ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 737ರ ಎಪಿಸೋಡ್ ಕಥೆ ಇಲ್ಲಿದೆ. ಕೊನೆಗೂ ಭಾಗ್ಯಾ ಗೆದ್ದಿದ್ದಾಳೆ. ಅಡುಗೆ ಕಾಂಟ್ರಾಕ್ಟ್ನಿಂದ ಪಡೆದ 40 ಸಾವಿರ ಹಣವನ್ನು ಬ್ಯಾಂಕ್ನವರಿಗೆ ನೀಡಿ ಮನೆ ಉಳಿಸಿಕೊಂಡಿದ್ದಾಳೆ. ಭಾಗ್ಯಾ ಖಂಡಿತ ಸೋಲುತ್ತಾಳೆ. ಅವಳಿಗೆ ಯಾವುದೇ ಕಾರಣಕ್ಕೂ ಹಣ ಅಡ್ಜೆಸ್ಟ್ ಮಾಡಲು ಸಾಧ್ಯವಿಲ್ಲ. ಅವಳು ನನ್ನ ಮುಂದೆ ಸೋಲುತ್ತಾಳೆ ಎಂದುಕೊಂಡಿದ್ದ ತಾಂಡವ್ಗೆ ಶಾಕ್ ಆಗಿದೆ.
ಮನೆಯಿಂದ ಹೊರನಿಂತು ತಾಂಡವ್ ಇದೇ ವಿಚಾರವಾಗಿ ಶ್ರೇಷ್ಠಾ ಜೊತೆ ಮಾತನಾಡುತ್ತಿರುತ್ತಾನೆ. ಅವಳು ಈ ಬಾರಿ ಗೆದ್ದಿದ್ದಾಳೆ, ಮುಂದಿನ ಬಾರಿ ಖಂಡಿತ ಗೆಲ್ಲುವುದಿಲ್ಲ ಎಂದು ಶ್ರೇಷ್ಠಾ, ತಾಂಡವ್ನನ್ನು ಸಮಾಧಾನ ಮಾಡುತ್ತಾಳೆ. ಇಲ್ಲ ಈಗಲೇ ಸೋಲಬೇಕಿತ್ತು ಎಂದು ತಾಂಡವ್ ಕೋಪದಿಂದ ಹೇಳುತ್ತಾನೆ. ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ಭಾಗ್ಯಾ, ಅದು ಖಂಡಿತ ಸಾಧ್ಯವಿಲ್ಲ. 24 ಗಂಟೆಗಳಲ್ಲಿ ಹಣ ಹೊಂದಿಸಿದ ನನಗೆ 30 ದಿನಗಳಲ್ಲಿ ಮುಂದಿನ ತಿಂಗಳ ಇಎಂಐಗೆ ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಗೆ ಅಂದುಕೊಂಡಿದ್ದೀರಿ? ಇನ್ನೂ ಒಮ್ಮೆ ಹೇಳುತ್ತೇನೆ ಕೇಳಿ. ಈ ಮನೆ, ಈ ಮನೆಯವರು ನನ್ನ ಜವಾಬ್ದಾರಿ. ಯಾವುದಕ್ಕೂ ನಿಮ್ಮ ಬೆಸ್ಟ್ ವಿಶಸ್ ನನ್ನ ಮೇಲೆ ಇರಲಿ ಎಂದು ಭಾಗ್ಯಾ ತಾಂಡವ್ಗೆ ಶೇಕ್ ಮಾಡಿ ಮನೆ ಒಳಗೆ ಹೋಗುತ್ತಾಳೆ.
ತಾಂಡವ್ಗೆ ಭಾಗ್ಯಾ ಗೆಲುವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಕೋಪದಿಂದ ಮನೆಗೆ ಹೋಗುವ ತಾಂಡವ್ ಕೂಲ್ಡ್ರಿಂಕ್ಸ್ ಬಾಟಲಿಗಳನ್ನು ತೆಗೆದುಕೊಂಡು ಗೋಡೆಗೆ ಹೊಡೆದು ಕೋಪ ತೀರಿಸಿಕೊಳ್ಳುತ್ತಾನೆ. ನನ್ನ ಮುಂದೆ ನೀನು ಗೆಲ್ಲಬಾರದಿತ್ತು. ನಿನ್ನ ಗೆಲುವನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅರಚಾಡುತ್ತಾನೆ. ತಾಂಡವ್ ವರ್ತನೆಯನ್ನು ಗಮನಿಸಿದ ಶ್ರೇಷ್ಠಾ, ಅವಳು ಖಂಡಿತ ಮುಂದಿನ ತಿಂಗಳ ಇಐಂಐ ಕಟ್ಟುವುದಿಲ್ಲ, ಖಂಡಿತ ಮನೆ ಸೀಸ್ ಆಗುತ್ತದೆ, ನಾವು ಏನಾದರೂ ಮಾಡೋಣ ಎಂದು ಸಮಾಧಾನ ಮಾಡುತ್ತಾಳೆ. ಆದರೆ ತಾಂಡವ್ಗೆ ಮಾತ್ರ ಶ್ರೇಷ್ಠಾ ಮಾತು ಕೇಳುವ ತಾಳ್ಮೆ ಇಲ್ಲ. ನೀನು ಇಲ್ಲಿಂದ ಹೋಗು ಎಂದು ಕಿರುಚುತ್ತಾನೆ. ತಾಂಡವ್ ಕೋಪಕ್ಕೆ ಹೆದರಿ ಶ್ರೇಷ್ಠಾ ಅಲ್ಲಿಂದ ಹೋಗುತ್ತಾಳೆ.
ಇತ್ತ ಮನೆ ಸೀಜ್ ಆಗದೆ ಉಳಿದುಕೊಂಡಿದ್ದಕ್ಕೆ ಮನೆಯವರು ಖುಷಿಯಾಗುತ್ತಾರೆ. ಭಾಗ್ಯಾ, ಕಷ್ಟಪಟ್ಟು ಮನೆ ಉಳಿಸಿಕೊಂಡಿದ್ದಕ್ಕೆ ಎಲ್ಲರೂ ಅವಳನ್ನು ಹೊಗಳುತ್ತಾರೆ. ಭಾಗ್ಯಾ ರಾತ್ರಿ ಎಲ್ಲರಿಗೂ ಕೈ ತುತ್ತು ನೀಡುತ್ತಾಳೆ. ಭಾಗ್ಯಾ ನೀನು ಇದೇ ರೀತಿ ಪ್ರತಿದಿನ 40 ಸಾವಿರ ಹಣ ಗಳಿಸುತ್ತಿದ್ದರೆ ನಮ್ಮ ಜೀವನ ಹೇಗಿರುತ್ತದೆ ಗೊತ್ತಾ ಎಂದು ಸುಂದ್ರಿ ಕನಸು ಕಾಣುತ್ತಾಳೆ. ಕನಸಿನಲ್ಲಿ ಭಾಗ್ಯಾ ಕೋಟ್ಯಾಧಿಪತಿ ಆಗಿರುತ್ತಾಳೆ, ಅತ್ತೆ ಸೊಸೆ ಇಬ್ಬರೂ ದುಬಾರಿ ಬೆಲೆಯ ಸೀರೆ, ಒಡವೆ , ಕೂಲಿಂಗ್ ಗ್ಲಾಸ್ ಧರಿಸಿರುತ್ತಾರೆ, ಭಾಗ್ಯಾ ಕೈಯಲ್ಲಿ ಹಣದ ಸೂಟ್ಕೇಸ್ ಹಿಡಿದುಕೊಂಡು ಅತ್ತೆ ಕುಸುಮಾ ಜೊತೆ ಕೆಳಗೆ ಬರುತ್ತಾಳೆ. ಅಲ್ಲಿ ತಾಂಡವ್, ಭಾಗ್ಯಾ ಗೆಲುವು ಕಂಡು ಅಳುತ್ತಾ ನಿಂತಿರುತ್ತಾನೆ. ತಾಂಡವ್ ಮುಂದೆ ಬಂದು ನಿಲ್ಲುವ ಭಾಗ್ಯಾ, ಆ ಸೂಟ್ಕೇಸನ್ನು ಅವನಿಗೆ ನೀಡಿ ಈ ಮನೆ ಇನ್ಮುಂದೆ ನನ್ನದು, ಈ ಮನೆಯನ್ನು ನಾನು ಖರೀದಿಸಿದ್ದೇನೆ ಎನ್ನುತ್ತಾಳೆ.
ಪೂಜಾ, ಸುಂದ್ರಿಯನ್ನು ಎಚ್ಚರಿಸುತ್ತಾಳೆ. ಕನಸಿನಿಂದ ಹೊರ ಬಾ, ನೀನು ಅಂದುಕೊಂಡತೆ ಆಗುವುದು ಕಷ್ಟ, ನಾವು ವಾಸ್ತವನದಲ್ಲಿ ಬದುಕಬೇಕು, ಈಗ ಒಂದು ಕಷ್ಟದಿಂದ ಪಾರಾಗಿದ್ದೇವೆ, ಆದರೆ ಮುಂದೆ ನಾವು ಇನ್ನಷ್ಟು ಕಷ್ಟಗಳನ್ನು ಎದುರಿಸಬೇಕಿದೆ ಎಂದು ಸುಂದ್ರಿಗೆ ಬುದ್ಧಿ ಹೇಳುತ್ತಾಳೆ. ಹೌದು ಪೂಜಾ ಹೇಳುತ್ತಿರುವುದು ನಿಜ ಎಂದು ಭಾಗ್ಯಾ ಹೇಳುತ್ತಾಳೆ. ಮರುದಿನ ಸುನಂದಾ, ಪೂಜಾಳನ್ನು ಅಂಗಡಿಗೆ ಕರೆಯುತ್ತಾಳೆ. ನಿನ್ನ ಅಪ್ಪನಿಗೆ ಆರೋಗ್ಯ ಸಮಸ್ಯೆ ಇದೆ, ನೀನು ಅಂಗಡಿಗೆ ಬಂದು ಸಹಾಯ ಮಾಡು ಎನ್ನುತ್ತಾಳೆ. ನಾನು ಎಲ್ಲಿಗೂ ಬರುವುದಿಲ್ಲ, ಅಕ್ಕ ಈಗ ಕಷ್ಟದಲ್ಲಿದ್ದಾಳೆ. ಅವಳನ್ನು ಸೋಲಿಸಬೇಕು ಎಂದು ಭಾವ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ನನಗೂ ಕೆಲಸ ಸಿಗುತ್ತೆ, ಈ ಸಮಯದಲ್ಲಿ ನಾನು ಅಕ್ಕನಿಗೆ ಜೊತೆಯಾಗಿರಬೇಕು ಎಂದು ಪೂಜಾ ಹೇಳುತ್ತಾಳೆ.
ಪೂಜಾ ಮಾತನ್ನು ಕೇಳಿಸಿಕೊಳ್ಳುವ ಭಾಗ್ಯಾ, ನಿನ್ನಂಥ ತಂಗಿ ಇರುವಾಗ ನನಗೆ ಕಷ್ಟ ಬರುವುದಿಲ್ಲ ಎನ್ನುತ್ತಾಳೆ. ಪೂಜಾ ಹಾಗೂ ಭಾಗ್ಯಾ ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ಪೂಜಾ ಇಲ್ಲೇ ಇರುತ್ತಾಳೆ. ಅವಳು ಎಲ್ಲಿಗೂ ಬರುವುದಿಲ್ಲ. ಅವಳನ್ನು ಬಲವಂತ ಮಾಡಬೇಡಮ್ಮ ಎಂದು ಭಾಗ್ಯಾ, ಸುನಂದಾಗೆ ಹೇಳುತ್ತಾಳೆ. ಅಷ್ಟರಲ್ಲಿ ಧರ್ಮರಾಜ್ ಅಲ್ಲಿಗೆ ಬಂದು ಭಾಗ್ಯಾ ಕೈಗೆ ಕಾರಿನ ಕೀ ಕೊಡುತ್ತಾನೆ. ಮಾವ ಕಾರನ್ನು ಮಾರೋಣ ಎಂದು ಹೇಳುತ್ತಿದ್ದೀರ, ದಯವಿಟ್ಟು ಬೇಡ, ನಾನು ಕಾರನ್ನು ಮಾರಿದರೆ ಸೊಸೆಯಾಗಿ ಸೋತಂತೆ ಎಂದು ಮಾವನಿಗೆ ಕೀ ವಾಪಸ್ ಕೊಡುತ್ತಾಳೆ. ಧರ್ಮರಾಜ್, ಸೊಸೆ ಪ್ರೀತಿಗೆ ಕಟ್ಟುಬಿದ್ದು ಕೀ ವಾಪಸ್ ತೆಗೆದುಕೊಳ್ಳುತ್ತಾನೆ.