ಕನ್ನಡ ನಾಡು ನುಡಿ ಬಗ್ಗೆ ಯಾರೇ ಮಾತನಾಡಿದರೂ ಕನ್ನಡಿಗರು ಅದನ್ನ ಪ್ರಶ್ನೆ ಮಾಡ್ತಾನೆ ಇದ್ದಾರೆ. ಆದರೆ ಕೆಲ ನಟ ನಟಿಯರು ಮಾತ್ರ ಓಲೈಕೆ ಮಾಡುತ್ತಲೇ ಬಂದಿದ್ದಾರೆ. ಈಗ ನಟ ಕಮಲ್ ಹಾಸನ್ ವಿಚಾರವಾಗಿಯೂ ಇದೇ ಆಗುತ್ತಿದೆ. ಎಲ್ಲರು ಒಂದಾಗಿದ್ದರೆ, ಆ ರೀತಿ ಮಾತನಾಡುವವರಿಗೆ ಒಂದು ಪಾಠ ಕಲಿಸಬಹುದಿತ್ತು. ಆದರೆ ಇಂತಹ ಓಲೈಕೆಗಳಿಂದ ಈಗ ಕನ್ನಡದ ಬಗ್ಗೆ ಬೀದಿ ಬೀದಿಯಲ್ಲಿ ಮಾತನಾಡುವಂತಾಗಿದೆ.

ಕಮಲ್ ಹಾಸನ್ ವಿಚಾರವೂ ಕೂಡ ಹೀಗೆ. ಕನ್ನಡ ನಟರು ಇದ್ದ ವೇದಿಕೆಯಲ್ಲೇ ಕನ್ನಡದ ಹುಟ್ಟಿನ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ. ಆದರೂ ಇದನ್ನ ವಿರೋಧಿಸುವ ಕೆಲಸ ಆಗಿಲ್ಲ. ಇದಕ್ಕೂ ರಾಜಕಾರಣಿಗಳು, ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿದರೂ ಕೂಡ, ಸಿನಿಮಾ ಬ್ಯಾನ್ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟರೂ ಕೂಡ ಯಾವುದಕ್ಕೂ ನಟ ಕಮಲ್ ಹಾಸನ್ ಬಗ್ಗುತ್ತಿಲ್ಲ.
ಹೌದು, ಚೆನ್ನೈನಲ್ಲಿ ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಮೊಂಡಾಟ ಪ್ರದರ್ಶನ ಮಾಡಿದ್ದಾರೆ. ಪ್ರಶ್ನೆಗೆ ಉತ್ತರ ನೀಡಿರೋ ಅವರು ನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪು ಆಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಹಾಗಾಗಿ ನಾನು ಕ್ಷಮೆ ಕೇಳಲ್ಲ, ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ, ನಾನು ಕಾನೂನು & ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕನ್ನಡಿಗರನ್ನ ಕೆಣಕಿದ್ದಾರೆ.

ಈಗಾಗಲೇ ಅವರು ೨೪ ಗಂಟೆಯೊಳಗೆ ಕ್ಷಮೆಯಾಚಿಸದೇ ಸಿನಿಮಾ ಬಿಡುಗಡೆ ಆಗೋದಿಲ್ಲ ಅಂತ ಫಿಲಂ ಚೇಂಬರ್ ಹಾಗೂ ಕೆಲ ಕನ್ನಡಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಅವರ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿವೆ. ಆದರೆ ಕಮಲ್ ಹಾಸನ್ ಮಾತ್ರ ಮಂಡಿಯೂರಲು ತಯಾರಿಲ್ಲ.
ಒಟ್ನಲ್ಲಿ ಈ ರೀತಿ ಕನ್ನಡದ ಬಗ್ಗೆ ಮಾತನಾಡುವ ಅನೇಕರಿಗೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೆ ನಮ್ಮಲ್ಲೇ ಇರುವ ಕೆಲವು ಓಲೈಕೆ ಮಾಡುವವರಿಂದ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗ್ತಾ ಇಲ್ಲ. ಇಂತವರ ನಡುವೆ ಕನ್ನಡ ಅಸ್ಮಿತೆ ಹೇಗೆ ಉಳಿಯಬೇಕು ಅನ್ನೋದೆ ಪ್ರಶ್ನೆಯಾಗಿದೆ.



