ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಹೆಚ್ಚಿನ ವೀಕ್ಷಕರಿದ್ದಾರೆ. ಮೊದಲೆಲ್ಲಾ ಸೋಮವಾರದಿಂದ ಶುಕ್ರವಾದವರೆಗೂ ಧಾರಾವಾಹಿ ಪ್ರಸಾರವಾಗುತ್ತಿತ್ತು. ಆದರೆ ಈಗ ವಾರದ ಏಳೂ ದಿನಗಳು ಈ ಧಾರಾವಾಹಿ ಪ್ರಸಾರವಾಗುತ್ತಿದ್ದು ವೀಕ್ಷಕರಿಗೆ ಖುಷಿ ನೀಡಿದೆ. ಧಾರಾವಾಹಿ ಪಾತ್ರಗಳು, ಕಥೆಯಂತೂ ಎಲ್ಲರಿಗೆ ಇಷ್ಟವಾಗಿದೆ. ಈಗ ಧಾರಾವಾಹಿಯಲ್ಲಿ ಟ್ವಿಸ್ಟ್ ದೊರೆತಿದ್ದು ಮುಂದೆ ಕಥೆ ಯಾವ ರೀತಿ ನಡೆಯಬಹುದು ಎಂದು ನೋಡುಗರು ಕುತೂಹಲದಿಂದ ಕಾಯುತ್ತಿದ್ದಾರೆ. ಅರ್ಧ ಗಂಟೆ ಸಾಲುವುದಿಲ್ಲ ದಯವಿಟ್ಟು 1 ಗಂಟೆ ಸಮಯವಾದರೂ ಧಾರಾವಾಹಿಯನ್ನು ಪ್ರಸಾರ ಮಾಡಿ ಎಂದು ವೀಕ್ಷಕರು ಮನವಿ ಮಾಡುತ್ತಿದ್ದಾರೆ.

ಧಾರಾವಾಹಿ ನಾಯಕ ತಾಂಡವ್ಗೆ ಹೆಂಡತಿ ಭಾಗ್ಯಾ ಎಂದರೆ ಇಷ್ಟವಿಲ್ಲ. ಆಫೀಸ್ನಲ್ಲಿ ಶ್ರೇಷ್ಠಾ ಎಂಬ ಸಹೋದ್ಯೋಗಿಯೊಂದಿಗೆ ತಾಂಡವ್ಗೆ ಅಫೇರ್ ಇದೆ. ಆದರೆ ಮುಗ್ಧ ಭಾಗ್ಯಾ ಮಾತ್ರ ತಾಂಡವ್ ಹಾಗೂ ಶ್ರೇಷ್ಠಾ ಒಳ್ಳೆಯ ಸ್ನೇಹತರು ಎಂದೇ ಇಷ್ಟು ದಿನ ತಿಳಿದಿದ್ದಳು. ಆದರೆ ಈಗ ಎಲ್ಲವೂ ಬಯಲಾಗಲಿದೆ. ಭಾಗ್ಯಾಗೆ ತಾಂಡವ್-ಶ್ರೇಷ್ಠಾ ಫ್ರೆಂಡ್ಸ್ ಅಲ್ಲ, ಇಬ್ಬರಿಗೂ ಅಫೇರ್ ಇದೆ ಎಂಬ ದೊಡ್ಡ ಸತ್ಯ ಗೊತ್ತಾಗಿದೆ. ಅವರಿಬ್ಬರೂ ಮದುವೆ ಆಗಲು ಹೊರಟಿದ್ದು ಆ ಮದುವೆಯನ್ನು ಅತ್ತೆ ಕುಸುಮಾ ಹಾಗೂ ತಂಗಿ ತಡೆದಿರುವುದು ಎಲ್ಲವೂ ಗೊತ್ತಾಗಿದೆ. ಇಷ್ಟು ದಿನ ಕಣ್ಣ ಮುಂದೆ ಎಲ್ಲಾ ನಡೆಯುತ್ತಿದ್ದರೂ ನನಗೆ ಇದು ಗೊತ್ತಾಗಲಿಲ್ಲ ಎಂದು ಭಾಗ್ಯಾ ವ್ಯಥೆ ಪಡುತ್ತಿದ್ದಾಳೆ. ಭಾಗ್ಯಾಗೆ ಸತ್ಯ ಗೊತ್ತಾಗಿದೆ ಅನ್ನೋದು ಮನೆಯವರಿಗೆ ಗೊತ್ತಿಲ್ಲ.
ಈ ನಡುವೆ ಧಾರಾವಾಹಿಯಲ್ಲಿ ತಾಂಡವ್ ಪಾತ್ರ ಮಾಡಿರುವ ಸುದರ್ಶನ್ ರಂಗಪ್ರಸಾದ್ ಈ ಧಾರಾವಾಹಿಯ ಪಾತ್ರ ತಮ್ಮ ರಿಯಲ್ ಲೈಫ್ಗೆ ಹೇಗೆ ಇಂಪಾಕ್ಟ್ ಆಗಿದೆ ಅನ್ನೋದನ್ನು ಮಾತನಾಡಿದ್ದಾರೆ. ಪಂಚಮಿ ಟಾಕ್ಸ್ ಎಂಬ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಸುದರ್ಶನ್, ಧಾರಾವಾಹಿ ಪಾತ್ರಕ್ಕೂ ರಿಯಲ್ ಲೈಫ್ ಪಾತ್ರಕ್ಕೂ ಬಹಳ ವ್ಯತ್ಯಾಸವಿದೆ. ಧಾರಾವಾಹಿಯಲ್ಲಿ ಸದಾ ಮುಖ ಗಂಟಿಕ್ಕುವ ಪಾತ್ರ, ಯಾವಾಗಲೂ ಭಾಗ್ಯಾ ವಿರುದ್ಧ ಕೋಪ ಮಾಡಿಕೊಳ್ಳುವ ಪಾತ್ರ, ಅಲ್ಲಿ ನನಗೆ ನಗುವ ಶಾಟ್ ಸಿಕ್ಕಿದರಂತೂ ಬಹಳ ಎಂಜಾಯ್ ಮಾಡುತ್ತೇನೆ. ಈ ಹ್ಯಾಂಗೋವರ್ ಮನೆಗೆ ವಾಪಸ್ ಹೋದಾಗಲೂ ಇರುತ್ತೆ. ಈಗ ಬೇಗ ಕೋಪ ಬರುತ್ತೆ. ಹೆಂಡತಿ ಮೇಲೆ ಕೋಪ ತೋರಿಸಿದರೆ ತಾಂಡವ್ ರೀತಿ ಮನೆಯಲ್ಲಿ ವರ್ತಿಸಬೇಡ ಎಂದು ನನ್ನ ಹೆಂಡತಿ ವಾರ್ನ್ ಕೊಡುತ್ತಾಳೆ. ಆಗ ನಾನು ಮನೆಯಲ್ಲಿ ಭಾಗ್ಯಾ ರೀತಿ ಸೈಲೆಂಟ್ ಆಗಿಬಿಡುತ್ತೇನೆ.

ಇನ್ನು ಧಾರಾವಾಹಿಯಲ್ಲಿ ನಾನು ಭಾಗ್ಯಾಗೆ ಎಣ್ಣೆ ಮುಖದೋಳೆ, ಎಮ್ಮೆ ಎಂದೆಲ್ಲಾ ಬೈದಂತೆ ಮನೆಯಲ್ಲಿ ಪ್ರಯೋಗ ಮಾಡಲು ಹೋದರೆ ನನ್ನ ಹೆಂಡತಿ ನನ್ನ ಕಿಡ್ನಿ ಮಾರಿ ಐಪೋನ್ ಕೊಂಡು ತರುತ್ತಾಳೆ. ಆದ್ದರಿಂದ ಅದನ್ನು ಮನೆಯಲ್ಲಿ ಪ್ರಯೋಗ ಮಾಡಲು ಹೋಗುವುದಿಲ್ಲ ಎಂದು ಸುದರ್ಶನ್ ಹೇಳಿದ್ದಾರೆ. ಪತ್ನಿ ಸಂಗೀತ ಬಗ್ಗೆ ಮಾತನಾಡಿರುವ ಸುದರ್ಶನ್, ಮೊದಲೆಲ್ಲಾ ನಾನು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದೆ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದೆ, ಆಗ ಸಂಗೀತ ಬೆಳೆಯುತ್ತಿದ್ದಳು. ಅವಳಿಗೆ ಒಳ್ಳೆ ಅವಕಾಶ ಸಿಗುತ್ತಿದ್ದಕ್ಕೆ ನನಗೆ ಖುಷಿಯಾಗುತ್ತಿತ್ತು. ಅದರ ಬಗ್ಗೆ ನನಗೆ ಎಂದಿಗೂ ಬೇಸರವಿರಲಿಲ್ಲ, ಆದರೆ ನಾನೂ ನಟ, ನನಗೂ ಒಂದೊಳ್ಳೆ ಅವಕಾಶ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನ್ನಿಸಿದ್ದು ಉಂಟು. ಈಗ ಭಾಗ್ಯಲಕ್ಷ್ಮೀ ಧಾರಾವಾಹಿ ನನಗೆ ಒಳ್ಳೆ ಹೆಸರು ತಂದುಕೊಟ್ಟಿದೆ, ಈಗ ಅವಳಿಗೂ ಅದೇ ರೀತಿ ಫೀಲ್ ಆಗುತ್ತಿದೆ. ಆದರೆ ಇದರಿಂದ ನಮ್ಮಿಬ್ಬರ ಸಂಬಂಧಕ್ಕೆ ಏನೂ ಸಮಸ್ಯೆ ಆಗಿಲ್ಲ, ಇಬ್ಬರಿಗೂ ಬಹಳ ಮೆಚ್ಯೂರಿಟಿ ಇದೆ ಎಂದು ಸುದರ್ಶನ್ ರಂಗಪ್ರಸಾದ್ ಭಾಗ್ಯಲಕ್ಷ್ಮೀ ಧಾರಾವಾಹಿ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.