ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 742ರ ಎಪಿಸೋಡ್ ಕಥೆ ಇಲ್ಲಿದೆ. ತಾಂಡವ್, ಮನೆಬಿಟ್ಟು ಹೋದಾಗಿನಿಂದ ಭಾಗ್ಯಾ ಬಹಳ ಕಷ್ಟಪಡುತ್ತಿದ್ದಾಳೆ. ಹೋಟೆಲ್ನಲ್ಲಿ ಶೆಫ್ ಕೆಲಸ ಕಳೆದುಕೊಂಡ ನಂತರ ರೆಸಾರ್ಟ್ ಒಂದರಲ್ಲಿ ಜೋಕರ್ ಕೆಲಸ ಆರಂಭಿಸಿದ್ದಾಳೆ. ನನ್ನ ಅಮ್ಮ ಮುಖಕ್ಕೆ ಬಣ್ಣ ಬಳಿದುಕೊಂಡು ಜೋಕರ್ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದ ತನ್ಮಯ್, ಅವಳಿಗೆ ಸ್ವಲ್ಪವಾದರೂ ಸಹಾಯ ಮಾಡಬೇಕೆಂದು ಶೂ ಪಾಲಿಶ್ ಕೆಲಸ ಮಾಡಲು ಶುರು ಮಾಡುತ್ತಾನೆ.
ಪ್ರತಿದಿನ ಭಾಗ್ಯಾ, ತನ್ಮಯ್ನನ್ನು ಸ್ಕೂಲ್ ಮುಂದೆ ಬಿಟ್ಟು ಕೆಲಸಕ್ಕೆ ಹೋದ ನಂತರ ಸ್ಕೂಲ್ ಒಳಗೆ ಹೋಗುವುದನ್ನು ಬಿಟ್ಟು ರಸ್ತೆ ಬದಿ ಕುಳಿತು ತನ್ಮಯ್ ಶೂ ಪಾಲಿಶ್ ಕೆಲಸ ಶುರು ಮಾಡುತ್ತಾನೆ. ಜೇಬಿನಲ್ಲಿದ್ದ ದುಡ್ಡು ಸ್ನೇಹಿತನದ್ದು ಎಂದು ಭಾಗ್ಯಾ ಬಳಿ ಸುಳ್ಳು ಹೇಳುತ್ತಾನೆ. ಭಾಗ್ಯಾ ಕೆಲಸ ಮಾಡುತ್ತಿರುವ ಹೋಟೆಲ್ ಬಗ್ಗೆ ತಿಳಿದುಕೊಳ್ಳಲು ಯತ್ನಿಸುವ ತಾಂಡವ್, ಅವಳನ್ನು ಹಿಂಬಾಲಿಸಿಕೊಂಡು ಬರುತ್ತಾನೆ. ಆಗ ತನ್ಮಯ್ ಮಾಡುತ್ತಿರುವ ಕೆಲಸ ಅವನಿಗೆ ಗೊತ್ತಾಗುತ್ತದೆ. ಅದನ್ನು ನೋಡಿ ತಾಂಡವ್ ಕೋಪಗೊಳ್ಳುತ್ತಾನೆ. ನಿನ್ನ ಅಮ್ಮ ಈ ಕೆಲಸ ಮಾಡಲು ಹೇಳಿಕೊಟ್ಟಿದ್ದಾ ಎಂದು ಕೇಳುತ್ತಾನೆ. ಅಮ್ಮನಿಗೆ ಸಹಾಯ ಮಾಡಲು ನಾನು ಈ ಕೆಲಸ ಮಾಡಿದೆ ಎಂದು ಗುಂಡಣ್ಣ ಹೇಳುತ್ತಾನೆ. ಇರು ಅವಳಿಗೇ ಕಾಲ್ ಮಾಡುವೆ ಎಂದು ಭಾಗ್ಯಾಗೆ ಕರೆ ಮಾಡುತ್ತಾನೆ.
ರೆಸಾರ್ಟ್ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಭಾಗ್ಯಾ, ತಾಂಡವ್ ಕಾಲ್ ರಿಸೀವ್ ಮಾಡುವುದಿಲ್ಲ. ನೀನು ಕಾಲ್ ರಿಸೀವ್ ಮಾಡುವವರೆಗೂ ನಾನು ಸುಮ್ಮನೆ ಬಿಡುವುದಿಲ್ಲ ಎಂದು ತಾಂಡವ್ ಒಂದೇ ಸಮ ಕಾಲ್ ಮಾಡುತ್ತಾನೆ. ಭಾಗ್ಯಾ ಪಕ್ಕಕ್ಕೆ ಬಂದು ಕಾಲ್ ರಿಸೀವ್ ಮಾಡುತ್ತಾಳೆ. ತಾಂಡವ್ ಭಾಗ್ಯಾಗೆ ಎಮ್ಮೆ ಎಂದೇ ಬೈಯ್ಯುತ್ತಾನೆ. ನೀವು ಕಾಲ್ ಮಾಡಿರುವುದು ಭಾಗ್ಯಾಗೆ, ನಿಮಗೆ ಎಮ್ಮೆ ಬೇಕಾದರೆ ಆ ಹೆಸರು ಇಟ್ಟುಕೊಂಡಿರುವವರಿಗೆ ಕರೆ ಮಾಡಿ, ಈಗ ಫೋನ್ ಮಾಡಿದ ಕಾರಣ ಏನು ಹೇಳಿ ಎಂದು ಭಾಗ್ಯಾ ಹೇಳುತ್ತಾಳೆ. ತಾಂಡವ್ ಎಲ್ಲಾ ವಿಚಾರವನ್ನು ಭಾಗ್ಯಾಗೆ ಹೇಳಿ, ಇನ್ನು 10 ನಿಮಿಷದಲ್ಲಿ ನೀನು ಇಲ್ಲಿ ಇರಬೇಕು ಇಲ್ಲದಿದ್ದರೆ ನಾನು ಏನು ಮಾಡುತ್ತೇನೆ ನನಗೇ ಗೊತ್ತಿಲ್ಲ ಎಂದು ಅರಚುತ್ತಾನೆ.
ಭಾಗ್ಯಾ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೊರಡುತ್ತಾಳೆ. ರೆಸಾರ್ಟ್ ಮ್ಯಾನೇಜರ್ ಎಲ್ಲಿ ಹೋಗುತ್ತಿದ್ದೀಯ ಎಂದು ಕೇಳುತ್ತಾನೆ. ಮನೆಯಿಂದ ಕಾಲ್ ಬಂದಿತ್ತು, ಮುಖ್ಯವಾದ ಕೆಲಸ ಇದೆ ನಾನು ಹೋಗಬೇಕು ಎನ್ನುತ್ತಾಳೆ. ಹೀಗೇ ಆದರೆ ನಾನು ಸಂಬಳ ಕೊಡುವುದಿಲ್ಲ ಎಂದು ಮ್ಯಾನೇಜರ್ ಎಚ್ಚರಿಸುತ್ತಾನೆ. ನನಗೆ ನನ್ನ ಸಂಸಾರದ ಮುಂದೆ ಬೇರೆ ಏನೂ ಮುಖ್ಯ ಅಲ್ಲ ಸರ್ ಎಂದು ಭಾಗ್ಯಾ ಅಲ್ಲಿಂದ ಹೊರಟು ತಾಂಡವ್ ಹೇಳಿದ ಜಾಗಕ್ಕೆ ಬರುತ್ತಾಳೆ. ಭಾಗ್ಯಾ ಬರುತ್ತಿದ್ದಂತೆ ತಾಂಡವ್ ಅವಳ ಮೇಲೆ ಹರಿಹಾಯುತ್ತಾನೆ. ಮಕ್ಕಳನ್ನು ಸಾಕಲು ಯೋಗ್ಯತೆ ಇಲ್ಲವೆಂದರೆ ಹೇಳಿಬಿಡಬೇಕು, ಈ ರೀತಿ ಕೆಲಸಕ್ಕೆ ಕಳಿಸಬಾರದು ಎನ್ನುತ್ತಾನೆ. ಭಾಗ್ಯಾ ಮಗನ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಳೆ. ಏಕೆ ಈ ರೀತಿ ಮಾಡಿದೆ ಗುಂಡಣ್ಣ ಎಂದು ಕೇಳುತ್ತಾಳೆ.
ಅಮ್ಮ ನೀನು ನಮಗಾಗಿ ಎಷ್ಟು ಕಷ್ಟ ಪಡುತ್ತಿದ್ದೀಯ ಎಂದು ನನಗೆ ಗೊತ್ತು. ನೀನು ಆ ಬಿಸಿಲಿನಲ್ಲಿ ಜೋಕರ್ ಆಗಿ ಡ್ಯಾನ್ಸ್ ಮಾಡುವುದನ್ನು ನೋಡಿ ನನಗೆ ಬೇಸರವಾಯ್ತು, ನಿನಗೆ ಸಹಾಯ ಮಾಡಲು ನಾನು ಈ ರೀತಿ ಮಾಡಿದೆ, 250 ರೂ ಸಂಪಾದನೆ ಮಾಡಿದ್ದೇನೆ, ಇಷ್ಟು ಸಾಕಮ್ಮಾ? ಎಂದು ಕೇಳುತ್ತಾನೆ. ಮಗನ ಮಾತುಗಳನ್ನು ಕೇಳಿ ಭಾಗ್ಯಾ ಭಾವುಕಳಾಗುತ್ತಾಳೆ. ಭಾಗ್ಯಾ ಜೋಕರ್ ಕೆಲಸ ಮಾಡುತ್ತಿರುವುದು ತಿಳಿದು ತಾಂಡವ್, ನಗಲು ಆರಂಭಿಸುತ್ತಾನೆ. ಅವಳ ಕೆಲಸದ ಬಗ್ಗೆ ಅಪಹಾಸ್ಯ ಮಾಡುತ್ತಾನೆ. ಈ ಕೆಲಸ ಮಾಡಿಕೊಂಡು ನೀನು ನನ್ನ ಮಕ್ಕಳನ್ನು ಸಾಕಲು ಸಾಧ್ಯವಿಲ್ಲ, ಅವರನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ ಎಂದು ಬಲವಂತವಾಗಿ ಗುಂಡಣ್ಣನ ಕೈ ಹಿಡಿದು ಎಳೆದೊಯ್ಯಲು ಪ್ರಯತ್ನಿಸುತ್ತಾನೆ.
ಆದರೆ ಗುಂಡಣ್ಣ ತಾಂಡವ್ ಕೈ ಕಚ್ಚಿ ಅವನಿಂದ ಬಿಡಿಸಿಕೊಳ್ಳುತ್ತಾನೆ. ಒಂದು ವೇಳೆ ಅಮ್ಮ ನನ್ನ ಸ್ಕೂಲ್ ಫೀಸ್ ಕಟ್ಟದಿದ್ದರೆ ನಾನು ಸ್ಕೂಲ್ಗೇ ಹೋಗುವುದಿಲ್ಲ. ಅದನ್ನು ಹೊರತುಪಡಿಸಿ ನಿಮ್ಮ ಜೊತೆ ಮಾತ್ರ ಬರುವುದಿಲ್ಲ, ನಮ್ಮ ಈ ಪರಿಸ್ಥಿತಿಗೆ ನೀವೇ ಕಾರಣ, ನೀವು ಆ ಶ್ರೇಷ್ಠಾ ಆಂಟಿ ಜೊತೆ ಹೋಗದಿದ್ದಲ್ಲಿ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಎಂದು ಗುಂಡಣ್ಣ ಅಮ್ಮನನ್ನು ಅಪ್ಪಿಕೊಳ್ಳುತ್ತಾನೆ. ಭಾಗ್ಯಾ-ತಾಂಡವ್ ಜಗಳವಾಡುವಾಗ ಸುತ್ತಲೂ ಜನರು ನೆರೆಯುತ್ತಾರೆ. ನೀವು ಹೀಗೆ ಮಕ್ಕಳಿಗೆ ಹಿಂಸೆ ಕೊಡುತ್ತೀರ ಅಂತಾನೇ ಅವರು ನಿಮ್ಮ ಜೊತೆ ಬರಲು ಇಷ್ಟಪಡುತ್ತಿಲ್ಲ ಎಂದು ಒಬ್ಬರು ತಾಂಡವ್ನನ್ನು ತರಾಟೆಗೆ ತೆಗೆದುಕೊಂಡರೆ, ಇವನಿಗೆ ಬೇರೆ ಸಂಬಂಧ ಇದ್ಯಂತೆ ಎಂದು ಮತ್ತೊಬ್ಬರು ತಾಂಡವ್ಗೆ ಛೀಮಾರಿ ಹಾಕುತ್ತಾರೆ. ಇದೇ ಕೋಪಕ್ಕೆ ತಾಂಡವ್ ಮನೆ ಬಳಿ ಬರುತ್ತಾನೆ. ಅಪ್ಪ ಅಮ್ಮನನ್ನು ಹೊರಗೆ ಕರೆದು ನಿಮ್ಮ ಸೊಸೆ ಮನೆ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕುತ್ತಿದ್ದಾಳೆ. ಜೊತೆಗೆ ಮಗನನ್ನೂ ಬೀದಿಗೆ ತಳ್ಳಿದ್ದಾಳೆ ಎನ್ನುತ್ತಾನೆ.
ಭಾಗ್ಯಾ ಜೋಕರ್ ಕೆಲಸ ಮಾಡುತ್ತಿರುವುದು, ಗುಂಡಣ್ಣ ಶೂ ಪಾಲಿಶ್ ಮಾಡುತ್ತಿದ್ದ ವಿಚಾರ ತಿಳಿದು ಕುಸುಮಾ-ಧರ್ಮರಾಜ್ ಹೇಗೆ ಪ್ರತಿಕ್ರಿಯಿಸುತ್ತಾರೆ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.