ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 746ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ಜೋಕರ್ ಕೆಲಸ ಕಳೆದುಕೊಂಡಿದ್ದಾಳೆ. ಈ ವಿಚಾರ ತಾಂಡವ್-ಶ್ರೇಷ್ಠಾಗೂ ಗೊತ್ತಾಗಿದೆ. ಈ ಕೆಲಸವನ್ನೂ ಕಳೆದುಕೊಂಡಿದ್ದೀಯ, ಇನ್ನು ನೀನು ಮನೆ ಉಳಿಸಿಕೊಳ್ಳುವುದಿಲ್ಲ. ಜೀವನ ನಡೆಸುವುದು ಎಂದರೆ ಅಡುಗೆ ಮಾಡಿದಂತೆ ಅಲ್ಲ, ಈಗಲೂ ತಡವಾಗಿಲ್ಲ, ನೀನು ನನ್ನ ಬಳಿ ಕ್ಷಮೆ ಕೇಳು, ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ತಾಂಡವ್ ಹೇಳುತ್ತಾನೆ. ಆದರೆ ಭಾಗ್ಯಾ, ತಾಂಡವ್ ಮಾತುಗಳಿಗೆ ಜಗ್ಗುವುದಿಲ್ಲ.
ನಾನು ಏನು ಮಾಡಬೇಕೆಂದುಕೊಂಡಿದ್ದೇನೋ ಅದನ್ನು ಮಾಡೇ ತೀರುತ್ತೇನೆ ಎಂದು ಭಾಗ್ಯಾ ಅಲ್ಲಿಂದ ಹೊರಡುತ್ತಾಳೆ. ಭಾಗ್ಯಾ ಆತ್ಮವಿಶ್ವಾಸ ಕಂಡು ತಾಂಡವ್ ಮತ್ತೆ ಸಿಟ್ಟಾಗುತ್ತಾನೆ. ಮನೆಯವರ ಬಳಿ ಭಾಗ್ಯಾ ತಾನು ಕೆಲಸ ಕಳೆದುಕೊಂಡಿದ್ದನ್ನು ಹೇಳುತ್ತಾಳೆ. ನನಗೆ ಈ ಕೆಲಸಗಳು ಆಗಿ ಬರುತ್ತಿಲ್ಲ, ಆದ್ದರಿಂದ ನನಗೆ ಚೆನ್ನಾಗಿ ಗೊತ್ತಿರುವ ಅಡುಗೆ ಕೆಲಸವನ್ನೇ ಮಾಡುತ್ತೇನೆ ಎಂದು ಭಾಗ್ಯಾ, ತಾನು ಲಂಚ್ ಬಾಕ್ಸ್ ಬಿಸ್ನೆಸ್ ಶುರು ಮಾಡುವ ವಿಚಾರವನ್ನು ಎಲ್ಲರಿಗೂ ಹೇಳುತ್ತಾಳೆ. ಸುನಂದಾ ಹೊರತುಪಡಿಸಿ ಉಳಿದವರು ಭಾಗ್ಯಾಗೆ ಬೆಂಬಲ ಸೂಚಿಸುತ್ತಾರೆ. ಈ ಕೆಲಸವೆಲ್ಲಾ ಆಗಿಬರುವುದಿಲ್ಲ, ನೀನು ಭ್ರಮೆಯಲ್ಲಿ ಬದುಕಬೇಡ ಎಂದು ಸುನಂದಾ ಮಗಳಿಗೆ ಹೇಳುತ್ತಾಳೆ. ಆದರೆ ಭಾಗ್ಯಾ ತಾನು ಇದರಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ.
ಬಿಸ್ನೆಸ್ ಶುರು ಮಾಡುವುದು ಸುಲಭದ ಮಾತಲ್ಲ, ಅದನ್ನು ಜನರಿಗೆ ಗೊತ್ತಾಗುವಂತೆ ಪ್ರಮೋಟ್ ಮಾಡಬೇಕು ಎಂದು ಪೂಜಾ ಹೇಳಿದ ಮಾತನ್ನು ನೆನಪಿಸಿಕೊಂಡ ಭಾಗ್ಯಾ, ಪಾಂಪ್ಲೆಟ್ಸ್ ಮಾಡಲು ನಿರ್ಧರಿಸುತ್ತಾಳೆ. ತನ್ನ ಬಿಸ್ನೆಸ್ ಕಾನ್ಸೆಪ್ಟ್ಗೆ ತಕ್ಕಂತೆ ಚಿತ್ರವನ್ನು ಬಿಡಿಸುತ್ತಾಳೆ. ಆದರೆ ಅದಕ್ಕೆ ಏನು ಹೆಸರು ಇಡಬೇಕೆಂದು ತೋಚುವುದಿಲ್ಲ. ಭಾಗ್ಯಾ ಬರೆದ ಚಿತ್ರ ನೋಡಿ ಪೂಜಾ ಖುಷಿಯಾಗುತ್ತಾಳೆ. ನನ್ನ ಬಿಸ್ನೆಸ್ಗೆ ಒಂದೊಳ್ಳೆ ಹೆಸರು ಇಡಬೇಕು, ಅದಕ್ಕೆ ಎಲ್ಲರ ಸಹಾಯ ಬೇಕು ಎಂದು ಭಾಗ್ಯಾ ಹೇಳುತ್ತಾಳೆ. ಪೂಜಾ ಎಲ್ಲರನ್ನೂ ರೂಮ್ಗೆ ಕರೆಯುತ್ತಾಳೆ. ನೀನು ಅಡುಗೆಯಲ್ಲಿ ಮಾತ್ರ ಎಕ್ಸ್ಪರ್ಟ್ ಎಂದುಕೊಂಡಿದ್ದೆ, ಆದರೆ ಇಷ್ಟು ಚೆನ್ನಾಗಿ ನೀನು ಚಿತ್ರ ಬಿಡಿಸುವೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಗುಂಡಣ್ಣ, ಅಮ್ಮನ ಡ್ರಾಯಿಂಗ್ ಹೊಗಳುತ್ತಾನೆ.
ಭಾಗ್ಯಾ ಬಿಸ್ನೆಸ್ಗೆ ಪೂಜಾ, ಸುಂದ್ರಿ ಒಂದೊಂದು ಹೆಸರನ್ನು ಸೂಚಿಸುತ್ತಾರೆ. ಆ ಹೆಸರು ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಗುಂಡಣ್ಣ ಹೇಳುವ ಹೆಸರು ಎಲ್ಲರಿಗೂ ಇಷ್ಟವಾಗುತ್ತದೆ. ನೀನು ಎಲ್ಲರಿಗೂ ಅಡುಗೆ ಮಾಡಿ ಕೈ ತುತ್ತು ನೀಡುತ್ತೀಯ ಅಮ್ಮ, ಅದಕ್ಕೆ ಈ ಬಿಸ್ನೆಸ್ಗೆ ಕೈ ತುತ್ತು ಎಂದೇ ಹೆಸರಿಡು ಎಂದು ಸೂಚಿಸುತ್ತಾನೆ. ಆ ಹೆಸರು ಕೇಳಿ ಎಲ್ಲರೂ ಖುಷಿಯಾಗುತ್ತಾರೆ. ಭಾಗ್ಯಾ ಅದೇ ಹೆಸರನ್ನು ಪಾಂಪ್ಲೆಟ್ಸ್ನಲ್ಲಿ ಬರೆಯುತ್ತಾಳೆ. ಅಕ್ಕ, ಕೆಲವೇ ಕೆಲವು ಸಾಕಾಗುವುದಿಲ್ಲ. ಇದನ್ನು ಪ್ರಿಂಟ್ ಔಟ್ ಹಾಕಿಸಿ ನಂತರ ಪರಿಚಯದವರಿಗೆ ಹಂಚೋಣ ಎಂದು ಪೂಜಾ ಐಡಿಯಾ ಕೊಡುತ್ತಾಳೆ.
ಮತ್ತೊಂದೆಡೆ ತನ್ವಿ ಕಾಲೇಜ್ನಲ್ಲಿ ಆಕೆಯ ಫ್ರೆಂಡ್ಸ್, ಟ್ರಿಪ್ ಹೋಗಲು ಪ್ಲ್ಯಾನ್ ಮಾಡುತ್ತಾರೆ. ನೀನು ಬಾ ಎಂದು ತನ್ವಿಯನ್ನು ಆಹ್ವಾನಿಸುತ್ತಾರೆ. ಆದರೆ ಹುಡುಗಿಯರು ಮಾತ್ರ ಹೋಗುತ್ತಿರುವುದಕ್ಕೆ ಕನ್ಸರ್ನ್ ಲೆಟರ್ಗೆ ಮನೆಯವರ ಸಹಿ ಬೇಕಾಗುತ್ತದೆ. ತನ್ವಿ ಲೆಟರ್ ಹಿಡಿದು ಅಮ್ಮನ ಬಳಿ ಹೋಗುವಾಗ ಕುಸುಮಾ ಅವಳನ್ನು ಕರೆಯುತ್ತಾಳೆ. ಏನದು ಮಾರ್ಕ್ಸ್ಕಾರ್ಡ್ ಕೊಟ್ರಾ ಎಂದು ಕೇಳುತ್ತಾಳೆ. ತನ್ವಿ ಟ್ರಿಪ್ ಹೋಗಲು ಪರ್ಮಿಷನ್ಗಾಗಿ ಆ ಪತ್ರ ತಂದಿದ್ದಾಳೆ ಎಂಬ ವಿಚಾರ ಕುಸುಮಾಗೆ ಗೊತ್ತಾಗುತ್ತದೆ. ಕಾಲೇಜು ಕಡೆಯಿಂದ ಹೋಗ್ತಿರೋದಾ? ನಿಮ್ಮ ಟೀಚರ್ಗಳೂ ಬರುತ್ತಿದ್ದಾರಾ ಎಂದು ಕೇಳುತ್ತಾಳೆ. ಇಲ್ಲ ಅಜ್ಜಿ ನಾವು ಫ್ರೆಂಡ್ಸ್ ಜೊತೆ ಸೇರಿ ಹೋಗುತ್ತಿರುವುದು ಎಂದು ಹೇಳುತ್ತಾಳೆ. ಮೊಮ್ಮಗಳ ಮಾತು ಕೇಳಿ ಕುಸುಮಾ ಸಿಟ್ಟಾಗುತ್ತಾಳೆ. ನೀನು ಎಲ್ಲಿಗೂ ಹೋಗುವುದು ಬೇಡ ಎಂದು ಕಂಡಿಷನ್ ಮಾಡುತ್ತಾಳೆ.
ಅಜ್ಜಿ ಬಳಿ ಕೇಳಿದರೆ ಏನೂ ಪ್ರಯೋಜನವಿಲ್ಲ, ಅಮ್ಮನನ್ನು ಕೇಳಿದರೆ ಅವಳು ಒಪ್ಪುತ್ತಾಳೆ ಎಂದು ತನ್ವಿ ಅಮ್ಮನ ಬಳಿ ಪತ್ರಕ್ಕೆ ಸಹಿ ಹಾಕಲು ಕೇಳುತ್ತಾಳೆ. ಆದರೆ ಭಾಗ್ಯಾ ಕೂಡಾ ತನ್ವಿ, ಟ್ರಿಪ್ಗೆ ಹೋಗಲು ಒಪ್ಪಿಗೆ ಕೊಡುವುದಿಲ್ಲ. ನೀನೂ ಏಕೆ ಅಜ್ಜಿಯಂತೆ ಮಾತನಾಡುತ್ತಿದ್ದೀಯ? ಈಗ ಈ ಮನೆಯಲ್ಲಿ ದುಡಿಯುತ್ತಿರುವುದು ನೀನು, ಆದ್ದರಿಂದ ನೀನು ಹೇಳಿದಂತೆ ಎಲ್ಲವೂ ನಡೆಯಬೇಕು ಎಂದು ತನ್ವಿ ಹೇಳುತ್ತಾಳೆ. ಮಗಳ ಮಾತು ಕೇಳಿ ಭಾಗ್ಯಾ ಕೋಪಗೊಳ್ಳುತ್ತಾಳೆ. ಅವರ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲ, ನೀನು ಈ ರೀತಿ ಮಾತನಾಡುವುದು ಸರಿಯಲ್ಲ, ಹಿರಿಯಲು ಹೇಳುವುದು ನಿನಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಎಂದು ಬುದ್ಧಿಮಾತು ಹೇಳುತ್ತಾಳೆ. ಆದರೆ ತನ್ವಿ ಮನೆ ಪರಿಸ್ಥಿತಿ, ಹಿರಿಯರ ಬುದ್ಧಿಮಾತನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯಲ್ಲಿಲ್ಲ.
ರಾತ್ರಿ ಭಾಗ್ಯಾ ಮಗಳನ್ನು ಊಟಕ್ಕೆ ಕರೆಯುತ್ತಾಳೆ. ಆದರೆ ತನ್ವಿ ಊಟ ಮಾಡಲು ಒಪ್ಪುವುದಿಲ್ಲ. ಎಲ್ಲರೂ ಊಟಕ್ಕೆ ಕೂರುತ್ತಾರೆ. ಆಗಲೇ ಅಮ್ಮ ಊಟಕ್ಕೆ ಕರೆದರೂ ನಾನು ಹೋಗಲಿಲ್ಲ, ಈಗ ನನಗೆ ಹಸಿವಾಗುತ್ತಿದೆ ಏನು ಮಾಡುವುದು, ಅಲ್ಲಿಗೆ ಹೋಗಿ ಅಮ್ಮನ ಎದುರು ಓಡಾಡಿದರೆ ಖಂಡಿತ ಮತ್ತೆ ಕರೆಯುತ್ತಾಳೆ ಎಂದು ತನ್ವಿ ಡೈನಿಂಗ್ ಟೇಬಲ್ ಬಳಿ ಹೋಗುತ್ತಾಳೆ. ಭಾಗ್ಯಾ, ಮಗಳಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಅವಳನ್ನೂ ನೋಡಿಯೂ ನೋಡದಂತೆ ಸುಮ್ಮನಾಗುತ್ತಾಳೆ. ನಾವೆಲ್ಲರೂ ಇದ್ದೀವಿ ಅಕ್ಕ ಎಲ್ಲಿಗೆ ಹೋದಳು ಎಂದು ಗುಂಡಣ್ಣ ಕೇಳುತ್ತಾಳೆ. ನಿನ್ನ ಅಕ್ಕನಿಗೆ ಹಸಿವಿಲ್ಲವಂತೆ, ಆಗಲೇ ಊಟಕ್ಕೆ ಕರೆದೆ, ಹಸಿವು ಆಗದವರಿಗೆ ಊಟಕ್ಕೆ ಕರೆದರೆ ಏನು ಪ್ರಯೋಜನ ಎನ್ನುತ್ತಾಳೆ. ಅಮ್ಮನ ಮಾತಿಗೆ ಗುಂಡಣ್ಣ ತಲೆ ಆಡಿಸುತ್ತಾನೆ. ಉಳಿದವರೂ ಕೂಡಾ ತಮ್ಮ ಪಾಡಿಗೆ ಊಟ ಮಾಡಲು ಆರಂಭಿಸುತ್ತಾರೆ.
ಮನೆ ಪರಿಸ್ಥಿತಿಯನ್ನು ತನ್ವಿ ಅರ್ಥ ಮಾಡಿಕೊಳ್ಳುತ್ತಾಳಾ? ಅಥವಾ ತಾಂಡವ್ ಸಹಿ ಪಡೆದು ಟ್ರಿಪ್ಗೆ ಹೋಗುತ್ತಾಳಾ? ಸೋಮವಾರದ ಸಂಚಿಕೆಯಲ್ಲಿ ತಿಳಿಯಲಿದೆ.