ಒಂದೆರಡು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಘಟನೆ ಇಡೀ ಕರ್ನಾಟಕದಲ್ಲಿ ಕಿಚ್ಚು ಹೊತ್ತಿಸಿದೆ. ಬೆಳಗಾವಿಯ ಬಸ್ ನಲ್ಲಿ, ಕನ್ನಡದ ಡ್ರೈವರ್ ಒಬ್ಬರು ಟಿಕೆಟ್ ಅನ್ನು ಕನ್ನಡದಲ್ಲಿ ಕೇಳಿ ಎಂದು ಹೇಳಿದ್ದಕ್ಕೆ, ಆ ಕಂಡಕ್ಟರ್ ಮೇಲೆ ಮರಾಠಿಗರು ಹಲ್ಲೆ ಮಾಡಿದರು. ಹಲವು ಜನರು ಬಂದು ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆಯ ಬಗ್ಗೆ ಜನರು ಆಕ್ರೋಶ ಗೊಂಡಿದ್ದಾರೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ ಜಿಲ್ಲೆ, ಈ ಊರಿನಲ್ಲಿ ಹಲವು ಜನ ಕನ್ನಡಿಗರಿದ್ದಾರೆ. ಹಾಗಿದ್ದರೂ ಸಹ ಬೇರೆ ಭಾಷೆಯವರಿಂದ ನಮ್ಮ ಸರ್ಕಾರದ ನೌಕರ, ಬಸ್ ಕಂಡಕ್ಟರ್ ಮೇಲೆ ಈ ರೀತಿ ನಡೆದಿರುವುದು, ಬಹಳ ಬೇಸರದ ಸಂಗತಿ. ಪರ ಭಾಷೆಯವರು ನಮ್ಮ ಮೇಲೆ ಆಕ್ರಮಣ ಮಾಡೋಕೆ ಬಿಟ್ಟ ಹಾಗಿದೆ..
ಮರಾಠಿಗರು ಮತ್ತು ಕನ್ನಡಿಗರ ನಡುವೆ ಈ ರೀತಿಯ ಘಟನೆಗಳು ನಡೆಯುವುದು ನೋಡಿದ್ದೇವೆ. ಆದರೆ ಇಂಥದ್ದೊಂದು ಘಟನೆ ನಡೆದು, ನಮ್ಮ ರಾಜ್ಯದ ಸರ್ಕಾರಿ ನೌಕರನ ಮೇಲೆ ಈ ರೀತಿ ಆಗಿದ್ದು, ಕ್ಷಮಿಸುವುದಕ್ಕೆ ಆಗದ ತಪ್ಪು. ಯಾಕೆಂದರೆ ಅವರು ತಪ್ಪಾಗಿ ಏನನ್ನು ಹೇಳಿಲ್ಲ, ಅವರಿಗೆ ಮರಾಠಿ ಭಾಷೆ ಬರದ ಕಾರಣ ಕನ್ನಡದಲ್ಲಿ ಟಿಕೆಟ್ ಕೇಳಿ ಎಂದು ಹೇಳಿದರು. ಅದೊಂದು ಕಾರಣಕ್ಕೆ ಅವರ ಮೇಲೆ ಅಷ್ಟು ದೊಡ್ಡದಾಗಿ ಹ*ಲ್ಲೆ ಮಾಡಿರುವುದು ನಿಜಕ್ಕೂ ಶೋಚನೀಯ. ನಮ್ಮ ರಾಜ್ಯದಲ್ಲಿ ನಮಗೆ ಸ್ಥಾನಮಾನ ಇಲ್ಲ ಎನ್ನುವ ಹಾಗೆ ಆಗಿದೆ. ಆದರೆ ಈ ಘಟನೆ ಇನ್ನಷ್ಟು ಗಲಾಟೆಗಳಿಗೆ ಕೂಡ ಎಡೆಮಾಡಿ ಕೊಟ್ಟಿದೆ. ರಾಜ್ಯದ ಜನರು ಈ ವಿಷಯದ ಬಗ್ಗೆ ರೊಚ್ಚಿಗೆದ್ದಿದ್ದಾರೆ.
ಈ ಘಟನೆ ಇಂದ, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಗಳನ್ನು ತಡೆ ಹಿಡಿಯಲಾಗಿದೆ. ಕನ್ನಡಪರ ಹೋರಾಟ ಸಂಘಗಳು ಈ ಘಟನೆ ಬಗ್ಗೆ ಹೋರಾಟ ಮಾಡುವುದಕ್ಕೆ ಶುರು ಮಾಡಿದೆ. ಈ ಒಂದು ಘಟನೆ ದೊಡ್ಡದಾಗಿಯೇ ಸುದ್ದಿಯಾಗುತ್ತಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು ಎನ್ನುವುದು ಎಲ್ಲರ ಆಶಯ. ಈ ಘಟನೆ ಬಗ್ಗೆ ಕನ್ನಡಪರ ಹೋರಾಟಗಾರರು ಧ್ವನಿ ಎತ್ತಿದ್ದಾರೆ ಹೊರತು, ಕನ್ನಡ ಚಿತ್ರರಂಗದ ಕಲಾವಿದರು ಇದರ ಬಗ್ಗೆ ಮಾತನಾಡಿಲ್ಲ ಎನ್ನುವ ಬೇಸರ ಎಲ್ಲರಲ್ಲೂ ಇತ್ತು. ಇದೀಗ ಕನ್ನಡದ ಯುವ ಭರವಸೆಯ ನಟ ನವೀನ್ ಶಂಕರ್ ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇವರ ಟ್ವೀಟ್ ಗೆ ಎಲ್ಲರಿಂದ ಪ್ರಶಂಸೆ ಸಿಗುತ್ತಿದೆ.

“ಬೆಳಗಾವಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಆತಂಕ ಮೂಡಿಸುತ್ತಿದೆ. ಕನ್ನಡಿಗರನ್ನು ಅವಮಾನಿಸಿದವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ಪದೇ ಪದೇ ತೊಂದರೆ ಅನುಭವಿಸುತ್ತಿರುವ ಕನ್ನಡಿಗರಿಗೆ, ಶಾಶ್ವತ ಪರಿಹಾರ ದೊರಕಿಸಿಕೊಡಬೇಕು. #ಸಿರಿಗನ್ನಡಂ ಗೆಲ್ಗೆ” ಎಂದು ಟ್ವೀಟ್ ಮಾಡಿದ್ದಾರೆ ನಟ ನವೀನ್ ಶಂಕರ್.. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು, ಯುವ ಕಲಾವಿದರು ಎಲ್ಲರೂ ಇದೇ ರೀತಿ ಒಗ್ಗಟ್ಟಿನಿಂದ ಈ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಿದರೆ, ನಿಜಕ್ಕೂ ಸರ್ಕಾರ ಕ್ರಮ ಕೈಗೊಳ್ಳುವುದಕ್ಕೆ ಸುಲಭ ಆಗುತ್ತದೆ. ಸರ್ಕಾರಕ್ಕೆ ಒಂದು ಭಯ ಕೂಡ ಬರುತ್ತದೆ. ಆದರೆ ಬೇರೆ ಯಾರು ಇನ್ನು ಕೂಡ ಈ ವಿಷಯದ ಬಗ್ಗೆ ಮಾತನಾಡದೇ ಇರುವುದು ಬೇಸರದ ವಿಷಯ ಆಗಿದೆ.
ಹಿಂದೆ ಅಣ್ಣಾವ್ರು ಇದ್ದಾಗ, ವಿಷ್ಣುದಾದ ಇದ್ದಾಗ, ಅಂಬರೀಶ್ ಅವರು ಇದ್ದಾಗ ಕನ್ನಡದ ವಿಷಯ ಎಂದು ಬಂದಾಗ ಎಲ್ಲಾ ಹಿರಿಯ ಕಲಾವಿದರು ಜೊತೆಯಾಗಿ ಸೇರಿ, ಚಳುವಳಿಗಳನ್ನು ಮಾಡುತ್ತಿದ್ದರು. ಅದರಲ್ಲಿ ಎಲ್ಲರೂ ಭಾಗವಹಿಸುತ್ತಿದ್ದರು. ಆದರೆ ಈಗ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ, ಯಾವುದೇ ವಿಷಯಕ್ಕೆ ಕಲಾವಿದರು ಅಷ್ಟೇನು ಸ್ಪಂದಿಸುತ್ತಿಲ್ಲ ಇದು ಬೇಸರದ ವಿಷಯ ಆಗಿದೆ. ಏಕೆಂದರೆ ಕನ್ನಡ ಕಲಾವಿದರೆಲ್ಲರು ಸೇರಿ ಈ ವಿಷಯಕ್ಕೆ ಸ್ಪಂದಿಸಿದರೆ, ಒಕ್ಕೊರಲಿನಿಂದ ಸರ್ಕಾರಕ್ಕೆ ಮನವಿ ಮಾಡಿದರೆ, ಈ ವಿಚಾರ ಬೇಗ ಬಗೆಹರಿಯಬಹುದು ಎನ್ನುವುದಂತೂ ಸತ್ಯ. ಧಗ ಧಗನೆ ಹೊತ್ತಿ ಉರಿಯುತ್ತಿರುವ ಭಾಷೆ ಎನ್ನುವ ಬೆಂಕಿ, ಯಾವ ರೀತಿ ಕಡಿಮೆ ಆಗುತ್ತದೆ, ಸರ್ಕಾರ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.