ಸನ್ನಿ ಲಿಯೋನಿಯ ಚಿತ್ರ ಹಾಲ್ ಟಿಕೆಟ್ನಲ್ಲಿ ಮುದ್ರಣಗೊಂಡಿರುವುದು ಶಿಕ್ಷಣ ಇಲಾಖೆ ಅಥವಾ ಸರ್ಕಾರದಿಂದ ಆಗಿರುವ ಲೋಪವಲ್ಲ ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ. ಜೊತೆಗೆ, ಈ ಲೋಪಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿ ದೂರು ದಾಖಲಿಸಲಾಗಿದೆ.
ಚಿಕ್ಕಮಗಳೂರಿನ ಕೊಪ್ಪದ ಅಭ್ಯರ್ಥಿಯೊಬ್ಬರು ಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಯ ಪ್ರವೇಶ ಪತ್ರಿಕೆಯಲ್ಲಿ ಅಭ್ಯರ್ಥಿಯ ಚಿತ್ರ ಪ್ರದರ್ಶನಗೊಳ್ಳಬೇಕಿದ್ದ ಸ್ಥಳದಲ್ಲಿ ಸನ್ನಿ ಲಿಯೋನಿಯ ತೆರೆದೆದೆಯ ಚಿತ್ರ ಮುದ್ರಣಗೊಂಡಿದೆ.
ಸನ್ನಿ ಲಿಯೋನಿಯ ಚಿತ್ರವುಳ್ಳ ಹಾಲ್ ಟಿಕೆಟ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು, ಕೆಲವರು ಈ ಲೋಪಕ್ಕೆ ಶಿಕ್ಷಣ ಇಲಾಖೆಯನ್ನು ದೂಷಿಸಿದ್ದಾರೆ ಸಹ. ಆದರೆ ಇದಕ್ಕೆ ಸೂಕ್ತ ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆ, ”ಟಿಇಟಿ ಪರೀಕ್ಷೆಗೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿ ಆನ್ಲೈನ್ನಲ್ಲಿ ತಾನೇ ಲಾಗಿನ್ ಐಡಿ, ಪಾಸ್ವರ್ಡ್ ಸೃಷ್ಟಿಸಿಕೊಂಡು ಲಾಗಿನ್ ಆಗಿ ತನ್ನ ಪೂರ್ಣ ಮಾಹಿತಿ ತುಂಬುತ್ತಾನೆ. ಆತನ ಫೋಟೊವನ್ನೂ ಸಹ ಆತನೇ ಅಪ್ಲೋಡ್ ಮಾಡುತ್ತಾನೆ. ಇದರಲ್ಲಿ ಶಿಕ್ಷಣ ಇಲಾಖೆಯ ಯಾವ ಪಾತ್ರವೂ ಇರುವುದಿಲ್ಲ” ಎಂದಿದೆ.
”ತಾನು ನೀಡಿರುವ ಮಾಹಿತಿ ಸರಿಯಿದೆಯೇ ಎಂದು ಪರೀಕ್ಷಿಸಿಕೊಂಡ ಬಳಿಕವೇ ಅಭ್ಯರ್ಥಿ ಅರ್ಜಿ ಸಬ್ಮಿಟ್ ಮಾಡುವ ಆಯ್ಕೆ ಇದೆ. ಆ ನಂತರ ಶುಲ್ಕ ಪಾವತಿಸಿ, ಬಳಿಕ ತನ್ನ ಅಭ್ಯರ್ಥಿ ಸಂಖ್ಯೆ ಹಾಗೂ ಹುಟ್ಟಿದ ದಿನಾಂಕ ಬಳಸಿ ಪ್ರವೇಶ ಪ್ರತಿ ಡೌನ್ಲೋಡ್ ಮಾಡಿಕೊಳ್ಳಬಹುದು. ನಮ್ಮ ಇ-ಆಡಳಿತ ವ್ಯವಸ್ಥೆ ಸುರಕ್ಷಿತವಾಗಿದ್ದು, ಅಭ್ಯರ್ಥಿ ಹೊರತುಪಡಿಸಿ ಇನ್ಯಾರು ಸಹ ಅಭ್ಯರ್ಥಿಯ ಅರ್ಜಿಯನ್ನು ತಿದ್ದಲು, ಬದಲಾಯಿಸಲು ಸಾಧ್ಯವಿಲ್ಲ ಎಂದಿದೆ ಇಲಾಖೆ.
ಈ ಹಿಂದೆಯೂ ಹೀಗೆ ಹಲವು ಬಾರಿ ಆಗಿದ್ದಿದಿದೆ. ಆಧಾರ್ ಕಾರ್ಡ್ಗಳಲ್ಲಿ, ಸರ್ಕಾರವು ಕಾರ್ಮಿಕರಿಗೆ ನೀಡುವ ಜಾಬ್ ಕಾರ್ಡ್ಗಳಲ್ಲಿ ಸನ್ನಿ ಲಿಯೋನಿಯ ಚಿತ್ರಗಳು ಪ್ರಕಟವಾಗಿದ್ದಿದೆ. ಆದರೆ ಈ ಬಾರಿ ಪರೀಕ್ಷಾ ಪ್ರೇವಶ ಪತ್ರದಲ್ಲಿ ಸನ್ನಿ ಲಿಯೋನಿಯ ಚಿತ್ರ ಅಚ್ಚಾಗಿರುವುದು ತುಸು ಹೆಚ್ಚೇ ವೈರಲ್ ಆಗಿದೆ.