ಕಿಚ್ಚ ಸುದೀಪ್ ಅವರು ಇಂದು ಅತೀವವಾದ ದುಃಖದಲ್ಲಿದ್ದಾರೆ. ಅಮ್ಮನನ್ನು ಕಳೆದುಕೊಂಡಿರುವ ಸುದೀಪ್ ಅವರು ಇಂದು ಬೆಳಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ನೋವನ್ನು ಬಹಿರಂಗವಾಗಿ ಹಂಚಿಕೊಂಡಿದ್ದು, ಕಿಚ್ಚ ಬರೆದಿರುವ ಸಾಲುಗಳನ್ನು ಕೇಳಿದರೆ ಎಂಥವರ ಕಣ್ಣಲ್ಲಿ ಆದರೂ ನೀರು ಬರುವುದು ಖಂಡಿತ. ಸುದೀಪ್ ಅವರಿಗೆ ಅಮ್ಮ ಅಂದ್ರೆ ಪ್ರಾಣ, ಅಮ್ಮನ ಆಶೀರ್ವಾದ ಪಡೆಯದೆ ಅವರು ಮನೆಯಿಂದ ಹೊರಗೆ ಕಾಲಿಡುತ್ತಿರಲಿಲ್ಲ ಎನ್ನುವ ವಿಚಾರವನ್ನು ಇತ್ತೀಚೆಗೆ ಬಹಿರಂಗ ಪಡಿಸಲಾಗಿತ್ತು.
ಮೊನ್ನೆ ಕೂಡ, ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಗೆ ಬರುವ ಹಿಂದಿನ ದಿನ ಸಹ ಅಮ್ಮನ ಆಶೀರ್ವಾದ ಪಡೆದುಕೊಂಡೇ ಮನೆಯಿಂದ ಹೊರಟಿದ್ದಾರೆ ಕಿಚ್ಚ. ಸುದೀಪ್ ಅವರಿಗೆ ಪ್ರತಿದಿನ ಬೆಳಗ್ಗೆ ಸರಿಯಾಗಿ 5:30ಕ್ಕೆ ಅಮ್ಮನಿಂದ ಗುಡ್ ಮಾರ್ನಿಂಗ್ ಕಂದ ಎನ್ನುವ ಒಂದು ಮೆಸೇಜ್ ಬರುತ್ತಿತ್ತಂತೆ. ಆ ಮೆಸೇಜ್ ಇಂದಲೇ ಕಿಚ್ಚನ ದಿನ ಶುರುವಾಗುತ್ತಿತ್ತು. ಕೊನೆಯದಾಗಿ ಸುದೀಪ್ ಅವರಿಗೆ ಅಮ್ಮನಿಂದ ಮೆಸೇಜ್ ಬಂದದ್ದು ಆಕ್ಟೊಬರ್ 18ರಂದು.
My mother , the most unbiased, loving, forgiving, caring, and giving, in my life was valued , celebrated, and will always be cherished.
*Valued… because she was my true god next to me in the form of a human.
*Celeberated… because she was my festival. My teacher. My true… pic.twitter.com/UTU9mEq944
— Kichcha Sudeepa (@KicchaSudeep) October 21, 2024
19ರ ಶನಿವಾರ ಬೆಳಗ್ಗೆ ಅಮ್ಮನಿಂದ ಮಸೇಜ್ ಬರದೇ ಇದ್ದ ಕಾರಣ ಸುದೀಪ್ ಅವರಿಗೂ ಆತಂಕವಾಗಿತ್ತು, ಅಂದು ಬೆಳಗ್ಗೆ ಅವರ ಅಕ್ಕ ಕರೆಮಾಡಿ, ಅಮ್ಮನಿಗೆ ಹುಷಾರಿಲ್ಲ ಎಂದು ತಿಳಿಸಿದಾಗ ಸುದೀಪ್ ಅವರಿಗೆ ಗಾಬರಿಯಾಗಿ, ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಚಿತ್ರೀಕರಣದ ನಡುವೆ ಅಕ್ಕನಿಗೆ ಕರೆಮಾಡಿ, ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸಿ, ನಂತರ ಡಾಕ್ಟರ್ ಗೆ ಕರೆಮಾಡಿ ಎಲ್ಲಾ ವಿಚಾರವನ್ನು ಮಾತನಾಡಿದ್ದಾರೆ ಕಿಚ್ಚ. ಅಂದು ಸುದೀಪ್ ಅವರು ವೀಕೆಂಡ್ ಎಪಿಸೋಡ್ ಅನ್ನು ಕೂಡ ಮಧ್ಯದಲ್ಲಿ ಬಿಟ್ಟು ಹೋಗುವ ಹಾಗಿರಲಿಲ್ಲ.
ಕೆಲ ಘಂಟೆಗಳ ಬಳಿಕ ಅಮ್ಮನಿಗೆ ಸೀರಿಯಸ್ ಆಗಿದೆ ಎಂದು ಗೊತ್ತಾದ ನಂತರವೂ, ಕಿಚ್ಚ ಸುದೀಪ್ ಅವರು ಭಾವನೆಗೆ ಒಳಪಡದೆ, ಕರ್ತವ್ಯಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ನಿರ್ಧರಿಸಿ, ವೀಕೆಂಡ್ ಎಪಿಸೋಡ್ ಅನ್ನು ಮುಗಿಸಿಕೊಟ್ಟು ನಂತರ ಅಮ್ಮನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದಾರೆ. ಸುದೀಪ್ ಅವರು ಹೋಗುವುದರೊಳಗೆ ಅವರ ತಾಯಿಗೆ ಪ್ರಜ್ಞೆ ಇರಲಿಲ್ಲ. ಅಮ್ಮನಿಗೆ ಪ್ರಜ್ಞೆ ಇರುವ ಸಮಯದಲ್ಲಿ ಕಿಚ್ಚ ಆಸ್ಪತ್ರೆ ತಲುಪಲು ಸಾಧ್ಯವಾಗಲಿಲ್ಲ. ಆ ನೋವು ಸುದೀಪ್ ಅವರಲ್ಲಿದೆ. ಭಾನುವಾರ ಬೆಳಗಿನ ಜಾವದ ವರೆಗು ಹೋರಾಡಿದ ಸುದೀಪ್ ಅವರ ತಾಯಿ ಕೊನೆಯುಸಿರೆಳೆದರು.
ಶನಿವಾರ ನಡೆದ ಸಂಪೂರ್ಣ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಅವರು, ತಮಗಾಗಿರುವ ನೋವಿನ ಬಗ್ಗೆ ವಿವರಿಸಿದ್ದಾರೆ. ಹಾಗೆಯೇ ಈ ಸಮಯದಲ್ಲಿ ತಮ್ಮೊಡನೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಅಮ್ಮನಿಂದ ಇನ್ನುಮುಂದೆ ಆ ಒಂದು ಮೆಸೇಜ್ ಬರುವುದಿಲ್ಲ ಎನ್ನುವ ನೋವು ಕಿಚ್ಚ ಅವರಲ್ಲಿದೆ. ಸುದೀಪ್ ಅವರಿಗೆ ಈ ನೋವನ್ನು ಸಹಿಸುವ, ಈ ನೋವನ್ನು ದೂರ ಮಾಡುವ ಶಕ್ತಿಯನ್ನು ಭಗವಂತ ನೀಡಲಿ.