ನಿನ್ನೆ ಬೆಳಿಗ್ಗೆ ಒಂದು ಕರೆ ಬಂದಿತ್ತು . ಹೆರಿಗೆ ಕೇಸು. ಮೇಕೆ ರಾತ್ರಿಯಿಂದ ಬೀಳೋದು ಏಳೋದು ಮಾಡ್ತಿದೆ. ಆದರೆ ಇನ್ನೂ ಮರಿ ಹಾಕಿಲ್ಲ ಎಂಬುದು ಕಂಪ್ಲೇಂಟು. ಕಾದು ನೋಡುವ ತಂತ್ರ ಅನುಸರಿಸಿ ಯಶಸ್ಸು ಸಿಗದೇ ಹತ್ತು ಗಂಟೆಯಲ್ಲಿ ನನಗೆ ಕರೆ ಮಾಡಿದ್ದರು.
ಓನರ್ರೇ ಇಷ್ಟು ನಿರ್ಲಕ್ಷ್ಯ ಮಾಡಿರಬೇಕಾದರೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ , ಮರಿ ಬದುಕಿರೋ ಛಾನ್ಸ್ ಇಲ್ಲ , ನಿಧಾನಕ್ಕೆ ಹೋದರಾಯ್ತು ಎಂಬ ತೀರ್ಮಾನಕ್ಕೆ ಬಂದೆ. ನನ್ನ ಅಸಮಾಧಾನಕ್ಕೆ ಇನ್ನೂ ಒಂದು ಕಾರಣವಿತ್ತು. ರಜಾ ದಿನ. ಕೈಗೆ ತೆಗೆದುಕೊಂಡಿರುವ ಕೇಸುಗಳನ್ನು ಮುಗಿಸಿ ಮಧ್ಯಾಹ್ನದ ಮೇಲೆ ಎಲ್ಲಾದ್ರೂ ಹೋಗೋಣ ಎಂದು ಪ್ಲ್ಯಾನ್ ಮಾಡಿದ್ದೆ. ಆದರೆ ನಮ್ಮ ವೃತ್ತಿಯಲ್ಲಿ ವಿಧಿಯ ಆಟ ದೊಡ್ಡದು! ರಜಾ ದಿನಗಳಲ್ಲಿ ನನ್ನ ಯೋಜನೆಗಳು ಉಲ್ಟಪಲ್ಟಾ ಆಗಿರುವುದಕ್ಕೆ ಯಥೇಚ್ಛ ಉದಾಹರಣೆಗಳಿವೆ!

ನನಗೆ ಕರೆ ಬಂದಿದ್ದು ಆರ್ಥಿಕವಾಗಿ ತುಂಬಾ ಹಿಂದುಳಿದಿರುವ ಒಬ್ಬ ವೃದ್ಧ ಮಹಿಳೆಯಿಂದ . ಆಕೆಯ ಪತಿ ತೀರಿಕೊಂಡು ಬಹಳ ದಿನಗಳಾಗಿವೆ. ಇದೇ ಕಾರಣಕ್ಕೆ ಎಷ್ಟೋ ಭಾರಿ ಧರ್ಮಸಂಕಟಕ್ಕೆ ಸಿಲುಕಿಬಿಟ್ಟಿದ್ದೇನೆ. ಬಡ ಕುಟುಂಬಕ್ಕೆ ಆಧಾರವಾಗಿರುವ ಒಂದು ಹಸುವೋ ಎತ್ತೋ ನಿನ್ನ ನಿರ್ಲಕ್ಷ್ಯದಿಂದ ಸತ್ತು ಹೋದರೆ ಪಾಪಪ್ರಜ್ಞೆ ನಿನ್ನನ್ನು ಕಾಡದೇ ಬಿಡುವುದಿಲ್ಲ ಎಂಬ ಮನಸ್ಸಾಕ್ಷಿಯ ತಿವಿತ ನನ್ನನ್ನು ಒದ್ದಾಡುವಂತೆ ಮಾಡುತ್ತದೆ .
ಆ ಮಹಿಳೆ ನಾಲ್ಕು ಮೇಕೆಗಳನ್ನು ಸಾಕಿಕೊಂಡಿದ್ದಳು. ಅದರಲ್ಲಿ ಒಂದು ಮೇಕೆಗೆ ಸಂಕಟ ಒದಗಿ ಬಂದಿತ್ತು. ಅಂದರೆ ಆಕೆಯ ಒಟ್ಟು ಆಸ್ತಿಯಲ್ಲಿ ಶೇ.25 ಭಾಗ ಆಪತ್ತಿಗೆ ಸಿಲುಕಿತ್ತು.
ನಾನು ಮನಸ್ಸು ಬದಲಾಯಿಸಿ , ಅದೇ ದಾರಿಯಲ್ಲಿದ್ದ ಎರಡು ಕೇಸುಗಳನ್ನು ಲಗುಬಗೆಯಿಂದ ಇತ್ಯರ್ಥಗೊಳಿಸಿ ಅಲ್ಲಿಗೆ ತಲುಪುವಷ್ಟರಲ್ಲಿ ಗಂಟೆ ಹತ್ತೂವರೆ ಆಗಿತ್ತು.

ಮೇಕೆಯನ್ನು ಪರೀಕ್ಷಿಸಿದೆ. ಅದು ಎರಡು ರೀತಿಯ ಅಪಾಯದಲ್ಲಿ ಸಿಲುಕಿತ್ತು. ಗರ್ಭಕೋಶ ತಿರುಚಿಕೊಂಡಿತ್ತು. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ UTERINE TORSION ಎಂದು ಕರೆಯುತ್ತಾರೆ. ಮೇಕೆಗಳು ಬಹಳ ಚುರುಕಿನ ಪ್ರಾಣಿಗಳು. ಇವು ಸಣ್ಣಪುಟ್ಟ ಮರಗಳ ಕೊಂಬೆಗೆ ಜಿಗಿಯುವುದು, ಬೇಲಿಗೆ ಹತ್ತಿ ಮೇಯುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಮೇಕೆಗಳ ಗರ್ಭಕೋಶ ಎರಡು ಮೂರು ಪಲ್ಟಿ ಹೊಡೆದು ನುಲಿದುಕೊಳ್ಳುವ ಸಾಧ್ಯತೆ ಇರುತ್ತದೆ.
ನನ್ನ ತೋರ್ಬೆರಳನ್ನು ಒಳಗೆ ಹಾಕಿ ಪರೀಕ್ಷಿಸಿದಾಗ , ಗರ್ಭಕೋಶದ ದ್ವಾರ ತಿರುಚಿಕೊಂಡಿರುವುದು ಬೆರಳಿನ ಸ್ಪರ್ಶಕ್ಕೆ ವೇದ್ಯವಾಯಿತು. ಎಳನೀರು ಕುಡಿಯುವ ಪ್ಲಾಸ್ಟಿಕ್ ಕೊಳವೆಯನ್ನು ಎರಡು ಮೂರು ಸುತ್ತು ತಿರುಚಿಬಿಟ್ಟರೆ ಒಂದು ಹನಿಯನ್ನು ಕೂಡಾ ಸೊರೆಯಲು ಆಗುವುದಿಲ್ಲ. ಅದೇ ರೀತಿಯಲ್ಲಿ , ಮೇಕೆಮರಿ ತಾಯಿಗರ್ಭದಿಂದ ಹೊರಬರಲು ಸಲೀಸಾಗಿ ಇರಬೇಕಾದ ಮಾರ್ಗ ಕೂಡ ನಾಲ್ಕೈದು ಸುತ್ತು ತಿರುಚಿಕೊಂಡಿತ್ತು.
ಇಂತಹ ಸಂದರ್ಭಗಳಲ್ಲಿ ಬಹುಪಾಲು ಮಾಲೀಕರ ವರ್ತನೆ ಬಹಳ ಉದ್ವೇಗದಿಂದ ಕೂಡಿರುತ್ತದೆ. ಕೆಲವರು ಜೋರಾಗಿ ಅಳುತ್ತಿರುತ್ತಾರೆ. ತಮ್ಮ ಹಸು ಉಳಿಸಿಕೊಡಿ. ಕರು ಉಳಿಸಿಕೊಡಿ ಎಂದು ಗೋಳುಗರೆಯುತ್ತಿರುತ್ತಾರೆ. ಆದರೆ ಆ ವೃದ್ಧ ಮಹಿಳೆ ಒಂದು ಸಣ್ಣ ಸ್ವರವನ್ನೂ ಹೊರಡಿಸದೇ ನನಗೆ ಸಹಕರಿಸುತ್ತಿದ್ದಳು. ಸರಿಯಾಗಿ ಗುರುತಿಸಿದರೆ ಅವಳ ಕಣ್ಣುಗಳಲ್ಲಿ ಒಂದಿನಿತು ದುಗುಡವನ್ನು ಕಾಣಬಹುದಿತ್ತು. ಹಾಗಾಗಿ ಬಹುತೇಕ ಶಾಂತವಾಗಿದ್ದ ವಾತಾವರಣದಲ್ಲಿ ನನ್ನ ಕೆಲಸವೂ ಸುಗಮವಾಯಿತು.

ಪಕ್ಕದ ಮನೆಯ ಯುವಕನ ಸಹಕಾರ ಪಡೆದು ಮೇಕೆಯ ಕಾಲುಗಳನ್ನು ಮಡಿಚಿ ದಾರದಿಂದ ಕಟ್ಟಿ , ಅದನ್ನು ನೆಲದ ಮೇಲೆ ಏಳೆಂಟು ಸುತ್ತು ಉರುಳಿಸಿದೆ. ಹೀಗೆ ಮೂರುನಾಲ್ಕು ಭಾರಿ ಪ್ರಯತ್ನಿಸಿದ ನಂತರ ಗರ್ಭಕೋಶದ ಹೊರದಾರಿ ಸಂಪೂರ್ಣವಾಗಿ ಸಲೀಸಾಯಿತು. ಮೇಕೆ ಒಂದು ಆಪತ್ತನ್ನು ಗೆದ್ದಾಯಿತು. ಆದರೆ ಅದಕ್ಕಿಂತ ದೊಡ್ಡ ಆಪತ್ತು ಇನ್ನೊಂದಿತ್ತು.
ಕೇವಲ ಎರಡು ಬೆರಳುಗಳನ್ನು ತೂರಿಸಲು ಸಾಧ್ಯವಿರುವ ಮಾರ್ಗದಲ್ಲಿ ಸಂಚರಿಸಿ ಮೇಕೆ ಮರಿಯ ತಲೆಯನ್ನು ಪತ್ತೆ ಮಾಡಬೇಕಾಗಿತ್ತು. ಬಿಸ್ಲರಿ ಬಾಟಲಿಯೊಳಗೆ ಯಾರೋ ಮ್ಯಾಜಿಕ್ ಮಾಡಿ ಅದರ ಬಾಯಿಗಿಂತ ದೊಡ್ಡ ಗೋಲಿಯನ್ನು ಹಾಕಿದ್ದಾರೆ ಎಂದಿಟ್ಟುಕೊಳ್ಳಿ. ಆ ಗೋಲಿಯನ್ನು ಬೆರಳಿನಿಂದ ಈಚೆಗೆ ತೆಗೆಯುವಷ್ಟು ನಾಜೂಕಿನ ಕೆಲಸ ಇದು. ಬೆರಳನ್ನು ಒಳಗೆ ಹಾಕಿದರೆ ಗೋಲಿ ಹಿಂದಕ್ಕೆ ಹೋಗುತ್ತದೆ. ಬಾಯಿಯವರೆಗೂ ಬರುತ್ತದೆ , ಆದರೆ ಹಿಡಿತಕ್ಕೆ ಸಿಗುವುದಿಲ್ಲ !
ಇಂತಹ ಕ್ಷಿಷ್ಟ ಪರಿಸ್ಥಿತಿಯಲ್ಲಿ ಮೇಕೆ ಮರಿಯ ತಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಶುರುಮಾಡಿದೆ. ನನ್ನ ಒರಟು ನಡೆ ಗರ್ಭ ಕೋಶವನ್ನು ಹಾನಿಗೊಳಿಸಿ ತಾಯಿ ಮಗು ಎರಡನ್ನೂ ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇತ್ತು. ಬಹಳ ನಾಜೂಕಿನಿಂದ ಎರಡೂ ಕೈಗಳ ತೋರ್ಬೆರಳುಗಳನ್ನು ಇಕ್ಕಳದಂತೆ ಪ್ರಯೋಗಿಸಿ ಮೇಕೆಮರಿಯ ಕೆನ್ನೆಯನ್ನು ಒತ್ತಿ ಹಿಡಿದು ಚೂರೇಚೂರೇ ಈಚೆಗೆ ಎಳೆದುಕೊಳ್ಳತೊಡಗಿದೆ.
ಐದಾರು ಪ್ರಯತ್ನಗಳಲ್ಲಿ ಯಶ ಕಾಣಲಿಲ್ಲ. ಏಕೆಂದರೆ ಅದರ ಬುರುಡೆ ನನ್ನ ಹಿಡಿತಕ್ಕೆ ಸಿಕ್ಕಿರಲಿಲ್ಲ. ಗರ್ಭ ಕೋಶದ ಬಾಯಿ ಕಿರಿದಾಗಿ ಇದ್ದುದರಿಂದ ಬುರುಡೆ ಹಿಂದಕ್ಕೆ ಜಾರಿಕೊಳ್ಳುತ್ತಿತ್ತು.

ನನ್ನ ಸಹಾಯಕ್ಕೆ ಬಂದಿದ್ದ ಹುಡುಗ , “ ಮರಿ ಒಳಗೆ ಮೀಂಕ್ ಮೀಂಕ್ ಅಂತಾ ಇದೆ ಸಾರ್ ” ಎಂದ.
ಹೌದು! ಮರಿ ಬದುಕಿತ್ತು ! ಈಚೆಗೆ ಬರಲು ಅದೂ ಕೂಡ ಹೋರಾಟ ನಡೆಸುತ್ತಾ ಕ್ಷೀಣ ಧ್ವನಿ ಹೊರಡಿಸುತ್ತಿತ್ತು. ಇನ್ನೂ ವಿಳಂಬವಾದರೆ ಅದು ಉಸಿರುಗಟ್ಟಿ ಸಾಯುವ ಸಾಧ್ಯತೆಯಿತ್ತು. ಪದೇಪದೇ ವಂಚಿಸುತ್ತಿರುವ ದುರ್ಗಮ ಹಾದಿಯಿಂದ ಮರಿಯನ್ನು ಹೊರತರಲು ಮತ್ತೊಂದು ಪ್ರಯತ್ನ ಮಾಡಿದೆ. ನನ್ನ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿತು. ಮೇಕೆ ಮರಿಯ ಬುರುಡೆಗೆ ಹೊರ ಜಗತ್ತಿನ ದರ್ಶನ ಭಾಗ್ಯ ಲಭಿಸಿತು. ಹಿಂದೆ ಮುಂದೆ ತಿರುಚಿಕೊಂಡಿದ್ದ ಕಾಲುಗಳನ್ನು ಸುಲಭವಾಗಿ ಸರಿಪಡಿಸಿ ಈಚೆಗೆ ತೆಗೆದುಕೊಂಡೆ.
ಗಂಡು ಮರಿ ಜೀವಂತಿಕೆಯಿಂದ ಪುಟಿಯುತ್ತಿತ್ತು. ಆದರೆ ತಾಯಿ ಬಹಳ ನಿತ್ರಾಣಳಾಗಿದ್ದಳು. ಏಕೆಂದರೆ ಅವಳು ಬೆಟ್ಟದಂತಹ ನೋವನ್ನು ತಿಂದಿದ್ದಳು. ಪ್ರಾಣಿಗಳಿಗೆ ನೋವನ್ನು ನುಂಗಿ ಘನತೆಯಿಂದ ವರ್ತಿಸುವ ಸಾಮರ್ಥ್ಯವಿದೆ. ಮನುಷ್ಯ ಒಂದು ಜುಜುಬಿ ನೋವನ್ನೂ ತಡೆದುಕೊಳ್ಳಲಾರ.
ಆ ತಾಯಿ ಮೇಕೆಗೆ ಐವಿ ದ್ರಾವಣಗಳು, ನೋವು ನಿವಾರಕ ಔಷಧಿ ಮತ್ತು ಆಂಟಿ ಬಯೋಟಿಕ್ ಔಷಧಿ ನೀಡಿದೆ. ಇಷ್ಟಾದರೂ ಅದು ಮೇಲೆ ಏಳಲಿಲ್ಲ. ಹಸಿವು ಯಾರಪ್ಪನ ಸೊತ್ತು. ಮರಿ ಮಂಡಿಯೂರಿ ತಾಯ ಮೊಲೆಯನ್ನು ಕಚ್ಚಿ ಎಳೆಯತೊಡಗಿತು.
ಎರಡು ಆಪತ್ತುಗಳನ್ನು ಗೆದ್ದು ನಿತ್ರಾಣವಾಗಿ ಮಲಗಿದ್ದ ತಾಯಿ ಮೇಕೆ ನಾಳಿನವರೆಗೆ ಬದುಕಿ ಉಳಿಯುತ್ತದೆಯೋ ಇಲ್ಲವೋ ಎಂಬುದು ಖಾತ್ರಿಯಿರಲಿಲ್ಲ . ಚಳಿಗಾಲ. ರಾತ್ರಿಯ ಹೊತ್ತು ತಾಪಮಾನ ಕನಿಷ್ಟ ಮಟ್ಟಕ್ಕೆ ಇಳಿದು ಮೇಕೆಯ ಆರೋಗ್ಯ ಸ್ಥಿತಿ ಬಿಗಡಾಯಿಸುವ ಸಾಧ್ಯತೆಯೂ ಇತ್ತು. ನನ್ನ ಕೈಲಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಮಾಧಾನದಲ್ಲಿ ಅಲ್ಲಿಂದ ವಾಪಸ್ ಬಂದೆ.
ಆಕೆ ನಿನ್ನೆ ಬೇರೆ ಯಾರಿಂದಲೋ ಕರೆ ಮಾಡಿಸಿದ್ದಳು. ಆ ನಂಬರ್ ಪತ್ತೆ ಹಚ್ಚಿ ಕರೆ ಮಾಡಿದರೆ ಬಿಜೀ ಬಿಜೀ ಎನ್ನುತ್ತಿತ್ತು. ಏನಾಯಿತೋ ಎತ್ತಾಯಿತೋ ಎಂಬ ಚಿಂತೆಯಲ್ಲಿದ್ದೆ. ಆದರೆ ಇಂದು ಪಕ್ಕದ ಬೀದಿಯ ಕೇಸನ್ನು ನೋಡಿಕೊಂಡು ಕುತೂಹಲದಿಂದ ಆ ಮಹಿಳೆಯ ಮನೆಯ ಬಳಿಗೆ ಹೋದಾಗ ತಾಯಿ-ಮಗ ಮನೆಬಾಗಿಲಲ್ಲಿ ನನ್ನನ್ನು ಸ್ವಾಗತಿಸಿದರು. ಇಬ್ಬರೂ ಅಪಾಯದಿಂದ ಪಾರಾಗಿದ್ದನ್ನು ನೋಡಿ ಸಂತೃಪ್ತಿಯ ನಿಟ್ಟುಸಿರನ್ನು ಹೊರಗೆ ಹಾಕಿದೆ.
ಡಾ.ಗವಿಸ್ವಾಮಿ ಎನ್
ಪಶುವೈದ್ಯ. ಪಶುಆಸ್ಪತ್ರೆ , ಬೇಗೂರು , ಗುಂಡ್ಲುಪೇಟೆ ತಾಲ್ಲೂಕು , ಚಾಮರಾಜನಗರ ಜಿಲ್ಲೆ .