ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 713ರ ಎಪಿಸೋಡ್ ಕಥೆ ಇಲ್ಲಿದೆ. ಕನ್ನಿಕಾ ಕಾಮತ್ ಪಿತೂರಿಯಿಂದ ಭಾಗ್ಯಾ ಕೆಲಸ ಕಳೆದುಕೊಂಡಿದ್ದಾಳೆ. ತಾನು ತಪ್ಪು ಮಾಡದಿದ್ದರೂ ತನ್ನ ಸಹೋದ್ಯೋಗಿಗಳ ಹಿತದೃಷ್ಟಿಯಿಂದ, ಅವರನ್ನು ಕನ್ನಿಕಾ ಕೆಲಸದಿಂದ ತೆಗೆಯಬಾರದು ಎಂಬ ಕಾರಣಕ್ಕೆ ತಾನೇ ತಪ್ಪು ಮಾಡಿದೆ ಎಂದು ಒಪ್ಪಿಕೊಂಡು ರಾಜೀನಾಮೆ ಕೊಟ್ಟಿದ್ದಾಳೆ. ಇದರಿಂದ ಕನ್ನಿಕಾಗೆ ಕಪಾಳಮೋಕ್ಷ ಎಂದು ಪರಿಗಣಿಸಬಹುದು, ಏಕೆಂದರೆ ಭಾಗ್ಯಾ ಕೆಲಸ ಕಳೆದುಕೊಂಡಿದ್ದು ಕನ್ನಿಕಾ, ಶ್ರೇಷ್ಠಾ ಹಾಗೂ ತಾಂಡವ್ ಗೆ ಖುಷಿ ನೀಡಿದೆ.
ತಾಂಡವ್, ಮನೆ ಬಿಟ್ಟು ಶ್ರೇಷ್ಠಾ ಜೊತೆ ಇದ್ದಾನೆ. ಮನೆ ಜವಾಬ್ದಾರಿಯನ್ನೆಲ್ಲಾ ಭಾಗ್ಯಾ ವಹಿಸಿಕೊಂಡಿದ್ದಾಳೆ. ಆದರೆ ಅದೇ ಸಮಯಕ್ಕೆ ಅವಳು ಕೆಲಸ ಕಳೆದುಕೊಂಡಿದ್ದಾಳೆ. ಅತ್ತೆ-ಮಾವ, ಮಕ್ಕಳು, ಮನೆಯವರು ನನ್ನನ್ನೇ ನಂಬಿದ್ದಾರೆ, ನಾನು ಹೇಗಾದರೂ ಮಾಡಿ ಬೇರೆ ಕೆಲಸ ಹುಡುಕಲೇಬೇಕು ಎಂದು ಭಾಗ್ಯಾ ನಿರ್ಧರಿಸುತ್ತಾಳೆ. ತಾನು ಕೆಲಸ ಮಾಡುತ್ತಿದ್ದ ಸಿಟಿ ಆಫ್ ಲೈಟ್ಸ್ ಹೋಟೆಲ್ ಮ್ಯಾನೇಜರ್ಗೆ ಕರೆ ಮಾಡಿ, ನಿಮಗೆ ಗೊತ್ತಿರುವ ಕಡೆ ಕೆಲಸ ಕೊಡಿಸಿ ಎಂದು ಮನವಿ ಮಾಡುತ್ತಾಳೆ. ತಪ್ಪು ಮಾಡಿದ್ದೇನೆ ಎಂದು ನೀವೇ ಒಪ್ಪಿಕೊಂಡಿದ್ದೀರಿ, ನಿಮ್ಮ ಇಮೇಜ್ ಹಾಳಾಗಿದೆ, ಆದ್ದರಿಂದ ನಿಮಗೆ ಬೇರೆ ಕಡೆ ಕೆಲಸ ಸಿಗುವುದು ಕಷ್ಟ, ಎಲ್ಲಾದರೂ ಕೆಲಸ ಇದ್ದರೆ ಖಂಡಿತ ನಿಮಗೆ ತಿಳಿಸುತ್ತೇನೆ ಎನ್ನುತ್ತಾನೆ.

ಸೊಸೆಗೆ ಅವಮಾನ ಮಾಡಿದ ಕನ್ನಿಕಾಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಹಿತಾ ಸಹಾಯದಿಂದ ಕುಸುಮಾ, ಕನ್ನಿಕಾ ಅಡ್ರೆಸ್ ಪಡೆಯುತ್ತಾಳೆ. ಧರ್ಮರಾಜ್ನನ್ನು ಕರೆದುಕೊಂಡು ಕನ್ನಿಕಾ ಕಚೇರಿಗೆ ಹೋಗುತ್ತಾಳೆ. ಕುಸುಮಾ ಬಂದಿರುವ ವಿಚಾರ ತಿಳಿದು ಕನ್ನಿಕಾ, ಅವಳಿಗೆ ಇನ್ನಷ್ಟು ಅವಮಾನ ಮಾಡಲು ನಿರ್ಧರಿಸಿ ತನ್ನ ಚೇಂಬರ್ನಲ್ಲಿದ್ದ ಕುರ್ಚಿಗಳನ್ನು ತೆಗೆಸುತ್ತಾಳೆ. ಸಹೋದ್ಯೋಗಿಗಳನ್ನು ಚೇಂಬರ್ ಒಳಗೆ ಬರಲು ಹೇಳಿ ಕುಸುಮಾ-ಧರ್ಮರಾಜ್ ಇಬ್ಬರನ್ನೂ ನಿಲ್ಲಿಸಿಕೊಂಡೇ ಮಾತನಾಡುತ್ತಾಳೆ. ನನ್ನ ಸೊಸೆ ನಿನಗೆ ಏನು ಅನ್ಯಾಯ ಮಾಡಿದ್ದಾಳೆ, ಅವಳಿಗೆ ಪದೇ ಪದೆ ಏಕೆ ಈ ರೀತಿ ತೊಂದರೆ ಕೊಡುತ್ತಿದ್ದೀಯ ಎಂದು ಕುಸುಮಾ ಪ್ರಶ್ನಿಸುತ್ತಾಳೆ. ನಾವು ಕಷ್ಟಪಟ್ಟು ಬೆಳೆಸಿದ ಹೋಟೆಲ್ಗೆ ನಿಮ್ಮ ಸೊಸೆ ಕೆಟ್ಟ ಹೆಸರು ತಂದಿದ್ದಾಳೆ. ಅದಕ್ಕೆ ಕೆಲಸದಿಂದ ತೆಗೆದಿದ್ದೇನೆ ಎಂದು ಕನ್ನಿಕಾ ಹೇಳುತ್ತಾಳೆ. ಇಬ್ಬರ ನಡುವೆ ಬಹಳ ಹೊತ್ತು ಮಾತುಕತೆ ನಡೆಯುತ್ತದೆ.
ಕುಸುಮಾಳನ್ನು ಕನ್ನಿಕಾ ಎಳೆದೊಯ್ದು ತನ್ನ ಚೇಂಬರ್ನಿಂದ ಹೊರ ತಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಅಷ್ಟರಲ್ಲಿ ಅಲ್ಲಿಗೆ ಭಾಗ್ಯಾ ಬಂದು ಅತ್ತೆಯನ್ನು ಹಿಡಿದುಕೊಳ್ಳುತ್ತಾಳೆ. ಹಿರಿಯರ ಬಳಿ ಹೇಗೆ ನಡೆದುಕೊಳ್ಳಬೇಕೆಂದು ನೀನು ಕಲಿತಿಲ್ಲವೇ? ಎಂದು ಪ್ರಶ್ನಿಸುತ್ತಾಳೆ. ತಪ್ಪು ಮಾಡಿ ಈಗ ಮತ್ತೆ ಕೆಲಸ ಕೇಳಲು ನಿನ್ನ ಅತ್ತೆ ಮಾವನನ್ನು ಇಲ್ಲಿಗೆ ಏಕೆ ಕಳಿಸಿದ್ದೀಯ, ನೀವು ಗತಿಗೆಟ್ಟವರು ಎಂದು ಕನ್ನಿಕಾ ಮತ್ತೆ ಅವಮಾನ ಮಾಡುತ್ತಾಳೆ. ಅವಳ ಮಾತಿಗೆ ಕೋಪಗೊಂಡ ಭಾಗ್ಯಾ, ಆಕೆಗೆ ಕಪಾಳಮೋಕ್ಷ ಮಾಡುತ್ತಾಳೆ. ನನ್ನ ಬಳಿ ಕೆಲಸ ಇಲ್ಲದಿರಬಹುದು. ಆದರೆ ನನ್ನ ಅತ್ತೆ ಮಾವನನ್ನು ಸಾಕುವ ಶಕ್ತಿ ಇನ್ನೂ ಇದೆ. ಇದೇ ಕೊನೆ ಮತ್ತೆ ನನ್ನ ಸುದ್ದಿಗೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ಭಾಗ್ಯಾ, ಕನ್ನಿಕಾಗೆ ಎಚ್ಚರಿಸುತ್ತಾಳೆ.

ಮತ್ತೊಂದೆಡೆ ತಾಂಡವ್ ಕಚೇರಿ ಕೆಲಸದಲ್ಲಿ ಬ್ಯುಸಿ ಇರುವಾಗ ಶ್ರೇಷ್ಠಾ, ಫ್ಲಾಸ್ಕ್ನಲ್ಲಿ ತಂದಿದ್ದ ಕಾಫಿಯನ್ನು ತಾಂಡವ್ಗೆ ಕೊಡುತ್ತಾಳೆ. ನೀನು ಆಫೀಸ್ ಕೆಲಸ ಮಾಡುವಾಗ ಮಧ್ಯೆ ಮಧ್ಯೆ ಕಾಫಿ ಕುಡಿಯಲು ಇಷ್ಟಪಡುತ್ತೀಯ ಅಂತ ನನಗೆ ಗೊತ್ತು. ಆದ್ದರಿಂದ ನಾನೇ ಮಾಡಿಕೊಂಡು ತಂದೆ ಎನ್ನುತ್ತಾಳೆ. ಅದನ್ನು ಕೇಳಿ ತಾಂಡವ್ ಖುಷಿಯಾಗುತ್ತಾನೆ, ಜೊತೆಗೆ ಆ ಕಾಫಿ ಕುಡಿದು ಹೊಗಳುತ್ತಾನೆ. ನಾಳೆ ನೀನು ಆಫೀಸಿಗೆ ರಜೆ ಹಾಕು, ನಾವಿಬ್ಬರೂ ನಿನ್ನ ಮನೆಗೆ ಹೋಗೋಣ. ನೀನು ಅಪ್ಪ-ಅಮ್ಮ, ಮಕ್ಕಳನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀಯ ಅಂತ ನನಗೆ ಚೆನ್ನಾಗಿ ಗೊತ್ತು. ನನ್ನಿಂದ ತಪ್ಪಾಗಿದೆ. ಅದನ್ನು ನಾನೇ ಸರಿಪಡಿಸುತ್ತೇನೆ ಎಂದು ಹೇಳುತ್ತಾಳೆ. ಅದನ್ನು ಕೇಳುತ್ತಿದ್ದಂತೆ ತಾಂಡವ್ಗೆ ಆಶ್ಚರ್ಯವಾಗುತ್ತದೆ. ಶ್ರೇಷ್ಠಾ ಎಷ್ಟು ಬದಲಾಗಿದ್ದಾಳೆ ಎಂದುಕೊಳ್ಳುತ್ತಾನೆ.
ಕಾಲೇಜಿನಲ್ಲಿ ತನ್ವಿ ಗೆಳತಿ, ಎಲ್ಲರಿಗೂ ಬರ್ತ್ಡೇ ಸ್ವೀಟ್ ಕೊಟ್ಟು, ಸಂಜೆ ಎಲ್ಲರೂ ಪಾರ್ಟಿಗೆ ಬರುವಂತೆ ಆಹ್ವಾನಿಸುತ್ತಾಳೆ. ಪಾರ್ಟಿಗೆ ಬರುತ್ತೇನೆ ಎಂದು ತನ್ವಿ ಖುಷಿಯಿಂದ ಹೇಳುತ್ತಾಳೆ. ಆದರೆ ತನ್ವಿ ಫ್ರೆಂಡ್ಸ್ ಅವಳನ್ನು ಅವಮಾನಿಸುತ್ತಾರೆ. ನೀನು ಎಲ್ಲರೂ ಕೊಡುವ ಸ್ವೀಟ್ ತೆಗೆದುಕೊಳ್ಳುತ್ತೀಯ, ಯಾರಾದರೂ ಪಾರ್ಟಿಗೆ ಬಾ ಎಂದು ಹೇಳಿದರೆ ಹೋಗುತ್ತೀಯ, ಆದರೆ ನೀನು ಯಾರಿಗೂ ಇದುವರೆಗೂ ಸ್ವೀಟ್ ತಂದುಕೊಟ್ಟಿಲ್ಲ, ಇದುವರೆಗೂ ಪಾರ್ಟಿ ಕೂಡಾ ಕೊಡಿಸಿಲ್ಲ , ನೀನು ಕಂಜೂಸ್ ಎಂದು ರೇಗಿಸುತ್ತಾರೆ. ಗೆಳತಿಯರ ಮಾತು ಕೇಳಿ ತನ್ವಿ ಬೇಸರಗೊಳ್ಳುತ್ತಾಳೆ. ತಾನು ತೆಗೆದುಕೊಂಡ ಸಿಹಿಯನ್ನು ಡಸ್ಟ್ಬಿನ್ಗೆ ಹಾಕಿ, ಬೇಸರದಿಂದ ಅಲ್ಲಿಂದ ಹೊರಡುತ್ತಾಳೆ.

ಸಂಸಾರ ನಡೆಸಲು ಭಾಗ್ಯಾ ಮುಂದೆ ಏನು ಮಾಡುತ್ತಾಳೆ? ತಾಂಡವ್ ಮನೆಯವರನ್ನು ಒಲಿಸಿಕೊಳ್ಳಲು ಶ್ರೇಷ್ಠಾ ಏನು ಪ್ಲ್ಯಾನ್ ಮಾಡುತ್ತಾಳೆ? ಕಾಲೇಜಿನಲ್ಲಿ ಗೆಳತಿಯರು ತನಗೆ ಅವಮಾನ ಮಾಡಿದ್ದನ್ನು ತನ್ವಿ ಮನೆಯಲ್ಲಿ ಹೇಳುತ್ತಾಳಾ? ಮುಂದಿನ ಎಪಿಸೋಡ್ಗಳಲ್ಲಿ ಉತ್ತರ ದೊರೆಯಲಿದೆ.



