ಬಾಲ್ಯದಿಂದಲೂ ಈಕೆಗೆ ಬಣ್ಣದ ಲೋಕದತ್ತ ವಿಶೇಷ ಒಲವು. ಮೊದಲಿನಿಂದಲೂ ನಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಈಕೆ ಇಂದು ಕಿರುತೆರೆಯಲ್ಲಿ ಬ್ಯುಸಿ. ಈಕೆಯ ಹೆಸರು ಪೂಜಾ ರಮೇಶ್. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಅವನು ಮತ್ತು ಶ್ರಾವಣಿ” ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯ ದೊಡ್ಡಪ್ಪನ ಮಗಳು ನಿಶಿತಾ ಆಗಿ ನಟಿಸುತ್ತಿರುವ ಪೂಜಾ ರಮೇಶ್ ಗೆ ಇದು ಎರಡನೇ ಧಾರಾವಾಹಿ ಹೌದು.

ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಗಿಣಿರಾಮ” ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ಪೂಜಾ ರಮೇಶ್. ಉತ್ತರ ಕನ್ನಡ ಸೊಬಗಿನ ಗಿಣಿರಾಮ ಧಾರಾವಾಹಿಯಲ್ಲಿ ಅನಘಾ ಅಣ್ಣಾಜಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಪೂಜಾ ರಮೇಶ್ ಆ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡಾ ಮಾಡಿಕೊಂಡಿದ್ದರು.
ಅನಘಾ ಅಣ್ಣಾಜಿ ಪಾತ್ರಕ್ಕೆ ಪೂಜಾ ರಮೇಶ್ ಅವರು ಉತ್ತರ ಕನ್ನಡದ ಗ್ರಾಂಥಿಕ ಭಾಷೆಯನ್ನು ಕಲಿತುಕೊಂಡಿದ್ದರು. ಮಾತ್ರವಲ್ಲ ಪೂಜಾ ಅವರ ಆ ಪಾತ್ರವನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದರು. “ಗಿಣಿರಾಮ” ಧಾರಾವಾಹಿಯ ನಂತರ “ಅವನು ಮತ್ತು ಶ್ರಾವಣಿ” ಧಾರಾವಾಹಿಯ ನಿಶಿತಾ ಆಗಿ ಕಿರುತೆರೆಗೆ ಮರಳಿರುವ ಈಕೆ ನಿಶಿತಾ ತುಂಬಾ ಸ್ಟ್ರೈಟ್ ಫಾರ್ವರ್ಡ್ ಹುಡುಗಿ. ಯಾರಿಗೂ ಹೆದರದ ಆಕೆ ಅವಳಿಗೆ ಏನು ಮಾಡಬೇಕು ಎಂದು ಅನ್ನಿಸುತ್ತದೆ ಅದನ್ನೇ ಮಾಡುತ್ತಾಳೆ. ಅದು ಒಂದು ರೀತಿಯ ಬಬ್ಲಿ ಕ್ಯಾರೆಕ್ಟರ್ ಹೌದು ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

“ಅವನು ಮತ್ತು ಶ್ರಾವಣಿ” ಧಾರಾವಾಹಿಯಲ್ಲಿ ನೆಗೆಟಿವ್ ಛಾಯೆಯಿರುವ ಪಾತ್ರದಲ್ಲಿ ನಟಿಸುತ್ತಿರುವ ಪೂಜಾ ರಮೇಶ್ ನಟನೆಯ ಹೊರತಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬೆಡಗಿ. ಈಗಾಗಲೇ ಒಂದಷ್ಟು ವೇದಿಕೆಗಳಲ್ಲಿ ಕ್ಯಾಟ್ ವಾಕ್ ಮಾಡಿ ಮೋಡಿ ಮಾಡಿರುವ ಪೂಜಾ ರಮೇಶ್ ಕೆಲವೊಂದು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮಿಂಚಿದ್ದಾರೆ.
ವಿಕ ನವತಾರೆ 2019ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಪೂಜಾ ರಮೇಶ್ ಆ ವರ್ಷದ ವಿನ್ನರ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ಈಕೆ ತಮಿಳುನಾಡು ಟೂರಿಸಂ ಬೋರ್ಡ್ನ ಜಾಹೀರಾತಿನಲ್ಲಿಯೂ ಮೋಡಿ ಮಾಡಿದ್ದಾರೆ. ಇದರ ಜೊತೆಗೆ ಇತ್ತೀಚೆಗಷ್ಟೇ ಸ್ಪರ್ಶ್ ಮಸಾಲ ಜಾಹೀರಾತಿನಲ್ಲಿ ಈಕೆ ಅಭಿನಯಿಸಿದ್ದು ಪ್ರಭುದೇವ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.