ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 726ರ ಎಪಿಸೋಡ್ ಕಥೆ ಇಲ್ಲಿದೆ. ಎಷ್ಟು ಬಾರಿ ಮದುವೆ ನಿಂತರೂ ಶ್ರೇಷ್ಠಾ ಹಾಗೂ ತಾಂಡವ್ ಮತ್ತೆ ಮತ್ತೆ ಮದುವೆ ಆಗಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ಬಾರಿ ಕೂಡಾ ಶ್ರೇಷ್ಠಾ, ಭಾಗ್ಯಾಗೆ ನೋವುಂಟು ಮಾಡುವ ಉದ್ದೇಶದಿಂದಲೇ ತಾಂಡವ್ ಕಾಲಿಗೆ ಬಿದ್ದು ನಾಟಕ ಮಾಡುತ್ತಾಳೆ. ಅವಳ ಕಣ್ಣೀರು ನೋಡಲಾಗದೆ ತಾಂಡವ್, ನೀನು ಕಣ್ಣೀರಿಡುವುದು ನನಗೆ ಇಷ್ಟವಿಲ್ಲ, ನಿನ್ನನ್ನು ಯಾರೂ ಅವಮಾನಿಸಲು ನಾನು ಬಿಡುವುದಿಲ್ಲ ಮದುವೆ ಆಗೋಣ ಎನ್ನುತ್ತಾನೆ.
ಇಂದು ನಮ್ಮ ಮದುವೆ ತಡೆಯೋರು ಯಾರು ಇಲ್ಲ ಎಂದು ಖುಷಿಯಿಂದ ಶ್ರೇಷ್ಠಾ ಮದುವೆ ಮಂಟಪಕ್ಕೆ ಹೋಗುವಾಗ ಎಡವಿ ಬೀಳುತ್ತಾಳೆ. ಅದು ಅಪಶಕುನ ಎಂದು ಪುರೋಹಿತರು ಹೇಳಿದರೂ ಶ್ರೇಷ್ಠಾ ಅದಕ್ಕೆ ಕಿವಿಕೊಡುವುದಿಲ್ಲ. ಎಲ್ಲಾ ಶಾಸ್ತ್ರಗಳು ಮುಗಿದು ಶ್ರೇಷ್ಠಾ ಕುತ್ತಿಗೆಗೆ ತಾಂಡವ್ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎದುರಿಗೆ ಭಾಗ್ಯಾ ಬರುವುದನ್ನು ನೋಡುತ್ತಾನೆ. ಶ್ರೇಷ್ಠಾ ಕೂಡಾ ಭಾಗ್ಯಾಳನ್ನು ನೋಡಿ ಶಾಕ್ ಆಗುತ್ತಾಳೆ. ನಾವು ಮದುವೆ ಆಗುತ್ತಿದ್ದೇವೆ ಎಂದು ಇವಳಿಗೆ ಯಾರು ಹೇಳಿದ್ದು ಎಂದು ಗಾಬರಿ ಆಗುತ್ತಾರೆ. ತಾಳಿಯನ್ನು ಕೆಳಗೆ ಬೀಳಿಸುತ್ತಾನೆ. ನೋಡು ಭಾಗ್ಯಾ ಇಲ್ಲಿಂದ ಹೊರಟುಹೋಗು, ಇವತ್ತು ಏನೇ ಆದರೂ ನಾನು ಶ್ರೇಷ್ಠಾಳನ್ನು ಮದುವೆ ಆಗುವುದನ್ನು ಯಾರೂ ತಡೆಯಲು ಆಗುವುದಿಲ್ಲ ಎನ್ನುತ್ತಾನೆ. ನೀವು ಇಲ್ಲಿ ಇವತ್ತು ಮದುವೆ ಆಗುತ್ತಿರುವ ವಿಚಾರ ಇಲ್ಲಿಗೆ ಬಂದಾಗಲೇ ನನಗೆ ಗೊತ್ತಾಗಿದ್ದು, ಅಷ್ಟಕ್ಕೂ ಈ ಮದುವೆ ನಿಲ್ಲಿಸಲು ನಾನು ಬಂದಿಲ್ಲ, ನಾನೂ ಕೆಲವು ಮಾತುಗಳನ್ನಾಡುವುದು ಬಾಕಿ ಉಳಿದಿದೆ ಎನ್ನುತ್ತಾಳೆ.
ಅಷ್ಟರಲ್ಲಿ ಕುಸುಮಾ ಬಂದು ಮದುವೆ ಮಂಟಪದಲ್ಲಿದ್ದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾಳೆ. ನೀನು ಇಲ್ಲಿ ಇದ್ದರೆ ತಾನೇ ಮದುವೆ ಆಗುವುದು ಬಾ ಎಂದು ಮಗನ ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ಯಲು ಪ್ರಯತ್ನಿಸುತ್ತಾಳೆ. ಆದರೆ ಭಾಗ್ಯಾ ತನ್ನ ಅತ್ತೆಯನ್ನು ತಡೆಯುತ್ತಾಳೆ. ಇಷ್ಟು ದಿನ ಇವರು ಬದಲಾಗಲಿ ಎಂದು ನಾವು ಬಹಳ ಪ್ರಯತ್ನಪಟ್ಟೆವು ಆದರೆ ಅವರು ಬದಲಾಗಲಿಲ್ಲ. ಬಲವಂತದ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ. ಈ ತಾಳಿಗೆ ಬೆಲೆ ಇಲ್ಲ ಅನ್ನೋದು ಈಗ ನನಗೆ ಗೊತ್ತಾಗುತ್ತಿದೆ. ಇವರಿಗೆ ಬೇಡದ ಸಂಬಂಧ ನನಗೂ ಬೇಡ, ಈ ತಾಳಿ ನನಗೆ ಭಾರ ಎನಿಸುತ್ತಿದೆ, ತೆಗೆದುಬಿಡುತ್ತೇನೆ ಎನ್ನುತ್ತಾಳೆ. ಸೊಸೆ ಮಾತು ಕೇಳಿ ಮೊದಲು ಕುಸುಮಾ ಮೊದಲು ನಿರಾಕರಿಸಿದರೂ ನಂತರ ತೆಗೆಯಲು ಒಪ್ಪುತ್ತಾಳೆ.
ಅಷ್ಟರಲ್ಲಿ ಅಲ್ಲಿಗೆ ಭಾಗ್ಯಾ ತಾಯಿ ಸುನಂದಾ ಬರುತ್ತಾಳೆ. ಇಷ್ಟು ದಿನ ನನ್ನ ಮಗಳ ಜೀವನ ಸರಿ ಮಾಡುತ್ತೇನೆ ಎಂದು ಹೇಳಿ ನೀವು ಮಾಡುತ್ತಿರುವುದು ಏನು? ನಿಮ್ಮ ಮಗನಿಗೆ ಹೊಡೆದು ಬುದ್ಧಿ ಕಲಿಸಬೇಕಿತ್ತು. ಗಂಡ ಏನೇ ಮಾಡಿದರೂ ಹೊಂದಾಣಿಕೆಯಿಂದ ಜೀವನ ಮಾಡುವುದು ಹೆಣ್ಣಿನ ಕರ್ತವ್ಯ, ಭಾಗ್ಯಾ ತಾಳಿ ತೆಗೆಯಲು ನನಗೆ ಒಪ್ಪಿಗೆ ಇಲ್ಲ ಎನ್ನುತ್ತಾಳೆ. ಭಾಗ್ಯಾಳನ್ನು ಇಷ್ಟು ದಿನ ನಾವು ಸೊಸೆಯಂತೆ ಅಲ್ಲ, ಮಗಳಂತೆಯೇ ನೋಡಿಕೊಂಡಿದ್ದೇವೆ. ಆದರೆ ಅವನಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಹೇಗೆ ಜೊತೆಯಾಗಿ ಬದುಕಲು ಹೇಳುವುದು? ಇಷ್ಟು ದಿನ ಭಾಗ್ಯಾ ಬಲವಂತಕ್ಕೆ ಇವನ ಜೊತೆ ಇದ್ದಳು, ಇನ್ನು ಮುಂದೆಯಾದರೂ ಅವಳಿಷ್ಟದಂತೆ ಬದುಕಲಿ ಬಿಡಿ, ಇನ್ನು ನಾನು ಭಾಗ್ಯಾ ಅತ್ತೆ ಸೊಸೆ ಅಲ್ಲ, ಅಮ್ಮ ಮಗಳಿನಂತೆ ಇರುತ್ತೇವೆ ಎಂದು ಕುಸುಮಾ ಹೇಳುತ್ತಾಳೆ.
ಸುನಂದಾ ಹೊರತುಪಡಿಸಿ ಸುಂದ್ರಿ, ಪೂಜಾ, ಧರ್ಮರಾಜ್, ವಿಠಲ್ ರಾವ್ ಎಲ್ಲರೂ ಭಾಗ್ಯಾ ನಿರ್ಧಾರವನ್ನು ಬೆಂಬಲಿಸುತ್ತಾರೆ. ಭಾಗ್ಯಾ ಕೊನೆಗೂ ತಾಳಿ ತೆಗೆಯುತ್ತಾಳೆ. ಅದನ್ನು ನೋಡಿ ಶ್ರೇಷ್ಠಾ ಖುಷಿಯಾಗುತ್ತಾಳೆ. ಆದರೆ ತಾಂಡವ್ ಶಾಕ್ ಆಗುತ್ತಾನೆ. ಭಾಗ್ಯಾ ದೇವರ ಮುಂದೆ ಹೋಗಿ, ನಿನ್ನ ಮಗಳು ಈ ಸ್ಥಿತಿಯಲ್ಲಿ ನಿನ್ನ ಮುಂದೆ ಬಂದು ನಿಲ್ಲುವುದು ಸರಿಯಲ್ಲ ಎಂದು ನನಗೆ ಗೊತ್ತು. ಆದರೆ ನನ್ನ ಪ್ರಯತ್ನ ಫಲಿಸದೆ ಸೋತು ನಿನ್ನ ಮುಂದೆ ಬಂದು ನಿಂತಿದ್ದೇನೆ. ಹೊಸ ಜೀವನಕ್ಕೆ ಕಾಲಿಡುತ್ತಿದ್ದೇನೆ ನನ್ನನ್ನು ಹರಸು. ಇಷ್ಟು ದಿನಗಳ ಕಾಲ ಈ ತಾಳಿಗೆ ಪ್ರತಿದಿನ ಕುಂಕುಮ ಇಟ್ಟು ಗಂಡನಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಿದ್ದೆ, ಇನ್ಮುಂದೆಯೂ ಅವರಿಗೆ ಒಳ್ಳೆಯದನ್ನು ಹಾರೈಸುತ್ತೇನೆ ಎಂದು ಬೇಡಿಕೊಳ್ಳುತ್ತಾಳೆ.
ಭಾಗ್ಯಾ ಮುಂದಿನ ದಾರಿ ಏನು? ಬಾಬಾ ಹೇಳಿದಂತೆ ಭಾಗ್ಯಾ ಜೀವನ ಇನ್ಮುಂದೆ ಬದಲಾಗುತ್ತಾ? ನಾಳೆಯ ಎಪಿಸೋಡ್ಗಳಲ್ಲಿ ತಿಳಿಯಲಿದೆ.