳೆ. ಸರ್ ಮನೆಯಲ್ಲಿ ಬಹಳ ಕಷ್ಟ ಇದೆ, ನನಗೆ ಈ ಕೆಲಸ ಬಹಳ ಅವಶ್ಯಕತೆ ಇದೆ ದಯವಿಟ್ಟು ಹೀಗೆಲ್ಲಾ ಮಾಡಬೇಡಿ ಎಂದು ಮನವಿ ಮಾಡುತ್ತಾಳೆ. ಆದರೆ ಮ್ಯಾನೇಜರ್ ಭಾಗ್ಯಾ ಕಣ್ಣೀರಿಗೆ ಕರಗುವುದಿಲ್ಲ. ನಿನ್ನೆ ನೀನು ಅರ್ಧಕ್ಕೆ ಕೆಲಸದಿಂದ ಮನೆಗೆ ಹೋಗಿದ್ದಕ್ಕೆ ಸಂಬಳ ಕಟ್ ಮಾಡಿದ್ದೇನೆ, ಉಳಿದ ಹಣ ತೆಗೆದುಕೋ ಎಂದು ಭಾಗ್ಯಾ ಕೈಗೆ ಒಂದಿಷ್ಟು ಹಣ ಕೊಡುತ್ತಾನೆ. ಮತ್ತೊಂದೆಡೆ ಭಾಗ್ಯಾ ಜೋಕರ್ ಕೆಲಸ ಮಾಡುತ್ತಿರುವುದನ್ನು ತಾಂಡವ್, ಶ್ರೇಷ್ಠಾಗೆ ತಿಳಿಸುತ್ತಾನೆ. ಅವಳ ಡ್ಯಾನ್ಸ್ ನೋಡಲು ರೆಸಾರ್ಟ್ಗೆ ಕರೆತರುತ್ತಾನೆ. ಆದರೆ ಅಲ್ಲಿ ಭಾಗ್ಯಾಗೆ ಮ್ಯಾನೇಜರ್ ಬೈದು, ಕೆಲಸದಿಂದ ತೆಗೆದಿದ್ದನ್ನು ನೋಡಿ ಖುಷಿಪಡುತ್ತಾರೆ.
ಭಾಗ್ಯಾ, ಮ್ಯಾನೇಜರ್ನಿಂದ ದುಡ್ಡು ಪಡೆದು ಹಿಂತಿರುಗಿದರೆ ಅಲ್ಲಿ ತಾಂಡವ್-ಶ್ರೇಷ್ಠಾ ನಿಂತಿರುತ್ತಾರೆ. ಏನು ಭಾಗ್ಯಾ ಮೇಡಂ? ನಿಮ್ಮ ಮುಂದಿನ ಸವಾರಿ ಎಲ್ಲಿಗೆ ಎಂದು ತಾಂಡವ್ ಕೇಳುತ್ತಾನೆ. ಇನ್ನೆಲ್ಲಿಗೆ ಹೋಗಲು ಸಾಧ್ಯ ತಾಂಡವ್, ಈಗಷ್ಟೇ ಮ್ಯಾನೇಜರ್ ಇವಳ ಮುಖಕ್ಕೆ ಉಗಿದು ಕೆಲಸದಿಂದ ತೆಗೆದರಲ್ಲ ಎಂದು ಶ್ರೇಷ್ಠಾ ವ್ಯಂಗ್ಯವಾಡುತ್ತಾಳೆ. ಛೇ ಇವಳು ಮಂಗನಂತೆ ಕುಣಿಯೋದನ್ನು ನಿನಗೆ ತೋರಿಸಲು ಕರೆದುಕೊಂಡು ಬಂದೆ, ಆದರೆ ಮಿಸ್ ಆಗಿ ಹೋಯ್ತಲ್ಲಾ ಎಂದು ತಾಂಡವ್ ಭಾಗ್ಯಾಳನ್ನು ಅಣಕಿಸುತ್ತಾನೆ. ತಾಂಡವ್, ನಮ್ಮ ಪ್ಲ್ಯಾನ್ ಸಕ್ಸಸ್ ಆಗುತ್ತೆ ನೋಡುತ್ತಿರು, ಇವಳು ಬೀದಿಗೆ ಬರೋದು ಪಕ್ಕಾ, ಮುಂದಿನ ಬಾರಿ ಮನೆ ಇಎಂಐ ಕಟ್ಟಲು ಇವಳಿಗೆ ಆಗುವುದಿಲ್ಲ ಎಂದು ಶ್ರೇಷ್ಠಾ ತಾಂಡವ್ಗೆ ಹೇಳಿಕೊಂಡು ನಗುತ್ತಾಳೆ. ನಿಮಗೆ ಮಾಡಲು ಬೇರೆ ಕೆಲಸ ಇಲ್ಲವಾ? ಇನ್ನೊಬ್ಬರು ಹೀಗೆ ಕಷ್ಟದಲ್ಲಿರುವಾಗ ಅವರನ್ನು ನೋಡಿಕೊಂಡು ನಗುವುದೇ ನಿಮ್ಮ ಕೆಲಸಾನಾ ಎಂದು ಭಾಗ್ಯಾ ಅವರಿಬ್ಬರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಳೆ.
ಭಾಗ್ಯಾ ಮುಂದಿನ ನಡೆ ಏನು? ಹೊಸ ಕೆಲಸ ಗಳಿಸಿ ತಾಂಡವ್-ಶ್ರೇಷ್ಠಾಗೆ ಮತ್ತೆ ಮುಖಭಂಗ ಮಾಡುತ್ತಾಳಾ? ಅಥವಾ ಅವರಿಬ್ಬರೂ ಹೇಳಿದಂತೆ ಮನೆ ಕಳೆದುಕೊಳ್ಳುತ್ತಾಳಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.