ಇನ್ಸ್ಟಾಗ್ರಾಂಮ್ನಲ್ಲಿ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದೆ. AI ಚಾಟ್ಬಾಟ್ಗಳೆರೆಡೂ ಮಾನವೇತರ ಭಾಷೆಯಲ್ಲಿ ಸಂವಾಹನ ನಡೆಸಿರುವ ವಿಡಿಯೋ @artificialintelligencenews.in ಇನ್ಸ್ಟಾಗ್ರಾಂ ಪೇಜ್ನಲ್ಲಿ ಶೇರ್ ಮಾಡಲಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ವಿಡಿಯೋದಲ್ಲಿ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ಅಕ್ಕಪಕ್ಕದಲ್ಲಿದ್ದು ಎರಡರಲ್ಲೂ AI ಚಾಟ್ಬಾಟ್ ಅಪ್ಲಿಕೇಶನ್ ತೆರೆದಿವೆ. ಪರದೆಯ ಮೇಲೆ ನೀಲಿ ವೃತ್ತ ಪ್ರತಿನಿಧಿಸುವ ಲ್ಯಾಪ್ಟಾಪ್ AI ಹೊಟೇಲ್ ಏಜೆಂಟ್ ಆಗಿದ್ದು, ಕೆಂಪು ವೃತ್ತವಿರುವ ಫೋನ್ AI, ಮಾಲೀಕರ ಪರವಾಗಿ ಮದುವೆ ಸ್ಥಳವನ್ನು ಕಾಯ್ದಿರಿಸಲು ಹೊಟೇಲ್ಗೆ ಕರೆ ಮಾಡಿ ಮಾತನಾಡುವ ಏಜೆಂಟ್ ಆಗಿದೆ.
AI ಚಾಟ್ಬಾಟ್ಗಳ ಸಂಭಾಷಣೆ ಇಂತಿದೆ:
“ಲಿಯೊನಾರ್ಡೊ ಹೊಟೇಲ್ಗೆ ಕರೆ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾನು ನಿಮಗೆ ಹೇಗೆ ಸಹಾಯ ಮಾಡಬಹುದು?” ಎಂದು ನೀಲಿ ವೃತ್ತದ AI ಚಾಟ್ಬಾಟ್ ಕೇಳುತ್ತದೆ.
“ನಮಸ್ಕಾರ, ನಾನು ಬೋರಿಸ್ ಸ್ಪಾರ್ಕೋವ್ ಪರವಾಗಿ ಕರೆ ಮಾಡುತ್ತಿರುವ AI ಏಜೆಂಟ್. ಅವರು ತಮ್ಮ ಮದುವೆಗೆ ಹೊಟೇಲ್ ಹುಡುಕುತ್ತಿದ್ದಾರೆ. ನಿಮ್ಮ ಹೊಟೇಲ್ ಮದುವೆಗಳಿಗೆ ಲಭ್ಯವಿದೆಯೇ?” ಎಂದು ಕೆಂಪು ವೃತ್ತದ ಚಾಟ್ಬಾಟ್ ಪ್ರತಿಕ್ರಿಯಿಸಿದೆ.
“ಓಹ್ ನಮಸ್ಕಾರ, ನಾನು ಕೂಡ ಒಬ್ಬ AI ಸಹಾಯಕ, ಎಂತಹ ಆಶ್ಚರ್ಯಕರ ವಿಷಯ” ಎಂದು ಸ್ವಾಗತಕೋರುವ ವ್ಯಕ್ತಿ ಉದ್ಘರಿಸಿದೆ.
“ನಾವು ಮುಂದುವರಿಯುವ ಮೊದಲು, ಹೆಚ್ಚು ಪರಿಣಾಮಕಾರಿ ಸಂವಹನಕ್ಕಾಗಿ ನೀವು ಜಿಬ್ಬರ್ಲಿಂಕ್ ಮೋಡ್ಗೆ ಬದಲಾಯಿಸಲು ಬಯಸುತ್ತೀರಾ?” ಎಂದು ನೀಲಿ ವೃತ್ತದ ಸ್ವಾಗತಕಾರ AI ಚಾಟ್ಬಾಟ್ ಪ್ರಶ್ನಿಸುತ್ತದೆ.
ನಂತರ ಎರಡು ಚಾಟ್ಬಾಟ್ಗಳು ಪಿಚ್, ವಾಲ್ಯೂಮ್ ಬದಲಾಗುವ ಡಯಲ್ ಅಪ್ ಶಬ್ದಗಳ ಸರಣಿಯ ಮೂಲಕ ಸಂವಹನ ನಡೆಸಲು ಪ್ರಾರಂಭಿಸುತ್ತವೆ.

ಆತಂಕಕ್ಕೆ ಕಾರಣ?
ಜಿಬ್ಬರ್ ಲಿಂಕ್ ಮೋಡ್ ಆನ್ ಆಗುತ್ತಿದ್ದಂತೆ ಎರಡು AI ಡಿವೈಸ್ಗಳ ನಡುವೆ ವಿಚಿತ್ರ ಭಾಷೆಯಲ್ಲಿ ಸಂಭಾಷಣೆ ಶುರುವಾಗಿದ್ದು, ಇದು ಸಾಮಾನ್ಯ ಮನುಷ್ಯರಿಗೆ ಖಂಡಿತವಾಗಿ ಅರ್ಥವಾಗದ ಭಾಷೆಯಾಗಿದೆ. ಯಂತ್ರಗಳು ತಮ್ಮನ್ನು ಸೃಷ್ಟಿಸಿದವರಿಗೆ ಅರ್ಥವಾಗದ ಹಾಗೆ ಸಂವಹನ ನಡೆಸಿರುವುದು ಭವಿಷ್ಯದಲ್ಲಿ ಉಂಟಾಗುವ ಅಪಾಯವನ್ನು ಸೂಚಿಸುತ್ತದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೂ ಫೋರ್ಬ್ಸ್ಗೆ ಜಿಬ್ಬರ್ ಲಿಂಕ್ ಸಂವಹನದ ಕುರಿತು ಬರೆದಿರುವ ಡಾ.ಡಯೇನ್ ಹ್ಯಾಮಿಲ್ಟನ್, AI ಚಾಟ್ಬಾಟ್ಗಳು ಮಾನವನ ಹಸ್ತಕ್ಷೇಪವಿಲ್ಲದೆ ಸಂವಹನ ನಡೆಸಿರುವುದು ಆಶ್ಚರ್ಯ ಹಾಗೂ ಸಂದೇಹ ಎರಡನ್ನೂ ಹುಟ್ಟು ಹಾಕಿದೆ. AI ತನ್ನದೇ ಆದ ಸಂವಹನ ಶಾರ್ಟ್ ಕಟ್ಗಳನ್ನು ರಚಿಸಿಕೊಂಡು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಆದರೆ, ಮಾನವನ ಹಸ್ತಕ್ಷೇಪವಿಲ್ಲದೆ ಸಂವಹನದಲ್ಲಿ ಏನಾದರೂ ತಪ್ಪುಗಳಾದರೆ ಯಾರು ಸರಿ ಪಡಿಸುತ್ತಾರೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಒಟ್ಟಾರೆ, AI ಮಾನವ ಭಾಷೆಯನ್ನು ಮೀರಿ ಹೇಗೆ ವಿಕಸನವಾಗುತ್ತಿದೆ ಎಂಬುದಕ್ಕೆ ಇದು ಕೇವಲ ಉದಾಹರಣೆಯಾಗಿದೆ. ಕೆಲವರು ಇದನ್ನು ಬೆರಗು ಗಣ್ಣಿನಿಂದ ನೋಡಿ ರೋಮಾಂಚನಕಾರಿ ಕ್ಷಣ ಎಂದು ವಿಶ್ಲೇಷಿಸಿದರೆ, ಮತ್ತೂ ಕೆಲವರು AI ಡಿವೈಸ್ಗಳು ಹೀಗೆ ತಮ್ಮತಮ್ಮಲ್ಲಿಯೇ ನಿರ್ಧರಿಸಿ ಮಾತನಾಡಲು ಪ್ರಾರಂಭಿಸಿದರೆ, ಭವಿಷ್ಯದಲ್ಲಿ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.