ಎಣ್ಣೆಯಲ್ಲಿ ಮುಳುಗಿಸಿ ಗರಿಗರಿಯಾಗಿ ಕರಿದು ಅದಕ್ಕೆ ಒಂದಿಷ್ಟು ಉಪ್ಪು ಜೊತೆಗೆ ಕಣ್ಣು ಕುಕ್ಕುವಂತೆ ಕೃತಕ ಹಸಿರು ಬಣ್ಣದಲ್ಲಿ ಮಿಂದಿ ಕುರುಕಲು ಪ್ರಿಯರ ಚಿತ್ತ ಸೆಳೆಯುತ್ತ ಕಡಿಮೆ ಬೆಲೆಯಲ್ಲಿ ಎಂತಹ ರುಚಿಕರ ತಿನಿಸು ಎಂದೆನಿಸಿಕೊಳ್ಳುತ್ತಿದ್ದ ಹುರಿದ ಹಸಿರು ಬಟಾಣಿ ಯಾರಿಗೆ ಇಷ್ಟವಿರಲ್ಲಾ ಹೇಳಿ. ಬಾಯಿ ಚಪ್ಪರಿಸಿ ತಿನ್ನುತ್ತಿದ್ದ ಬಟಾಣಿ ಕೇವಲ ಹುರಿದದ್ದು ಮಾತ್ರವಲ್ಲ ಕೃತಕ ಬಣ್ಣದಲ್ಲಿ ಮಿಂದೆದ್ದು ಎಂದರೆ ನಂಬುತ್ತಿರಾ….? ಇವರ್ಯಾಕೆ ಹುರಿದ ಬಟಾಣಿಯ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಹಾಕುತ್ತಿದ್ದಾರೆ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಈಗಾಗಲೇ ಬೀದಿ ಬದಿ ಸೇರಿದಂತೆ ಕೆಲವು ಹೋಟೇಲ್ ಗಳಲ್ಲಿ ಕೆಂಪು ಕೃತಕ ಬಣ್ಣ ಬಳಸಿ ತಯಾರಾಗುತ್ತಿದ್ದ ಕಬಾಬ್, ಹುಡುಗಿಯರ ಹಾಟ್ ಫೆವರೆಟ್ ಗೋಬಿ ಮಂಚೂರಿ, ಹಾಗೆಯೇ ಬಾಯಲ್ಲಿ ನೀರೂರಿಸುತ್ತಿದ್ದ ಬಾಂಬೆ ಮಿಠಾಯಿಗಳನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದೆ. ಇದೀಗ ಬೆಲೆ ಕಡಿಮೆ, ರುಚಿ ಹೆಚ್ಚು ಎಂದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಬಾಯಿ ಚಪ್ಪರಿಸಿ ತಿನ್ನುತ್ತಿದ್ದ ಹುರಿದ ಹಸಿರು ಬಟಾಣಿಯೂ ಸಹ ಅದೇ ಸಾಲಿಗೆ ಸೇರುವ ದಾರಿಯಲ್ಲಿದೆ.

ಹೌದು, ಕೃತಕ ಬಣ್ಣಗಳಿಂದ ಕಲಬೆರಕೆ ಮಾಡಿ ತಯಾರಾಗುತ್ತಿರುವ ಹುರಿದ ಹಸಿರು ಬಟಾಣಿಯನ್ನು ನಿಷೇಧ ಮಾಡುವತ್ತ ರಾಜ್ಯ ಸರ್ಕಾರ ಗಮನ ಹರಿಸಿದೆ. ಹಲವರು ಇದನ್ನು ತಿಂದು ಹೊಟ್ಟೆ ನೋವೆಂದು ಆಸ್ಪತ್ರೆಗೆ ಸೇರಿರುವ ಘಟನೆಗಳು ಕಂಡು ಬಂದಿದೆ. ಇದರಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಸಿಂಥೆಟಿಕ್ ಬಣ್ಣಗಳನ್ನು ಬಳಸುವ ಮಾರಾಟಗಾರರ ವಿರುದ್ಧ ಕ್ರಮ ಕೈಗೊಂಡಿದ್ದು, ಪ್ರಯೋಗಾಲಯ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಲು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಸರ್ಕಾರದ ಆದೇಶದನ್ವಯ ಈಗಾಗಲೇ ಕೆಲವು ಸ್ಥಳಗಳಲ್ಲಿ ಪ್ರಾಥಮಿಕ ತನಿಖೆ ಪ್ರಾರಂಭವಾಗಿದ್ದು, ಬಟಾಣಿಯಲ್ಲಿನ ಕೃತಕ ಬಣ್ಣದ ಪ್ರಮಾಣವನ್ನು ನಿರ್ಧರಿಸಲು ಮಾದರಿಗಳನ್ನು ಆಹಾರ ಸುರಕ್ಷತಾ ಇಲಾಖೆ ಸಂಗ್ರಹಿಸಿದೆ. ಈವರೆಗೆ ರಾಜ್ಯದೆಲ್ಲೆಡೆಯಿಂದ ಸುಮಾರು ೭೦ ಮಾದರಿಗಳನ್ನು ಕಲೆಹಾಕಲಾಗಿದ್ದು, ಸರ್ಕಾರಿ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇನ್ನು ೧೫ ದಿನಗಳಲ್ಲಿ ಅದರ ವರದಿ ಬರಲಿದ್ದು, ನಿಯಮ ಉಲ್ಲಂಘಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಜೊತೆಗೆ, ಹುರಿದ ಹಸಿರು ಬಟಾಣಿಯನ್ನು ರಾಜ್ಯ ಸರ್ಕಾರ ನಿಷೇಧ ಮಾಡಲಿದೆಯೇ ಎಂಬುದೂ ಸಹ ನಂತರದ ದಿನಗಳಲ್ಲಿ ತಿಳಿಯಲಿದೆ.