ಈಗಾಗಲೇ ಧನೂರ್ ಮಾಸ ಶುರುವಾಗಿದೆ. ಈ ಮಾಸದಲ್ಲಿ ಯಾವ ದೇವರಿಗೆ, ಯಾವ ರೀತಿಯಲ್ಲಿ, ಯಾವ ವೃಕ್ಷಕ್ಕೆ ಪೂಜೆ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ ಅನ್ನೋ ಪ್ರಶ್ನೆ ಇರುತ್ತದೆ. ಈ ಎಲ್ಲಾ ಪ್ರಶ್ನೆಗೆ ಇಂದು ಉತ್ತರ ತಿಳಿಯೋಣ.. ಮೊದಲಿಗೆ ಧನೂರ್ ಮಾಸ ಎಂದರೆ ಏನು ಎಂದು ನೋಡುವುದಾದರೆ, ಸೂರ್ಯದೇವನು ವೃಶ್ಚಿಕ ರಾಶಿಯಿಂದ ಧನಸ್ಸ್ ರಾಶಿಗೆ ಬರೋದನ್ನ ಧನೂರ್ ಮಾಸ ಎಂದು ಕರೆಯುತ್ತೇವೆ. ಭಾಗಮಾಸದ ಅರ್ಧದಲ್ಲಿ ಶುರುವಾಗಿ ಪುಷ್ಯಮಾಸದ ಅರ್ಧ ಭಾಗದವರೆಗು ಬರುವ 1 ತಿಂಗಳ ಸಮಯವೇ ಧನೂರ್ ಮಾಸ ಆಗಿದೆ. ಧನೂರ್ ಮಾಸದಲ್ಲಿ ಯಾವುದೇ ಶಭ ಕಾರ್ಯಗಳನ್ನ ಮಾಡಬಾರದು ಅಂತ ಜನರು ಹೇಳೋದನ್ನ ಕೇಳಿರುತ್ತೇವೆ.
ಆದರೆ ಶಾಸ್ತ್ರದಲ್ಲಿ ಈ ಮಾಸದಲ್ಲಿ ಶುಭ ಕಾರ್ಯಗಳನ್ನ ಮಾಡಬಾರದು ಅಂತ ಎಲ್ಲಿಯೂ ಉಲ್ಲೇಖವಿಲ್ಲ. ಆದರೆ ಈ ಒಂದು ಮಾಸವನ್ನ ದೇವರ ಆರಾಧನೆಗೆ ಮೀಸಲಾಗಿ ಇಡಬೇಕು ಎಂದು ಉಲ್ಲೇಖವಿದೆ. ಈಗ ನಾವು ದಕ್ಷಿಣಾಯಣದಲ್ಲಿದ್ದೇವೆ, ಜನವರಿ 14ರ ನಂತರ ಉತ್ತರಾಯಣಕ್ಕೆ ತಲುಪುತ್ತೇವೆ, ಅದು ಭಗವಂತ ಎದ್ದೇಳುವ ಸಮಯ. ಧನೂರ್ ಮಾಸದಲ್ಲಿ ಎಲ್ಲರೂ ಸಹ ಧನೂರ್ ಆಕಾರದಲ್ಲೇ ನಿದ್ದೆ ಮಾಡುತ್ತಾರೆ. ಈ ಚಳಿಯ ಸಮಯದಲ್ಲಿ ಇನ್ನು ಬೆಳಕು ಮೂಡುವ ಮೊದಲೇ ಯಾರು ಎದ್ದು, ದೇವರ ಪೂಜೆ ಮಾಡುತ್ತಾರೋ ಅವರಿಗೆ ದೇವರ ಅನುಗ್ರಹ, ಶುಭಫಲ ಎಲ್ಲವೂ ಸಿಗುತ್ತದೆ ಎಂದು ಹೇಳುತ್ತಾರೆ. ಈ ಮಾಸದಲ್ಲಿ ಪೂಜೆ ಪುನಸ್ಕಾರಗಳನ್ನ ಯಾವ ಸಮಯದಲ್ಲಿ ಹೇಗೆ ಮಾಡಬೇಕು ಎಂದು ನೋಡುವುದಾದರೆ..
ಸೂರ್ಯೋದಯ ಆಗೋದಕ್ಕೂ ಮೊದಲೇ, ಆಕಾಶದಲ್ಲಿ ನಕ್ಷತ್ರಗಳು ಇರುವಾಗಲೇ ದೇವರ ಪೂಜೆ ಮಾಡಬೇಕು, ಆಗ ಭಗವಂತನಿಂದ ಯಥೇಚ್ಛವಾದ ಫಲ ಸಿಗುತ್ತದೆ. ಸೂರ್ಯೋದಯದ ನಂತರ ಮಾಡೋ ಪೂಜೆಗಳು ದೇವರಿಗೆ ಒಪ್ಪೋದಿಲ್ಲ ಎಂದು ಶಾಸ್ತ್ರದಲ್ಲಿ ಬರೆಯಲಾಗಿದೆ. ಈ ಮಾಸದಲ್ಲಿ ಸೂರ್ಯೋದಯಕ್ಕಿಂತ ಮೊದಲೇ ನದಿಯಲ್ಲಿ ಸ್ನಾನ ಮಾಡುವುದು ಒಳ್ಳೆಯದು, ಆದರೆ ನದಿಯಲ್ಲಿ ಸೋಪ್ ಶಾಂಪೂ ಬಳಸಿ ಸ್ನಾನ ಮಾಡುವುದು ತಪ್ಪು, ಮಡಿಯಿಂದ ಶುಭ್ರವಾಗಿ ಸ್ನಾನ ಮಾಡಿ, ಹತ್ತಿರದ ಅರಳಿ ಮರಕ್ಕೆ ಪೂಜೆ ಮಾಡಬೇಕು ಆಗ ಒಳ್ಳೆಯ ಫಲ ಸಿಗುತ್ತದೆ. ಆದರೆ ಎಲ್ಲಾ ಕಡೆ ನದಿಗಳು ಇರೋದಿಲ್ಲ. ಹಾಗಾಗಿ ನಿಮ್ಮ ಮನೆವಲ್ಲೇ ಶುಭ್ರವಾದ ನೀರಿನಿಂದ ಸ್ನಾನ ಮಾಡಬೇಕು.
ಬೆಳಗ್ಗಿನ ಜಾವ 4:30 ಇಂದ 5 ಗಂಟೆಯ ಒಳಗೆ ಗಂಗೆ ಮತ್ತು ಕಾವೇರಿಯ ಪ್ರಾರ್ಥನೆ ಮಾಡಿ, ಸ್ನಾನ ಮಾಡಿ, ಮೊದಲು ದೇವರ ಮನೆಯನ್ನು ಕ್ಲೀನ್ ಮಾಡಿ, ಬಳಿಕ ಪೂಜೆ ಮಾಡಬೇಕು. ಹತ್ತಿರದ ಅರಳಿಮರ ಅಥವಾ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೆ, ಮನಸ್ಸು ನಿರ್ಮಲವಾಗಿರುತ್ತದೆ..ಇದರಿಂದ ಮನಸ್ಸು ಒತ್ತಡ, ಟೆನ್ಷನ್, ಕೆಟ್ಟ ಯೋಚನೆ ಇದೆಲ್ಲದಿಂದ ದೂರ ಇರುತ್ತದೆ. ಈ ಮಾಸದಲ್ಲಿ ಪೊಂಗಲ್ ಅನ್ನು ನೈವೇದ್ಯ ಮಾಡಿದರೆ ದೇವರಿಗೆ ಸಂತೃಪ್ತಿ ಆಗುತ್ತದೆ. ಇದು ವಿಷ್ಣುವಿನ ಆರಾಧನೆ ಮಾಡುವ ಸಮಯ, ವಿಷ್ಣುವಿಗೆ ಬುಧನು ಪ್ರಿಯ ಹಾಗಾಗಿ ಬುಧನಿಗೆ ಪ್ರಿಯವಾದ ಹೆಸರುಕಾಳಿನಿಂದ ಪೊಂಗಲ್ ಮಾಡಿ ನೈವೇದ್ಯ ಮಾಡಿದರೆ ಭಗವಂತನಿಗೆ ಸಂತೋಷವಾಗುತ್ತದೆ..
ವೈಜ್ಞಾನಿಕವಾಗಿ ಹೇಳುವುದಾದರೆ, ಈ ಚಳಿಯ ಸಮಯದಲ್ಲಿ ದೇಹ ಸುಕ್ಕುಗಟ್ಟಿ, ಚರ್ಮದ ಸಮಸ್ಯೆಗಳು ಬರುವುದಕ್ಕೆ ಪೊಂಗಲ್ ಸೇವಿಸಿದಾಗ ಈ ಹವಾಮಾನಕ್ಕೆ ದೇಹ ಒಗ್ಗಿಕೊಳ್ಳುತ್ತದೆ. ದೇಹಕ್ಕೆ ಇದು ಒಳ್ಳೆಯದು. ಈ ಮಾಸದಲ್ಲಿ ಅರಳಿ ಮರದ ಪೂಜೆಯನ್ನೇ ಯಾಕೆ ಮಾಡಬೇಕು ಎಂದರೆ, ಒಂದೇ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮೂವರನ್ನು ಆರಾಧನೆ ಮಾಡುವ ಸೌಭಾಗ್ಯ ಇರುವುದು ಅರಳಿ ಮರಕ್ಕೆ ಮಾತ್ರ. ಹಾಗಾಗಿ ಒಳ್ಳೆಯ ಫಲ ಪಡೆಯಲು ಅರಳಿ ಮರವನ್ನು ಪೂಜೆ ಮಾಡುವುದು ಒಳ್ಳೆಯದು. ವೈಜ್ಞಾನಿಕವಾಗಿ ಬೆಳಗಿನ ಜಾವ ಅರಳಿ ಮರದ ಪೂಜೆ ಮಾಡಿದರೆ, ಅದರಿಂದ ಒಳ್ಳೆಯ ಆಮ್ಲಜನಕ ಸೇವನೆ ಆಗುತ್ತದೆ.
ಅರಳಿ ಮರಕ್ಕೆ 9 ಅಥವಾ 11 ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು ಎನ್ನುತ್ತಾರೆ. ಧನೂರ್ ಮಾಸದ ಒಂದು ಪೂಜೆ ಸಾವಿರ ಪೂಜೆಗಳಿಗೆ ಸಮ ಎಂದು ಹೇಳುತ್ತಾರೆ. ಧನುರ್ ಮಾಸದಲ್ಲಿ ಯಾವುದೇ ಮರಗಳನ್ನು ಕಡಿಯಬಾರದು, ವಿಶೇಷವಾಗಿ ಅರಳಿ ಮರವನ್ನು ಕಡಿದರೆ ಕೆಟ್ಟ ಫಲ ಪಡೆಯಬೇಕಾಗುತ್ತದೆ. ಹಾಗಾಗಿ ಇಂಥ ತಪ್ಪುಗಳನ್ನು ಮಾಡಬೇಡಿ. ಇದು ದೇವರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ವಿಶೇಷವಾದ ಮಾಸ ಆಗಿದೆ. ಈ ಕಾರಣಗಳಿಗೆ ಧನೂರ್ ಮಾಸ ಶ್ರೇಷ್ಠವಾದ ಮಾಸ ಆಗಿದೆ. ಈ ಮಾಸದಲ್ಲಿ ವಿಷ್ಣು ಮತ್ತು ಬ್ರಹ್ಮನ ಆರಾಧನೆ ಮಾಡಿದರೆ, ಅವರು ಮಾಡಿರುವ ಎಲ್ಲಾ ಕರ್ಮಗಳು ನಾಶವಾಗಿ, ಮುಕ್ತಿ ಸಿಗುತ್ತದೆ.