ಸುಮಾರು 30-40 ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ ಬಹುತೇಕ ಕಲಾವಿದರು ಇಂದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವರಿಗೆ ಅವಕಾಶ ಇಲ್ಲದೆ ಬೇರೆ ದಾರಿ ಹುಡುಕಿಕೊಂಡರೆ, ಕೆಲವರು ಶಾಶ್ವತವಾಗಿ ನಮ್ಮನ್ನೆಲ್ಲಾ ಅಗಲಿದ್ದಾರೆ. ಇನ್ನೂ ಕೆಲವರು ಚಿತ್ರರಂಗದಲ್ಲಿ ಉತ್ತಮ ಅವಕಾಶಗಳಿದ್ದರೂ ನಟನೆಯಿಂದ ದೂರ ಸರಿದು ವೈಯಕ್ತಿಕ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತವರಲ್ಲಿ ಮಾಧವಿ ಕೂಡಾ ಒಬ್ಬರು.
ರಾಗ ಜೀವನ ರಾಗ, ಪ್ರೇಮ ಸುಮವು ಅರಳಿದಾಗ ಮೋಹನ ರಾಗ… ಅಣ್ಣಾವ್ರ ಜೊತೆ ಶೃತಿ ಸೇರಿದಾಗ ಚಿತ್ರದಲ್ಲಿ ಡ್ಯೂಯೆಟ್ ಹಾಡಿದ ಮಾಧವಿ ಕನ್ನಡಿಗರಿಗೆ ಬಹಳ ಚಿರಪರಿಚಿತ. ತಮ್ಮ ಸೌಂದರ್ಯ, ಮೈಮಾಟ, ನಟನೆಯಿಂದಲೇ ಸಿನಿರಸಿಕರ ಹೃದಯ ಗೆದ್ದ ಮಾಧವಿ ಬೇರೆ ಭಾಷೆಯವರಾದರೂ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡರು. ಸಿನಿಮಾರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಚಿತ್ರರಂಗಕ್ಕೆ ಟಾಟಾ ಹೇಳಿ ವಿದೇಶಕ್ಕೆ ಹೋಗಿ ಸೆಟಲ್ ಆದರು. ಈಗ ಮಾಧವಿ ತಮ್ಮದೇ ಸ್ವಂತ ಕಂಪನಿ ಹೊಂದಿದ್ದಾರೆ. ಪತಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಮಾಧವಿ ಮೊದಲ ಹೆಸರು ಕನಕ ವಿಜಯಲಕ್ಷ್ಮೀ, ಇವರು ಆಂಧ್ರಪ್ರದೇಶದ ಎಲ್ಲೂರಿಗೆ ಸೇರಿದವರು. ತಂದೆ ಗೋವಿಂದಸ್ವಾಮಿ, ತಾಯಿ ಶಶಿರೇಖಾ. ಹೆತ್ತವರು ಮಗಳು ಮಾಧವಿಗೆ ಚಿಕ್ಕಂದಿನಲ್ಲೇ ನೃತ್ಯಕ್ಕೆ ಸೇರಿಸಿದರು. 5 ವರ್ಷದವರಾಗಿದ್ದಾಗಲೇ ಮಾಧವಿ ವೇದಿಕೆ ಮೇಲೆ ಭರತನಾಟ್ಯ ಕಾರ್ಯಕ್ರಮ ನೀಡುತ್ತಾ ಬಂದವರು. ಹೀಗೆ ಕಾರ್ಯಕ್ರಮವೊಂದರಲ್ಲಿ ಮಾಧವಿ ನೃತ್ಯ ನೋಡಿದ ಟಾಲಿವುಡ್ಗ ಸೇರಿದವರೊಬ್ಬರು ಅವರಿಗೆ ಸಿನಿಮಾಗಳಲ್ಲಿ ನಟಿಸುವಂತೆ ಸಲಹೆ ನೀಡಿದ್ದಾರೆ. ಆರಂಭದಲ್ಲಿ ಮಾಧವಿ ಕುಟುಂಬದಲ್ಲಿ ಇದಕ್ಕೆ ಒಪ್ಪದಿದ್ದರೂ ಮಗಳ ಬೆಳವಣಿಗೆ ದೃಷ್ಟಿಯಿಂದ ಒಪ್ಪಿಗೆ ನೀಡಿದ್ದಾರೆ.
1976ರಲ್ಲಿ ತೆರೆಕಂಡ ದಾಸರಿ ನಾರಾಯಣ್ ರಾವ್ ನಿರ್ದೇಶನದ ತೂರ್ಪು ಪಡಮರ ಎಂಬ ಚಿತ್ರದ ಮೂಲಕ ಮಾಧವಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಮುಂದೆ ತೆಲುಗು ಮಾತ್ರವಲ್ಲದೆ ಕನ್ನಡ, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಕೂಡಾ ನಟಿಸಿ ಮಾಧವಿ ಬಹುಭಾಷಾ ನಟಿಯಾಗಿ ಹೆಸರು ಮಾಡಿದರು. 1981ರಲ್ಲಿ ತೆರೆ ಕಂಡ ಘರ್ಜನೆ ಸಿನಿಮಾ ಮೂಲಕ ಮಾಧವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ನಂತರ ಅನುಪಮಾ, ಹಾಲುಜೇನು, ಒಂದೇ ಗುರಿ, ಚಾಣಕ್ಯ, ಕೈದಿ, ಭಾಗ್ಯದ ಲಕ್ಷ್ಮೀ ಬಾರಮ್ಮ, ಅನುರಾಗ ಅರಳಿತು, ಶೃತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಮಾಧವಿ ನಟಿಸಿದರು. ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಅನಂತ್ನಾಗ್, ಶಂಕರ್ನಾಗ್ ಅವರಂಥ ಮಹಾನ್ ನಟರೊಂದಿಗೆ ಮಾಧವಿ ತೆರೆ ಹಂಚಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಇನ್ನೂ ಅವಕಾಶಗಳಿರುವಂತೆಯೇ ತಮ್ಮ ಆಧ್ಯಾತ್ಮಿಕ ಗುರುಗಳು ನೋಡಿದ ರಾಲ್ಫ್ ಶರ್ಮಾ ಎಂಬುವರನ್ನು ಮದುವೆಯಾಗಿ ಮಾಧವಿ ಅಮೆರಿಕ ತೆರಳಿದರು. ಈ ದಂಪತಿಗೆ ಈಗ ಟಿಫಾನಿ ಗೌರಿಕಾ, ಪ್ರಿಸಿಲ್ಲಾ ಅರ್ಪಣ, ಎವ್ಲಿನ್ ದಿವ್ಯಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಪತಿ ರಾಲ್ಫ್ ಶರ್ಮಾ ನ್ಯೂಯಾರ್ಕ್ನಲ್ಲಿ ಫಾರ್ಮಾ ಕಂಪನಿಯನ್ನು ಹೊಂದಿದ್ದು ಮಾಧವಿ , ಪತಿಯ ಬಿಸ್ನೆಸ್ಗೆ ಜೊತೆಯಾಗಿದ್ದಾರೆ. ಈಗಲೂ ಅವಕಾಶ ದೊರೆತಾಗಲೆಲ್ಲಾ ವೇದಿಕೆ ಮೇಲೆ ಭರತನಾಟ್ಯ ಪ್ರದರ್ಶನ ಮಾಡುತ್ತಾರೆ. ಚಿತ್ರರಂಗದಿಂದ ದೂರ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಮಾಧವಿ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲಿ ಅನ್ನೋದು ಅಭಿಮಾನಿಗಳ ಆಶಯ.