ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ, ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜಿನೋವಾ ಸೋಮವಾರ ತಿರುಪತಿಗೆ ತೆರಳಿ ಮಗನಿಗಾಗಿ ಪ್ರಾರ್ಥಿಸಿದ್ದಾರೆ. ದೇವರಿಗೆ ಮುಡಿ ಕೊಟ್ಟಿರುವುದಲ್ಲದೆ ದೇವಸ್ಥಾನಕ್ಕೆ 17 ಲಕ್ಷ ರೂ ದೇಣಿಗೆ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದಾರೆ. ಸೋಮವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದ್ದ ಅನ್ನಾ ಲೆಜನೋವಾ, ವೆಂಕಟೇಶ್ವರನ ದರ್ಶನ ಪಡೆದು ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿದ್ದಾರೆ. ಈ ಸಮಯದಲ್ಲಿ ಟಿಟಿಡಿ ಅಧಿಕಾರಿಗಳು ಲೆಜನೋವಾ ಅವರನ್ನು ಸ್ವಾಗತಿಸಿದರು.

ಪೂಜೆ ನಂತರ ರಂಗನಾಯಕಕುಲ ಮಂಟಪದಲ್ಲಿ ಪುರೋಹಿತರ ವೇದ ಆಶೀರ್ವಾದವನ್ನು ಪಡೆದಿದ್ದಾರೆ. ಟಿಟಿಡಿ ಅಧಿಕಾರಿಗಳು ಅನ್ನಾ ಅವರಿಗೆ ಪ್ರಸಾದ ಹಾಗೂ ಕಾಣಿಕೆಗಳನ್ನು ಅರ್ಪಿಸಿದರು. ಅಲ್ಲಿಂದ ಅಖಿಲಾಂಡಂ ತಲುಪಿ ಕರ್ಪೂರ ಹಚ್ಚಿ, ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ. ಮುಡಿ ಕೊಟ್ಟ ನಂತರ ಆಂಜನೇಯನ ದರ್ಶನ ಪಡೆದು ಗಾಯತ್ರಿ ನಿಲಯಕ್ಕೆ ತೆರಳಿ ಬಳಿಕ ಭೋಜನಾಲಯಕ್ಕೆ ತೆರಳಿ ಭಕ್ತರಿಗೆ ಪ್ರಸಾದ ಸ್ವೀಕರಿಸಿ ತಾವೂ ಪ್ರಸಾದ ಸ್ವೀಕರಿಸಿ ಸಿಂಗಾಪೂರ್ಗೆ ಹಿಂತಿರುಗಿದ್ದಾರೆ. ಅನ್ನಾ ಲೆಜನೋವಾ ತಮ್ಮ ಪುತ್ರ ಮಾರ್ಕ್ ಶಂಕರ್ ಹೆಸರಿನಲ್ಲಿ ದೇವಸ್ಥಾನದ ಒಂದು ವೇಳೆಯ ಊಟದ ಖರ್ಚಿಗಾಗಿ 17 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಕಳೆದ ಮಂಗಳವಾರ ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್ ಶಂಕರ್, ಸಿಂಗಾಪುರದಲ್ಲಿ ನಡೆದ ಬೆಂಕಿ ಅಪಘಾತದಲ್ಲಿ ಗಾಯಗೊಂಡಿದ್ದರು. ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಪಘಾತದಲ್ಲಿ ಅವರ ಕೈ ಮತ್ತು ಕಾಲುಗಳಿಗೆ ಗಾಯವಾಗಿತ್ತು. ಜೊತೆಗೆ ಹೊಗೆಯಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಚಾರ ತಿಳಿದ ಕೂಡಲೇ ಪವನ್ ಕಲ್ಯಾಣ ಎಲ್ಲಾ ಕಾರ್ಯಕ್ರಮಗಳನ್ನು ಬಿಟ್ಟು ಮಗನನ್ನು ನೋಡಲು ಸಿಂಗಾಪೂರ್ಗೆ ತೆರಳಿದ್ದರು. ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜನೋವಾ, ತಮ್ಮ ಪುತ್ರ ಮಾರ್ಕ್ ಶಂಕರ್ ಜೊತೆ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಆಗ್ಗಾಗ್ಗೆ ಹೈದರಾಬಾದ್ಗೆ ಭೇಟಿ ನೀಡುತ್ತಾರೆ.
ಅನ್ನಾ ಲೆಜನೋವಾ , ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ. 1997 ರಲ್ಲಿ ಪವನ್ ಕಲ್ಯಾಣ್ ಮೊದಲ ಬಾರಿಗೆ ನಂದಿನಿ ಎಂಬುವರನ್ನು ಪ್ರೀತಿಸಿ ಮದುವೆ ಆದರು ಆದರೆ 2 ವರ್ಷಗಳ ನಂತರ ಇವರಿಬ್ಬರ ಸಂಬಂಧ ಮುರಿದುಬಿತ್ತು. ನಂತರ 2009 ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆ ಆದರು. ಈ ಜೋಡಿ ಕೂಡಾ 2007 ರಲ್ಲಿ ವಿಚ್ಛೇದನ ಪಡೆದು ದೂರಾದರು. ನಂತರ 2013 ರಲ್ಲಿ ರಷ್ಯನ್ ಮಾಡೆಲ್, ನಟಿ ಅನ್ನಾ ಲೆಜನೋವಾ ಅವರನ್ನು ಮದುವೆ ಆದರು. ಪವನ್ ಕಲ್ಯಾಣ್ಗೆ ಇಬ್ಬರು ಹೆಣ್ಣು, ಇಬ್ಬರು ಗಂಡು ಸೇರಿ ಒಟ್ಟು ನಾಲ್ವರು ಮಕ್ಕಳಿದ್ದಾರೆ.

ಪವನ್ ಕಲ್ಯಾಣ್ ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. 1996 ರಲ್ಲಿ ತೆರೆ ಕಂಡ ಅಕ್ಕಡ ಅಮ್ಮಾಯಿ, ಇಕ್ಕಡ ಅಬ್ಬಾಯಿ ಸಿನಿಮಾ ಮೂಲಕ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಈಚೆಗೆ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನ್ನಾವರಂ, ಪುಲಿ, ಗೋಕುಲಂಲೋ ಸೀತಾ, ಬದ್ರಿ, ಖುಷಿ, ಶಂಕರ್ ದಾದಾ ಎಂಬಿಬಿಎಸ್, ಪಂಜಾ, ಅತ್ತಾರಿಂಟಿಕಿ ದಾರೇದಿ, ಅಜ್ಞಾತವಾಸಿ, ವಕೀಲ್ ಸಾಬ್, ಭೀಮ್ಲಾ ನಾಯಕ್, ಹರಿಹರ ವೀರಮಲ್ಲು ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಸದ್ಯಕ್ಕೆ ಅವರು ರಾಜಕೀಯದತ್ತ ಹೆಚ್ಚಿನ ಗಮನ ಹರಿಸಿರುವುದರಿಂದ ಉಸ್ತಾದ್ ಭಗತ್ ಸಿಂಗ್, ಹರಿಹರ ವೀರಮಲ್ಲು ಭಾಗ 2 ಸಿನಿಮಾಗಳ ಶೂಟಿಂಗ್ ಬಾಕಿ ಉಳಿದಿದೆ.
2014 ರಲ್ಲಿ ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಸ್ಥಾಪಿಸಿದರು. ಸಿನಿಮಾಗಳ ಜೊತೆ ಜೊತೆಗೆ ಆಂಧ್ರ, ತೆಲಂಗಾಣದಾದ್ಯಂತ ಸಂಚರಿಸಿ ಪಕ್ಷವನ್ನು ಬಲಪಡಿಸಿದರು. ಕಳೆದ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಆಂಧ್ರ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿದರೆ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.