ಈ ಕಾಂಗ್ರೆಸ್ ನಾಯಕರಿಗೆ ಅದೇನಾಗಿದೆಯೋ ಗೊತ್ತಿಲ್ಲ. ಬಹಿರಂಗ ಹೇಳಿಕೆಗಳನ್ನ ಕೊಡಬೇಡಿ ಎಂದರೂ ಕೂಡ ನಿತ್ಯವೂ ಒಂದಿಲ್ಲೊಂದು ಗೊಂದಲದ ಹೇಳಿಕೆಗಳನ್ನ ನೀಡುತ್ತಲೇ ಇದ್ದಾರೆ. ಅತ್ತ ಸಿದ್ದರಾಮಯ್ಯ ಬಣದವರು ಮಾತನಾಡಿದರೆ, ಇತ್ತ ತಿರುಗೇಟು ರೀತಿಯಲ್ಲಿ ಡಿಕೆ ಶಿವಕುಮಾರ್ ಬಣದವರು ಮಾತನಾಡುತ್ತಿದ್ದಾರೆ. ಹೈ ಕಮಾಂಡ್ ಸೂಚನೆ ಬಳಿಕವೂ ಇದು ಮುಂದುವರೆದಿರೋದು ದುರಾದೃಷ್ಟಕರ ಸಂಗತಿ.
ಹೈ ಕಮಾಂಡ್ ಅಂದ್ರೆ ಕಾಂಗ್ರೆಸ್ ನಲ್ಲಿ ಭಯ ಇಲ್ವಾ ಅನ್ನೋ ಪ್ರಶ್ನೆ ಹಾಗೂ ಅನುಮಾನ ಈಗ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಡುತ್ತಿದೆ. ಅತ್ತ ಗೊತ್ತಿಲ್ಲದಂತೆ ಡಿಕೆ ಶಿವಕುಮಾರ್, ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದರೆ, ಇತ್ತ ಡಿಕೆ ಶಿವಕುಮಾರ್ ಪ್ರಯತ್ನಕ್ಕೆ ಆಗಿಂದಾಗಲೇ ತಣ್ಣೀರೆರೆಚುವ ಕಾರ್ಯ ಮಾಡ್ತಾ ಇದ್ದಾರೆ ಸಿದ್ದರಾಮಯ್ಯ ಬಣದವರು. ಹೈ ಕಮಾಂಡ್ ಕೊಡುವ ಸಂದೇಶಗಳಿಗೆ ಬೆಲೆ ಇಲ್ಲದಂತೆ ಇಲ್ಲಿನ ನಾಯಕರು ನಡೆದುಕೊಳ್ತಾ ಇದ್ದಾರೆ. ಬಹಿರಂಗ ಹೇಳಿಕೆಗಳನ್ನ ಕೊಡಬೇಡಿ ಅಂದರೂ ಕೂಡ ಈ ಪರಿಪಾಠ ಮತ್ತೆ ಮುಂದುವರೆದಿದೆ.
ಹೌದು, ಪವರ್ ಶೇರಿಂಗ್ ವಿಚಾರದಲ್ಲಿ ಯಾರೂ ಮಾತನಾಡುವಂತಿಲ್ಲ. ಬಾಯಿಮುಚ್ಚಿಕೊಂಡು ಇರಿ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕೊಟ್ಟರೂ ಪ್ರಯೋಜನ ಇಲ್ಲ ಎಂಬುದು ಆಗಿಂದಗ್ಲೇ ಸಾಬೀತಾಗ್ತಾ ಇದೆ. ಅದಕ್ಕೆ ಸಾಕ್ಷಿ ಇಂದು ಮತ್ತೆ ಜಮೀರ್ ಅಹ್ಮದ್ ನೀಡಿದ ಹೇಳಿಕೆ. ಬಳ್ಳಾರಿಯಲ್ಲಿ ಇಂದು ಮಾತನಾಡಿರುವ ಅವರು, ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗಲ್ಲ, ಮುಟ್ಟಿದ್ರೆ ಭಸ್ಮ ಆಗ್ತಾರೆ. ಸಿಎಂ, ಕೆಪಿಸಿಸಿ ಸ್ಥಾನ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಇದ್ದಾರೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಖಾಲಿ ಇದ್ರೆ ತಾನೇ ಚರ್ಚೆ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಜಮೀರ್, ಸಿಎಂ ಸಿದ್ದರಾಮಯ್ಯ ಖುರ್ಚಿ ಮುಟ್ಟೋಕೆ ಸಾಧ್ಯ ಏನ್ರಿ? ಅದೊಂಥರ ಬೆಂಕಿ ಅದು, ಬೆಂಕಿ ಮುಟ್ಟಿದ್ರೆ ಸುಟ್ಟೋಗ್ತಾರೆ. ಸಿದ್ದರಾಮಯ್ಯ ಬೆಂಕಿ ಇದ್ದಂತೆ, ನಾವು ಟಗರು ಅಂತೀವಿ. ಆ ಬೆಂಕಿ ಮುಟ್ಟೋಕೆ ಸಾಧ್ಯವಿಲ್ಲ ಎಂದು ಡಿಕೆ ಅಂಡ್ ಟೀಂ ಗೆ ನೇರವಾಗಿಯೇ ಸಂದೇಶ ರವಾನೆ ಮಾಡಿದಂಗಿದೆ. ಜೊತೆಗೆ ನಮ್ಮ ಪಕ್ಷ ಹೈಕಮಾಂಡ್ ಪಕ್ಷ, ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ. ಹೈಕಮಾಂಡ್ ಬದಲಾವಣೆ ಮಾಡಬೇಕು ಅಂತ ನಿರ್ಧಾರ ಮಾಡಿದ್ರೆ ನಾವು ಅಭಿಪ್ರಾಯ ತಿಳಿಸಬಹುದು. ಆದ್ರೆ ಹೈಕಮಾಂಡ್ ಯಾವುದೇ ನಿರ್ಧಾರಕ್ಕೆ ಇನ್ನೂ ಬಂದಿಲ್ಲ. ನಮ್ಮ ಪಕ್ಷದವರು ಯಾರೂ ಕೂಡ ಸಿದ್ದರಾಮಯ್ಯ ಬದಲಾವಣೆ ಮಾಡಲಿ ಅಂತಲೂ ಹೇಳಿಲ್ಲಾ. ಎಲ್ಲಾ ಸಮಾಜಕ್ಕೂ ಸಿಎಂ ಆಗಬೇಕು ಅಂತ ಆಸೆ ಇರುತ್ತೆ. ದಲಿತ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ, ಲಿಂಗಾಯತ ಸಮುದಾಯ ಎಲ್ಲರೂ ಸಿಎಂ ಆಗಬೇಕು ಅಂತಾರೆ. ತೀರ್ಮಾನ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಯಾವಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗೋ ಸಾಧ್ಯತೆ ತೀರ ಕಡಿಮೆ ಅನ್ನೋದು ಗೊತ್ತಾಯ್ತೋ ಆಗಿಂದಲೂ ಮತ್ತೆ ಸಿಎಂ ಬಣ ಪವರ್ ಶೇರಿಂಗ್ ಕೂಡ ಆಗುವಂತಿಲ್ಲ ಅನ್ನೋ ರೀತಿ ಮಾತನಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಲೇ ಬೇಕು ಅಂತ ದಲಿತ ಸಚಿವರು ಹೈ ಕಮಾಂಡ್ ಮುಂದೆ ಒತ್ತಾಯ ಇಟ್ಟಿದ್ದರು. ಆದರೆ ಅದರ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಹೀಗಾಗಿ ಸಿಎಂ ಸ್ಥಾನ ಕೂಡ ಬಿಟ್ಟುಕೊಡೋದಿಲ್ಲ ಅನ್ನೋದನ್ನ ಪದೇ ಪದೇ ಪರೋಕ್ಷವಾಗಿ ಸಿಎಂ ಆಪ್ತರು ಹೇಳುತ್ತಿದ್ದಾರೆ ಎನ್ನಲಾಗಿದೆ.

ಇದರ ಜೊತೆಗೆ ಇತ್ತೀಚೆಗ ಎರಡ್ಮೂರು ಬಾರಿ ಡಿಕೆ ಶಿವಕುಮಾರ್ ಕೂಡ ಕುರ್ಚಿ ಉಳಿಸಿಕೊಳ್ಳಿವ ಹೇಳಿಕೆ ನೀಡಿದ್ದರು. ನಾನು ಯಾವುದೇ ಹುದ್ದೆಯಲ್ಲಿ ಇದ್ದರೂ ಕೂಡ ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿ ಅನ್ನೋದನ್ನ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ್ದರು. ಇದು ಸಿದ್ದು ಟೀಂಗೆ ಮತ್ತಷ್ಟು ಖಾರ ಸುರಿದಂತೆ ಆಗಿತ್ತು. ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿ ಅಂದರೆ ಒಂದು ಸಿಎಂ ಹುದ್ದೆ, ಮತ್ತೊಂದು ಕೆಪಿಸಿಸಿ ಹುದ್ದೆ. ಹೀಗಾಗಿ ಸದ್ಯಕಂತೂ ಕೆಪಿಸಿಸಿ ಸ್ಥಾನ ಬಿಡಲು ಡಿಕೆ ರೆಡಿ ಇಲ್ಲ ಅನ್ನೋದು ಸ್ಪಷ್ಟ. ಈ ಸ್ಥಾನ ಬಿಟ್ಟರೆ ಸಿಎಂ ಸ್ಥಾನ ಬೇಕು ಅನ್ನೋ ನಿರೀಕ್ಷೆಯೂ ಇದೆ. ಹೀಗಾಗಿಯೇ ಜಮೀರ್ ಈ ರೀತಿ ಹೇಳಿಕೆ ನೀಡ್ತಾ ಇದ್ದಾರೆ ಎನ್ನಲಾಗುತ್ತಿದೆ.
ಸದ್ಯ ಕಾಂಗ್ರೆಸ್ ಪಕ್ಷದಲೆ ಬಂಡಾಯದ ಕಾವು ಇನ್ನೂ ಮುಗಿದಿಲ್ಲ, ಮುಗಿಯೋದು ಇಲ್ಲ ಅನ್ನೋದಂತೂ ಸ್ಪಷ್ಟ. ಯಾಕಂದ್ರೆ, ದಿನಕ್ಕೊಬ್ಬರು ಸಿಎಂ ಸ್ಥಾನ ಮುಟ್ಟೋಕಾಗಲ್ಲ, ಖಾಲಿ ಇಲ್ಲ ಅನ್ನೋ ಹೇಳಿಕೆಗಳನ್ನ ನೀಡೊ ಮೂಲಕ ಪವರ್ ಶೇರಿಂಗ್ ಕುರಿತು ತಾವೇ ಪದೇ ಪದೇ ಹೇಳಿಕೆಗಳನ್ನ ನೀಡ್ತಾ ಇದ್ದಾರೆ. ಆಡಳಿತವನ್ನ ಚುರುಕು ಮಾಡಿ, ಜನರಿಗೆ ಉಪಯೋಗ ಆಗುವ ಕೆಲಸ ಮಾಡಬೇಕಿದ್ದ ಸರ್ಕಾರದ ನಾಯಕರು, ಹೀಗೆ ನಿತ್ಯವೂ ಕುರ್ಚಿ ಉಳಿಸಿಕೊಳ್ಳಲು ಬಡಿದಾಡುತ್ತಿದ್ದಾರೆ.